ಇದುವರೆಗೆ ಸ್ಪಷ್ಟವಾಗಿರುವಂತೆ ಶಾಸಕರ ರಾಜೀನಾಮೆ ವಿಚಾರದಲ್ಲಿ ಸುಪ್ರೀಂಕೋರ್ಟು ಈ ರೀತಿ ಹೇಳಿದೆ.
1. ರಾಜೀನಾಮೆ ಅಂಗೀಕಾರದ ವಿಚಾರದಲ್ಲಿ ಸ್ಪೀಕರ್ ತೀರ್ಮಾನವೇ ಅಂತಿಮ.
2. ಅವರಿಗೆ ಸಮಯ ನಿಗದಿ ಮಾಡುವುದಿಲ್ಲ.
3. ಸದನದಲ್ಲಿ ವಿಶ್ವಾಸಮತ ಯಾಚನೆ ನಾಳೆ ಮುಂದುವರೆಯಬಹುದು.
4. ರಾಜೀನಾಮೆ ನೀಡಿರುವ ಶಾಸಕರು ವಿಶ್ವಾಸಮತ ಯಾಚನೆಯಲ್ಲಿ ಭಾಗವಹಿಸಲೇಬೇಕೆಂದು ಒತ್ತಾಯಿಸುವಂತಿಲ್ಲ.
ಇದರ ಅರ್ಥ ಏನು?
1. ರಾಜೀನಾಮೆ ಅಂಗೀಕಾರ ಮಾಡುತ್ತೇನೆ/ಮಾಡುವುದಿಲ್ಲ ಎಂದು ಸ್ಪೀಕರ್ ಹೇಳಿದ ನಂತರವೂ ಸುಪ್ರೀಂಕೋಟು ಮಧ್ಯ ಪ್ರವೇಶ ಮಾಡುವುದಿಲ್ಲ ಎಂದೇನೂ ಇದರ ಅರ್ಥವಲ್ಲ. ಆದರೆ, ಇಂತಿಷ್ಟೇ ದಿನಗಳಲ್ಲಿ ಅಂಗೀಕರಿಸಿ ಎಂದೋ, ಈಗಲೇ ಅಂಗೀಕರಿಸಿ ಎಂದೋ ಸುಪ್ರೀಂಕೋರ್ಟು ಹೇಳಿಲ್ಲ. ತಾನು ಹೇಳಬಾರದು ಎಂಬ ಅರ್ಥವನ್ನು ಅದು ಹೊರಡಿಸಿದೆ.
2. ವಿಶ್ವಾಸಮತ ಯಾಚನೆ ನಾಳೆಯೇ ನಡೆಯಬೇಕೆಂದೂ ಸುಪ್ರೀಂಕೋರ್ಟು ಹೇಳಿಲ್ಲ.
3. ಸದರಿ ಶಾಸಕರು ಭಾಗವಹಿಸಲೇಬೇಕೆಂದು ಒತ್ತಾಯಿಸುವಂತಿಲ್ಲ ಎಂದ ಮೇಲೆ ವಿಪ್ ಅನ್ವಯವಾಗುವುದಿಲ್ಲ ಎಂದೇ ಆಗುತ್ತದೆ. ಇದು ವಿಪ್ ವಿಚಾರದಲ್ಲಿ ಹೊಸದೊಂದು ನಿಯಮಕ್ಕೆ ಅಥವಾ ನಿಯಮ ತಿದ್ದುಪಡಿಗೆ ದಾರಿ ಮಾಡಿಕೊಟ್ಟಿದೆ. ಇದು ಆಪರೇಷನ್ ಕಮಲ ಎಂಬ ಪಿಡುಗಿಗೆ ಮುಕ್ತ ಅವಕಾಶ ಕೊಡಲಿದೆ.
4. ಹಾಗಾಗಿ ನಾಳೆಯ ವಿಪ್ ಉಲ್ಲಂಘನೆಯ ಆಧಾರದ ಮೇಲೆ ಅನರ್ಹತೆ ವಿಷಯ ನಿರ್ಧಾರವಾಗುವುದಿಲ್ಲ.
ಇದರ ಪರಿಣಾಮವೇನು? ಸಾಮಾನ್ಯ ಸಂದರ್ಭದಲ್ಲಿ ಏನು ಸಾಧ್ಯತೆಗಳಿವೆ?
1. ನಾಳೆ ವಿಶ್ವಾಸಮತ ಯಾಚನೆ ಆರಂಭವಾಗುತ್ತದೆ, ಆದರೆ ಆ ಪ್ರಕ್ರಿಯೆ ನಾಳೆಯೇ ಮುಗಿದುಬಿಡುವುದಿಲ್ಲ.
2. ಈ ಮಧ್ಯೆ ಶಾಸಕರ ಅನರ್ಹತೆ ವಿಚಾರವನ್ನು ಸ್ಪೀಕರ್ ಕೈಗೆತ್ತಿಕೊಂಡು ಅವರನ್ನು ಅನರ್ಹಗೊಳಿಸಬಹುದು. ಇವರೆಲ್ಲರೂ ಗುಂಪುಗೂಡಿಯೇ ರಾಜೀನಾಮೆ ನೀಡಿ, ಗುಂಪಾಗಿಯೇ ಹೋಟೆಲ್‍ನಲ್ಲಿರುವುದು, ಬಿಜೆಪಿಯ ಜೊತೆ ಸಂಪರ್ಕದಲ್ಲಿರುವುದು, ಸರ್ಕಾರದ ಬಹುಮತ ಕುಸಿಯುವಂತೆ ಮಾಡಿ ಬಿಜೆಪಿ ಸರ್ಕಾರ ರಚಿಸಲು ಅನುವು ಮಾಡಿಕೊಡಲೇ ರಾಜೀನಾಮೆ ಕೊಟ್ಟಿರುವುದು ಸ್ಪಷ್ಟವಿರುವುದರಿಂದ ಅದೇ ಅನರ್ಹತೆಗೆ ದಾರಿ ಮಾಡಬಹುದು.
3. ಅದೇನೇ ಇದ್ದರೂ ಇಂದಲ್ಲಾ ನಾಳೆ ಸರ್ಕಾರದ ಬಹುಮತ ಕುಸಿಯುತ್ತದೆ. ಶಾಸಕರು ಅನರ್ಹರಾಗುತ್ತಾರೆ, ಇಲ್ಲವೇ ರಾಜೀನಾಮೆ ಅಂಗೀಕಾರವಾಗುತ್ತದೆ. ಇವೆಲ್ಲದರ ಲಾಭ ಬಿಜೆಪಿಗೆ ಆಗುತ್ತದೆ. ಏಕೆಂದರೆ ಅವರು ಸರ್ಕಾರ ರಚಿಸುತ್ತಾರೆ. ರಾಜೀನಾಮೆ ಕೊಟ್ಟಿರುವ ಎಲ್ಲಾ ಶಾಸಕರಿಗೂ ಪಕ್ಷದ ಟಿಕೆಟ್ ನೀಡಲೇಬೇಕೆಂದೂ ಇಲ್ಲ. ಉಪಚುನಾವಣೆಯಲ್ಲಿ 6 ಜನ ಶಾಸಕರು ಗೆದ್ದು ಬಂದರೂ ಪೂರ್ಣ ವಿಧಾನಸಭೆಯಲ್ಲೂ ಸರಳ ಬಹುಮತ ದೊರೆಯುತ್ತದೆ.
4. ಅನರ್ಹಗೊಳಿಸುವುದರಿಂದ ಶಾಸಕರ ರಾಜಕೀಯ ಬದುಕಿನಲ್ಲಿ ಕಪ್ಪು ಚುಕ್ಕೆ. ಆದರೆ, ಹಾಗೆಂದು ಅವರಾಗಲೀ ಮಾಧ್ಯಮಗಳಾಗಲೀ ಭಾವಿಸುವುದಿಲ್ಲವಾದ್ದರಿಂದ ಜನರೂ ಭಾವಿಸದಂತೆ ಮಾಡಲಾಗುತ್ತದೆ. ಭ್ರಷ್ಟಾಚಾರ ಇತ್ಯಾದಿಗಳ ಕಾರಣದಿಂದ ಅನರ್ಹಗೊಳ್ಳುವವರು 6 ವರ್ಷಗಳ ಕಾಲ ಸ್ಪರ್ಧಿಸದಂತೆ ನಿಯಮವಿದೆ. ಆದರೆ, ತಮಿಳುನಾಡಿನಲ್ಲಿ ಪಕ್ಷಾಂತರದ ಕಾರಣಕ್ಕಾಗಿ ಅನರ್ಹಗೊಂಡವರು ಮತ್ತೆ ಸ್ಪರ್ಧಿಸಬಹುದು ಎಂದು ಚುನಾವಣಾ ಆಯೋಗ ಹೇಳಿತ್ತು!
ಆಶ್ಚರ್ಯಕರ ಸಾಧ್ಯತೆಗಳು
1. ಕೆಲವು ಶಾಸಕರು ತಮ್ಮ ಮಾತೃಪಕ್ಷಗಳಿಗೆ ಮರಳಿ ಬರುವುದರ ಮೂಲಕ ಇನ್ನಷ್ಟು ಕಾಲ ಸಮ್ಮಿಶ್ರ ಸರ್ಕಾರ ಉಳಿದುಕೊಳ್ಳಬಹುದು.
2. ವಿಶ್ವಾಸಮತ ಯಾಚನೆಯನ್ನೇ ಅನಿರ್ದಿಷ್ಟಾವಧಿಗೆ ಮುಂದೂಡುವುದು. ಇದು ಬಿಜೆಪಿ ಮತ್ತು ಸಮ್ಮಿಶ್ರ ಪಕ್ಷಗಳ ನಡುವೆ ಮಾತ್ರವಲ್ಲದೇ, ರಾಜ್ಯಪಾಲರು ವರ್ಸಸ್ ಸ್ಪೀಕರ್ ಸಂಘರ್ಷಕ್ಕೂ ದಾರಿ ಮಾಡಿಕೊಡಬಹುದು, ಆಗ ಸುಪ್ರೀಂಕೋರ್ಟ್ ಸಹಾ ಮಧ್ಯಪ್ರವೇಶಿಸಬಹುದು.
3. ಈಗಲೇ ಕುಮಾರಸ್ವಾಮಿಯವರು ರಾಜೀನಾಮೆ ನೀಡಿ, ಬಿಜೆಪಿ ಸರ್ಕಾರಕ್ಕೆ ಅವಕಾಶ ಮಾಡಿಕೊಡುವುದು.
ಅದೇನೇ ಇದ್ದರೂ, ಅನೈತಿಕ ಕಾರಣಗಳಿಗಾಗಿ ರಾಜೀನಾಮೆ ನೀಡುವ ಮೂಲಕ (ಆಪರೇಷನ್ ಕಮಲ) ಬೇರೆ ಪಕ್ಷವನ್ನು ಸೇರುವುದಕ್ಕೆ ಸುಪ್ರೀಂಕೋರ್ಟಿನ ತೀರ್ಪಿನಿಂದ ಅವಕಾಶ ಸಿಕ್ಕಿದಂತಾಗಿದೆ. ಇದನ್ನು ಕೌಂಟರ್ ಮಾಡುವ ಬೇರೇನಾದರೂ ಅಸ್ತ್ರ ಸ್ಪೀಕರ್ ಬಳಿ ಇದೆಯೇ ನೋಡಬೇಕು. ಎಲ್ಲಕ್ಕಿಂತ ದುರಂತದ ವಿಚಾರವೆಂದರೆ ಮಾಧ್ಯಮಗಳು ಅನೈತಿಕ ರಾಜಕಾರಣದ ಪರವಾಗಿ ನಿಂತಿರುವುದು ಮತ್ತು ಜನಸಾಮಾನ್ಯರು ಮೂಕವಾಗಿರುವುದು. ಇದರಲ್ಲಿ ಏನಾದರೂ ಬದಲಾವಣೆಗಳು ಬರುತ್ತದಾ ಎಂಬುದನ್ನೂ ಕಾದು ನೋಡಬೇಕು.


