Homeಮುಖಪುಟಸಮ್ಮಿಶ್ರ ಕುಟುಂಬದ ಯಜಮಾನನ ಹೊಣೆ ನಿಭಾಯಿಸಲು ಇದು ಆ್ಯಕ್ಷನ್ ಟೈಮ್

ಸಮ್ಮಿಶ್ರ ಕುಟುಂಬದ ಯಜಮಾನನ ಹೊಣೆ ನಿಭಾಯಿಸಲು ಇದು ಆ್ಯಕ್ಷನ್ ಟೈಮ್

- Advertisement -
- Advertisement -

ಬಿಡುವಿಲ್ಲದ ರಾಜಕಾರಣ ಮಾಡುವ ರಾಜಕಾರಣಿಗಳು ಸೋತಾಗ ಅಥವಾ ದೀರ್ಘ ಕಾಲದ ಚಟುವಟಿಕೆಗಳ ನಂತರ ಕೆಲಕಾಲ ಬ್ರೇಕ್ ತೆಗೆದುಕೊಳ್ಳುವುದು ಹಲವು ಕಾರಣಗಳಿಂದ ಅಗತ್ಯ. ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಾಖಲಾದಾಗ ಅಂತಹದೊಂದು ಬ್ರೇಕ್ ಬಯಸಿದ್ದಾರೆಂದು ಭಾವಿಸಲಾಗಿತ್ತು. ಈ ಚುನಾವಣೆಗೆ ಮುಂಚೆ ಉಳಿದ ಮುಖ್ಯಮಂತ್ರಿ ಅಭ್ಯರ್ಥಿಗಳೂ ಸಿದ್ದರಾಮಯ್ಯನವರಷ್ಟೇ ಸುತ್ತಾಡಿದ್ದಾರಾದರೂ, ಕಾಂಗ್ರೆಸ್‍ನ ಮಟ್ಟಿಗೆ ಅವರದ್ದು ಏಕೈಕ ದಂಡನಾಯಕನ ರೀತಿಯ ಹೋರಾಟವಾಗಿತ್ತು. ಯಡಿಯೂರಪ್ಪನವರ ಜೊತೆಗೆ ಬಿಜೆಪಿಯ ಬೃಹತ್ ಯಂತ್ರಾಂಗವಿದ್ದರೆ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಇಡೀ ರಾಜ್ಯ ಗೆಲ್ಲುವ ಅಗತ್ಯವೂ ಇರಲಿಲ್ಲ; ಅಂತಹ ಗುರಿಯೂ ಇರಲಿಲ್ಲ. ಚುನಾವಣೆ ಮುಗಿದು ಸೋತ ಕ್ಷಣದಿಂದಲೇ ಬಿಡುಗಡೆಯಾಗಲಿಲ್ಲ; ಸಮ್ಮಿಶ್ರ ಸರ್ಕಾರದ ಸ್ಥಾಪನೆಯ ಕೆಲಸದಲ್ಲಿ ಸಿದ್ದರಾಮಯ್ಯನವರಿಗೂ ಜವಾಬ್ದಾರಿಗಳಿದ್ದುದರಿಂದ ಒಂದು ತಿಂಗಳಿಗೂ ಹೆಚ್ಚು ಕಾಲದ ನಂತರ ವಿಶ್ರಾಂತಿಗಾಗಿ ‘ಶಾಂತಿವನ’ (ಧರ್ಮಸ್ಥಳದ ಚಿಕಿತ್ಸಾ ಕೇಂದ್ರದ ಹೆಸರು)ದ ಕಡೆಗೆ ನಡೆದರು.
ಈ ಸಂದರ್ಭದಲ್ಲಿ ಅವರಿಗೆ ಶಾಂತಿಯ ಅಗತ್ಯ ಇತ್ತು. ಎಲ್ಲಿ ಎಡವಟ್ಟಾಯಿತೆಂಬ ಆತ್ಮಾವಲೋಕನಕ್ಕೆ, ಮುಂದಿನ ದಿನಗಳಲ್ಲಿ ತನ್ನ ಪಾತ್ರ ಏನಾಗಿರಬೇಕೆಂಬ ಕುರಿತು ಆಳವಾದ ಚಿಂತನೆಗೆ ಮತ್ತು ಮುಂದಿನ ನಿಖರ ನಡೆಗಳನ್ನು ಯೋಜಿಸಲಿಕ್ಕೆ. ಸೋಲು ಮತ್ತು ನಂತರದ ವಿಶ್ರಾಂತಿಯು ಇವೆಲ್ಲಕ್ಕೂ ಅವಕಾಶ ಮಾಡಿಕೊಡುತ್ತದೆ. ಏಕೆಂದರೆ, ಚುನಾವಣೆಯ ದಣಿವಿನ ನಂತರ ‘ಗೆದ್ದ’ ಕುಮಾರಸ್ವಾಮಿಯವರಿಗೆ ಈ ಅವಕಾಶ ಇರುವುದಿಲ್ಲ.
ದುರದೃಷ್ಟಕರ ವಿಚಾರವೆಂದರೆ, ಸಿದ್ದರಾಮಯ್ಯನವರಿಗೆ ಅಂತಹ ಶಾಂತಿ ಮತ್ತು ಸಮಯ ಸಿಕ್ಕಿದಂತೆ ಕಾಣುವುದಿಲ್ಲ. ಇದಕ್ಕೆ ‘ಹೊರಗಿನ’ ಶಕ್ತಿಗಳನ್ನು ಎಷ್ಟು ಬೇಕಾದರೂ ದೂರಬಹುದು. ಆದರೆ, ಇದರ ಜವಾಬ್ದಾರಿಯನ್ನು ಮಾತ್ರ ಅವರೇ ತೆಗೆದುಕೊಳ್ಳಬೇಕು. ಬಜೆಟ್ ಕುರಿತಂತೆ ಅವರು ಮುಂದಿಟ್ಟ ಸಲಹೆಯಿಂದ ಆರಂಭವಾಗಿ ಇಲ್ಲಿಯವರೆಗೆ ಎದ್ದಿರುವ ‘ವಿವಾದದ’ ದೃಷ್ಟಿಯಿಂದ ಮಾತ್ರವಲ್ಲದೇ, ‘ತನ್ನಂತಹ ಜನನಾಯಕನಿಗೆ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿರುವ ಪಾತ್ರವೇನಾಗಿರಬೇಕು?’ ಎಂಬ ಕುರಿತು ಗಂಭೀರವಾದ, ಆಳವಾದ ಚಿಂತನೆಗೆ ಅವರು ಸಮಯ ಮಾಡಿಕೊಳ್ಳಲೇಬೇಕಿತ್ತು. ಅದನ್ನು ಸಿದ್ದರಾಮಯ್ಯನವರು ಮಾಡಿಕೊಂಡಿಲ್ಲ. ಬದಲಿಗೆ ಶಾಂತಿವನದಿಂದಲೇ ಅಶಾಂತಿ ಸೃಷ್ಟಿ ಮಾಡುವ ಸಂಗತಿಗಳನ್ನು ಮಾಧ್ಯಮಗಳು ಹೆಕ್ಕಿ ತೆಗೆಯಲು ಅವಕಾಶ ಮಾಡಿಕೊಟ್ಟಿದ್ದಾರೆ.
ಅವರು ಏನು ಮಾತಾಡಿದರು ಎಂಬ ಕುರಿತು ಈಗಾಗಲೇ ಬಿತ್ತರಗೊಂಡಿರುವ ವಿಡಿಯೋಗಳು ಹೇಳಿಬಿಟ್ಟಿರುವುದರಿಂದ ಅದರ ವಿವರಗಳು ಅಗತ್ಯವಿಲ್ಲ. ಹಾಗೆ ನೋಡಿದರೆ, ಅವರು ಅಂತಹ ಯಾವ ‘ವಿವಾದಾತ್ಮಕ’ ಅಂಶಗಳನ್ನೂ ಮಾತಾಡಿಲ್ಲ. ಯಾರೇ ಇಬ್ಬರು ಅಥವಾ ಹೆಚ್ಚು ಜನ ಸ್ನೇಹಿತರು ಜೊತೆಗೂಡಿ ಮಾತನಾಡುವಾಗ ಎಷ್ಟೋ ಮಾತುಗಳು ಬರುತ್ತವೆ; ಹೋಗುತ್ತವೆ. ಅವಕ್ಕೆ ವಿಶೇಷ ಅರ್ಥ ಕಲ್ಪಿಸಬಾರದು. ಹೀಗಿರುವಾಗ ಖಾಸಗಿಯಾಗಿ ಮಾತಾಡುವಾಗ ಅದನ್ನು ಕದ್ದು ವಿಡಿಯೋ ಮಾಡಿ ಬಹಿರಂಗಗೊಳಿಸುವುದು ಅತ್ಯಂತ ನೀಚತನದ ಕೆಲಸ. ಸ್ಮಾರ್ಟ್‍ಫೋನ್‍ನ ದೆಸೆಯಿಂದ ಯಾರು ಯಾರ ಜೊತೆ ಮಾತಾಡಿದಾಗಲೂ, ಬಹಿರಂಗ ಸಭೆಯಲ್ಲಿ ಮಾತಾಡಿದಾಗ ವಹಿಸಬೇಕಾದ ರೀತಿಯ ಎಚ್ಚರವನ್ನು ವಹಿಸುವ ಸ್ಥಿತಿ ಬರಬಾರದು, ಆದರೆ ಬಂದುಬಿಟ್ಟಿದೆ.
ಸಿದ್ದರಾಮಯ್ಯನವರಿಗೆ ತಮ್ಮ ಸುತ್ತಲಿನವರ ಜೊತೆ ಇರುವ ಸಂಬಂಧದ ಸ್ವರೂಪವನ್ನೂ ಇದು ತೋರಿಸುತ್ತಿದೆ. ಅವರೊಡನೆ ಮಾತಾಡಲು ಬರುವವರು ಎಂಥವರನ್ನು ಕರೆದುಕೊಂಡು ಹೋಗುತ್ತಿದ್ದಾರೆಂದರೆ, ಖಾಸಗಿ ಸಂಭಾಷಣೆಗಳನ್ನು ವಿಡಿಯೋ ಮಾಡುವುದು ಮಾತ್ರವಲ್ಲದೇ, ಅದನ್ನು ಬಹಿರಂಗಗೊಳಿಸುತ್ತಿದ್ದಾರೆ. ಹಿಂದೆ, ಹೊಳೆನರಸೀಪುರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಲು ತಯಾರಿ ನಡೆಸಿದ್ದ ಸರ್ಕಾರೀ ನೌಕರರ ಸಂಘದ ಅಧ್ಯಕ್ಷ ಮಂಜೇಗೌಡರೊಂದಿಗೆ ನಡೆಸಿದ ಫೋನ್ ಸಂಭಾಷಣೆಯೂ ಇದೇ ರೀತಿ ‘ವೈರಲ್’ ಆಗಿತ್ತು.
ಖಾಸಗಿ ಸಂಭಾಷಣೆಗಳನ್ನು ಬಹಿರಂಗಗೊಳಿಸುವ ಪ್ರವೃತ್ತಿಯನ್ನು ಯಾರೂ ಬೆಂಬಲಿಸಬಾರದು. ಅಂತಹ ಕೆಲಸವನ್ನು ಯಾರಾದರೂ ಮಾಡಿದರೆ, ಅದನ್ನು ವೈರಲ್‍ಗೊಳಿಸುವ ಕೆಲಸವೂ ಸಲ್ಲ. ಆದರೆ, ಸಿದ್ದರಾಮಯ್ಯನವರು ಇದನ್ನು ಹೇಳಿ ತಮ್ಮ ಪಾಡಿಗೆ ತಾವು ಮಾತಾಡುತ್ತಿರುವಂತಿಲ್ಲ. ಏಕೆಂದರೆ, ಅವರಿಂದು ಸಮನ್ವಯದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಹಾಗೆ ನೋಡಿದರೆ, ಕಾಂಗ್ರೆಸ್ ಹೈಕಮ್ಯಾಂಡ್ ಇಂದಿಗೂ ಸಿದ್ದರಾಮಯ್ಯನವರ ಪರವಾಗಿಯೇ ನಿಂತಿದೆ ಎನ್ನಬಹುದು. ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಅಭ್ಯರ್ಥಿಗಳಿಗೆ ಸಂಪೂರ್ಣವಾಗಿ ಮಣೆ ಹಾಕಿಲ್ಲ ಎಂಬ ಒಂದು ಸಂಗತಿ ಬಿಟ್ಟರೆ.
ಏಕೆಂದರೆ, ಚುನಾವಣೆಗೆ ಮುಂಚೆ ಸಿದ್ದರಾಮಯ್ಯನವರಿಗೆ ವಿಶೇಷ ಸ್ಥಾನವನ್ನು ಕೊಡಲಾಗಿತ್ತು. ರಾಹುಲ್‍ಗಾಂಧಿಯ ನಂತರದ ಸ್ಥಾನ ಅವರಿಗೇ ಇತ್ತು. ಮತ್ತೆ ಅಧಿಕಾರಕ್ಕೆ ತರಬೇಕಾದ ಜವಾಬ್ದಾರಿ ಅವರ ಮೇಲೇ ಇತ್ತು. ಸಂದರ್ಭ ಅವರ ಪರವಾಗಿರಲಿಲ್ಲ. ಕಾಂಗ್ರೆಸ್ 40ಕ್ಕೂ ಹೆಚ್ಚು ಸ್ಥಾನಗಳನ್ನು ಕಳೆದುಕೊಂಡಿತು. ಆದರೆ, ಸಮ್ಮಿಶ್ರ ಸರ್ಕಾರ ರಚನೆಯ ಸಂದರ್ಭದಲ್ಲಿ ಸಿದ್ದರಾಮಯ್ಯನವರನ್ನೂ ಜೊತೆಗಿಟ್ಟುಕೊಳ್ಳಲಾಗಿತ್ತು. ಉಪಮುಖ್ಯಮಂತ್ರಿ ಸ್ಥಾನವನ್ನು ಪಡೆದುಕೊಂಡು ಜಿ.ಪರಮೇಶ್ವರ್ ಸಹಜವಾಗಿ ಶಾಸಕಾಂಗ ಪಕ್ಷದ ನಾಯಕರಾಗುತ್ತಾರೆ ಎಂಬ ನಿರೀಕ್ಷೆಯಿತ್ತು. ರೆಸಾರ್ಟ್‍ಗಳಲ್ಲಿ ಶಾಸಕರನ್ನು ಕೂಡಿಟ್ಟುಕೊಂಡಿದ್ದಾಗೊಮ್ಮೆ, ಇನ್ನೇನು ಆಯ್ಕೆ ಆಗಿಯೇ ಹೋಯಿತು ಎಂಬಂತೆ ಆಗಿತ್ತು. ಆದರೆ, ಸಿದ್ದರಾಮಯ್ಯನವರನ್ನೇ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಬಹಳ ಮುಖ್ಯವಾಗಿ ಎರಡೂ ಪಕ್ಷಗಳ ನಡುವಿನ ಹೊಂದಾಣಿಕೆಗಾಗಿ ರಚಿಸಲಾದ ಸಮನ್ವಯ ಸಮಿತಿಗೆ ಸಿದ್ದರಾಮಯ್ಯನವರನ್ನೇ ಅಧ್ಯಕ್ಷರನ್ನಾಗಿಸಲಾಯಿತು.
ಇದಕ್ಕೆ ಕಾರಣವಿಲ್ಲದಿಲ್ಲ. ‘ವಿಪರೀತ’ ಅಹಿಂದ ರಾಜಕಾರಣ ಮಾಡಿದುದಕ್ಕಾಗಿ ಮೇಲ್ಜಾತಿ ಧ್ರುವೀಕರಣ ಉಂಟಾಗಿ ಕಾಂಗ್ರೆಸ್ ಸೋಲಬೇಕಾಯಿತು ಎಂಬ ಆರೋಪವನ್ನೇನೋ ಸಿದ್ದರಾಮಯ್ಯನವರ ವಿರುದ್ಧ ಮಾಡಬಹುದು. ಆದರೆ, ಹಲವು ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಕಾಂಗ್ರೆಸ್‍ನ ಮತ ಪ್ರಮಾಣವನ್ನು ಹೆಚ್ಚಿಸಿ ಶೇ.38ಕ್ಕೆ ತೆಗೆದುಕೊಂಡು ಹೋಗಿದ್ದರಲ್ಲಿ ಸಿದ್ದರಾಮಯ್ಯನವರ ಪಾತ್ರವನ್ನೂ ಯಾರೂ ತಳ್ಳಿ ಹಾಕುವಂತಿಲ್ಲ. ಅವೆಲ್ಲಾ ಕಾರಣಗಳೂ ಸೇರಿ ಸಿದ್ದರಾಮಯ್ಯನವರ ಸ್ಥಾನವನ್ನು ಭದ್ರವಾಗಿಯೇ ಇಟ್ಟಿವೆ.
ಅದೇನೇ ಇದ್ದರೂ, ಸಿದ್ದರಾಮಯ್ಯನವರು ಇನ್ನಷ್ಟು ಹೆಚ್ಚು ಸಮನ್ವಯವನ್ನು ತೋರುವ ಅಗತ್ಯವಿದೆ. ಈ ವಿಚಾರದಲ್ಲಿ ಹಿಂದಿಗಿಂತ ಅವರ ಜವಾಬ್ದಾರಿ ಹೆಚ್ಚಾಗಿದೆ. ‘ನಾನಿರುವುದೇ ಹೀಗೆ’, ‘ಸಿದ್ದರಾಮಯ್ಯನವರ ಮಾತಿನ ಧಾಟಿ ಉಡಾಫೆ ಎಂಬಂತಿರುತ್ತದೆ ಅಷ್ಟೇ’, ‘ಹಳ್ಳಿ ಹಿನ್ನೆಲೆಯ, ಶೋಷಿತ ಸಮುದಾಯಗಳ ಹಿನ್ನೆಲೆಯ ವ್ಯಕ್ತಿಯಾದ್ದರಿಂದ ಹಾಗನ್ನಿಸಬಹುದು’ ಇತ್ಯಾದಿ ಸಮಜಾಯಿಷಿಗಳಷ್ಟೇ ಸಿದ್ದರಾಮಯ್ಯನವರ ಎಡವಟ್ಟುಗಳಿಗೆ ಸಮರ್ಥನೆ ಒದಗಿಸುವುದಿಲ್ಲ. ಕೆಲವು ಉದಾಹರಣೆಗಳೊಂದಿಗೆ ಅದನ್ನು ವಿವರಿಸಬಹುದು.
ಹಿರಿತನ, ಪಕ್ಷ ನಿಷ್ಠೆ, ಆಡಳಿತ ಸಾಮಥ್ರ್ಯ ಇವುಗಳಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಸಿದ್ದರಾಮ್ಯಯನವರಿಗಿಂತ ಹೆಚ್ಚು ತೂಗುತ್ತಾರೆ. ಆದರೂ, 2008ರ ಚುನಾವಣೆಯ ನಂತರ ತನ್ನನ್ನು ವಿರೋಧ ಪಕ್ಷದ ನಾಯಕನನ್ನಾಗಿಸಲಿಲ್ಲವೆಂದು ಸಿದ್ದರಾಮಯ್ಯನವರು ಮುನಿಸಿಕೊಂಡರು. ಖರ್ಗೆಯವರನ್ನು ಪಾರ್ಲಿಮೆಂಟಿಗೆ ಕಳಿಸಿ ಸಿದ್ದರಾಮಯ್ಯನವರಿಗೆ ಸಿಎಲ್‍ಪಿ ನಾಯಕನ ಪಟ್ಟ ಕಟ್ಟಲಾಯಿತು. ಅಲ್ಲಿಂದಾಚೆಗೆ ಇಲ್ಲಿಯವರೆಗೆ ಎಂದೂ ಬಹಿರಂಗವಾಗಿ ಖರ್ಗೆಯವರು ಈ ರಾಜ್ಯದ ಮುಖ್ಯಮಂತ್ರಿಯಾಗಬೇಕಿತ್ತು ಎಂತಲೋ, ಅವರನ್ನು ವಿಶೇಷವಾಗಿ ಹೊಗಳಿಯೋ ಸಿದ್ದರಾಮಯ್ಯನವರು ಮಾತಾಡಿದ್ದು ಇಲ್ಲವೇ ಇಲ್ಲ. ದಲಿತ ಮುಖ್ಯಮಂತ್ರಿಯ ವಿಚಾರ ಅಗತ್ಯವಾಗಿಯೋ, ಅನಗತ್ಯವಾಗಿಯೋ ಪ್ರಸ್ತಾಪವಾದಾಗ, ಇಷ್ಟನ್ನು ಹೇಳುವುದು ಅವರ ಕರ್ತವ್ಯವಾಗಿತ್ತು ಮತ್ತು ಅದರಿಂದ ಕೆಲವು ಸಮಸ್ಯೆಗಳೂ ಬಗೆಹರಿಯುತ್ತಿದ್ದವು.
ಖರ್ಗೆಯವರ ವಿಚಾರದಲ್ಲೇ ಹೀಗಿರುವಾಗ, ರಾಜಭವನದ ಎದುರು ತಮ್ಮ ಪಕ್ಷದ ಬೆಂಬಲದಿಂದ ಮುಖ್ಯಮಂತ್ರಿಯಾಗಲಿದ್ದ ಕುಮಾರಸ್ವಾಮಿಗೆ ವಿಶೇಷ ಅಭಿನಂದನೆ ಹೇಳಬೇಕಿತ್ತೆಂದೋ, ಕನಿಷ್ಠ ಬಾಡಿ ಲಾಂಗ್ವೇಜ್ ಮತ್ತು ಮಾತಿನ ಧಾಟಿಯಿಂದ ಕುಮಾರಸ್ವಾಮಿಯತ್ತ ಸ್ನೇಹಭಾವ ತೋರಬೇಕಿತ್ತೆಂದೋ ನಿರೀಕ್ಷಿಸುವುದು ಕಷ್ಟ. ವ್ಯಕ್ತಿಗತ ಅಸಮಾಧಾನಗಳು, ರೀತಿ-ನೀತಿಗಳು ಏನೇ ಇರಬಹುದಾದರೂ ಸಾರ್ವಜನಿಕವಾಗಿ ಅಷ್ಟು ಮಾಡುವುದರಿಂದ ಸಿದ್ದರಾಮಯ್ಯನವರು ಗಳಿಸಿಕೊಳ್ಳಲು ಸಾಕಷ್ಟಿತ್ತು. ರಾಮನಗರ ಸಾಮ್ರಾಜ್ಯದ ಹಿಡಿತದ ವಿಚಾರದಿಂದ ಹಿಡಿದು ಹಲವು ಗುದ್ದಾಟಗಳನ್ನು ಹೊಂದಿರುವ ಕುಮಾರಸ್ವಾಮಿ ಮತ್ತು ಡಿಕೆಶಿ ಕೈ ಕೈ ಹಿಡಿದು ಪೋಸ್ ಕೊಡಲು ಸ್ವಲ್ಪವೂ ಹಿಂಜರಿಯಲಿಲ್ಲ.
ಇದೇ ರೀತಿಯ ಸಮಸ್ಯೆಗಳಿಂದಲೇ ವಿ.ಶ್ರೀನಿವಾಸ ಪ್ರಸಾದ್ ಮತ್ತು ಎಚ್.ವಿಶ್ವನಾಥ್‍ರನ್ನೂ ಸಿದ್ದರಾಮಯ್ಯನವರು ದೂರ ಮಾಡಿಕೊಂಡರು. ಕೊನೆಕೊನೆಯಲ್ಲಿ ಎಚ್.ಸಿ.ಮಹದೇವಪ್ಪನವರ ಜೊತೆಗೂ ಹಳಸಿಕೊಂಡಿತ್ತೆಂದು ಹೇಳಲಾಗುತ್ತದೆ. ಪ್ರಸಾದ್ ಮತ್ತು ವಿಶ್ವನಾಥ್‍ರಲ್ಲೂ ವ್ಯಕ್ತಿಗತ ಅಹಂಭಾವ ಇಲ್ಲವೇ ಇಲ್ಲವೆಂದು ಹೇಳಲಾಗದು. ಅವರವರ ಸಮಸ್ಯೆಗಳು ಅವರವರಿಗಿವೆ. ಆದರೆ, ಬಹಳ ಮುಖ್ಯವಾದ ಸಂದರ್ಭಗಳಲ್ಲಿ ತನ್ನ ಜೊತೆಗೆ ನಿಂತ ಇಂತಹ ಹಲವಾರು ವ್ಯಕ್ತಿಗಳನ್ನು ಪ್ರೀತ್ಯಾದರ ಮತ್ತು ಗೌರವಗಳಿಂದ ಮಾತಾಡಿಸುವುದೂ ಸಾಧ್ಯವಾಗದೇ ಹೋದರೆ ಹೇಗೆ?
ನಿಜವಾದ ಅರ್ಥದ ಮುತ್ಸದ್ದಿಯಾಗಿ ಸಿದ್ದರಾಮಯ್ಯನವರು ಪೊರೆ ಕಳಚಬೇಕಿದೆ. ಅದು ಇಂದು ಕರ್ನಾಟಕ ಮತ್ತು ದೇಶದಲ್ಲಿ ಅವರಿಂದ ಇರುವ ನಿರೀಕ್ಷೆ. ನರೇಂದ್ರ ಮೋದಿಗೆದುರು ಈ ಪ್ರಾದೇಶಿಕ ನಾಯಕನೇ ಸೈ ಎಂಬಂತೆ ಚುನಾವಣೆಗೆ ಮುಂಚಿನ ತಿಂಗಳುಗಳಲ್ಲಿ ವಿರೋಧಿ ಚಾನೆಲ್‍ಗಳೂ ಬಿಂಬಿಸಬೇಕಾಯಿತು. ಪತ್ರಕರ್ತೆ ಬರ್ಕಾದತ್, ನ್ಯೂಯಾರ್ಕ್ ಟೈಮ್ಸ್‍ನಲ್ಲಿ ಭಾರತದ ದಕ್ಷಿಣದಲ್ಲಿ ನರೇಂದ್ರ ಮೋದಿಯನ್ನು ದನಗಾಹಿಯೊಬ್ಬರ ಮಗ ತಡೆದುಹಾಕುವ ರೀತಿ ಕಾಣುತ್ತಿದೆ ಎಂದು ಬರೆದಿದ್ದರು. ಸೈದ್ಧಾಂತಿಕವಾಗಿ, ಕೋಮುವಾದ-ಕೇಂದ್ರೀಕರಣ-ಸರ್ವಾಧಿಕಾರ-ಜಾತಿವಾದಗಳೆಲ್ಲಾ ಆಯಾಮಗಳಿಂದಲೂ ಸಿದ್ದರಾಮಯ್ಯ ಮೋದಿಗೆದುರು ನಿಂತು ಸೆಣೆಸಿದರು. ಹೀಗಿರುವಾಗ ಬಹಳ ಸಣ್ಣ ಸಣ್ಣ ಸಂಗತಿಗಳನ್ನು ಸೇರಿದಂತೆ ಹಲವು ಅಂಶಗಳನ್ನು ನಿಭಾಯಿಸಲು ಬೇಕಾದ ರೀತಿಯಲ್ಲಿ ಮಾಗುವುದು ಮತ್ತು ಕಲಿಯುವುದು ಈಗಲೂ ಇದೆ ಎಂದು ಸಿದ್ದರಾಮಯ್ಯನವರು ಅರ್ಥ ಮಾಡಿಕೊಂಡರೆ, ಮುಖ್ಯಮಂತ್ರಿಯೋತ್ತರ ಕಾಲದಲ್ಲಿ ಅವರಿಂದ ಈ ನಾಡಿಗೆ ಇನ್ನೂ ಹೆಚ್ಚಿನ ಕೊಡುಗೆ ಸಿಗಬಲ್ಲದು.
ಇದು ಅವರಿಗೆ ಸಾಧ್ಯವೇ ಇಲ್ಲದ್ದೇನಲ್ಲ. ಫಲಿತಾಂಶ ಬಂದ ದಿನ ಬಹಳ ಮೌನವಾಗಿ ಘನತೆಯಿಂದ ಸಿದ್ದರಾಮಯ್ಯನವರು ವರ್ತಿಸಿದ್ದರು. ಅವರು ಕೈಕಟ್ಟಿ ನಿಂತಿದ್ದು ರಾಜ್ಯದ ಜನರು ನೀಡಿದ ಜನಾದೇಶಕ್ಕೆ ತಾನು ವಿನೀತನಾಗಿದ್ದೇನೆಂಬ ಭಾವದ ರೀತಿಯಲ್ಲಿ ಕಾಣುತ್ತಿತ್ತು. ರಾಜಭವನದಲ್ಲಿ ಆ ಕಡೆ ಕುಮಾರಸ್ವಾಮಿ ಮತ್ತು ಗುಲಾಂ ನಬಿ ಆಝಾದ್ ಕೂತು ಮಾತಾಡುವಾಗ, ಈ ಕಡೆ ಸ್ವಲ್ಪ ಮುಖ ಕೆಳಕ್ಕೆ ಮಾಡಿ ಕೈಕಟ್ಟಿ ಕೂತಿದ್ದಾಗ ಆಗಲೇ ಸೋಲಿನ ಕಾರಣಗಳನ್ನು ಹುಡುಕುವ ಆತ್ಮಾವಲೋಕನಕ್ಕೆ ಜಾರಿದ್ದಾರೆನಿಸುವಂತಿತ್ತು. ಆದರೆ, ನಂತರದ ದಿನಗಳಲ್ಲಿ ಮಾಮೂಲಿನ ರಾಜಕಾರಣಿಯ ರೀತಿಯಲ್ಲಿ ಅವರು ನಡೆದುಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ. ಈ ಇಮೇಜ್ ಒಂದು ರೀತಿಯಲ್ಲಿ ಮಾಧ್ಯಮಗಳ ಸೃಷ್ಟಿಯೂ ಹೌದು. ಆದರೆ, ತಾನೇ ಮುಂದಾಗಿ ಸಮ್ಮಿಶ್ರ ಸರ್ಕಾರಕ್ಕೆ ಅಭಯ ನೀಡುವುದು, ಭಿನ್ನಮತವನ್ನು ಸಂಭಾಳಿಸುವ ಪ್ರೋಆಕ್ಟಿವ್ ಪ್ರಯತ್ನಗಳನ್ನು ಮಾಡುವುದು ಮಾಡಿದ್ದರೆ ಸಾಕಿತ್ತು; ಮಾಧ್ಯಮಗಳ ವಕ್ರನೋಟವನ್ನೂ ಮಣಿಸಬಹುದಿತ್ತು.
ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನವನ್ನು ಅನುಭವಿಸಿಯಾಗಿದೆ. ಈ ಸಾರಿ ಮತ್ತೆ ಕಾಂಗ್ರೆಸ್‍ಗೆ ಬಹುಮತ ಬಂದಿದ್ದರೆ, ಇನ್ನೂ ಒಂದು ಸಾರಿ ಆ ಅವಕಾಶ ಇರುತ್ತಿತ್ತು. ಕೇಂದ್ರ ರಾಜಕಾರಣಕ್ಕೆ ಹೋಗುವ ಇರಾದೆ ಇಲ್ಲವೆಂದು ಪದೇ ಪದೇ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಬೇಡವೆಂದಿದ್ದಾರೆಂಬ ಸುದ್ದಿಗಳಿವೆ. ಹೀಗಿರುವಾಗ ರಾಜಕಾರಣದಿಂದ ನಿವೃತ್ತರಾಗದ ಮುತ್ಸದ್ದಿಯಾಗಿ, ದೇಶ ಇಂದು ಕೇಳುತ್ತಿರುವ ಒಂದು ಪಾತ್ರ ನಿರ್ವಹಿಸಲು ಅವರಿಗೆ ಸಾಧ್ಯವಿದೆ. ಅದು ದೇಶದ ಜನಸಾಮಾನ್ಯರ ಪರವಾದ ಸಿದ್ಧಾಂತ, ನೀತಿ, ಸೌಹಾರ್ದವನ್ನು ಸಮಕಾಲೀನ ರಾಜಕಾರಣದ ಕೇಂದ್ರಕ್ಕೆ ತರಲು ಶ್ರಮಿಸುವುದು.
ಇಂದು ಅದಕ್ಕೆ ಬಹಳ ಮುಖ್ಯವಾಗಿ ಅಗತ್ಯವಿರುವುದು ‘ಸಮನ್ವಯ’. 2019ರ ಚುನಾವಣೆಯ ದೃಷ್ಟಿಯಿಂದಲೂ, ಭವಿಷ್ಯದ ಭಾರತದ ರಾಜಕಾರಣದ ದೃಷ್ಟಿಯಿಂದಲೂ ಅದು ಅತ್ಯಂತ ಅಪೇಕ್ಷಣೀಯ.

– ನೀಲಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...