Homeಸಾಮಾಜಿಕಈ ಸಾರಿ ಹಂಗರಹಳ್ಳಿಯಲ್ಲಿ ನಡೆದಿರುವುದು ಜೀತಗಾರನ ಕೊಲೆ

ಈ ಸಾರಿ ಹಂಗರಹಳ್ಳಿಯಲ್ಲಿ ನಡೆದಿರುವುದು ಜೀತಗಾರನ ಕೊಲೆ

- Advertisement -
- Advertisement -

ಇತಿಹಾಸದಲ್ಲಿ ಓದಿದ ಗುಲಾಮಿ ಪರಂಪರೆ ಇನ್ನು ಓದಿನಿಂದ ಮಾತ್ರ ತಿಳಿಯಲು ಸಾಧ್ಯವೆಂದು ಭಾವಿಸಿದ್ದ ಭಾರತದಲ್ಲಿ ಜೀತ ಪದ್ಧತಿ ಇನ್ನೂ ನಿಂತಿಲ್ಲ. ಜಾತಿ ಆಧಾರದ ದೌರ್ಜನ್ಯಗಳು ಹಾಗೂ ಮರ್ಯಾದಾ ಹತ್ಯೆಗಳು ದಿನನಿತ್ಯದ ನಡಾವಳಿ ಎಂಬಂತೆ ಪ್ರತಿದಿನ ದೌರ್ಜನ್ಯ, ಅತ್ಯಾಚಾರ, ಹತ್ಯೆಗಳು ಸುದ್ದಿಯಾಗುತ್ತಲೇ ಇವೆ. ಸಕ್ಕರೆಯ ನಾಡೆಂದು ಕರೆಸಿಕೊಳ್ಳುತ್ತಿದ್ದ ಮಂಡ್ಯ ಜಿಲ್ಲೆ ಇತ್ತೀಚೆಗೆ ಕರ್ನಾಟಕದಲ್ಲಿ ಇಂತಹ ಮರ್ಯಾದೆಗೇಡು ಹತ್ಯೆಗಳಿಗೆ, ಜಾತಿ ಆಧಾರದ ದೌರ್ಜನ್ಯಗಳಿಗೆ ಕುಖ್ಯಾತಿಯಾಗುತ್ತಿದೆ!
ಹೀಗೆ ಹೇಳಲು ಕಾರಣವಿದೆ. ಮೊನ್ನೆ ಅಕ್ಟೋಬರ್ 9ರಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹಂಗರಹಳ್ಳಿಯಲ್ಲಿ ಕರಿಯಪ್ಪ ಮಾದಾರ್ ಎಂಬ ದಲಿತ ಜೀತಗಾರನ ಕೊಲೆ ನಡೆದಿದೆ! ಕೆಲವು ವರ್ಷಗಳ ಹಿಂದೆ ಆಬಲವಾಡಿ ಸುವರ್ಣ ಪ್ರಕರಣದಿಂದ ಹಿಡಿದು ಸರಣಿ ಮರ್ಯಾದೆಗೇಡು ಹತ್ಯೆಗಳನ್ನು ಕಂಡ ಮಂಡ್ಯ ಜಿಲ್ಲೆಯಲ್ಲಿ ಕಳೆದ ತಿಂಗಳಿನಲ್ಲಿ ಕೂಲಿ ಕಾರ್ಮಿಕರನ್ನು ಜೀತಕ್ಕಿಟ್ಟುಕೊಂಡು ಅವರ ಮೇಲೆ ಅಮಾನುಷ ದೌರ್ಜನ್ಯ-ಕೊಲೆ ನಡೆಸಿದ ಸರಣಿ ಪ್ರಕರಣಗಳು ಹೊರಬಿದ್ದು ಪ್ರಜ್ಞಾವಂತರನ್ನು ಕಂಗೆಡಿಸಿದವು.
ಹಂಗರಹಳ್ಳಿ ಎಂದಾಕ್ಷಣ ಕೆಲವು ವರ್ಷಗಳ ಹಿಂದೆ ಪದೇಪದೇ ಕೇಳಿದ್ದ ಈ ಹೆಸರಿನ ಹಳ್ಳಿಯ ಜಾಡನ್ನು ನೆನಪು ಮಾಡಿಕೊಳ್ಳಲು ನೀವು ಪ್ರಯತ್ನಿಸುತ್ತೀರಿ. ಅಧಿಕೃತ ಮತ್ತು ಅನಧಿಕೃತವಾಗಿ ತೋಳ್ಬಲ, ರಾಜಕೀಯ ಬೆಂಬಲದೊಂದಿಗೆ ನಡೆಯುವ ಅನೇಕ ಕಲ್ಲಿನ ಕ್ವಾರಿಗಳು, ಅಲ್ಲಿ ದುಡಿಸಲು ದೂರದೂರುಗಳಿಂದ ಅಲ್ಪಸ್ವಲ್ಪ ದುಡ್ಡು ಕೊಟ್ಟು ಕರೆತರುವ ಬಡ ಕೂಲಿ ಕಾರ್ಮಿಕರು, ಕ್ವಾರಿಗಳ ಮಾಲೀಕರಿಂದ ತಮ್ಮೂರಿನಲ್ಲಿ ಮಾಡಿಕೊಂಡಿದ್ದ ಅಲ್ಪಸ್ವಲ್ಪ ಸಾಲ ತೀರಿಸಲು ಒಂದೇ ಕಂತಿನಲ್ಲಿ ದುಡ್ಡು ಪಡೆದು, ನಂತರ ಅದಕ್ಕಾಗಿ ಕುಟುಂಬ ಸಮೇತರಾಗಿ ಬಂದು ಸುದೀರ್ಘ ಕಾಲ ಜೀತ ಮಾಡುವ ಈ ಕೂಲಿ ಕಾರ್ಮಿಕರ ಬವಣೆ……..ಇದೆಲ್ಲವೂ ಯಾವಾಗಲೋ ಒಮ್ಮೊಮ್ಮೆ ಸುದ್ದಿಯಾದದ್ದಿದೆ; ಏನಾದರೊಂದು ದುರಂತ ಸಂಭವಿಸಿದ ಸಂದರ್ಭಗಳಲ್ಲಿ. ಈ ಬಾರಿಯೂ ಹಂಗರಹಳ್ಳಿ ಸುದ್ದಿಯಾಗಲು ಕಾರಣವಾದ ಕರಿಯಪ್ಪ ಮಾದಾರನ ಕೊಲೆ, ಮಾನವೀಯ ಸಂವೇದನೆಯುಳ್ಳ ಎಲ್ಲರನ್ನೂ ಕಲಕುವಂತಹ ಒಂದು ದುರ್ಘಟನೆ!
ಕರಿಯಪ್ಪ ಮಾದರ್ ಹಾಗೂ ಆತನ ಕುಟುಂಬ ಒಂದು ವರ್ಷದ ಹಿಂದೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಓಬಾಳಪುರ ಎಂಬ ಹಳ್ಳಿಯಿಂದ ಹಂಗರಹಳ್ಳಿಗೆ ದುಡಿಯಲು ಬಂದವರು. ತನ್ನ ಹಳ್ಳಿಯಲ್ಲಿ ಮಾಡಿದ್ದ ಸಾಲ ತೀರಿಸುವ ಸಲುವಾಗಿ ಹಂಗರಹಳ್ಳಿ ಕ್ವಾರೆಯಲ್ಲಿ ಯಾವುದೇ ಲೈಸನ್ಸ್ ಇಲ್ಲದೆ ಗಣಿಗಾರಿಕೆ ನಡೆಸುವ ಉಮೇಶ್‍ನಿಂದ 70,000 ರೂಗಳನ್ನು ಕರಿಯಪ್ಪ ಮತ್ತು ಆತನ ಕುಟುಂಬ ಸಾಲ ಪಡೆದಿದ್ದರು. ಆ ಮೊತ್ತ ತೀರಿಸಲು ಒಂದು ವರ್ಷಗಳ ಕಾಲ ಕ್ವಾರೆಯ ಕೆಲಸ ಮಾಡುವುದಾಗಿ ಒಪ್ಪಂದ ಮಾಡಿಕೊಂಡು ಬಂದು ನೆಲೆಸಿದ್ದರು. ಕರಿಯಪ್ಪ ಮಾದಾರ, ಆತನ ಪತ್ನಿ ಕಾಕವ್ವ ಮತ್ತು ತಮ್ಮ ಮಹಾದೇವ ಮಾದರ್ ಮೂವರು (ಕರಿಯಪ್ಪ ಮಾದಾರನ ಎಳೆಯ ಕೂಸೂ ಜೊತೆಗಿತ್ತು) ಕ್ವಾರೆಯ ಬಳಿಯ ಶೆಡ್ಡುಗಳಲ್ಲಿ ಉಳಿದ ಜೀತಗಾರ ಕುಟುಂಬಗಳಂತೆಯೇ ಬದುಕು ನಡೆಸುತ್ತಿದ್ದರು. ಹೀಗೆ ಬದುಕಲು ಅವರಿಗೆ ಉಮೇಶ್ ಬೇರಾವ ಕೂಲಿ ಹಣವನ್ನೂ ಕೊಡುತ್ತಿರಲಿಲ್ಲ; ಆತ ಕೊಡುತ್ತಿದ್ದದ್ದು ಒಂದಷ್ಟು ದಿನಸಿ, ತೀರಾ ತುರ್ತೆಂದಾಗ ನಾಲ್ಕು ಬಿಡಿಗಾಸು. ಅಷ್ಟರಲ್ಲೇ ತಮ್ಮ ಹೊಟ್ಟೆಹೊರೆದುಕೊಳ್ಳುತ್ತಾ ಒಂದು ವರ್ಷ ತಾವು ಪಡೆದಿದ್ದ 70000ಕ್ಕೆ ಪ್ರತಿಯಾಗಿ ಮೂವರೂ ಕ್ವಾರೆಯಲ್ಲಿ ದುಡಿಯುತ್ತಿದ್ದರು.
ಜೀತದ ಒಪ್ಪಂದದಂತೆ ಒಂದು ವರ್ಷದ ಅವಧಿ ಮುಗಿಯಿತೆಂದು ಕರಿಯಪ್ಪನ ಕುಟುಂಬ ತಮ್ಮೂರಿಗೆ ಹಿಂದಿರುಗುವುದಾಗಿ ಮೇಸ್ತ್ರಿ ಪುನೀತ್‍ಗೆ ಮೊನ್ನೆ ಅ.9ರಂದು ತಿಳಿಸಿದ್ದಾರೆ. ಇವರ ಮಾತನ್ನು ಕೇಳಿದ ಪುನೀತ್ ಇವರು ಹೊರಟುಹೋದರೆ ಕ್ವಾರೆಯಲ್ಲಿ ಬಿಟ್ಟಿ ದುಡಿಯುವವರು ಇಲ್ಲವಾಗುತ್ತಾರೆಂದು ರೇಗಿಹೋಗಿದ್ದಾನೆ. ಅವರನ್ನು ಬಾಯಿಗೆ ಬಂದಂತೆ ಬೈದು, ಕಾಕವ್ವನ ಎದುರೇ ಕರಿಯಪ್ಪನನ್ನು ಥಳಿಸಿದ್ದಾನೆ. ‘ಎಲ್ಲಿಗೆ ಹೋಗುತ್ತೀಯಾ? ನಿನ್ನ ಸಾಲ ಇನ್ನೂ ಮುಗಿದಿಲ್ಲ, ಬಾ ನಿನಗೆ ಲೆಕ್ಕ ತೋರಿಸುತ್ತೇನೆ’ ಎಂದು ಕರಿಯಪ್ಪನೊಬ್ಬನನ್ನೇ ಎಳೆದೊಯ್ದಿದ್ದಾನೆ. ಲೆಕ್ಕ ನೋಡಲು ಹೋದ ಗಂಡನಿಗಾಗಿ ಕಾಕವ್ವ ಮತ್ತು ತಮ್ಮ ಮಹಾದೇವ ಸ್ಥಳದಲ್ಲಿಯೇ ಕಾಯುತ್ತಾ ಕುಳಿತಿದ್ದಾರೆ. ಸ್ವಲ್ಪ ಹೊತ್ತಿನ ನಂತಹ ಬಂದ ಮೇಸ್ತ್ರಿ ಪುನೀತ್ ಕಾಕವ್ವಳಿಗೆ, ‘ನಿನ್ನ ಗಂಡ ಅಲ್ಲಿ ಸತ್ತು ಬಿದ್ದಿದ್ದಾನೆ, ಹೋಗಿ ನೋಡು’ ಎಂದು ಕಳಿಸಿದ್ದಾನೆ. ಇದನ್ನು ಕೇಳಿ ಗಾಬರಿಗೊಂಡ ಕಾಕವ್ವ ಮತ್ತು ಮಹಾದೇವರು ಎದ್ದೆವೋ ಬಿದ್ದೆವೋ ಎಂದು ಕರಿಯಪ್ಪನನ್ನು ಹುಡುಕಿಕೊಂಡು ಓಡಿಹೋಗಿದ್ದಾರೆ. ಕರಿಯಪ್ಪನ ಹೆಣ ಮರದ ಕೊಂಬೆಯಲ್ಲಿ ನೇಣು ಬಿಗಿದು ನೇತಾಡುತ್ತಿದ್ದ ಸ್ಥಿತಿಯಲ್ಲಿ ಸಿಕ್ಕಿದೆ!
ಯಾರದೋ ಸಹಾಯದಿಂದ ಪೊಲೀಸರಿಗೆ ವಿಷಯ ತಿಳಿಸಿದ ಕರಿಯಪ್ಪನ ಕುಟುಂಬ ಶವವನ್ನು ಪೋಸ್ಟ್‍ಮಾರ್ಟಮ್‍ಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಪೊಲೀಸರಿಗೆ ಏನು ನಡೆಯಿತೆಂಬ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದಾರೆ. ಮೇಲ್ನೋಟಕ್ಕೇ ಇದೊಂದು ಅಸಹಜ ಸಾವೆಂಬುದು ಯಾರಿಗಾದರೂ ತಿಳಿಯುವ ಸಂಗತಿ. ಅದರಲ್ಲೂ, ಕುಟುಂಬದವರ ವಿವರಣೆ ಕೇಳಿದ ಕೂಡಲೇ ಇದರ ಹಿಂದೆ ಅನುಮಾನಾಸ್ಪದವಾದ ಸಂಗತಿಗಳಿವೆಯೆಂಬುದು ಅರಿವಾಗುತ್ತದೆ. ಅಷ್ಟಾದರೂ ಪೊಲೀಸರು ಆಘಾತಗೊಂಡು ರೋದಿಸುತ್ತಿದ್ದ ಕಾಕವ್ವ ಮತ್ತು ಮಹಾದೇವರಿಂದ ದೂರು ಪಡೆದು ಎಫ್‍ಐಆರ್ ದಾಖಲಿಸಿಲ್ಲ. ಇಂತಹ ಅದೆಷ್ಟೋ ಘಟನೆಗಳಲ್ಲಿ ಕ್ವಾರಿಗಳ ಮಾಲೀಕರ ಕಾನೂನುಬಾಹಿರ ಕೃತ್ಯಗಳ ಕಡೆಗೆ ಜಾಣ ಕುರುಡರಂತಿರುವ ಪೊಲೀಸರು, ‘ಸಾವಿನ ಹಿಂದಿನ ರಾತ್ರಿ ಕರಿಯಪ್ಪ ಕುಡಿದು ಬಂದು ಕಾಕವ್ವಳನ್ನು ಹೊಡೆದಿದ್ದ; ದಂಪತಿಗಳ ನಡುವೆ ಜಗಳವಾಗಿತ್ತು; ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಹೇಳುತ್ತಾ ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ.
ಈ ನಡುವೆ, ಘಟನೆಯ ಬಗ್ಗೆ ತಮ್ಮ ಕಾರ್ಯಕರ್ತರಿಂದ ತಿಳಿದು ಆಸ್ಪತ್ರೆಗೆ ಧಾವಿಸಿದ ದಲಿತ ಸಂಘರ್ಷ ಸಮಿತಿಯ ಹಿರಿಯ ನಾಯಕರಾದ ಗುರುಪ್ರಸಾದ್ ಕೆರಗೋಡುರವರು ಹಾಗೂ ಬಿಎಸ್‍ಪಿಯ ಕೃಷ್ಣಮೂರ್ತಿಯವರುಗಳು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹೋರಾಟಗಾರರ ಒತ್ತಡಕ್ಕೆ ಮಣಿದ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ. ಜೀತದ ದೌರ್ಜನ್ಯಕ್ಕೆ ಒಳಗಾದ ಕುಟುಂಬಕ್ಕೆ 4 ಲಕ್ಷ ಪರಿಹಾರವನ್ನು ಕೊಡಿಸುವಲ್ಲಿ ಹೋರಾಟಗಾರರು ಯಶಸ್ವಿಯಾಗಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೆ ಎಲ್ಲ ಜನಪರರನ್ನೂ ಸಭೆ ಕರೆದು ಈ ಬಗ್ಗೆ ಚರ್ಚಿಸಿ ಹೋರಾಟ ರೂಪಿಸಿದ್ದಾರೆ. ಇಂತಹ ದೌರ್ಜನ್ಯದ ಪ್ರಕರಣಗಳನ್ನು ತಡೆಯುವಲ್ಲಿ ವಿಫಲವಾಗಿರುವ ಜಿಲ್ಲಾಡಳಿದ ವಿರುದ್ಧ ಅಕ್ಟೋಬರ್ 11ರ ಗುರುವಾರ ಹೋರಾಟ ಮಾಡಿದ ಮಂಡ್ಯದ ಎಲ್ಲಾ ದಲಿತ-ಪ್ರಗತಿಪರ ಸಂಘಟನೆಗಳು, ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಎಚ್ಚರ ವಹಿಸಬೇಕು ಹಾಗೂ ಕರಿಯಪ್ಪನ ಸಾವಿಗೆ ಕಾರಣವಾಗಿರುವ ಉಮೇಶ್ ಮತ್ತು ಪುನೀತ್‍ರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಮಂಡ್ಯದಲ್ಲಿ ಅಥವಾ ಹಂಗರಹಳ್ಳಿಯಲ್ಲಿ ಕರಿಯಪ್ಪನ ಘಟನೆಯೇ ಮೊದಲನೆಯದಲ್ಲ. ಇಂತಹ ಆಧುನಿಕ ಜೀತದ ಹಲವಾರು ಘಟನೆಗಳು ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಲೇ ಇವೆ. ಇದೇ ಹಂಗರಹಳ್ಳಿಯಲ್ಲಿ ಹೊರಗಿನಿಂದ ಜನರನ್ನು ಒಂದಷ್ಟು ದುಡ್ಡುಕೊಟ್ಟು ಕರೆತಂದು ಜೀತದಾಳುಗಳಾಗಿ ವರ್ಷಾನುಗಟ್ಟಲೆ ದುಡಿಸಿಕೊಳ್ಳುತ್ತಿದ್ದ ಎಷ್ಟೋ ಪ್ರಕರಣಗಳು ಬೆಳಕಿಗೆ ಬಂದಿವೆ. ಹದಿನೈದು ವರ್ಷಗಳ ಹಿಂದೆ ಜೀತಕ್ಕೆಂದು ಕರೆತಂದ ಕೂಲಿಕಾರ್ಮಿಕರನ್ನು ಪ್ರಾಣಿಗಳ ರೀತಿಯಲ್ಲಿ ದುಡಿಸಿಕೊಳ್ಳುತ್ತಾ, ಈ ದಬ್ಬಾಳಿಕೆಯಿಂದ ತಪ್ಪಿಸಿಕೊಳ್ಳಲು ಹೋದವರನ್ನು ಎಳೆದು ತಂದು ಥಳಿಸಿ, ಕಾಲಿಗೆ ಕಬ್ಬಿಣದ ಕೋಳ ಹಾಕಿ ಕೆಲಸದ ಜಾಗ ಬಿಟ್ಟು ಬೇರೆಲ್ಲೂ ಹೋಗದ ರೀತಿಯಲ್ಲಿ ಒಂದೇ ಕಡೆ ಕಟ್ಟಿ ದುಡಿಸಿಕೊಳ್ಳುವ ಹೀನ ಪ್ರಕರಣ ನಡೆದು, ಹಂಗರಹಳ್ಳಿ ಸುದ್ದಿಯಾಗಿತ್ತು!
ಸಾಮಾಜಿಕ ಸಂಘಟನೆಗಳು ಇಂತಹ ಅಮಾನವೀಯ ಕೃತ್ಯಗಳನ್ನು ಬೆಳಕಿಗೆ ತಂದು ಹೋರಾಟ ಮಾಡಿದ್ದರ ಫಲವಾಗಿ ಜೀತದಿಂದ ಒಂದಷ್ಟು ಜನ ಮುಕ್ತಿ ಪಡೆದಿದ್ದರು. ಇದಾದ ನಂತರ ಜೀತ ಪದ್ದತಿ ಕೊನೆಯಾಯಿತೆಂದು ಭಾವಿಸಿ ನಿಟ್ಟುಸಿರು ಬಿಟ್ಟವರಿಗೆ, ಮೊನ್ನೆ ನಡೆದ ಕರಿಯಪ್ಪನೆಂಬ ದಲಿತ ಜೀತಗಾರನ ಕೊಲೆಯ ಘಟನೆ ಆಘಾತ ಉಂಟುಮಾಡಿದೆ. ಹಂಗರಹಳ್ಳಿ ಅಷ್ಟೇ ಅಲ್ಲದೆ ಕಳೆದ ತಿಂಗಳು ಮದ್ದೂರಿನ ಕುದುರುಗುಂಡಿಯಲ್ಲಿ ನಾಗೇಶ್ ಎಂಬಾತನ ಮನೆಯ ಆಳಾಗಿ ಒಬ್ಬ ತಮಿಳು ದಲಿತ ಮಹಿಳೆಯನ್ನು ಜೀತಕ್ಕಿರಿಸಿಕೊಳ್ಳಲಾಗಿದ್ದ ಮತ್ತೊಂದು ಪ್ರಕರಣವೂ ಬೆಳಕಿಗೆ ಬಂದಿತ್ತು. ಆ ಮಹಿಳೆ ಜೀತದಿಂದ ಮುಕ್ತಿ ಪಡೆಯಲು ಜೀತಕ್ಕಿದ್ದ ಮನೆಯಿಂದ ತಪ್ಪಿಸಿಕೊಂಡು ಹೊರಬಂದಿದ್ದಳು. ಹೊರಬಂದ ಮಹಿಳೆಯನ್ನು ಸಾರ್ವಜನಿಕವಾಗಿ ಹೊಡೆದು, ದೌರ್ಜನ್ಯ ನಡೆಸಿ ಹೊತ್ತೊಯ್ಯಲು ಜೀತಕ್ಕಿಟ್ಟುಕೊಂಡಿದ್ದ ಮಾಲೀಕ ಮತ್ತು ಆತನ ಕಡೆಯವರು ಯತ್ನಿಸಿದ್ದರು. ಈ ಘಟನೆಯನ್ನು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರಿಂದಾಗಿ ಅದು ಹೊರಜಗತ್ತಿಗೆ ತಿಳಿಯುವಂತಾಯಿತು. ಅಷ್ಟೇ ಅಲ್ಲದೆ, ಜೀತಕ್ಕಿಟ್ಟುಕೊಂಡಿದ್ದ ನಾಗೇಶ್ ಮತ್ತು ಈ ಅಮಾನವೀಯ ಹಲ್ಲೆಗೆ ಸಹಕರಿಸಿದ ಇತರ ಕೆಲವರನ್ನು ಬಂಧಿಸಲಾಗಿತ್ತು. ಆದರೆ, ದುರಂತವೆಂದರೆ, ಇಷ್ಟೆಲ್ಲ ನಡೆದು ಮಾಲೀಕನ ಬಂಧನದ ಹೊತ್ತಿಗೂ, ಆಕೆಯ ಮಗ ಈ ಘಟನೆ ನಡೆದ ಕೆಲವು ದಿನಗಳ ನಂತರವೂ ಅವರ ಮನೆಯಲ್ಲಿಯೇ ಜೀತ ಮಾಡುತ್ತಿದ್ದದ್ದು, ‘ನಿಮ್ಮ ತಾಯಿ ವಾಪಾಸ್ ಬರುವವರೆಗೆ ನೀನು ಹೋಗುವಂತಿಲ್ಲ’ ಎಂದು ಆತನನ್ನು ನಿರ್ಬಂಧಿಸಿಟ್ಟಿದ್ದು ಬೆಳಕಿಗೆ ಬಂದಿದೆ! ಕಾನೂನು ಮತ್ತು ಶಿಕ್ಷೆಯ ಭಯವನ್ನೂ ಮೀರಿದ ಈ ಅನಾಗರಿಕತೆಯನ್ನು ಏನೆಂದು ವ್ಯಾಖ್ಯಾನಿಸುವುದು?!
ಸ್ವಾತಂತ್ರ್ಯ ಬಂದ 70 ವರ್ಷಗಳ ನಂತರವೂ ಜೀತಪದ್ಧತಿ ಬೇರೆ ಬೇರೆ ರೀತಿಗಳಲ್ಲಿ ಜೀವಂತವಾಗಿರುವುದು ಸಮಾಜದಲ್ಲಿನ ಅಸಮಾನತೆಗೆ ಕೈಗನ್ನಡಿ ಹಿಡಿದಂತಿದೆ. ಪ್ರಜಾಪ್ರಭುತ್ವದ ಆಶಯಗಳನ್ನು ಕಾಲಡಿಯಲ್ಲಿ ಹಾಕಿ ತುಳಿಯುತ್ತಿರುವ ಪ್ರಜಾಪ್ರತಿನಿಧಿಗಳು ಹಾಗೂ ವಿದ್ಯಾವಂತ ಅಧಿಕಾರಿಗಳು ಸಹಾ ಇಂತಹ ಸಂದರ್ಭಗಳಲ್ಲಿ ಜಾಣಗುರುಡು ಪ್ರದರ್ಶಿಸುತ್ತಾ ಈ ಬಗೆಯ ಶೋಷಣೆ ಅನೂಚಾನವಾಗಿ ನಡೆದುಕೊಂಡು ಹೋಗಲು ಕಾರಣರಾಗುತ್ತಿದ್ದಾರೆ. ಸ್ವಾತಂತ್ರ್ಯಾನಂತರದಲ್ಲಿ ಜೀತ ಪದ್ದತಿಗೆ ಪೂರ್ಣವಿರಾಮ ಇಡುವಂತಹ ಹಲವಾರು ಕಾರ್ಮಿಕ ಕಾನೂನುಗಳು ಜಾರಿಯಾಗಿವೆ. ಆದರೆ ಇಂತಹ ಕಾನೂನುಗಳನ್ನು ಜಾರಿಗೊಳಿಸಿ ದುರ್ಬಲರನ್ನು ದಮನದಿಂದ ರಕ್ಷಿಸಬೇಕಾದ ಆಡಳಿತ ವರ್ಗಗಳು ಉಳ್ಳವರ ಎಂಜಲು ಕಾಸಿಗಾಗಿ ಹಪಹಪಿಸುತ್ತ ಶೋಷಿತರನ್ನು ಮತ್ತಷ್ಟು ಶೋಷಣೆ ಮಾಡುತ್ತವೆ. ಇಂತಹ ಶೋಷಣೆಯ ಮತ್ತೊಂದು ಕೊಂಡಿ ಮಂಡ್ಯ ಜಿಲ್ಲೆಯ ಹಂಗರಗಳ್ಳಿ ಕ್ವಾರಿಯಲ್ಲಿ ದುಡಿಯುತ್ತಿದ್ದ ಕರಿಯಪ್ಪ ಮಾದರ್‍ನ ಸಾವು. ಈ ದುರ್ಘಟನೆಯಿಂದಾದರೂ ಸರ್ಕಾರ ಮತ್ತು ಜಿಲ್ಲಾಡಳಿತಗಳು ಎಚ್ಚೆತ್ತು, ಇಂತಹ ಅಮಾನವೀಯ ಸಂಪ್ರದಾಯಕ್ಕೆ ಕೊನೆಹಾಡುವುದೇ ಎಂಬ ಪ್ರಶ್ನೆ ಈಗ ನಾಡಿನ ಪ್ರಜ್ಞಾವಂತರನ್ನು ಕಾಡುತ್ತಿದೆ.

– ಸೋಮಶೇಖರ್ ಚಲ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...