ಭಾರತೀಯ ಕ್ರಿಶ್ಚಿಯನ್ ವಿಚ್ಛೇದನ ಕಾಯಿದೆಯ ಸೆಕ್ಷನ್ 10A ಅಡಿಯಲ್ಲಿ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನ ಅರ್ಜಿಯನ್ನು ಸಲ್ಲಿಸುವ ಉದ್ದೇಶಕ್ಕಾಗಿ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿ ಕಾಯಬೇಕು ಎಂಬ ನಿಯಮವು ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಅಸಾಂವಿಧಾನಿಕ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿ ಎ. ಮುಹಮ್ಮದ್ ಮುಸ್ತಕ್ ಮತ್ತು ನ್ಯಾಯಮೂರ್ತಿ ಶೋಬಾ ಅನ್ನಮ್ಮ ಈಪೆನ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಭಾರತೀಯ ವಿಚ್ಛೇದನ ಕಾಯಿದೆಯ ಸೆಕ್ಷನ್ 10A ಅನ್ನು ರದ್ದುಪಡಿಸಬೇಕೆಂದು ಆದೇಶಿಸಿದೆ.
31.10.2021 ರಂದು ಕ್ರಿಶ್ಚಿಯನ್ ವಿಧಿ ಮತ್ತು ವಿಧಿವಿಧಾನಗಳ ಪ್ರಕಾರ ಮದುವೆಯಾದ ದಂಪತಿಗಳು ತಮ್ಮಲ್ಲಿ ಹೊಂದಾಣಿಕೆ ಬಾರದ ಕಾರಣ ಪರಸ್ಪರ ಒಪ್ಪಿತ ವಿಚ್ಛೇದನಕ್ಕಾಗಿ ಎರ್ನಾಕುಲಂನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ 1869 ರ ವಿಚ್ಛೇದನ ಕಾಯಿದೆಯ ಸೆಕ್ಷನ್ 10A ಅಡಿಯಲ್ಲಿ ವಿವಾಹದ ನಂತರ ದಂಪತಿಗಳು ಸಮ್ಮತಿಯ ವಿಚ್ಛೇದನ ಬೇಕೆಂದು ಬಯಸಿದರೆ, ಅಂದಿನಿಂದ ಕನಿಷ್ಟ ಒಂದು ವರ್ಷದ ನಂತರ ಮಾತ್ರ ಅರ್ಜಿ ಸಲ್ಲಿಸಬಹುದೆಂಬ ಷರತ್ತಿನಿಂದ ಅವರ ಅರ್ಜಿಯನ್ನು ಪುರಸ್ಕರಿಸಿರಲಿಲ್ಲ.
ಈ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಕಕ್ಷಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಕಾಯಿದೆಯ ಸೆಕ್ಷನ್ 10A(1) ಅಡಿಯಲ್ಲಿ ನಿಗದಿಪಡಿಸಿದ ಒಂದು ವರ್ಷದ ಅವಧಿ ಅಸಂವಿಧಾನಿಕ ಎಂದು ರಿಟ್ ಅರ್ಜಿಯನ್ನೂ ಸಲ್ಲಿಸಿದ್ದರು.
ಈ ಕುರಿತು ಕೂಲಂಕುಷವಾಗಿ ವಿಚಾರಣೆ ನಡೆಸಿದ ನ್ಯಾಯಾಲಯ ಒಂದೊಂದು ಧರ್ಮದ ವಿಚ್ಛೇದನ ಕಾನೂನುಗಳಲ್ಲಿ ಒಂದೊಂದು ರೀತಿಯ ನಿಬಂಧನೆ ಇದೆ. ಆದರೆ ಅವರಿಬ್ಬರು ಒಟ್ಟಿಗೆ ಬದುಕಲು ಸಾಧ್ಯವಿರದಿದ್ದ ಮೇಲೆ ಏಕೆ ಕಾಯಬೇಕು? ಹಾಗಾಗಿ ಈ ನಿಬಂಧನೆಯನ್ನು ತೆಗೆದುಹಾಕಬೇಕೆಂದು ಆದೇಶಿಸಿ ಎರಡು ವಾರಗಳಲ್ಲಿ ಅವರ ಅರ್ಜಿ ವಿಲೇವಾರಿ ಮಾಡಲು ಸೂಚಿಸಿದೆ.
ಪೂರ್ಣ ವರದಿಯನ್ನು ಇಲ್ಲಿ ಓದಿ
ಇದನ್ನೂ ಓದಿ: ಒಳ ಮೀಸಲಾತಿ: ಕಣ್ಣ ಗಾಯವನರಿಯುವ ಕ್ರಮ – ಹುಲಿಕುಂಟೆ ಮೂರ್ತಿ


