Homeಮುಖಪುಟಸಮ್ಮಿಶ್ರ ಕುಟುಂಬದ ಯಜಮಾನನ ಹೊಣೆ ನಿಭಾಯಿಸಲು ಇದು ಆ್ಯಕ್ಷನ್ ಟೈಮ್

ಸಮ್ಮಿಶ್ರ ಕುಟುಂಬದ ಯಜಮಾನನ ಹೊಣೆ ನಿಭಾಯಿಸಲು ಇದು ಆ್ಯಕ್ಷನ್ ಟೈಮ್

- Advertisement -
- Advertisement -

ಬಿಡುವಿಲ್ಲದ ರಾಜಕಾರಣ ಮಾಡುವ ರಾಜಕಾರಣಿಗಳು ಸೋತಾಗ ಅಥವಾ ದೀರ್ಘ ಕಾಲದ ಚಟುವಟಿಕೆಗಳ ನಂತರ ಕೆಲಕಾಲ ಬ್ರೇಕ್ ತೆಗೆದುಕೊಳ್ಳುವುದು ಹಲವು ಕಾರಣಗಳಿಂದ ಅಗತ್ಯ. ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಾಖಲಾದಾಗ ಅಂತಹದೊಂದು ಬ್ರೇಕ್ ಬಯಸಿದ್ದಾರೆಂದು ಭಾವಿಸಲಾಗಿತ್ತು. ಈ ಚುನಾವಣೆಗೆ ಮುಂಚೆ ಉಳಿದ ಮುಖ್ಯಮಂತ್ರಿ ಅಭ್ಯರ್ಥಿಗಳೂ ಸಿದ್ದರಾಮಯ್ಯನವರಷ್ಟೇ ಸುತ್ತಾಡಿದ್ದಾರಾದರೂ, ಕಾಂಗ್ರೆಸ್‍ನ ಮಟ್ಟಿಗೆ ಅವರದ್ದು ಏಕೈಕ ದಂಡನಾಯಕನ ರೀತಿಯ ಹೋರಾಟವಾಗಿತ್ತು. ಯಡಿಯೂರಪ್ಪನವರ ಜೊತೆಗೆ ಬಿಜೆಪಿಯ ಬೃಹತ್ ಯಂತ್ರಾಂಗವಿದ್ದರೆ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಇಡೀ ರಾಜ್ಯ ಗೆಲ್ಲುವ ಅಗತ್ಯವೂ ಇರಲಿಲ್ಲ; ಅಂತಹ ಗುರಿಯೂ ಇರಲಿಲ್ಲ. ಚುನಾವಣೆ ಮುಗಿದು ಸೋತ ಕ್ಷಣದಿಂದಲೇ ಬಿಡುಗಡೆಯಾಗಲಿಲ್ಲ; ಸಮ್ಮಿಶ್ರ ಸರ್ಕಾರದ ಸ್ಥಾಪನೆಯ ಕೆಲಸದಲ್ಲಿ ಸಿದ್ದರಾಮಯ್ಯನವರಿಗೂ ಜವಾಬ್ದಾರಿಗಳಿದ್ದುದರಿಂದ ಒಂದು ತಿಂಗಳಿಗೂ ಹೆಚ್ಚು ಕಾಲದ ನಂತರ ವಿಶ್ರಾಂತಿಗಾಗಿ ‘ಶಾಂತಿವನ’ (ಧರ್ಮಸ್ಥಳದ ಚಿಕಿತ್ಸಾ ಕೇಂದ್ರದ ಹೆಸರು)ದ ಕಡೆಗೆ ನಡೆದರು.
ಈ ಸಂದರ್ಭದಲ್ಲಿ ಅವರಿಗೆ ಶಾಂತಿಯ ಅಗತ್ಯ ಇತ್ತು. ಎಲ್ಲಿ ಎಡವಟ್ಟಾಯಿತೆಂಬ ಆತ್ಮಾವಲೋಕನಕ್ಕೆ, ಮುಂದಿನ ದಿನಗಳಲ್ಲಿ ತನ್ನ ಪಾತ್ರ ಏನಾಗಿರಬೇಕೆಂಬ ಕುರಿತು ಆಳವಾದ ಚಿಂತನೆಗೆ ಮತ್ತು ಮುಂದಿನ ನಿಖರ ನಡೆಗಳನ್ನು ಯೋಜಿಸಲಿಕ್ಕೆ. ಸೋಲು ಮತ್ತು ನಂತರದ ವಿಶ್ರಾಂತಿಯು ಇವೆಲ್ಲಕ್ಕೂ ಅವಕಾಶ ಮಾಡಿಕೊಡುತ್ತದೆ. ಏಕೆಂದರೆ, ಚುನಾವಣೆಯ ದಣಿವಿನ ನಂತರ ‘ಗೆದ್ದ’ ಕುಮಾರಸ್ವಾಮಿಯವರಿಗೆ ಈ ಅವಕಾಶ ಇರುವುದಿಲ್ಲ.
ದುರದೃಷ್ಟಕರ ವಿಚಾರವೆಂದರೆ, ಸಿದ್ದರಾಮಯ್ಯನವರಿಗೆ ಅಂತಹ ಶಾಂತಿ ಮತ್ತು ಸಮಯ ಸಿಕ್ಕಿದಂತೆ ಕಾಣುವುದಿಲ್ಲ. ಇದಕ್ಕೆ ‘ಹೊರಗಿನ’ ಶಕ್ತಿಗಳನ್ನು ಎಷ್ಟು ಬೇಕಾದರೂ ದೂರಬಹುದು. ಆದರೆ, ಇದರ ಜವಾಬ್ದಾರಿಯನ್ನು ಮಾತ್ರ ಅವರೇ ತೆಗೆದುಕೊಳ್ಳಬೇಕು. ಬಜೆಟ್ ಕುರಿತಂತೆ ಅವರು ಮುಂದಿಟ್ಟ ಸಲಹೆಯಿಂದ ಆರಂಭವಾಗಿ ಇಲ್ಲಿಯವರೆಗೆ ಎದ್ದಿರುವ ‘ವಿವಾದದ’ ದೃಷ್ಟಿಯಿಂದ ಮಾತ್ರವಲ್ಲದೇ, ‘ತನ್ನಂತಹ ಜನನಾಯಕನಿಗೆ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿರುವ ಪಾತ್ರವೇನಾಗಿರಬೇಕು?’ ಎಂಬ ಕುರಿತು ಗಂಭೀರವಾದ, ಆಳವಾದ ಚಿಂತನೆಗೆ ಅವರು ಸಮಯ ಮಾಡಿಕೊಳ್ಳಲೇಬೇಕಿತ್ತು. ಅದನ್ನು ಸಿದ್ದರಾಮಯ್ಯನವರು ಮಾಡಿಕೊಂಡಿಲ್ಲ. ಬದಲಿಗೆ ಶಾಂತಿವನದಿಂದಲೇ ಅಶಾಂತಿ ಸೃಷ್ಟಿ ಮಾಡುವ ಸಂಗತಿಗಳನ್ನು ಮಾಧ್ಯಮಗಳು ಹೆಕ್ಕಿ ತೆಗೆಯಲು ಅವಕಾಶ ಮಾಡಿಕೊಟ್ಟಿದ್ದಾರೆ.
ಅವರು ಏನು ಮಾತಾಡಿದರು ಎಂಬ ಕುರಿತು ಈಗಾಗಲೇ ಬಿತ್ತರಗೊಂಡಿರುವ ವಿಡಿಯೋಗಳು ಹೇಳಿಬಿಟ್ಟಿರುವುದರಿಂದ ಅದರ ವಿವರಗಳು ಅಗತ್ಯವಿಲ್ಲ. ಹಾಗೆ ನೋಡಿದರೆ, ಅವರು ಅಂತಹ ಯಾವ ‘ವಿವಾದಾತ್ಮಕ’ ಅಂಶಗಳನ್ನೂ ಮಾತಾಡಿಲ್ಲ. ಯಾರೇ ಇಬ್ಬರು ಅಥವಾ ಹೆಚ್ಚು ಜನ ಸ್ನೇಹಿತರು ಜೊತೆಗೂಡಿ ಮಾತನಾಡುವಾಗ ಎಷ್ಟೋ ಮಾತುಗಳು ಬರುತ್ತವೆ; ಹೋಗುತ್ತವೆ. ಅವಕ್ಕೆ ವಿಶೇಷ ಅರ್ಥ ಕಲ್ಪಿಸಬಾರದು. ಹೀಗಿರುವಾಗ ಖಾಸಗಿಯಾಗಿ ಮಾತಾಡುವಾಗ ಅದನ್ನು ಕದ್ದು ವಿಡಿಯೋ ಮಾಡಿ ಬಹಿರಂಗಗೊಳಿಸುವುದು ಅತ್ಯಂತ ನೀಚತನದ ಕೆಲಸ. ಸ್ಮಾರ್ಟ್‍ಫೋನ್‍ನ ದೆಸೆಯಿಂದ ಯಾರು ಯಾರ ಜೊತೆ ಮಾತಾಡಿದಾಗಲೂ, ಬಹಿರಂಗ ಸಭೆಯಲ್ಲಿ ಮಾತಾಡಿದಾಗ ವಹಿಸಬೇಕಾದ ರೀತಿಯ ಎಚ್ಚರವನ್ನು ವಹಿಸುವ ಸ್ಥಿತಿ ಬರಬಾರದು, ಆದರೆ ಬಂದುಬಿಟ್ಟಿದೆ.
ಸಿದ್ದರಾಮಯ್ಯನವರಿಗೆ ತಮ್ಮ ಸುತ್ತಲಿನವರ ಜೊತೆ ಇರುವ ಸಂಬಂಧದ ಸ್ವರೂಪವನ್ನೂ ಇದು ತೋರಿಸುತ್ತಿದೆ. ಅವರೊಡನೆ ಮಾತಾಡಲು ಬರುವವರು ಎಂಥವರನ್ನು ಕರೆದುಕೊಂಡು ಹೋಗುತ್ತಿದ್ದಾರೆಂದರೆ, ಖಾಸಗಿ ಸಂಭಾಷಣೆಗಳನ್ನು ವಿಡಿಯೋ ಮಾಡುವುದು ಮಾತ್ರವಲ್ಲದೇ, ಅದನ್ನು ಬಹಿರಂಗಗೊಳಿಸುತ್ತಿದ್ದಾರೆ. ಹಿಂದೆ, ಹೊಳೆನರಸೀಪುರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಲು ತಯಾರಿ ನಡೆಸಿದ್ದ ಸರ್ಕಾರೀ ನೌಕರರ ಸಂಘದ ಅಧ್ಯಕ್ಷ ಮಂಜೇಗೌಡರೊಂದಿಗೆ ನಡೆಸಿದ ಫೋನ್ ಸಂಭಾಷಣೆಯೂ ಇದೇ ರೀತಿ ‘ವೈರಲ್’ ಆಗಿತ್ತು.
ಖಾಸಗಿ ಸಂಭಾಷಣೆಗಳನ್ನು ಬಹಿರಂಗಗೊಳಿಸುವ ಪ್ರವೃತ್ತಿಯನ್ನು ಯಾರೂ ಬೆಂಬಲಿಸಬಾರದು. ಅಂತಹ ಕೆಲಸವನ್ನು ಯಾರಾದರೂ ಮಾಡಿದರೆ, ಅದನ್ನು ವೈರಲ್‍ಗೊಳಿಸುವ ಕೆಲಸವೂ ಸಲ್ಲ. ಆದರೆ, ಸಿದ್ದರಾಮಯ್ಯನವರು ಇದನ್ನು ಹೇಳಿ ತಮ್ಮ ಪಾಡಿಗೆ ತಾವು ಮಾತಾಡುತ್ತಿರುವಂತಿಲ್ಲ. ಏಕೆಂದರೆ, ಅವರಿಂದು ಸಮನ್ವಯದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಹಾಗೆ ನೋಡಿದರೆ, ಕಾಂಗ್ರೆಸ್ ಹೈಕಮ್ಯಾಂಡ್ ಇಂದಿಗೂ ಸಿದ್ದರಾಮಯ್ಯನವರ ಪರವಾಗಿಯೇ ನಿಂತಿದೆ ಎನ್ನಬಹುದು. ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಅಭ್ಯರ್ಥಿಗಳಿಗೆ ಸಂಪೂರ್ಣವಾಗಿ ಮಣೆ ಹಾಕಿಲ್ಲ ಎಂಬ ಒಂದು ಸಂಗತಿ ಬಿಟ್ಟರೆ.
ಏಕೆಂದರೆ, ಚುನಾವಣೆಗೆ ಮುಂಚೆ ಸಿದ್ದರಾಮಯ್ಯನವರಿಗೆ ವಿಶೇಷ ಸ್ಥಾನವನ್ನು ಕೊಡಲಾಗಿತ್ತು. ರಾಹುಲ್‍ಗಾಂಧಿಯ ನಂತರದ ಸ್ಥಾನ ಅವರಿಗೇ ಇತ್ತು. ಮತ್ತೆ ಅಧಿಕಾರಕ್ಕೆ ತರಬೇಕಾದ ಜವಾಬ್ದಾರಿ ಅವರ ಮೇಲೇ ಇತ್ತು. ಸಂದರ್ಭ ಅವರ ಪರವಾಗಿರಲಿಲ್ಲ. ಕಾಂಗ್ರೆಸ್ 40ಕ್ಕೂ ಹೆಚ್ಚು ಸ್ಥಾನಗಳನ್ನು ಕಳೆದುಕೊಂಡಿತು. ಆದರೆ, ಸಮ್ಮಿಶ್ರ ಸರ್ಕಾರ ರಚನೆಯ ಸಂದರ್ಭದಲ್ಲಿ ಸಿದ್ದರಾಮಯ್ಯನವರನ್ನೂ ಜೊತೆಗಿಟ್ಟುಕೊಳ್ಳಲಾಗಿತ್ತು. ಉಪಮುಖ್ಯಮಂತ್ರಿ ಸ್ಥಾನವನ್ನು ಪಡೆದುಕೊಂಡು ಜಿ.ಪರಮೇಶ್ವರ್ ಸಹಜವಾಗಿ ಶಾಸಕಾಂಗ ಪಕ್ಷದ ನಾಯಕರಾಗುತ್ತಾರೆ ಎಂಬ ನಿರೀಕ್ಷೆಯಿತ್ತು. ರೆಸಾರ್ಟ್‍ಗಳಲ್ಲಿ ಶಾಸಕರನ್ನು ಕೂಡಿಟ್ಟುಕೊಂಡಿದ್ದಾಗೊಮ್ಮೆ, ಇನ್ನೇನು ಆಯ್ಕೆ ಆಗಿಯೇ ಹೋಯಿತು ಎಂಬಂತೆ ಆಗಿತ್ತು. ಆದರೆ, ಸಿದ್ದರಾಮಯ್ಯನವರನ್ನೇ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಬಹಳ ಮುಖ್ಯವಾಗಿ ಎರಡೂ ಪಕ್ಷಗಳ ನಡುವಿನ ಹೊಂದಾಣಿಕೆಗಾಗಿ ರಚಿಸಲಾದ ಸಮನ್ವಯ ಸಮಿತಿಗೆ ಸಿದ್ದರಾಮಯ್ಯನವರನ್ನೇ ಅಧ್ಯಕ್ಷರನ್ನಾಗಿಸಲಾಯಿತು.
ಇದಕ್ಕೆ ಕಾರಣವಿಲ್ಲದಿಲ್ಲ. ‘ವಿಪರೀತ’ ಅಹಿಂದ ರಾಜಕಾರಣ ಮಾಡಿದುದಕ್ಕಾಗಿ ಮೇಲ್ಜಾತಿ ಧ್ರುವೀಕರಣ ಉಂಟಾಗಿ ಕಾಂಗ್ರೆಸ್ ಸೋಲಬೇಕಾಯಿತು ಎಂಬ ಆರೋಪವನ್ನೇನೋ ಸಿದ್ದರಾಮಯ್ಯನವರ ವಿರುದ್ಧ ಮಾಡಬಹುದು. ಆದರೆ, ಹಲವು ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಕಾಂಗ್ರೆಸ್‍ನ ಮತ ಪ್ರಮಾಣವನ್ನು ಹೆಚ್ಚಿಸಿ ಶೇ.38ಕ್ಕೆ ತೆಗೆದುಕೊಂಡು ಹೋಗಿದ್ದರಲ್ಲಿ ಸಿದ್ದರಾಮಯ್ಯನವರ ಪಾತ್ರವನ್ನೂ ಯಾರೂ ತಳ್ಳಿ ಹಾಕುವಂತಿಲ್ಲ. ಅವೆಲ್ಲಾ ಕಾರಣಗಳೂ ಸೇರಿ ಸಿದ್ದರಾಮಯ್ಯನವರ ಸ್ಥಾನವನ್ನು ಭದ್ರವಾಗಿಯೇ ಇಟ್ಟಿವೆ.
ಅದೇನೇ ಇದ್ದರೂ, ಸಿದ್ದರಾಮಯ್ಯನವರು ಇನ್ನಷ್ಟು ಹೆಚ್ಚು ಸಮನ್ವಯವನ್ನು ತೋರುವ ಅಗತ್ಯವಿದೆ. ಈ ವಿಚಾರದಲ್ಲಿ ಹಿಂದಿಗಿಂತ ಅವರ ಜವಾಬ್ದಾರಿ ಹೆಚ್ಚಾಗಿದೆ. ‘ನಾನಿರುವುದೇ ಹೀಗೆ’, ‘ಸಿದ್ದರಾಮಯ್ಯನವರ ಮಾತಿನ ಧಾಟಿ ಉಡಾಫೆ ಎಂಬಂತಿರುತ್ತದೆ ಅಷ್ಟೇ’, ‘ಹಳ್ಳಿ ಹಿನ್ನೆಲೆಯ, ಶೋಷಿತ ಸಮುದಾಯಗಳ ಹಿನ್ನೆಲೆಯ ವ್ಯಕ್ತಿಯಾದ್ದರಿಂದ ಹಾಗನ್ನಿಸಬಹುದು’ ಇತ್ಯಾದಿ ಸಮಜಾಯಿಷಿಗಳಷ್ಟೇ ಸಿದ್ದರಾಮಯ್ಯನವರ ಎಡವಟ್ಟುಗಳಿಗೆ ಸಮರ್ಥನೆ ಒದಗಿಸುವುದಿಲ್ಲ. ಕೆಲವು ಉದಾಹರಣೆಗಳೊಂದಿಗೆ ಅದನ್ನು ವಿವರಿಸಬಹುದು.
ಹಿರಿತನ, ಪಕ್ಷ ನಿಷ್ಠೆ, ಆಡಳಿತ ಸಾಮಥ್ರ್ಯ ಇವುಗಳಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಸಿದ್ದರಾಮ್ಯಯನವರಿಗಿಂತ ಹೆಚ್ಚು ತೂಗುತ್ತಾರೆ. ಆದರೂ, 2008ರ ಚುನಾವಣೆಯ ನಂತರ ತನ್ನನ್ನು ವಿರೋಧ ಪಕ್ಷದ ನಾಯಕನನ್ನಾಗಿಸಲಿಲ್ಲವೆಂದು ಸಿದ್ದರಾಮಯ್ಯನವರು ಮುನಿಸಿಕೊಂಡರು. ಖರ್ಗೆಯವರನ್ನು ಪಾರ್ಲಿಮೆಂಟಿಗೆ ಕಳಿಸಿ ಸಿದ್ದರಾಮಯ್ಯನವರಿಗೆ ಸಿಎಲ್‍ಪಿ ನಾಯಕನ ಪಟ್ಟ ಕಟ್ಟಲಾಯಿತು. ಅಲ್ಲಿಂದಾಚೆಗೆ ಇಲ್ಲಿಯವರೆಗೆ ಎಂದೂ ಬಹಿರಂಗವಾಗಿ ಖರ್ಗೆಯವರು ಈ ರಾಜ್ಯದ ಮುಖ್ಯಮಂತ್ರಿಯಾಗಬೇಕಿತ್ತು ಎಂತಲೋ, ಅವರನ್ನು ವಿಶೇಷವಾಗಿ ಹೊಗಳಿಯೋ ಸಿದ್ದರಾಮಯ್ಯನವರು ಮಾತಾಡಿದ್ದು ಇಲ್ಲವೇ ಇಲ್ಲ. ದಲಿತ ಮುಖ್ಯಮಂತ್ರಿಯ ವಿಚಾರ ಅಗತ್ಯವಾಗಿಯೋ, ಅನಗತ್ಯವಾಗಿಯೋ ಪ್ರಸ್ತಾಪವಾದಾಗ, ಇಷ್ಟನ್ನು ಹೇಳುವುದು ಅವರ ಕರ್ತವ್ಯವಾಗಿತ್ತು ಮತ್ತು ಅದರಿಂದ ಕೆಲವು ಸಮಸ್ಯೆಗಳೂ ಬಗೆಹರಿಯುತ್ತಿದ್ದವು.
ಖರ್ಗೆಯವರ ವಿಚಾರದಲ್ಲೇ ಹೀಗಿರುವಾಗ, ರಾಜಭವನದ ಎದುರು ತಮ್ಮ ಪಕ್ಷದ ಬೆಂಬಲದಿಂದ ಮುಖ್ಯಮಂತ್ರಿಯಾಗಲಿದ್ದ ಕುಮಾರಸ್ವಾಮಿಗೆ ವಿಶೇಷ ಅಭಿನಂದನೆ ಹೇಳಬೇಕಿತ್ತೆಂದೋ, ಕನಿಷ್ಠ ಬಾಡಿ ಲಾಂಗ್ವೇಜ್ ಮತ್ತು ಮಾತಿನ ಧಾಟಿಯಿಂದ ಕುಮಾರಸ್ವಾಮಿಯತ್ತ ಸ್ನೇಹಭಾವ ತೋರಬೇಕಿತ್ತೆಂದೋ ನಿರೀಕ್ಷಿಸುವುದು ಕಷ್ಟ. ವ್ಯಕ್ತಿಗತ ಅಸಮಾಧಾನಗಳು, ರೀತಿ-ನೀತಿಗಳು ಏನೇ ಇರಬಹುದಾದರೂ ಸಾರ್ವಜನಿಕವಾಗಿ ಅಷ್ಟು ಮಾಡುವುದರಿಂದ ಸಿದ್ದರಾಮಯ್ಯನವರು ಗಳಿಸಿಕೊಳ್ಳಲು ಸಾಕಷ್ಟಿತ್ತು. ರಾಮನಗರ ಸಾಮ್ರಾಜ್ಯದ ಹಿಡಿತದ ವಿಚಾರದಿಂದ ಹಿಡಿದು ಹಲವು ಗುದ್ದಾಟಗಳನ್ನು ಹೊಂದಿರುವ ಕುಮಾರಸ್ವಾಮಿ ಮತ್ತು ಡಿಕೆಶಿ ಕೈ ಕೈ ಹಿಡಿದು ಪೋಸ್ ಕೊಡಲು ಸ್ವಲ್ಪವೂ ಹಿಂಜರಿಯಲಿಲ್ಲ.
ಇದೇ ರೀತಿಯ ಸಮಸ್ಯೆಗಳಿಂದಲೇ ವಿ.ಶ್ರೀನಿವಾಸ ಪ್ರಸಾದ್ ಮತ್ತು ಎಚ್.ವಿಶ್ವನಾಥ್‍ರನ್ನೂ ಸಿದ್ದರಾಮಯ್ಯನವರು ದೂರ ಮಾಡಿಕೊಂಡರು. ಕೊನೆಕೊನೆಯಲ್ಲಿ ಎಚ್.ಸಿ.ಮಹದೇವಪ್ಪನವರ ಜೊತೆಗೂ ಹಳಸಿಕೊಂಡಿತ್ತೆಂದು ಹೇಳಲಾಗುತ್ತದೆ. ಪ್ರಸಾದ್ ಮತ್ತು ವಿಶ್ವನಾಥ್‍ರಲ್ಲೂ ವ್ಯಕ್ತಿಗತ ಅಹಂಭಾವ ಇಲ್ಲವೇ ಇಲ್ಲವೆಂದು ಹೇಳಲಾಗದು. ಅವರವರ ಸಮಸ್ಯೆಗಳು ಅವರವರಿಗಿವೆ. ಆದರೆ, ಬಹಳ ಮುಖ್ಯವಾದ ಸಂದರ್ಭಗಳಲ್ಲಿ ತನ್ನ ಜೊತೆಗೆ ನಿಂತ ಇಂತಹ ಹಲವಾರು ವ್ಯಕ್ತಿಗಳನ್ನು ಪ್ರೀತ್ಯಾದರ ಮತ್ತು ಗೌರವಗಳಿಂದ ಮಾತಾಡಿಸುವುದೂ ಸಾಧ್ಯವಾಗದೇ ಹೋದರೆ ಹೇಗೆ?
ನಿಜವಾದ ಅರ್ಥದ ಮುತ್ಸದ್ದಿಯಾಗಿ ಸಿದ್ದರಾಮಯ್ಯನವರು ಪೊರೆ ಕಳಚಬೇಕಿದೆ. ಅದು ಇಂದು ಕರ್ನಾಟಕ ಮತ್ತು ದೇಶದಲ್ಲಿ ಅವರಿಂದ ಇರುವ ನಿರೀಕ್ಷೆ. ನರೇಂದ್ರ ಮೋದಿಗೆದುರು ಈ ಪ್ರಾದೇಶಿಕ ನಾಯಕನೇ ಸೈ ಎಂಬಂತೆ ಚುನಾವಣೆಗೆ ಮುಂಚಿನ ತಿಂಗಳುಗಳಲ್ಲಿ ವಿರೋಧಿ ಚಾನೆಲ್‍ಗಳೂ ಬಿಂಬಿಸಬೇಕಾಯಿತು. ಪತ್ರಕರ್ತೆ ಬರ್ಕಾದತ್, ನ್ಯೂಯಾರ್ಕ್ ಟೈಮ್ಸ್‍ನಲ್ಲಿ ಭಾರತದ ದಕ್ಷಿಣದಲ್ಲಿ ನರೇಂದ್ರ ಮೋದಿಯನ್ನು ದನಗಾಹಿಯೊಬ್ಬರ ಮಗ ತಡೆದುಹಾಕುವ ರೀತಿ ಕಾಣುತ್ತಿದೆ ಎಂದು ಬರೆದಿದ್ದರು. ಸೈದ್ಧಾಂತಿಕವಾಗಿ, ಕೋಮುವಾದ-ಕೇಂದ್ರೀಕರಣ-ಸರ್ವಾಧಿಕಾರ-ಜಾತಿವಾದಗಳೆಲ್ಲಾ ಆಯಾಮಗಳಿಂದಲೂ ಸಿದ್ದರಾಮಯ್ಯ ಮೋದಿಗೆದುರು ನಿಂತು ಸೆಣೆಸಿದರು. ಹೀಗಿರುವಾಗ ಬಹಳ ಸಣ್ಣ ಸಣ್ಣ ಸಂಗತಿಗಳನ್ನು ಸೇರಿದಂತೆ ಹಲವು ಅಂಶಗಳನ್ನು ನಿಭಾಯಿಸಲು ಬೇಕಾದ ರೀತಿಯಲ್ಲಿ ಮಾಗುವುದು ಮತ್ತು ಕಲಿಯುವುದು ಈಗಲೂ ಇದೆ ಎಂದು ಸಿದ್ದರಾಮಯ್ಯನವರು ಅರ್ಥ ಮಾಡಿಕೊಂಡರೆ, ಮುಖ್ಯಮಂತ್ರಿಯೋತ್ತರ ಕಾಲದಲ್ಲಿ ಅವರಿಂದ ಈ ನಾಡಿಗೆ ಇನ್ನೂ ಹೆಚ್ಚಿನ ಕೊಡುಗೆ ಸಿಗಬಲ್ಲದು.
ಇದು ಅವರಿಗೆ ಸಾಧ್ಯವೇ ಇಲ್ಲದ್ದೇನಲ್ಲ. ಫಲಿತಾಂಶ ಬಂದ ದಿನ ಬಹಳ ಮೌನವಾಗಿ ಘನತೆಯಿಂದ ಸಿದ್ದರಾಮಯ್ಯನವರು ವರ್ತಿಸಿದ್ದರು. ಅವರು ಕೈಕಟ್ಟಿ ನಿಂತಿದ್ದು ರಾಜ್ಯದ ಜನರು ನೀಡಿದ ಜನಾದೇಶಕ್ಕೆ ತಾನು ವಿನೀತನಾಗಿದ್ದೇನೆಂಬ ಭಾವದ ರೀತಿಯಲ್ಲಿ ಕಾಣುತ್ತಿತ್ತು. ರಾಜಭವನದಲ್ಲಿ ಆ ಕಡೆ ಕುಮಾರಸ್ವಾಮಿ ಮತ್ತು ಗುಲಾಂ ನಬಿ ಆಝಾದ್ ಕೂತು ಮಾತಾಡುವಾಗ, ಈ ಕಡೆ ಸ್ವಲ್ಪ ಮುಖ ಕೆಳಕ್ಕೆ ಮಾಡಿ ಕೈಕಟ್ಟಿ ಕೂತಿದ್ದಾಗ ಆಗಲೇ ಸೋಲಿನ ಕಾರಣಗಳನ್ನು ಹುಡುಕುವ ಆತ್ಮಾವಲೋಕನಕ್ಕೆ ಜಾರಿದ್ದಾರೆನಿಸುವಂತಿತ್ತು. ಆದರೆ, ನಂತರದ ದಿನಗಳಲ್ಲಿ ಮಾಮೂಲಿನ ರಾಜಕಾರಣಿಯ ರೀತಿಯಲ್ಲಿ ಅವರು ನಡೆದುಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ. ಈ ಇಮೇಜ್ ಒಂದು ರೀತಿಯಲ್ಲಿ ಮಾಧ್ಯಮಗಳ ಸೃಷ್ಟಿಯೂ ಹೌದು. ಆದರೆ, ತಾನೇ ಮುಂದಾಗಿ ಸಮ್ಮಿಶ್ರ ಸರ್ಕಾರಕ್ಕೆ ಅಭಯ ನೀಡುವುದು, ಭಿನ್ನಮತವನ್ನು ಸಂಭಾಳಿಸುವ ಪ್ರೋಆಕ್ಟಿವ್ ಪ್ರಯತ್ನಗಳನ್ನು ಮಾಡುವುದು ಮಾಡಿದ್ದರೆ ಸಾಕಿತ್ತು; ಮಾಧ್ಯಮಗಳ ವಕ್ರನೋಟವನ್ನೂ ಮಣಿಸಬಹುದಿತ್ತು.
ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನವನ್ನು ಅನುಭವಿಸಿಯಾಗಿದೆ. ಈ ಸಾರಿ ಮತ್ತೆ ಕಾಂಗ್ರೆಸ್‍ಗೆ ಬಹುಮತ ಬಂದಿದ್ದರೆ, ಇನ್ನೂ ಒಂದು ಸಾರಿ ಆ ಅವಕಾಶ ಇರುತ್ತಿತ್ತು. ಕೇಂದ್ರ ರಾಜಕಾರಣಕ್ಕೆ ಹೋಗುವ ಇರಾದೆ ಇಲ್ಲವೆಂದು ಪದೇ ಪದೇ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಬೇಡವೆಂದಿದ್ದಾರೆಂಬ ಸುದ್ದಿಗಳಿವೆ. ಹೀಗಿರುವಾಗ ರಾಜಕಾರಣದಿಂದ ನಿವೃತ್ತರಾಗದ ಮುತ್ಸದ್ದಿಯಾಗಿ, ದೇಶ ಇಂದು ಕೇಳುತ್ತಿರುವ ಒಂದು ಪಾತ್ರ ನಿರ್ವಹಿಸಲು ಅವರಿಗೆ ಸಾಧ್ಯವಿದೆ. ಅದು ದೇಶದ ಜನಸಾಮಾನ್ಯರ ಪರವಾದ ಸಿದ್ಧಾಂತ, ನೀತಿ, ಸೌಹಾರ್ದವನ್ನು ಸಮಕಾಲೀನ ರಾಜಕಾರಣದ ಕೇಂದ್ರಕ್ಕೆ ತರಲು ಶ್ರಮಿಸುವುದು.
ಇಂದು ಅದಕ್ಕೆ ಬಹಳ ಮುಖ್ಯವಾಗಿ ಅಗತ್ಯವಿರುವುದು ‘ಸಮನ್ವಯ’. 2019ರ ಚುನಾವಣೆಯ ದೃಷ್ಟಿಯಿಂದಲೂ, ಭವಿಷ್ಯದ ಭಾರತದ ರಾಜಕಾರಣದ ದೃಷ್ಟಿಯಿಂದಲೂ ಅದು ಅತ್ಯಂತ ಅಪೇಕ್ಷಣೀಯ.

– ನೀಲಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಸ್ಪೃಶ್ಯ ಅಲೆಮಾರಿ ಸಮುದಾಯಗಳನ್ನು ಪ್ರವರ್ಗ ಸಿಗೆ ಸೇರಿಸಿದ್ದನ್ನು ಕೋರ್ಟ್‌ನಲ್ಲಿ ಸಮರ್ಥಿಸಿಕೊಂಡ ರಾಜ್ಯ ಸರ್ಕಾರ

ಆಗಸ್ಟ್‌ 18 2025ರಂದು ರಾಜ್ಯ ಸರ್ಕಾರ ಒಳಮೀಸಲಾತಿ ವರ್ಗೀಕರಣ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟವು ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿಯನ್ನು ದಾಖಲಿಸಿತ್ತು. ರಾಜ್ಯ ಸರ್ಕಾರ...

ಐದು ವರ್ಷಗಳಲ್ಲಿ ಸುಮಾರು ಒಂಬತ್ತು ಲಕ್ಷ ಜನರು ಪೌರತ್ವ ತ್ಯಜಿಸಿದ್ದಾರೆ: ಎಂಇಎ

ಕಳೆದ ಐದು ವರ್ಷಗಳಲ್ಲಿ ಸುಮಾರು ಒಂಬತ್ತು ಲಕ್ಷ ಜನರು ತಮ್ಮ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ. ಜಾಗತಿಕ ಚಲನಶೀಲತೆ ಹೆಚ್ಚಾದಂತೆ ಮತ್ತು ವೈಯಕ್ತಿಕ ಆಯ್ಕೆಗಳು ವಲಸೆ ಪ್ರವೃತ್ತಿಯನ್ನು ರೂಪಿಸುತ್ತಿರುವುದರಿಂದ ವಾರ್ಷಿಕವಾಗಿ ಸಂಖ್ಯೆಗಳು ಗಮನಾರ್ಹವಾಗಿ ಬದಲಾಗಿವೆ...

ನಟ ದಿಲೀಪ್ ಖುಲಾಸೆ: ನ್ಯಾಯಾಲಯದ ಕಲಾಪವನ್ನು ವಿರೂಪಗೊಳಿಸಬೇಡಿ ಎಂದು ಮಾಧ್ಯಮ ಮತ್ತು ವಕೀಲರಿಗೆ ಎಚ್ಚರಿಕೆ ನೀಡಿದ ನ್ಯಾಯಾದೀಶೆ ಹನಿ ವರ್ಗೀಸ್ 

2017 ರಲ್ಲಿ ದಕ್ಷಿಣ ಭಾರತದ ನಟಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ಅವರನ್ನು ಖುಲಾಸೆಗೊಳಿಸಿದ ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಧೀಶೆ ಹನಿ ಎಂ ವರ್ಗೀಸ್, ತಮ್ಮ ತೀರ್ಪಿನ...

ರಾಜ್‌ಕೋಟ್‌ ಬಾಲಕಿ ಅತ್ಯಾಚಾರ ಪ್ರಕರಣ; ಆಕ್ರೋಶ ಹೊರಹಾಕಿದ ಶಾಸಕ ಜಿಗ್ನೇಶ್‌ ಮೇವಾನಿ; ಕಠಿಣ ಶಿಕ್ಷೆಗೆ ಆಗ್ರಹ

ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಏಳು ವರ್ಷದ ಬಾಲಕಿ ಅತ್ಯಾಚಾರ ಹಾಗೂ ಗಂಭೀರ ಹಲ್ಲೆ ಪ್ರಕರಣಕ್ಕೆ ಸಂಬಧಿಸಿದಂತೆ ಆಕ್ರೋಶ ಹೊರಹಾಕಿರುವ ಕಾಂಗ್ರೆಸ್ ಶಾಸಕ ಜಿಗ್ನೇಶ್‌ ಮೇವಾನಿ; ಆರೋಪಿಯನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಘಟನೆ ಕುರಿತು...

ಯುವ ರೈತರನ್ನು ಮದುವೆಯಾಗುವ ಯುವತಿಯರಿಗೆ ₹5 ಲಕ್ಷ ಪ್ರೋತ್ಸಾಹಧನ ನೀಡಲು BJP ಕಾರ್ಯಕರ್ತರ ಮನವಿ

ಮಂಡ್ಯ:  ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ‘ಶಾದಿ ಭಾಗ್ಯ’ದಂತೆ ರೈತರನ್ನು ಮದುವೆಯಾಗುವ ಯುವತಿಯರಿಗೆ ಸರ್ಕಾರದ ವತಿಯಿಂದ ರೂ.5ಲಕ್ಷ ಪ್ರೋತ್ಸಾಹಧನ ನೀಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಅವರ ಮೂಲಕ...

ನಿವೃತ್ತಿ ನಿರ್ಧಾರ ಹಿಂತೆಗೆದುಕೊಂಡ ವಿನೇಶ್ ಫೋಗಟ್; ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ತಯಾರಿ

ಕುಸ್ತಿಪಟು ವಿನೇಶ್ ಫೋಗಟ್ ಸ್ಪರ್ಧಾತ್ಮಕ ಕ್ರೀಡೆಗೆ ಮರಳುವುದಾಗಿ ಘೋಷಿಸುವ ಮೂಲಕ ತಮ್ಮ ನಿವೃತ್ತಿ ನಿರ್ಧಾರವನ್ನು ಹಿಂತೆಗೆದುಕೊಂಡಿದ್ದಾರೆ. 2028 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಅನ್ನು ಗುರಿಯಾಗಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಈ ಕುರಿತ ಹೇಳಿಕೆ ಬಿಡುಗಡೆ ಮಾಡಿರುವ...

ಗುಜರಾತ್‌ನ ವಲ್ಸಾದ್‌ನಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದು ಐವರು ಕಾರ್ಮಿಕರಿಗೆ ಗಾಯ

ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ಔರಂಗ ನದಿಗೆ ನಿರ್ಮಾಣ ಹಂತದಲ್ಲಿರುವ ಸೇತುವೆಯ ಮೇಲಿನ ಗಿರ್ಡರ್ ಕುಸಿದಿದ್ದು, ಐವರು ಕಾರ್ಮಿಕರು ಗಾಯಗೊಂಡಿದ್ದಾರೆ.  ಹಳೆಯ ಸೇತುವೆಗೆ ಸಮಾನಾಂತರವಾಗಿ ಹೊಸ ಸೇತುವೆಯನ್ನು ನಿರ್ಮಿಸಲಾಗುತ್ತಿರುವ ಕೈಲಾಶ್ ರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ 8...

ಆಮದು ಸುಂಕ ಹೆಚ್ಚಿಸಿದ ಮೆಕ್ಸಿಕೊ: ಭಾರತದ ವಾಹನ-ಉಕ್ಕು ರಫ್ತಿನ ವೆಚ್ಚ ಹೆಚ್ಚಳ ಸಾಧ್ಯತೆ

ಸ್ಥಳೀಯ ಕೈಗಾರಿಕೆಗಳನ್ನು ರಕ್ಷಿಸುವ ಗುರಿಯ ಭಾಗವಾಗಿ, ಭಾರತ, ಚೀನಾ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಏಷ್ಯಾದ ದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲಿನ ಹೆಚ್ಚಿನ ಸುಂಕ ಹೆಚ್ಚಳ ನಿರ್ಧಾರವನ್ನು ಮೆಕ್ಸಿಕೋ ಅನುಮೋದಿಸಿದೆ. ಮೆಕ್ಸಿಕನ್...

Cognizant ಕಂಪನಿಗೆ 99 ಪೈಸೆಗೆ ಒಂದು ಎಕರೆ ಭೂಮಿ: ವಿಶಾಖಪಟ್ಟಣದಲ್ಲಿ ತಾತ್ಕಾಲಿಕ ಕಛೇರಿ ಉದ್ಘಾಟನೆ

ಕಳೆದ ಜೂನ್‌ ನಲ್ಲಿ ಸುದ್ದಿಗೆ ಗ್ರಾಸವಾಗಿದ್ದ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ Cognizant ಕಂಪನಿಯು 1582 ಕೋಟಿ ಹೂಡಿಕೆ ಮಾಡಿ 8 ಸಾವಿರ ಉದ್ಯೋಗ ಸೃಷ್ಠಿ ಮಾಡಲಾಗುವುದೆಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸರ್ಕಾರ ಘೋಷಿಸಿತ್ತು....

ಅಲ್ಪಸಂಖ್ಯಾತ ಶಾಲೆಗಳಿಗೆ ಆರ್.ಟಿ.ಇ ಕಾಯ್ದೆಯಿಂದ ವಿನಾಯಿತಿ ತೀರ್ಪಿನ ವಿರುದ್ಧ ಅರ್ಜಿ; ಎನ್.ಜಿ.ಒಗೆ ದಂಡ ವಿಧಿಸಿದ ಸುಪ್ರೀಂ  

ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಟಿಇ) ನಿಬಂಧನೆಗಳಿಂದ ಅಲ್ಪಸಂಖ್ಯಾತ ಶಾಲೆಗಳಿಗೆ ವಿನಾಯಿತಿ ನೀಡಿದ್ದ, ತನ್ನ ಹಿಂದಿನ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ರಿಟ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತೀವ್ರವಾಗಿ ಖಂಡಿಸಿದೆ.  ಜಸ್ಟೀಸ್ ಬಿ.ವಿ. ನಾಗರತ್ನ ಮತ್ತು...