ಉತ್ತರ ಪ್ರದೇಶದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಜನರಿಗೆ 10 ಲಕ್ಷ ರೂಪಾಯಿವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುವುದು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸೋಮವಾರ ಭರವಸೆ ನೀಡಿದ್ದಾರೆ.
ಶನಿವಾರ ಬಾರಾಬಂಕಿಯಿಂದ ತಮ್ಮ ಪಕ್ಷದ ‘ಪ್ರತಿಜ್ಞಾ ಯಾತ್ರೆ’ಗೆ ಚಾಲನೆ ನೀಡಿದ ಪ್ರಿಯಾಂಕಾ, ರೈತರ ಸಾಲ ಮನ್ನಾ ಮತ್ತು 20 ಲಕ್ಷ ಜನರಿಗೆ ಉದ್ಯೋಗ ಸೇರಿದಂತೆ ಏಳು ಭರವಸೆಗಳನ್ನು ಜನತೆಯ ಮುಂದಿಟ್ಟಿದ್ದಾರೆ. ಗೋಧಿ ಮತ್ತು ಭತ್ತವನ್ನು ಕ್ವಿಂಟಾಲ್‌ಗೆ 2,500 ರೂ.ಗೆ ಮತ್ತು ಕಬ್ಬಿಗೆ ಕ್ವಿಂಟಾಲ್‌ಗೆ 400 ರೂ. ನೀಡಿ ಖರೀದಿಸುವುದಾಗಿ ಅವರು ತಮ್ಮ ಭರವಸೆಗಳಲ್ಲಿ ಸೇರಿಸಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶ: ಮಾರ್ಚ್‌ನಿಂದ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದು ಬರೋಬ್ಬರಿ 27 ಶಾಸಕರು!
“ಕೊರೊನಾ ಅವಧಿಯಲ್ಲಿ ಮತ್ತು ಈಗ ಜ್ವರ ಹರಡುತ್ತಿರುವ ಸಮಯದಲ್ಲಿ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಯುಪಿಯ ಆರೋಗ್ಯ ವ್ಯವಸ್ಥೆಯು ಹದಗೆಟ್ಟ ಸ್ಥಿತಿಯನ್ನು ಎಲ್ಲರೂ ನೋಡಿದ್ದಾರೆ. ಉತ್ತಮ ಮತ್ತು ಅಗ್ಗದ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು, ಪ್ರಣಾಳಿಕೆ ಸಮಿತಿಯ ಒಪ್ಪಿಗೆಯೊಂದಿಗೆ ಯುಪಿ ಕಾಂಗ್ರೆಸ್ ನಿರ್ಧರಿಸಿದೆ. ಅಧಿಕಾರಕ್ಕೆ ಬಂದರೆ, ನಮ್ಮ ಸರ್ಕಾರವು ಯಾವುದೇ ಕಾಯಿಲೆಯ ಚಿಕಿತ್ಸೆಗಾಗಿ ರೂ. 10 ಲಕ್ಷದವರೆಗೆ ನೀಡುತ್ತದೆ” ಎಂದು ಪ್ರಿಯಾಂಕ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಪ್ರತಿಯೊಬ್ಬರ ವಿದ್ಯುತ್ ಬಿಲ್ ಅನ್ನು ಅರ್ಧದಷ್ಟು ಕಡಿತಗೊಳಿಸುವುದಾಗಿ ಮತ್ತು ಸಾಂಕ್ರಾಮಿಕದ ಮಧ್ಯೆ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಕುಟುಂಬಗಳಿಗೆ 25,000 ರೂಪಾಯಿಗಳನ್ನು ನೀಡುವುದಾಗಿ ಪಕ್ಷವು ಭರವಸೆ ನೀಡಿದೆ.
कोरोना काल में और अभी प्रदेश में फैले बुखार में सरकारी उपेक्षा के चलते उप्र की स्वास्थ्य व्यवस्था की जर्जर हालत सबने देखी।
सस्ते व अच्छे इलाज के लिए घोषणापत्र समिति की सहमति से यूपी कांग्रेस ने निर्णय लिया है कि सरकार बनने पर
'कोई भी हो बीमारी
मुफ्त होगा 10 लाख तक इलाज सरकारी।' pic.twitter.com/wJbTZXbjmk— Priyanka Gandhi Vadra (@priyankagandhi) October 25, 2021
ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಎಲ್ಲಾ ಪಕ್ಷಗಳೂ ಸಜ್ಜಾಗಿದ್ದು, ಪ್ರಚಾರದಲ್ಲಿ ತೊಡಗಿಕೊಂಡಿವೆ. ಕಾಂಗ್ರೆಸ್ ಕೂಡಾ ಜನರಿಗೆ ಭರ್ಜರಿ ಪ್ರಚಾರವನ್ನು ಪ್ರಾರಂಭಿಸಿದ್ದು, ಈಗಾಗಲೆ ಹಲವಾರು ಜನಪ್ರಿಯ ಭರವಸೆಗಳನ್ನು ನೀಡಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷವು 40% ಮಹಿಳೆಯರಿಗೆ ಟಿಕೆಟ್ ನೀಡುವುದಾಗಿ ಘೋಷಿಸಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 12ನೇ ತರಗತಿ ತೇರ್ಗಡೆಯಾದ ಬಾಲಕಿಯರಿಗೆ ಸ್ಮಾರ್ಟ್‌ಫೋನ್ ಹಾಗೂ ಪದವೀಧರ ಬಾಲಕಿಯರಿಗೆ ಇ-ಸ್ಕೂಟರ್ ನೀಡಲು ಪಕ್ಷ ನಿರ್ಧರಿಸಿದೆ. ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
ಇದನ್ನೂ ಓದಿ: ನಾನು ಜಾತಿವಾದಿ.. ಏನೀಗ?: ಬಿಜೆಪಿ ಟ್ವೀಟ್‌ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ


