ವಿರುಧುನಗರ: ಚೆಯ್ಯಕೋಡಿ ಎಂಬ ಮಹಿಳೆ ಶೌಚಾಲಯಕ್ಕಾಗಿ ಪ್ರತಿದಿನ ಬೆಳಿಗ್ಗೆ 10 ನಿಮಿಷಗಳಿಗೂ ಹೆಚ್ಚು ಕಾಲ ಬಂಜರು ಭೂಮಿಗೆ ನಡೆದುಕೊಂಡು ಹೋಗುತ್ತಾಳೆ. ಒಂದು ಕಲ್ಲು ಎಸೆಯುವಷ್ಟು ದೂರದಲ್ಲಿರುವ ಶೌಚಾಲಯಕ್ಕೆ ಹೋಗುವುದಕ್ಕಾಗಿ ಇಷ್ಟು ಸಮಯ ಬೇಕಾಗಿರುವುದಕ್ಕೆ “ಅಸ್ಪೃಶ್ಯತಾ ಗೋಡೆ” ಕಾರಣವಾಗಿದೆ.
ಇಷ್ಟು ಮಾತ್ರವಲ್ಲ ಹತ್ತಿರದ ಕೊಳಕ್ಕೆ ಹೋಗಿ ಒಂದು ಚೊಂಬು ನೀರು ತರಬೇಕಿದೆ. ಈ ಸಾರ್ವಜನಿಕ ಶೌಚಾಲಯವು ಅವಳ ಮನೆಯಿಂದ ಸ್ವಲ್ಪ ದೂರದಲ್ಲಿದೆ, ಆದರೆ ಅದು ಸುಮಾರು ಐದು ಮೀಟರ್ ಉದ್ದದ 10 ಅಡಿ ಎತ್ತರದ ಗೋಡೆಯ ಹಿಂದೆ ಇದೆ. ಈ ಗೋಡೆ ಇಡೀ ಹಳ್ಳಿಯನ್ನೇ ಮರೆಮಾಡುತ್ತದೆ.
ತಮಿಳುನಾಡಿನ ವಿರುಧುನಗರ ಜಿಲ್ಲೆಯ ಡಬ್ಲ್ಯೂ ಪುದುಪಟ್ಟಿ ಗ್ರಾಮದ ಗ್ರಾಮಸ್ಥರು ಇದನ್ನು ಕರೆಯುವಂತೆ ಇದು “ಅಸ್ಪೃಶ್ಯತಾ ಗೋಡೆ” ಯಾಗಿದೆ ಮತ್ತು ದೇಶದಲ್ಲಿ ಜಾತಿ ತಾರತಮ್ಯದ ನಿಷೇಧದ ಹೊರತಾಗಿಯೂ ಮುಂದುವರಿದಿರುವ ಆಳವಾಗಿ ಬೇರೂರಿರುವ ಜಾತಿ ಪ್ರತ್ಯೇಕತೆಯ ಸಂಕೇತವು ಆಗಿದೆ.
2010ರಲ್ಲಿ ಗ್ರಾಮದ ಮೇಲ್ಜಾತಿಯ ಸಾಲಿಯಾರ್ ಸಮುದಾಯದಿಂದ ನಿರ್ಮಿಸಲ್ಪಟ್ಟ ಈ ಗೋಡೆಯು, ಹಳ್ಳಿಯ ಸಾಲಿಯಾರ್ ಬದಿಯಲ್ಲಿರುವ ಸುಮಾರು 45 ದಲಿತ ಕ್ರಿಶ್ಚಿಯನ್ ಕುಟುಂಬಗಳು ಈ ಸಾರ್ವಜನಿಕ ಶೌಚಾಲಯ ಬಳಕೆ ಮಾಡಿದಾಗ ಸ್ಥಳೀಯ ಅನುದಾನಿತ ಶಾಲೆ ಅಥವಾ ಕುಡಿಯುವ ನೀರಿನಂತಹ ಮೂಲಭೂತ ಸೌಲಭ್ಯಗಳನ್ನು ಬಳಸುವುದನ್ನು ತಡೆಯುತ್ತದೆ.
“ಇದು ನಿಜವಾಗಿಯೂ ನೋವಿನ ಸಂಗತಿ, ಆದರೆ ನಮಗೆ ಏನು ಮಾಡಲು ಸಾಧ್ಯ? ನಮ್ಮ ನೆರೆಹೊರೆಯಲ್ಲಿ ನಡೆಯುವುದನ್ನು ನಾನು ಹೇಳಲು ಇಷ್ಟಪಡುವುದಿಲ್ಲ” ಎಂದು ಚೆಯ್ಯಕೋಡಿ ಎಂಬ ಮಹಿಳೆ ತನ್ನ ಹೆಂಚಿನ ಹುಲ್ಲಿನ ಮನೆಯ ಹೊರಗಿನ ಡಾಂಬರು ಹಾಕದ ಬೀದಿಯಲ್ಲಿ ಕುಳಿತು, ತನ್ನ ಇಬ್ಬರು ನೆರೆಹೊರೆಯವರೊಂದಿಗೆ ಕಾಗದದಲ್ಲಿ ಬತ್ತಿಗಳನ್ನು ಉರುಳಿಸುತ್ತಾ ತನ್ನ ಅಳಲನ್ನು ತೋಡಿಕೊಂಡರು.
ಈ ಸಂಬಂಧ ದಲಿತ ಕುಟುಂಬಗಳು ಹಲವಾರು ದೂರುಗಳನ್ನು ದಾಖಲಿಸಿವೆ ಮತ್ತು ಸಾರ್ವಜನಿಕ ಆಸ್ತಿಯ ಮೇಲೆ ನಿರ್ಮಿಸಿರುವ ಈ “ಅಸ್ಪೃಶ್ಯತಾ ಗೋಡೆ”ಯನ್ನು ಕೆಡವಲು ಅಧಿಕಾರಿಗಳನ್ನು ಒತ್ತಾಯಿಸಲು ಪ್ರತಿಭಟನೆಗಳನ್ನು ನಡೆಸಿವೆ. ಆದಾಗ್ಯೂ, ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಜೂನ್ 2023ರಲ್ಲಿ ಈ ಗ್ರಾಮದ ವ್ಯಾಪ್ತಿಗೆ ಬರುವ ವಾಟ್ರಾಪ್ ತಾಲ್ಲೂಕಿನ ಅಂದಿನ ತಹಶೀಲ್ದಾರ್, ಈ ವಿಷಯದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಗ್ರಾಮ ಆಡಳಿತ ಅಧಿಕಾರಿಗೆ (VAO) ನಿರ್ದೇಶನ ನೀಡಿದ್ದರು. ಆದಾಗ್ಯೂ ಡಬ್ಲ್ಯೂ ಪುದುಪಟ್ಟಿಯ ಗ್ರಾಮದ ದಲಿತರು ಇಲ್ಲಿಯವರೆಗೆ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಹೇಳುತ್ತಾರೆ.
ಡಬ್ಲ್ಯೂ ಪುದುಪಟ್ಟಿಯ ಗ್ರಾಮದ ಆಡಳಿತ ಅಧಿಕಾರಿ ಆರ್.ನಾರಾಯಣಕುಮಾರ್, ಈ ವಿಷಯವು ನ್ಯಾಯಾಲಯದಲ್ಲಿದೆ ಎಂದು ಹೇಳಿ ಈ ಕುರಿತು ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದು ಹೇಳಿದರು. “ಈ ವಿಷಯಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿದೆ, ಆದ್ದರಿಂದ ನಾನು ಅದರ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಲು ಸಾಧ್ಯವಿಲ್ಲ” ಎಂದು ಅವರು ದಿ ಪ್ರಿಂಟ್‌ಗೆ ತಿಳಿಸಿದ್ದಾರೆ.
ನಾರಾಯಣಕುಮಾರ್ ಉಲ್ಲೇಖಿಸುತ್ತಿರುವ ನ್ಯಾಯಾಲಯದ ಪ್ರಕರಣವು ಮದ್ರಾಸ್ ಹೈಕೋರ್ಟ್‌ನಲ್ಲಿ ಗ್ರಾಮದ ನಿವಾಸಿ ಮತ್ತು ಸರ್ಕಾರಿ ಸ್ವಾಮ್ಯದ ಭಾರತಿಯಾರ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ಎ. ಪ್ರಕಾಶ್ ಸಲ್ಲಿಸಿದ ಅರ್ಜಿಯಾಗಿದೆ.
32 ವರ್ಷದ ಇವರನ್ನು ಜೂನ್ 2023ರಲ್ಲಿ ಗೋಡೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕಾಗಿ ಬಂಧಿಸಲಾಯಿತು ಮತ್ತು ಜುಲೈ 2023ರಲ್ಲಿ ಪ್ರಕರಣವನ್ನು ರದ್ದುಗೊಳಿಸುವಂತೆ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ವಿಷಯದ ಬಗ್ಗೆ ತಮಗೆ ತಿಳಿದಿಲ್ಲ, ಕಾನೂನಿನ ಅಡಿಯಲ್ಲಿ ಅಸ್ಪೃಶ್ಯತೆಯ ಆಚರಣೆಯನ್ನು ನಿಷೇಧಿಸಲಾಗಿದೆ. ಈ ವಿಷಯದ ಬಗ್ಗೆ ನನಗೆ ಇನ್ನೂ ದೂರು ಬಂದಿಲ್ಲ ಅಥವಾ ನನಗೆ ಅದರ ಬಗ್ಗೆ ತಿಳಿದಿಲ್ಲ ಎಂದು ವಿರುಧುನಗರ ಜಿಲ್ಲಾಧಿಕಾರಿ ಡಾ. ವಿ.ಪಿ.ಜಯಶೀಲನ್ ದಿ ಪ್ರಿಂಟ್‌ಗೆ ತಿಳಿಸಿದ್ದಾರೆ.
ಗೋಡೆಯ ಇನ್ನೊಂದು ಬದಿಯಲ್ಲಿರುವ ಸಾಲಿಯಾರ್ ಸಮುದಾಯವು ಹೆಚ್ಚಾಗಿ ನೇಯ್ಗೆ ಚಟುವಟಿಕೆಗಳಲ್ಲಿ ತೊಡಗಿದೆ. ಸರ್ಕಾರಿ ಅನುದಾನಿತ ಬಾಲಸುಬ್ರಮಣಿಯರ್ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಮ್ಮದೇ ಆದ ಆಸ್ತಿಯ ಮೇಲೆ ಗೋಡೆಯನ್ನು ನಿರ್ಮಿಸಲಾಗಿರುವುದರಿಂದ ಅದರ ಬಗ್ಗೆ ಚರ್ಚಿಸಲು ಬಯಸುವುದಿಲ್ಲ ಎಂದು ಹೇಳಿದೆ.
ಯಾರಾದರೂ ಅಥವಾ ಯಾವುದಾದರೂ ಪ್ರಾಣಿ ಇನ್ನೊಂದು ಕಡೆಯಿಂದ ಬಂದರೆ ಏನು ಮಾಡುವುದು. ಸಮುದಾಯವು ತಮ್ಮ ಶಾಲೆ ಮತ್ತು ಜಮೀನಿನಲ್ಲಿ ಗೋಡೆಯನ್ನು ನಿರ್ಮಿಸಿದೆ. ಸರ್ಕಾರವು ಶಿಕ್ಷಕರಿಗೆ ಸಂಬಳವನ್ನು ಮಾತ್ರ ಪಾವತಿಸುತ್ತಿದೆ ಎಂದು ಸಾಲಿಯಾರ್ ಸಮುದಾಯದ 55 ವರ್ಷದ ಸುಂದರಾನಂದಮ್ ಹೇಳುತ್ತಾರೆ.


