ಅಲೆಕ್ಸಾಂಡರ್ ಪೇನ್ ಎಂಬ ಸಿನೆಮಾ ಮಾಂತ್ರಿಕ

0

 ರಾಜಶೇಖರ್ ಅಕ್ಕಿ |
ವಾಸ್ತವದಲ್ಲಿ ಮಾಂತ್ರಿಕ ಎನ್ನುವ ವಿಶೇಷಣ ಈವಯ್ಯನಿಗೆ ಸರಿಹೊಂದುವುದಿಲ್ಲ, ಅದ್ಭುತ ಸಿನೆಮಾ ನಿರ್ದೇಶಕನೆಂದರೆ ಸಾಮಾನ್ಯವಾಗಿ ಮಾಂತ್ರಿಕ ಎನ್ನುವ ಪದ ಬಳಸುತ್ತೇವೆ ಹಾಗಾಗಿ ಬಳಸಿದೆ. ಅಲೆಕ್ಸಾಂಡರ್ ಪೇನ್‍ನ ಸಿನೆಮಾಗಳು ವಾಸ್ತವದ ಚಿತ್ರಣಗಳನ್ನು ಪ್ರೇಕ್ಷಕ ಎದುರಿಸುವಂತೆ ಮಾಡುತ್ತಾನೆ. ಈತನ ನಿರ್ದೇಶನದ ಮೊದಲ ಚಿತ್ರ ‘ಸಿಟಿಝನ್ ರೂತ್’(1996) ಇದನ್ನು ತನ್ನ 36ನೇ ವಯಸ್ಸಿನಲ್ಲಿ ಮಾಡಿದ. ಆ ವಯಸ್ಸಿಗೆ ಬರುವ ತನಕ ಒಂದು ಚಿತ್ರ ಮಾಡುವ ಪ್ರಬುದ್ಧತೆ ಇರದು ಎಂದೇ ನಂಬಿದ್ದ.
ರೂತ್ ಎನ್ನುವವಳು ಮಾದಕವ್ಯಸನಿ. ಅವಳಿಗೀಗಾಗಲೇ ನಾಲ್ಕು ಮಕ್ಕಳಿವೆ. ಎಲ್ಲೆಲ್ಲೋ ಬೆಳೆಯುತ್ತಿವೆ. ರೂತ್ ಮತ್ತೇ ಗರ್ಭಿಣಿಯಾಗುತ್ತಾಳೆ. ಹುಟ್ಟಲಿರುವ ಮಗುವಿನ ತಂದೆ ಯಾರೆಂದು ಅವಳಿಗೆ ತಿಳಿಯದು. ಅದೇ ಸಮಯದಲ್ಲಿ ಮಾದಕವಸ್ತು ಸೇವನೆಗಾಗಿ ಅವಳನ್ನು ಬಂಧಿಸಲಾಗುತ್ತದೆ. ಅಲ್ಲಿಯ ನ್ಯಾಯಾಧೀಶ ಇವಳ ಪರಿಸ್ಥಿತಿಯನ್ನು ಅರಿತವನಾದ್ದರಿಂದ, ಇವಳು ತನ್ನ ಮಕ್ಕಳ ಪಾಲನೆ ಮಾಡಲಾರಳೆಂದು ಗೊತ್ತಿರುವುದರಿಂದ ಅವಳು ಗರ್ಭಪಾತ ಮಾಡಿಸಿಕೊಳ್ಳಬೇಕು ಎಂದು ಸೂಚಿಸುತ್ತಾನೆ. ಅಲ್ಲಿಂದ ಶುರುವಾಗುತ್ತದೆ ಮಹಾಭಾರತ. ಆಗ ಪ್ರತ್ಯಕ್ಷವಾಗುವ ಗರ್ಭಪಾತ ವಿರೋಧ ಮತ್ತು ಪರ ಗುಂಪುಗಳು ತಮ್ಮ ಹೋರಾಟಕ್ಕಾಗಿ ಇವಳನ್ನು ಒಂದು ಕೈಗೊಂಬೆಯಾಗಿ ಬಳಸಿಕೊಳ್ಳುತ್ತಾರೆ. ಇವಳಿಗೇನು ಮಾಡಬೇಕು ಎಂದು ತಿಳಿಯುವುದಿಲ್ಲ. ಅದರೆ ನಮ್ಮ ನಾಯಕಿ ರೂತ್ ಒಬ್ಬ ಸಾಚಾ ಹೆಣ್ಣಲ್ಲ. ಅವಳ ಪರಿಸ್ಥಿತಿಯಲ್ಲಿ ಅನುಕಂಪ ಪಡಬೇಕೇ, ಅವಳ ಸ್ವಾರ್ಥವನ್ನು ನೋಡಿ ದ್ವೇಷಿಸಬೇಕೆ ಎಂದು ನೋಡುಗರಿಗೆ ತಿಳಿಯುವುದಿಲ್ಲ. ಅದರೊಂದಿಗೆ ಗರ್ಭಪಾತ ಪರ-ವಿರೋಧಿ ಗುಂಪುಗಳ ಆಶಾಢಭೂತಿತನವೂ ನೋಡುಗರಿಗೆ ಸಿಟ್ಟು ತರಿಸುತ್ತವೆ. ಚಿತ್ರ ಮುಗಿದಾಗ ಚಿತ್ರದ ವ್ಯಕ್ತಿಗಳನ್ನು ನಾವು ದ್ವೇಷಿಸಿದರೂ, ಆ ಪಾತ್ರಗಳೊಂದಿಗೆ ಪ್ರೀತಿಯುಂಟಾಗುವಂತೆ ಮಾಡುವ ಸಾಮಥ್ರ್ಯ ಅಲೆಕ್ಸಾಂಡರ್ ಪೇನ್‍ನದ್ದು.
ನಂತರ ಮಾಡಿದ್ದು ಎಲೆಕ್ಷನ್(1999) ಎನ್ನುವ ಚಿತ್ರ. ಟಾಮ್ ಪೆರೋಟಾ ಅವರ ಕಾದಂಬರಿಯನ್ನಾಧರಿಸಿ ಮಾಡಿದ ಈ ಸಿನೆಮಾ ಬಾಕ್ಸ್ ಆಫೀಸಿನಲ್ಲಿ ಗೆಲ್ಲಲಿಲ್ಲ. ನೋಡಿದವರಿಗೆ ಕಸಿವಿಸಿ ಉಂಟುಮಾಡುವ ಈ ಚಿತ್ರ ಮಧ್ಯವಯಸ್ಸಿಗೆ ತಲುಪುತ್ತಿರುವ ಒಬ್ಬ ಹೈಸ್ಕೂಲ್ ಶಿಕ್ಷಕನ ಸುತ್ತ ತಿರುಗುತ್ತದೆ. ಅದರ ನಂತರ ಬಂದದ್ದು ಅಬೌಟ್ ಶ್ಮಿತ್ (2002) ಇದರಲ್ಲಿ ಜಾಕ್ ನಿಕಲ್ಸನ್ ಒಂದು ವಿಮೆ ಕಂಪನಿಯಲ್ಲಿ ಉನ್ನತ ಸ್ಥಾನದಿಂದ ನಿವೃತ್ತನಾದ ನಂತರ ತನ್ನ ಜೀವನವನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ. ಅಲೆಕ್ಸಾಂಡರ್ ಪೇನ್‍ನ ಮುಂದಿನ ಚಿತ್ರ ಸೈಡ್‍ವೇಸ್ (2004), ಅದರಲ್ಲಿ ಪಾಲ್ ಜಿಮಾಟಿ ಒಬ್ಬ ಇಂಗ್ಲೀಷ್ ಶಿಕ್ಷಕ. ತಾನು ಬರೆದ ಕಾದಂಬರಿ ಪ್ರಕಟವಾಗಲಿ ಎಂದು ಕಾಯುತ್ತ ತನ್ನ ಶಾಲಾ ಗೆಳೆಯನೊಂದಿಗೆ ಪ್ರವಾಸ ಹೊರಡುತ್ತಾನೆ. ಈ ಮೂರು ಸಿನೆಮಾಗಳಲ್ಲಿ ಕಂಡುಬರುವದು ಆ ಪಾತ್ರಗಳ ಮಾನವಸಹಜ ದೌರ್ಬಲ್ಯ ಮತ್ತು ಹೇಡಿತನ. ಅಲ್ಲಿಯ ಕೆಲವು ಪಾತ್ರಗಳು ತಮ್ಮ ದೌರ್ಬಲ್ಯ ಮತ್ತು ಹೇಡಿತನವನ್ನು ಗುರುತಿಸಿ, ಅವುಗಳನ್ನು ಎದುರಿಸಿದರೆ, ಇನ್ನು ಕೆಲವು ಪಾತ್ರಗಳಿಗೆ ಅವುಗಳ ಅರಿವೇ ಇರುವುದಿಲ್ಲ. ತಾವೇ ಮಾಡಿಕೊಂಡ ತಮ್ಮ ದೌರ್ಬಲ್ಯಗಳ ಚಕ್ರದಲ್ಲಿ ಸುತ್ತುತ್ತಿರುತ್ತಾರೆ. ನೋಡುಗರಿಗೆ ಈ ಪಾತ್ರಗಳ ಬಗ್ಗೆ ಯಾವ ಭಾವನೆಗೆ ಬರಬೇಕು ಎನ್ನುವ ಪ್ರಶ್ನೆ ಬರುತ್ತದೆ. ಇವರನ್ನು ಇಷ್ಟಪಡಬೇಕೋ ಇಲ್ಲವೋ ಎನ್ನುವದು ಇನ್ನೊಂದು ಪ್ರಶ್ನೆ. ಆಗ ನನಗೆ ತಿಳಿದಿದ್ದು, ಆ ವ್ಯಕ್ತಿಗಳು ನನ್ನೆದುರಿಗೆ ಬಂದರೆ ಬಹುಶಃ ನಾನು ಇಷ್ಟಪಡುತ್ತಿಲ್ಲವೇನೋ ಆದರೆ ಆ ಪಾತ್ರಗಳನ್ನು ಪ್ರೀತಿಸುವುದೂ ಅಷ್ಟೇ ಸತ್ಯ. ನಮ್ಮನಮ್ಮ ದೌರ್ಬಲ್ಯ, ವಿಫಲತೆ, ಹೇಡಿತನದೊಂದಿಗೆ ತೊಳಲಾಡುತ್ತಿರುವ ನಮ್ಮೆಲ್ಲರಿಗೂ ಈ ಚಿತ್ರಗಳನ್ನು ನೋಡಿದಾಗ ‘ನಾನಷ್ಟೇ ಹೀಗಲ್ಲ, ನನ್ನಂಥವರು ಇನ್ನೂ ಇದ್ದಾರೆ’ ಎಂದೆನಿಸಿ, ಬದುಕಿನ ಸಾರ್ಥಕತೆಯ ಹೊಸ ಆಯಾಮಗಳು ಕಣ್ಣೆದುರಿಗೆ ತೆರೆದುಕೊಳ್ಳುತ್ತವೆ.

LEAVE A REPLY

Please enter your comment!
Please enter your name here