Homeಅಂಕಣಗಳುಹೊಸ ಸವಾಲುಗಳ ಕಾಲದಲ್ಲಿ ರೈತ ಮತ್ತು ಪ್ರಗತಿಪರರು

ಹೊಸ ಸವಾಲುಗಳ ಕಾಲದಲ್ಲಿ ರೈತ ಮತ್ತು ಪ್ರಗತಿಪರರು

- Advertisement -
- Advertisement -

ಗೌರಿ ಲಂಕೇಶ್
28 ಫೆಬ್ರವರಿ, 2008 (`ಕಂಡಹಾಗೆ’ ಸಂಪಾದಕೀಯದಿಂದ) |

ರೈತರ ಆತ್ಮಹತ್ಯೆಗಳ ಬಗ್ಗೆ ಅಧ್ಯಯನ ಮಾಡಿರುವವರು ಮತ್ತು ಕೋಮುಗಲಭೆಗಳ ಬಗ್ಗೆ ವಿಶ್ಲೇಷಿಸಿರುವವರು ಇವೆರಡರ ಮಧ್ಯೆ ಒಂದು ಸಾಮ್ಯತೆಯನ್ನು ಗುರುತಿಸುತ್ತಾರೆ. ಉದಾಹರಣೆಗೆ, ಅತ್ಮಹತ್ಯೆ ತರಹದ ತೀವ್ರವಾದ ವ್ಯಕ್ತಿಗತ ನಿರ್ಣಯವನ್ನು ತೆಗೆದುಕೊಳ್ಳುವಾಗ ರೈತನೊಬ್ಬ ತನ್ನ ಸುತ್ತಮುತ್ತಲಿನ ಸಮಾಜದಿಂದ ಸಂಪೂರ್ಣವಾಗಿ ಬೇರ್ಪಟ್ಟು ಏಕಾಂಗಿಯಾಗಿರುತ್ತಾನೆ. ಆತನನ್ನು ಸಮಾಜದೊಂದಿಗೆ, ಸಾಮಾಜಿಕ ಆಸರೆಯೊಂದಿಗೆ ಬೆಸೆಯುವ ಕೊಂಡಿ ಕಳಚಿ ಹೋಗಿರುತ್ತದೆ. ರೈತ ಸಂಘ ಇದ್ದ ಕಡೆ, ಅದು ಸಮರ್ಥವಾಗಿ ಕಾರ್ಯನಿರ್ವಹಿಸಿದ ಕಡೆ ರೈತನೊಬ್ಬ ಎಷ್ಟೇ ಸಂಕಷ್ಟದಲ್ಲಿದ್ದರೂ ಆತ ಆತ್ಮಹತ್ಯೆಯಂತಹ ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳದಂತೆ ಒಂದು ಸಾಮಾಜಿಕ ಆಸರೆಯಾಗಿರುತ್ತಿತ್ತು. ಇದನ್ನು ಅರಿತುಕೊಂಡಿದ್ದ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು “ರೈತ ಸಂಘ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿರುವ ಕಡೆ ಆತ್ಮಹತ್ಯೆಗಳಾಗಿಲ್ಲ” ಎಂದೇ ಹೇಳುತ್ತಿದ್ದರು.
ಆದರೆ, ದುರದೃಷ್ಟವಶಾತ್ ರೈತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಕಳೆದ ಒಂದು ದಶಕದುದ್ದಕ್ಕೂ ರೈತ ಸಮುದಾಯಕ್ಕೆ ಆಸರೆಯಾಗಬೇಕಿದ್ದ ರೈತ ಸಂಘವೇ ವಿಭಜನೆಗೊಂಡು, ನಾಯಕರ ಸ್ವಪ್ರತಿಷ್ಟೆಗೆ ಬಲಿಯಾಗಿತ್ತು. ಈಗ ಅವೆಲ್ಲ ಮುಗಿದ ಕತೆ ಎಂದು ಆಶಿಸಬಹುದಾಗಿದೆ.
ಕರ್ನಾಟಕದಲ್ಲಿ ಕೋಮುವಾದ ಹೆಚ್ಚಾಗಿರುವುದರ ಹಿಂದೆಯೂ ಇಂತಹದ್ದೇ ಕಾರಣಗಳಿವೆ. 1969ರಲ್ಲಿ ಮಂಗಳೂರಿನಲ್ಲಿ ನಡೆದ ಕೋಮುಗಲಭೆ ಹೊರತುಪಡಿಸಿದರೆ 70 ಮತ್ತು 80ರ ದಶಕದಲ್ಲಿ ಅಲ್ಲಲ್ಲಿ ಮಾತ್ರ ಕೋಮುಗಲಭೆಗಳು ನಡೆದಿತ್ತು. ಆದರೆ 90ರ ದಶಕದಲ್ಲಿ ಆರಂಭಗೊಂಡ ಕೋಮುಗಲಭೆಗಳು ಇವತ್ತಿನವರೆಗೂ ನಿಂತಿಲ್ಲ.
ಇದಕ್ಕೆ ಪ್ರಮುಖ ಕಾರಣ 80ರ ದಶಕದವರೆಗೂ ಹಲವಾರು ಪ್ರಗತಿಪರರು ಮತ್ತು ಎಡಪಂಥೀಯರು ಈ ನಾಡಿನ ರೈತ, ಕೂಲಿ, ಕಾರ್ಮಿಕ, ದಲಿತ, ಶೂದ್ರ, ಯುವ ಜನಾಂಗ-ಇವರೆಲ್ಲರನ್ನೂ ಸಂಘಟಿಸುತ್ತಿದ್ದದ್ದು ಮತ್ತು ಚಿಂತನೆಗೆ, ಚಳವಳಿಗೆ ಪ್ರೇರೇಪಿಸುತ್ತಿದ್ದದ್ದು. ಆದರೆ 90ರ ದಶಕದಲ್ಲಿ ನಡೆದ ದುಷ್ಟ ರಾಜಕಾರಣದಿಂದಾಗಿ ಪ್ರಗತಿಪರ, ದಲಿತ, ಎಡಪಂಥೀಯರ ನಡುವೆ ಒಡಕು ಸೃಷ್ಟಿಯಾದದಲ್ಲದೆ, ಅದರಲ್ಲಿ ಹಲವರಿಗೆ ಆಮಿಷಗಳನ್ನು ನೀಡಿ ಭ್ರಷ್ಟಗೊಳಿಸಲಾಯಿತು. ರೈತಸಂಘದಲ್ಲಿ ಮಾತ್ರವಲ್ಲ, ದಲಿತ ಸಂಘರ್ಷ ಸಮಿತಿ ಕೂಡ ಛಿದ್ರಗೊಂಡಿರುವುದು ಇದಕ್ಕೆ ಸಾಕ್ಷಿಯಾಗಿ ನಿಂತಿದೆ.
ಈ ಎಲ್ಲದರ ಹಿನ್ನೆಲೆಯಲ್ಲಿ ರೈತ ಸಂಘಟನೆ ಮತ್ತು ಪ್ರಗತಿಪರರು ಈಗಲಾದರೂ ತಾವು ಹಿಂದೆ ಸೋತಿದ್ದೆಲ್ಲಿ ಎಂಬುದರ ಬಗ್ಗೆ ಆತ್ಮವಿಮರ್ಷೆ ಮಾಡಿಕೊಂಡರೆ ಒಳ್ಳೆಯದು ಅನ್ನಿಸುತ್ತದೆ. ಯಾಕೆಂದರೆ ಇವುಗಳು ಹಿಂದೊಮ್ಮೆ ವಿಫಲಗೊಂಡಿದ್ದರ ಹಿಂದಿದ್ದ ಹಲವು ಕಾರಣಗಳಲ್ಲಿ ಅವಕಾಶವಾದ, ಸ್ವಾರ್ಥ, ಅಧಿಕಾರ ಲಾಲಸೆ ಪ್ರಮುಖ. ಅಂದಿನ ನಾಯಕರ ಸ್ವಪ್ರತಿಷ್ಠೆ ಮತ್ತು ಸ್ವಾರ್ಥ ಹೆಚ್ಚಾದಂತೆ ಅವರ ಸಂಘಟನೆಗಳ ಶಕ್ತಿ ಕಳೆದುಕೊಂಡವಲ್ಲದೆ, ಅವುಗಳ ರಾಜಿರಹಿತ ಹೋರಾಟವೂ ಮೂಲೆಗುಂಪಾದವು. ಅಂತಹ ಅಪಾಯಗಳು ಈಗ ಎದುರಾಗದಂತೆ ಎಚ್ಚರ ವಹಿಸಬೇಕಿದೆ.
ಈಗಿನ ಜಾಗತೀಕರಣವಂತೂ ರೈತ, ದಲಿತ, ಎಡಪಂಥೀಯ ಮತ್ತು ಮಹಿಳಾವಾದಿಗಳ ಚಳವಳಿಗಳಿಗೆ ಹೊಸ ಸವಾಲುಗಳನ್ನು ಹಾಕಿದೆ. ಇದೇ ಹೊತ್ತಿಗೆ ಸರ್ಕಾರಗಳೂ ಕೂಡ ಅನ್ಯಾಯಕ್ಕೆ, ಶೋಷಣೆಗೆ, ದಬ್ಬಾಳಿಕೆಗೆ ಒಳಗಾಗುತ್ತಿರುವ ಸಮುದಾಯಗಳ ಪರವಿಲ್ಲದೆ ಡಬ್ಲ್ಯೂಟಿಓ, ಐಎಂಎಫ್ ವಿಶ್ವಬ್ಯಾಂಕ್‍ನಂತಹ ಸಂಸ್ಥೆಗಳ ಪರವಾಗಿ ನಿಂತಿದೆ. ಅದರೊಂದಿಗೆ ಜನಪರ ಹೋರಾಟಗಳನ್ನು, ಚಳವಳಿಗಳನ್ನು ದಮನ ಮಾಡಲೆಂದೇ ಕರಾಳ ಕಾನೂನುಗಳನ್ನು ಜಾರಿಗೆ ತಂದಿದೆ. ತುರ್ತುಪರಿಸ್ಥಿತಿಯ ಕಾಲದಲ್ಲಿ ಎಂಐಎಸ್‍ಎ(ಮಿಸಾ) ಗಿಂತಲೂ ಟಿಎಡಿಎ(ಟಾಡಾ) ಕರಾಳವಾಗಿದ್ದರೆ, 90ರ ದಶಕದಲ್ಲಿ ಟಿಎಡಿಎ(ಟಾಡಾ) ಜಾಗಕ್ಕೆ ಬಂದಿದ್ದೆ ಪೊಟಾ(ಪಿಓಟಿಎ) ಮತ್ತು ಈಗ ಅದರ ಬದಲಿಗೆ ಯುಪಿಎ ಸರ್ಕಾರ ತಂದಿರುವ ಯುಎಲ್‍ಪಿಎ ಮಾನವ ಹಕ್ಕುಗಳನ್ನೇ ನಿರಾಕರಿಸುತ್ತಿದೆ.
ಇಂತಹ ಪರಿಸ್ಥಿತಿಯಲ್ಲಿ ಕಪಟ ಶಾಸಕ, ಭ್ರಷ್ಟ ಅಧಿಕಾರಿ, ಲಂಪಟ ಪೊಲೀಸ್ ಮತ್ತು ಹಿಂದೂತ್ವವಾದಿ ಪುಡಾರಿ ಜೊತೆಗೂಡಿದರೆ ಯಾರನ್ನು ಬೇಕಾದರೂ ಕೊಲ್ಲಬಹುದು, ಯಾರನ್ನು ಬೇಕಾದರೂ ಜೈಲಿಗೆ ದೂಡಬಹುದು, ಯಾರ ಚಳವಳಿಯನ್ನಾದರೂ ಮುರಿದುಹಾಕಬಹುದು.
ಕರ್ನಾಟಕ ಇವತ್ತು ಎಲ್ಲ ರೀತಿಯಲ್ಲೂ ಸಂಕ್ರಮಣ ಕಾಲದಲ್ಲಿದೆ. ಆದ್ದರಿಂದ ಈಗ ನಮ್ಮೆಲ್ಲರ ಶತ್ರಯ ಯಾರೆಂಬುದನ್ನು ಸ್ಪಷ್ಟವಾಗಿ ಗುರುತಿಸಬೇಕಾಗಿದೆಯಲ್ಲದೆ, ನಮ್ಮೊಳಗಿನ ಶತ್ರುವನ್ನೂ ಗುರುತಿಸಿ ಹೋರಾಟಗಳು ವಿಫಲವಾಗದಂತೆ ನೋಡಿಕೊಳ್ಳಬೇಕಿದೆ. ಹಾಗೆಯೇ ಎಲ್ಲಾ ಸಮಾನ ಮನಸ್ಕರು ತಮ್ಮ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಂದುಗೂಡಬೇಕಿದೆ. ನಮ್ಮೆಲ್ಲರ ಶತ್ರುಗಳು ಒಂದಾಗಿರುವ ಈ ಕಾಲದಲ್ಲಿ ನಾವೆಲ್ಲರೂ ದಾಯಾದಿಗಳಂತೆ ಕಚ್ಚಾಡುವುದರಲ್ಲಿ ಅರ್ಥವಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕಿದೆ.
ರೈತ ಸಂಘಗಳ ವಿಲೀನ, ಕೋಮುವಾದದ ವಿರುದ್ಧದ ಪ್ರಗತಿಪರರ ಹೊಸ ಯತ್ನ ಹಳೇ ಅನುಭವಗಳಿಂದ ಪಾಠಗಳನ್ನು ಕಲಿತು, ಸಂಘಟನಾತ್ಮಕ ಚಳವಳಿಯನ್ನು ಮಾಡುತ್ತವೆ ಎಂದು ಆಶಿಸುತ್ತೇನೆ. ಅವರ ಅಂತಹ ಎಲ್ಲಾ ಪ್ರಯತ್ನಗಳಿಗೆ ನಿಮ್ಮ ಮತ್ತು ನಮ್ಮ ಬೆಂಬಲ ಇದ್ದೇ ಇರುತ್ತದೆ ಎಂದೂ ಹೇಳಲು ಇಚ್ಛಿಸುತ್ತೇನೆ…….

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...