ಒಕ್ಕೂಟ ಸರ್ಕಾರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಗಳು, ನವೆಂಬರ್ 29 ರಂದು ಸಂಸತ್ತಿಗೆ ಮೆರವಣಿಗೆ ನಡೆಸಲು ನಿರ್ಧರಿಸಿವೆ. ದೆಹಲಿ ಗಡಿಯಲ್ಲಿ ತಮ್ಮ ಪ್ರತಿಭಟನೆ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ರೈತ ಸಂಘಗಳು ಈ ನಿರ್ಧಾರ ಮಾಡಿವೆ.
ರೈತ ಸಂಘಗಳ ಒಕ್ಕೂಟ ಸಂಸ್ಥೆಯಾದ ಸಂಯುಕ್ತ ಕಿಸಾನ್ ಮೋರ್ಚಾದ ಒಂಬತ್ತು ಸದಸ್ಯರ ಸಮಿತಿಯು ಮಂಗಳವಾರ ಈ ನಿರ್ಧಾರವನ್ನು ಘೋಷಿಸಿದ್ದಾರೆ.
ಇದನ್ನೂ ಓದಿ: ಮತ್ತೆ ರೈತ ಮಹಾಪಂಚಾಯತ್‌ಗಳ ಆರಂಭ: ಮುಂಬೈ, ಲಕ್ನೋಗಳಲ್ಲಿ ಅಬ್ಬರಿಸಲಿರುವ ರೈತರು
ನವೆಂಬರ್ 29 ರಂದು ಪ್ರತಿಭಟಿಸುತ್ತಿರುವ ರೈತರು ಗಾಜಿಪುರ ಗಡಿ ಮತ್ತು ಟಿಕ್ರಿ ಗಡಿಯಿಂದ ತಮ್ಮ ಟ್ರ್ಯಾಕ್ಟರ್‌ಗಳಲ್ಲಿ ಸಂಸತ್ ಭವನಕ್ಕೆ ತೆರಳಲಿದ್ದಾರೆ. ಒಂದು ವೇಳೆ ಈ ಮೆರವಣಿಗೆಯನ್ನು ತಡೆದರೆ ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದು ರೈತ ಸಂಘಟನೆಗಳ ಒಕ್ಕೂಟ ಹೇಳಿದೆ.
ನವೆಂಬರ್ 26 ರೊಳಗೆ ಸರ್ಕಾರ ವಿವಾದಾತ್ಮಕ ಕೃಷಿ ಕಾನೂನನ್ನು ಹಿಂಪಡೆಯದಿದ್ದರೆ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ ಎಚ್ಚರಿಸಿದೆ.
“ಒಕ್ಕೂಟ ಸರ್ಕಾರಕ್ಕೆ ನವೆಂಬರ್ 26 ರವರೆಗೆ ಸಮಯವಿದೆ. ನವೆಂಬರ್ 27 ರ ನಂತರ ರೈತರು ಹಳ್ಳಿಗಳಿಂದ ಟ್ರ್ಯಾಕ್ಟರ್‌ಗಳ ಮೂಲಕ ದೆಹಲಿಯ ಸುತ್ತಮುತ್ತಲಿನ ಪ್ರತಿಭಟನಾ ಸ್ಥಳಗಳ ಗಡಿಯನ್ನು ತಲುಪುತ್ತಾರೆ. ಅಲ್ಲಿಯೆ ಭದ್ರವಾದ ಕೋಟೆಗಳನ್ನು ಬಲಪಡಿಸುತ್ತಾರೆ” ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ನವೆಂಬರ್ 1 ರಂದು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಅಕ್ಷಯ್ ನಟನೆಯ ‘ಸೂರ್ಯವಂಶಿ’ ಪ್ರದರ್ಶನಕ್ಕೆ ತಟ್ಟಿದ ರೈತರ ಆಕ್ರೋಶ


