ಅಮೆರಿಕದ ನ್ಯೂಯಾರ್ಕ್ ನಗರದ ಡೆಮಾಕ್ರಟಿಕ್ ಮೇಯರ್ ಅಭ್ಯರ್ಥಿಯ ಪ್ರಾಥಮಿಕ ಚುನಾವಣೆಯಲ್ಲಿ, ಭಾರತೀಯ ಮೂಲದ ಎಡಪಂಥೀಯ ಸಮಾಜವಾದಿ ಜೊಹ್ರಾನ್ ಮಮ್ದಾನಿ ಅವರ ಗೆಲುವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿದ್ದಾರೆ. ಜೊಹ್ರಾನ್ ಮಮ್ದಾನಿ ಅವರನ್ನು “ಶೇ.100ರಷ್ಟು ಕಮ್ಯೂನಿಸ್ಟ್ ಹುಚ್ಚ” ಎಂದು ಟ್ರಂಪ್ ಜರೆದಿದ್ದಾರೆ.
ಕಾಂಗ್ರೆಸ್ (ಸಂಸತ್) ಸದಸ್ಯೆ ಅಲೆಕ್ಸಾಂಡ್ರಿಯಾ ಒಕಾಸಿಯೊ-ಕೊರ್ಟೆಜ್ (ಎಒಸಿ) ಮತ್ತು ಸೆನೆಟರ್ ಚಕ್ ಶುಮರ್ ಸೇರಿದಂತೆ, ಜೊಹ್ರಾನ್ ಮಮ್ದಾನಿ ಅವರನ್ನು ಬೆಂಬಲಿಸಿದ ಇತರ ಪ್ರಗತಿಪರ ನಾಯಕರ ವಿರುದ್ದವೂ ಟ್ರಂಪ್ ಕಿಡಿಕಾರಿದ್ದಾರೆ.
“ಶೇ.100ರಷ್ಟು ಕಮ್ಯೂನಿಸ್ಟ್ ಹುಚ್ಚರಾದ ಜೊಹ್ರಾನ್ ಮಮ್ದಾನಿ ಅವರನ್ನು ನ್ಯೂಯಾರ್ಕ್ ನಗರದ ಮೇಯರ್ ಅಭ್ಯರ್ಥಿಯ ಪ್ರಾಥಮಿಕ ಚುನಾವಣೆಯಲ್ಲಿ ಆಯ್ಕೆ ಮಾಡುವ ಮೂಲಕ, ಡೆಮೋಕ್ರಾಟ್‌ಗಳು ತಮ್ಮ ನಿಜ ಬಣ್ಣ ಬಯಲು ಮಾಡಿದ್ದಾರೆ ” ಎಂದು ಟ್ರಂಪ್ ತಮ್ಮ ಟ್ರುಥ್ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
“ಮಮ್ದಾನಿ ಭಯಾನಕವಾಗಿ ಕಾಣುತ್ತಾರೆ, ಅವರ ಧ್ವನಿ ಗಡಸುತನದಿಂದ ಕೂಡಿದೆ, ಅವರು ತುಂಬಾ ಬುದ್ಧಿವಂತರಲ್ಲ. ಆದರೆ, ಡೆಮೊಕ್ರಾಟ್‌ಗಳು ಇಂತಹವರನ್ನು ಬೆಂಬಲಿಸುತ್ತಿದ್ದಾರೆ” ಎಂದು ಟ್ರಂಪ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಮೇಯರ್ ಅಂತಿಮ ಆಯ್ಕೆಗೆ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಜೊಹ್ರಾನ್ ಅವರು ಮಾಜಿ ಮೇಯರ್, ರಿಪಬ್ಲಿಕನ್ ಪಕ್ಷದ ಎರಿಕ್ ಆ್ಯಡಮ್ಸ್ ಅವರನ್ನು ಎದುರಿಸಬೇಕಿದೆ. ಜುಲೈ 1ರಂದು ಅಧಿಕೃತ ಫಲಿತಾಂಶ ಹೊರಬೀಳಲಿದೆ.
ನ್ಯೂಯಾರ್ಕ್ ನಗರದ ಮಾಜಿ ಗವರ್ನರ್ ಆಂಡ್ರ್ಯೂ ಕ್ಯುಮೊ ನ್ಯೂಯಾರ್ಕ್ ನಗರದ ಮೇಯರ್ ಪ್ರಾಥಮಿಕ ಚುನಾವಣೆಗೆ ಅನುಮತಿ ನೀಡಿದ ಬಳಿಕ, ಜೊಹ್ರಾನ್ ಮಮ್ದಾನಿ ಅವರು ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಪ್ರಾಥಮಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಎಣಿಕೆಯಾದ ಶೇ.90 ರಷ್ಟು ಮತಗಳ ಪೈಕಿ, ಜೊಹ್ರಾನ್ ಮಮ್ದಾನಿ ಶೇ. 43.5ರಷ್ಟು ಮತಗಳನ್ನು ಗಳಿಸಿದ್ದಾರೆ. ಮಮ್ದಾನಿ ಅಂತಿಮ ರೇಸ್‌ನಲ್ಲಿ ಗೆದ್ದರೆ, ನ್ಯೂಯಾರ್ಕ್‌ನ ಮೊದಲ ಮುಸ್ಲಿಂ ಮೇಯರ್ ಆಗಲಿದ್ದಾರೆ.
ಕ್ವೀನ್ಸ್‌ನ ಡೆಮಾಕ್ರಟಿಕ್ ಸೋಷಿಯಲಿಸ್ಟ್ ಮತ್ತು ಸ್ಟೇಟ್ ಅಸೆಂಬ್ಲಿ ಸದಸ್ಯರಾಗಿರುವ ಜೊಹ್ರಾನ್ ಅವರು ಭಾರತದ ಪ್ರಖ್ಯಾತ ಸಿನಿಮಾ ನಿರ್ಮಾಪಕಿ ಮೀರಾ ನಾಯರ್ ಮತ್ತು ಭಾರತೀಯ ಮೂಲದ ಉಗಾಂಡಾದ ಮಾರ್ಕ್ಸ್‌ವಾದಿ ವಿದ್ವಾಂಸ ಮಹಮೂದ್ ಮಮ್ದಾನಿ ಅವರ ಪುತ್ರ.
ದೇವನಹಳ್ಳಿಯಲ್ಲಿ ರೈತರು, ಹೋರಾಟಗಾರರ ಬಂಧನ: ಇಂದು ಸಿಎಂ ಮನೆ ಮುಂದೆ ಪ್ರತಿಭಟನೆ


