ಸಿದ್ದಾರ್ಥ್ ವರದರಾಜನ್ (Thewire.in ಸಂಸ್ಥಾಪಕ) |
ಭಾರತದ ವಿದೇಶಾಂಗ ಕಾರ್ಯದರ್ಶಿ, ಇದು ಮಿಲಿಟರಿ ದಾಳಿಯಲ್ಲ, ಸಂಭಾವ್ಯ ದಾಳಿ ತಡೆಗಟ್ಟಲು ನಡೆಸಿದ ದಾಳಿ’ ಎಂದು ಒತ್ತಿ ಹೇಳಿದಾಗ ಅವರ ಮನದಲ್ಲಿ ಅಂತರಾಷ್ಟ್ರೀಯ ಕಾನೂನು ಇತ್ತೇನೋ? ಆದರೆ, ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಇತ್ತೆನ್ನಲಾದ ಉಗ್ರರ ತರಬೇತಿ ಶಿಬಿರದ ಮೇಲಿನ ವಾಯುದಾಳಿಯನ್ನು ಪ್ರಾಮಾಣಿಕವಾಗಿ ಹೀಗೆ ವಿಶ್ಲೇಷಿಸಬಹುದು: ಮೂರು ವಿಭಿನ್ನ ’ಪ್ರೇಕ್ಷಕರಿಗೆ’ ಸಂದೇಶವೊಂದನ್ನು ನೀಡಲು ಉದ್ದೇಶಿಸಿದ ಪ್ರತೀಕಾರದ ಕ್ರಮ…
- ಅದರ ಮಿಲಿಟರಿ ಉದ್ದೇಶ: ಪಾಕಿಸ್ತಾನ ನಿಮಗೆ ಒದಗಿಸಿರುವ ಸುರಕ್ಷಿತ ತಾಣಗಳು ಅಷ್ಟು ಸುರಕ್ಷಿತವಲ್ಲ ಎಂದು ಜೈಶ್ ಮತ್ತು ಪಾಕಿಸ್ತಾನದ ಇತರ ಭಯೋತ್ಪಾದನಾ ಗುಂಪುಗಳಿಗೆ ಸಂದೇಶ ನೀಡುವುದು.
- ಅದರ ರಾಜತಾಂತ್ರಿಕ ಉದ್ದೇಶ: ಭಯೋತ್ಪಾದನೆ ಬೆಂಬಲಿಸುವ ಪಾಕಿಸ್ತಾನಕ್ಕೆ ನೀವು ಎಂದಿನಂತೆ ಸಹಜವಾಗಿ ನೀಡುತ್ತಿರುವ ಬೆಂಬಲ ನೀಡಲಾಗದು ಎಂದು ಬಹುಪಾಲು ರಾಷ್ಟ್ರಗಳಿಗೆ ಸಂದೇಶ ನೀಡುವುದು.
- ರಾಜಕೀಯ ಉದ್ದೇಶ: ಸಾರ್ವತ್ರಿಕ ಚುನಾವಣೆಯನ್ನು ತಲೆಯಲ್ಲಿ ಇಟ್ಟಕೊಂಡು, ’ದೇಶವನ್ನು ಕಾಪಾಡುವ ರಾಜಕೀಯ ಇಚ್ಛಾಶಕ್ತಿ ಇರುವ ನಾಯಕ ನರೇಂದ್ರ ಮೋದಿ’ ಎಂಬ ಸಂದೇಶವನ್ನು ದೇಶದ ಪ್ರೇಕ್ಷಕರಿಗೆ (ಪ್ರಜೆಗಳಿಗೆ) ನೀಡುವುದು.
ಇವುಗಳಲ್ಲಿ, ಕೇವಲ ರಾಜಕೀಯ ಉದ್ದೇಶ ಈಡೇರಿದೆ ಎಂದು ಮೋದಿ ಆತ್ಮವಿಶ್ವಾಸದಿಂದ ಹೇಳಬಹುದು.
ಭಾರತೀಯ ವಾಯುಸೇನೆಗೆ ಒಂದು ಕಠಿಣ ಮತ್ತು ಅಪಾಯಕಾರಿ ಕಾರ್ಯವನ್ನು ನೀಡಿದ ಸರ್ಕಾರ, ಈಗ ಆಪರೇಷನ್ ಸಕ್ಸಸ್ ಎಂದು ಘೋಷಿಸಿದೆ. ಆದರೆ ಪರಿಶೀಲನೆಗೆ ಅರ್ಹವಾದ ಯಾವುದೇ ಮಾಹಿತಿ ನೀಡದೇ ಇದನ್ನು ಮಾಡಲಾಗುತ್ತಿದೆ. ಭಾರತೀಯ ಮಾಧ್ಯಮಗಳಿಗೆ ತಲುಪಿದ ಅತಿರಂಜಿತ ಮಾಹಿತಿಗಳಿಂದಾಗಿ, ಪಾಕಿಸ್ತಾನ ಸುಮ್ಮನೇ ಕೂಡುವುದಂತೂ ಕಷ್ಟ.
2016ರ ಸರ್ಜಿಕಲ್ ದಾಳಿ ಮತ್ತು ಈಗಿನ ವಾಯುದಾಳಿ-ಈ ಎರಡರಿಂದಲೂ ಯಾವುದೇ ಹಾನಿಯಾಗಿಲ್ಲ ಎಂದು ಪಾಕಿಸ್ತಾನಿ ಸೇನೆ ಹೇಳಿದೆ. ಆದರೆ ಈ ಸಲ ರಾಜಕೀಯ ಮತ್ತು ಮಿಲಿಟರಿ ಎರಡೂ ವ್ಯವಸ್ಥೆಗಳು ಇದಕ್ಕೆ ಸೇನಾತ್ಮಕ ಪ್ರತಿಕ್ರಿಯೆ ಖಂಡಿತ ಎಂದು ಘೋಷಿಸಿವೆ. ಈ ಬೆದರಿಕೆಯನ್ನು ಹಗುರವಾಗಿ ಪರಿಗಣಿಸಲು ಯಾವ ಕಾರಣವೂ ಇಲ್ಲ.
ನಮ್ಮ ವಾಯುಸೇನೆಯ ಶಕ್ತಿ-ಸಾಮರ್ಥ್ಯಗಳ ಬಗ್ಗೆ ಎಂದಿಗೂ ಸಕಾರಾತ್ಮಕ ನಿಲುವೇ ಇದೆ. ಆದರೆ 1971ರ ನಂತರ ಮೊದಲ ಬಾರಿಗೆ ವಾಯುಸೇನೆಯನ್ನು ಗಡಿಯಾಚೆ ನುಗ್ಗಿಸುವ ಕೆಲಸ ಮಾಡಿದ್ದಾರೆ ಮೋದಿ.
ಹಿಂದಿನ ಸರ್ಕಾರಗಳು ನಿಯಂತ್ರಣ ರೇಖೆಗೆ ಹೊಂದಿಕೊಂಡಿರುವ ಮತ್ತು ಪಾಕಿಸ್ತಾನದೊಳಗೆ ಇರುವ ಉಗ್ರರ ನೆಲೆಗಳ ಮೇಲೆ ವಾಯುದಾಳಿಯ ಪ್ರಯೋಗದಿಂದ ದೂರ ಉಳಿದಿದ್ದವು. ಇದಕ್ಕೆ ಪಾಕಿಸ್ತಾನ ಅಣ್ವಸ್ತ್ರ ರಾಷ್ಟ್ರ ಎಂಬ ಭಯವಾಗಲೀ ಅಥವಾ ರಾಜಕೀಯ ಇಚ್ಛಾಶಕ್ತಿಯ ಕೊರತೆಯಾಗಲೀ ಕಾರಣವಲ್ಲ. ಆದರೆ, ಗಡಿಯಾಚೆಯಿಂದ ಬರುವ ಭಯೋತ್ಪಾದನಾ ಬೆದರಿಕೆಯನ್ನು ಇಂತಹ ಕ್ರಮಗಳಿಂದ ತಟಸ್ಥಗೊಳಿಸಿವುದು ಅಸಾಧ್ಯ ಎಂಬ ಅರಿವು ಆ ಸರ್ಕಾರಗಳಿಗಿತ್ತು.
ಇದನ್ನು ಅರ್ಥ ಮಾಡಿಕೊಳ್ಳಲು, 2016 ಸೆಪ್ಟೆಂಬರ್‌ನ ಸರ್ಜಿಕಲ್ ದಾಳಿಯ ನಂತರದ ಬೆಳವಣಿಗೆಗಳನ್ನು ನೋಡಬಹುದು. ಪಾಕಿಸ್ತಾನ ಮೂಲದ ಉಗ್ರರ ಗುಂಪುಗಳಿಂದ ಭವಿಷ್ಯದಲ್ಲಿ ದಾಳಿಗಳನ್ನು ತಡೆಯಬಹುದೆಂಬ ನಿರೀಕ್ಷೆಯನ್ನು ಆ ಸರ್ಜಿಕಲ್ ದಾಳಿ ಹುಸಿಗೊಳಿಸಿತು. ಈ ವಿಷಯದಲ್ಲಿ ಅದು ಪುಟ್ಟಾಪೂರಾ ವಿಫಲವಾಯಿತು. ಆ ಸರ್ಜಿಕಲ್ ದಾಳಿಯ ನಂತರ ಉಗ್ರರ ದಾಳಿಗಳು ಹೆಚ್ಚಾದವು ಮತ್ತು 1989ರಲ್ಲಿ ಕಣಿವೆಯಲ್ಲಿ ಭಯೋತ್ಪಾದನೆ ಭುಗಿಲೆದ್ದ ನಂತರ ಅತಿ ಭಯಾನಕ ದಾಳಿ ಎನಿಸಿದ ಪುಲ್ವಾಮಾ ದಾಳಿಯೂ ಸಂಭವಿಸಿತು.
ಪಾಕಿಸ್ತಾನದಲ್ಲಿರುವ ಉಗ್ರರ ನೆಲೆ ಮೇಲೆ ದಾಳಿ ಮಾಡಲು ಯೋಚಿಸಿದ ಪ್ರಧಾನಿ ಮೋದಿ ಒಬ್ಬರೇ ಅಲ್ಲ. 2001ರಲ್ಲಿ ಸಂಸತ್ ಮೇಲೆ ದಾಳಿ ಆದಾಗ ವಾಜಪೇಯಿ ಮತ್ತು 2008ರಲ್ಲಿ ಮುಂಬೈ ಮೇಲೆ ದಾಳಿ ನಡೆದಾಗ ಮನಮೋಹನಸಿಂಗ್ ಕೂಡ ಯೋಚಿಸಿದ್ದರು. ಆದರೆ ಸುದೀರ್ಘ ಸಮಾಲೋಚನೆ ನಂತರ ಈ ಮಾರ್ಗದಿಂದ ಭಯೋತ್ಪಾದನೆ ತಡೆಯುವುದು ಅಸಾಧ್ಯ ಎಂಬ ಸತ್ಯವನ್ನು ಅರಿತಿದ್ದರು. ಮಾತುಕತೆ ಮತ್ತು ಭಯೋತ್ಪಾದನೆ ಎರಡೂ ಒಟ್ಟಿಗೆ ಸಾಧ್ಯವಿಲ್ಲ ಎಂಬುದು ಇವತ್ತಿನ ಮಂತ್ರವಾಗಿರಬಹುದು. ಆದರೆ ಭಯೋತ್ಪಾದನೆ ನಿಗ್ರಹಿಸುತ್ತಲೇ ಮಾತುಕತೆಯನ್ನು ಜಾರಿಯಲ್ಲಿಡುವ ಮೂಲಕ ವಾಜಪೇಯಿ ಮತ್ತು ಮನಮೋಹನಸಿಂಗ್ ಕಾಶ್ಮೀರವನ್ನು ಸಾಧ್ಯವಾದಷ್ಟು ಶಾಂತವಾಗಿಡಲು ಸಫಲರಾಗಿದ್ದರು.
ಮೋದಿ ಈಗ ಮಿಲಿಟರಿ ಕಾರ್ಡ್ ಆಟದ ಮೂಲಕ ಗ್ಯಾಂಬ್ಲಿಂಗ್ ಮಾಡಿದ್ದಾರೆ. ಕ್ಷುದ್ರ ಪಾಕಿಸ್ತಾನ ನಡೆಸುವ ಪ್ರತೀಕಾರವೂ ಅವರಿಗೆ ಶಕ್ತಿ ತುಂಬಬಹುದು. ಆದರೆ ಒಂದು ಕಾಲ ಊಹಿಸಿದ್ದಕ್ಕಿಂತ ಬೇಗನೆ ಬರಲಿದೆ- ಭಯೋತ್ಪಾದನೆಯ ಸಮಸ್ಯೆ ಮುಗಿದಿಲ್ಲ, ಬದಲಾಗಿ ಇನ್ನಷ್ಟು ಸಂಕೀರ್ಣಗೊಂಡಿದೆ ಮತ್ತು ನಿಯಂಯ್ರಣ ಮೀರುತ್ತಿದೆ ಎಂಬುದನ್ನು ಈ ದೇಶದ ಸಾಮಾನ್ಯ ನಾಗರಿಕರು ಅರಿಯುವ ಕಾಲ.
(ಭಾವಾನುವಾದ: ಮಲ್ಲಿ)


