| ಅನಿಲ್‍ಕುಮಾರ್ ಚಿಕ್ಕದಾಳವಟ್ಟ |
ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಆರಂಭವಾಗುತ್ತಿರುವ “ಮತ್ತೆ ಕಲ್ಯಾಣ” ಕಾರ್ಯಕ್ರಮವು ಎಲ್ಲರಲ್ಲಿ ಕುತೂಹಲ ಮೂಡಿಸಿದೆ. ಈ ಬಗ್ಗೆ ತುಮಕೂರಿನ ಅನಿಲ್‍ಕುಮಾರ್ ಚಿಕ್ಕದಾಳವಟ್ಟ ಬರೆದಿದ್ದಾರೆ.
ಹನ್ನೆರಡನೆಯ ಶತಮಾನದ ಕರ್ನಾಟಕದ ವಿದ್ಯಮಾನವನ್ನು ನೆನೆಸಿಕೊಂಡರೆ ಇತಿಹಾಸ ಗೊತ್ತಿರುವ ಪ್ರತಿಯೊಬ್ಬರು ರೋಮಾಂಚಿತರಾಗುತ್ತಾರೆ. ಅಂದು ನಡೆದ ಶರಣ ಚಳುವಳಿಯು ಇಡೀ ಜಗತ್ತೇ ಪಾಠ ಕಲಿಯುವಂತಹ ಆಂಶಗಳನ್ನು ಒಳಗೊಂಡಿದೆ. ಜಾತಿಯ ಆಧಾರದಲ್ಲಿ ತೋರುತ್ತಿದ್ದ ತಾರತಮ್ಯದ ವಿರುದ್ಧ ಶರಣರು ಸಿಡಿದೆದ್ದು ಪ್ರತಿಯೊಂದು ಕಾಯಕ ಮಾಡುವವರು ಸಮಾನ ಘನತೆ, ಗೌರವ ಉಳ್ಳವರೆಂದು ಸಾರಿದರು. ಸಮಾಜದಲ್ಲಿನ ಜಾತಿ ತಾರತಮ್ಯ ಲಿಂಗತಾರತಮ್ಯದಂತಹ ಅನಿಷ್ಟಗಳನ್ನು ತೊಲಗಿಸಲು ಚಿಂತನೆಗಳನ್ನು ನಡೆಸಿದರು. ಪ್ರತಿಯೊಂದು ಜಾತಿ, ವರ್ಗದ ಜನ ಒಂದು ಕಡೆ ಕೂತು ಅವರ ಅನುಭವಕ್ಕೆ ಬಂದ ವಿಚಾರಗಳನ್ನು ವಚನಗಳ ರೂಪದಲ್ಲಿ ಹೇಳಿ ಚರ್ಚಿಸಲಾರಂಭಿಸಿದರು. ಅವರು ಪ್ರತಿಪಾದಿಸಿದ ಸಮಾನತೆಯ ಆಶಯಗಳು ಅಂದಿನ ಸಮಾಜದಲ್ಲಿ ತಲ್ಲಣವುಂಟು ಮಾಡಿ ಪರಿವರ್ತನೆಗೆ ಕಾರಣವಾದವು.
ಇಂದು ಇದನ್ನು ಮುಂದುವರೆಸಬೇಕಾದ ನಾಡಿನ ಜನರು ಮೌಢ್ಯಗಳ ದಾಸರಾಗಿರುವುದು ಈ ಕಾಲದ ವ್ಯಂಗ್ಯವಾಗಿದೆ. ಆದರೂ ಮರುಭೂಮಿಯಲ್ಲಿ ಓಯಸಿಸ್‍ನಂತೆ ನಮ್ಮ ರಾಜ್ಯದಲ್ಲಿ ಹಲವು ಪ್ರಗತಿಪರ ಮಠಗಳು ಇಂದಿಗೂ ಸಕಾರಾತ್ಮಕವಾಗಿ ಕ್ರಿಯಾಶೀಲವಾಗಿದೆ. ಅಂತಹ ಮಠಗಳಲ್ಲಿ ಒಂದಾದ ಸಾಣೇಹಳ್ಳಿ ಮಠದ ಗುರುಗಳಾದ ಪಂಡಿತಾರಾಧ್ಯ ಸ್ವಾಮೀಜಿಯವರು ಸಮಾನ ಮನಸ್ಕ ಚಿಂತಕರು, ವಿವಿಧ ಮಠದ ಸ್ವಾಮೀಜಿಗಳು, ಹೋರಾಟಗಾರರು, ಯುವಜನರನ್ನು ಒಳಗೊಂಡು “ಮತ್ತೆ ಕಲ್ಯಾಣ” ಎಂಬ ಅಭಿಯಾನ ಆರಂಭಿಸುತ್ತಿದ್ದಾರೆ. ಅದರ ಮೂಲಕ ಜನಸಾಮಾನ್ಯರು ಮತ್ತು ಮುಖ್ಯವಾಗಿ ವಿದ್ಯಾರ್ಥಿ ಯುವಜನರ ಬಳಿಗೆ ಬಸವಾದಿ ಶಿವಶರಣರ ಆಶಯಗಳನ್ನು ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಶುರು ಮಾಡಿದ್ದಾರೆ.
ಮೇ 19ರಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿಯವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಬಸವಸಮಿತಿಯ ಸಭಾಂಗಣದಲ್ಲಿ ಮತ್ತೆ ಕಲ್ಯಾಣ ಅಭಿಯಾನದ ಕುರಿತು ಚಿಂತಕರು, ಜನಪರ ಹೋರಾಟಗಾರರು, ರಂಗಕರ್ಮಿಗಳು, ಸಂಘಟಕರ, “ಮತ್ತೆ ಕಲ್ಯಾಣ”ದ ಸಂಯೋಜಕರನ್ನೊಳಗೊಂಡ ರಾಜ್ಯಮಟ್ಟದ ಸಭೆಯೊಂದು ನಡೆಯಿತು.
ಸದ್ಯಕ್ಕೆ ಇದು ಒಂದು ತಿಂಗಳ ಕಾರ್ಯಕ್ರಮವಾಗಿ ಶುರುವಾಗಲಿದ್ದು, ಮುಂದೆ ನಿರಂತರ ಅರಿವಿನ ಮತ್ತು ಪರಿವರ್ತನೆಯ ಚಳುವಳಿಯಾಗಿ ರೂಪುಗೊಳ್ಳುವ ಭರವಸೆ ಕಾಣಿಸುತ್ತಿದೆ. ಸಾಣೇಹಳ್ಳಿ ಮಠವು ಪ್ರಗತಿಪರವಾದಂತಹ ಹಲವು ವಿಚಾರಗಳಿಗೆ ಗಮನಸೆಳೆದಿದೆ. ಪ್ರಮುಖವಾಗಿ ರಂಗಭೂಮಿಗಾಗಿ ಒಂದು ಶಾಲೆಯನ್ನು ಸ್ಥಾಪಿಸಿ, ಅದಕ್ಕೆ ಪೂರಕವಾದ ವಾತಾವರಣ ಕಲ್ಪಿಸಿ ನಡೆಸುತ್ತಿರುವುದು ಮಠದ ವೈಚಾರಿಕ ಒಲವನ್ನು ತೋರುತ್ತದೆ. ಪ್ರತಿವರ್ಷ ಮಠದಿಂದ ಶಿವಸಂಚಾರದ ಹೆಸರಿನಲ್ಲಿ ರಾಜ್ಯಾದ್ಯಂತ ಮೂರುನಾಟಕಗಳ ತಿರುಗಾಟ ನಡೆಯುತ್ತದೆ. ಈ ಎಲ್ಲಾ ಚಟುವಟಿಕೆಗಳಿಗೆ ಮಾರ್ಗದರ್ಶಕರಾಗಿರುವ ಪಂಡಿತಾರಾಧ್ಯ ಸ್ವಾಮೀಜಿಯವರುರೀ ಆಂದೋಲನದಲ್ಲಿ ಸಕ್ರಿಯವಾಗಿರುವುದು ಸಾಕಷ್ಟು ಜನ ಚಿಂತಕರ ಉತ್ಸಾಹವನ್ನು ಹೆಚ್ಚಿಸಿದೆ
ವೀರಮಾತೆ ಅಕ್ಕನಾಗಮ್ಮನವರ ಐಕ್ಯ ಸ್ಥಳವಾದ ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಿಂದ ಆರಂಭವಾಗುವ ಆಂದೋಲನವು, ಆಗಸ್ಟ್ 29ರಂದು ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಮುಕ್ತಾಯವಾಗಲಿದೆ. ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ಈ ಕುರಿತು ಪೂರ್ವಭಾವಿ ಸಭೆಗಳನ್ನು ನಡೆಸಲು ಸಿದ್ಧತೆ ನಡೆಯುತ್ತಿದೆ. ಪ್ರತಿಜಿಲ್ಲೆಯಲ್ಲೂ ಮತ್ತೆಕಲ್ಯಾಣದ ಕಾರ್ಯಕ್ರಮಗಳು ನಡೆಯಲಿದೆ. ಈ ಆಂದೋಲನಕ್ಕೆ ಪೂರಕವಾಗಿ ಒಂದು ಸಕ್ರಿಯ ತಂಡ ಸಾಮಾಜಿಕ ಜಾಲತಾಣದಲ್ಲಿ ಕೆಲಸ ಮಾಡುತ್ತಿದ್ದು ಮತ್ತೆ ಕಲ್ಯಾಣದ ಪರಿಕಲ್ಪನೆ ಪರಿಚಯಸಿದ ರೀತಿ ಹಿರಿಯರ ಮೆಚ್ಚುಗೆ ಗಳಿಸಿದೆ.
ಒಟ್ಟಾರೆ ಮತ್ತೆ ಕಲ್ಯಾಣ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಈ ಅಭಿಯಾನದ ಆಶಯ ಪರಿವರ್ತನಶೀಲವಾದುದಾಗಿದೆ. ಕಲ್ಯಾಣದಲ್ಲಿ ನಡೆದ ಶರಣ ಪರಂಪರೆಯ ಹೋರಾಟವನ್ನು ಪರಿಚಯಿಸುವ ಮೂಲಕ ಶರಣರು ಆಶಿಸಿದ ಸಮಾಜವನ್ನು ಪರಿಚಯಿಸುವ ಕೆಲಸವಾಗಲಿ. ನುಡಿದಂತೆ ನಡೆದ ಶರಣರ ಜೀವನದ ಮೂಲಭೂತ ವಿಚಾರಗಳನ್ನು ಯುವಜನರಲ್ಲಿ ಬಿತ್ತುವ ಮೂಲಕ ಪರಸ್ಪರ ದ್ವೇಷಿಸುವ ಮನಸ್ಥಿತಿಯನ್ನು ಹೋಗಲಾಡಿಸಲಿ. ಪರಸ್ಪರ ಪ್ರೀತಿಸುವ ಪ್ರತಿಯೊಬ್ಬರ ಬದುಕನ್ನು ಗೌರವಿಸುವ ಶರಣರ ಚಿಂತನೆಗಳನ್ನು ಬೆಳೆಸುವಂತಾಗಲಿ. ಈ ಆಂದೋಲನವು ಯಶಸ್ವಿಗೊಂಡರೆ ನಮ್ಮದೇ ನೆಲದಲ್ಲಿ ಹುಟ್ಟಿದ ಚಳವಳಿಯನ್ನು ಸಮಕಾಲೀನಗೊಳಿಸುವ ಅಪರೂಪದ ಪ್ರಯೋಗವಾಗಿ ಎಲ್ಲರಿಗೂ ಮಾದರಿಯಾಗಲಿದೆ.



Very interesting development.