Homeಕರ್ನಾಟಕಕಾಂಗ್ರೆಸ್ಸಿನ ಬೆಳಗಾವಿ ಮಹಾಧಿವೇಶನಕ್ಕೆ 100ರ ಸಂಭ್ರಮ: ಕುವೆಂಪು ಆತ್ಮಕತೆಯಲ್ಲಿದೆ ಇದರ ಕುರಿತ ಲೇಖನ

ಕಾಂಗ್ರೆಸ್ಸಿನ ಬೆಳಗಾವಿ ಮಹಾಧಿವೇಶನಕ್ಕೆ 100ರ ಸಂಭ್ರಮ: ಕುವೆಂಪು ಆತ್ಮಕತೆಯಲ್ಲಿದೆ ಇದರ ಕುರಿತ ಲೇಖನ

- Advertisement -
- Advertisement -

ನೆನಪಿನ ದೋಣಿಯಲ್ಲಿಕುವೆಂಪುರವರ ಆತ್ಮಕಥೆ. ಇದು ಕುವೆಂಪು ಬೆಳೆದು ಬಂದ ದಾರಿಯನ್ನು ಒಳಗೊಂಡಿದೆ.  ಐತಿಹಾಸಿಕ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಮಾರಂಭ ಇಂದು (ಡಿ.26) ಬೆಳಗಾವಿಯಲ್ಲಿ ನಡೆಯುತ್ತಿದೆ. ಸುಮಾರು 100 ವರ್ಷಗಳ ಹಿಂದೆ ಅಂದರೆ 26-12-1924ರಂದು ಮಹಾತ್ಮ ಗಾಂಧಿ ಅಧ್ಯಕ್ಷತೆ ವಹಿಸಿದ್ದ ಅವರ ಏಕೈಕ ಕಾಂಗ್ರೆಸ್ಸಿನ ಅಧಿವೇಶನದಲ್ಲಿ ಆಗಿನ್ನೂ 20ರ ಹರೆಯದ ಪ್ರಥಮ ಬಿ.ಎ. ವಿದ್ಯಾರ್ಥಿ ಕುವೆಂಪು ಅವರು ಭಾಗವಹಿಸಿದ್ದರು. ಈ ಕುರಿತ ಲೇಖನವನ್ನು ಈ ಆತ್ಮಕಥೆ ಒಳಗೊಂಡಿದೆ.

……………………………………………………………………………..

ನಾನು ಮೊದಲನೇ ವರ್ಷದ ಬಿ.ಎ. ತರಗತಿಯಲ್ಲಿ ಓದುತ್ತಿದ್ದಾಗ 1924ನೆಯ ಡಿಸೆಂಬರ್ ತಿಂಗಳ ಉತ್ತಾರಾರ್ಧದಲ್ಲಿ ಬೆಳಗಾಂನಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ನಡೆಯುತ್ತದೆಂದು ಗೊತ್ತಾಯಿತು. ಶಸ್ತ್ರ ಚಿಕಿತ್ಸೆಯ ಅನಂತರ ಆಗತಾನೆ ಸೆರೆಮನೆಯಿಂದ ಬಿಡುಗಡೆಯಾಗಿದ್ದ ಮಹಾತ್ಮಾ ಗಾಂಧಿಯವರು ಆ ಅಧಿವೇಶನದ ಅಧ್ಯಕ್ಷತೆ ವಹಿಸುತ್ತಾರೆ ಎಂಬ ವಾರ್ತೆ ನಮ್ಮನ್ನೆಲ್ಲ ಆಕರ್ಷಿಸಿತು. ಭರತಖಂಡದ ಬದುಕನ್ನೆಲ್ಲ ತುಂಬಿಕೊಂಡಿದ್ದರು ಗಾಂಧೀಜಿ. ಅವರಿಗೆ ಶಿಕ್ಷೆಯಾಗಿದ್ದು, ಶಸ್ತ್ರ ಚಿಕಿತ್ಸೆಯಾಗಿದ್ದು ಸೆರೆಯ ಅವಧಿ ಮುಗಿಯುವ ಮುನ್ನವೆ ಅವರು ಬಿಡುಗಡೆ ಹೊಂದಿ ಹೊರಗೆ ಬಂದದ್ದು ಎಲ್ಲವೂ ಪತ್ರಿಕೆಗಳಲ್ಲಿ ದಿನವೂ ಅನೇಕ ತಿಂಗಳುಗಳಿಂದ ದಪ್ಪಕ್ಷರದ ಮೊದಲನೆಯ ಪುಟದ ವಾರ್ತೆಗಳಾಗಿ, ಜನತೆಯ ಹೃದಯ ಸಮುದ್ರ ಕಡೆದಂತಾಗಿ, ದೇಶದ ಬದುಕು ವಿಕ್ಷುಬ್ಧವಾಗಿತ್ತು. ಕಾಂಗ್ರೆಸ್ ಅಧಿವೇಶನದ ಸಮಯಕ್ಕೆ ಸರಿಯಾಗಿ ಕ್ರಿಸ್‌ಮಸ್ ರಜವೂ ಪ್ರಾರಂಭವಾಗುತ್ತಿತ್ತಾದ್ದರಿಂದ ನಾವು ಕೆಲವರು ವಿದ್ಯಾರ್ಥಿ ಮಿತ್ರರು ಬೆಳಗಾವಿಗೆ ಹೋಗಲು ನಿಶ್ಚಯಿಸಿದೆವು.

ರೈಲು ಪ್ರಯಾಣವೂ ಒಂದು ಸಾಹಸವೇ ಆಗಿತ್ತು. ಗಾಂಧೀಜಿ ಅಧ್ಯಕ್ಷತೆ ವಹಿಸುವ ಕಾಂಗ್ರೆಸ್ ಅಧಿವೇಶನಕ್ಕೆ ಹೊರಟ ಅಕ್ಷರಶಃ ಲಕ್ಷಾಂತರ ಜನರ ನೂಕುನುಗ್ಗಲು ಉಸಿರುಕಟ್ಟಿಸುತ್ತಿತ್ತು. ಚಳಿಗಾಲವಾಗಿದ್ದರೂ ಕಾಂಪಾರ್ಟುಮೆಂಟಿನ ಒಳಗೆ ಕುದಿಯುವ ಸೆಕೆ! ಪ್ರತಿಯೊಂದು ನಿಲ್ದಾಣದಲ್ಲಿಯೂ ಆಗಲೆ ಕಿಕ್ಕಿರಿದಿದ್ದ ಗಾಡಿಗೆ ಹತ್ತಲು ಪ್ರಯತ್ನಿಸುವವರ ಮತ್ತು ಮೊದಲೇ ಹತ್ತಿ ನಿಲ್ಲಲು ಕೂಡ ಜಾಗವಿಲ್ಲದೆ ಜೋತುಬಿದ್ದವರ ನಡುವೆ ಜಗಳ, ಬೈಗುಳ, ಗುದ್ದಾಟ, ಆ ಕಿಕ್ಕಿರಿಕೆ, ನುಗ್ಗಾಟ, ಕೆಟ್ಟ ಉಸಿರಿನ ಬೆವರಿನ ಕೊಳಕುವಾಸನೆ ಇವುಗಳನ್ನು ತಡೆಯಲಾರದೆ, ರೈಲನ್ನು ಹೊರಡಲು ಬಿಡದಂತೆ ಸರಪಣಿ ಎಳೆದದ್ದೂ ಎಳೆದದ್ದೆ! ನಮ್ಮ ಗುಂಪಿನವರೆ ಮೂರು ನಾಲ್ಕು ಸಲ ಹಾಗೆ ಮಾಡಬೇಕಾಯ್ತು. ಕಡೆಗೆ ಗಾರ್ಡು-ಸ್ಟೇಷನ್ ಮಾಸ್ಟರು ಬಂದು ಕೇಳಿಕೊಂಡ ಮೇಲೆಯೇ, ದಾಕ್ಷಿಣ್ಯಕ್ಕೆ, ಸರಪಣಿ ಎಳೆಯುವುದನ್ನು ನಿಲ್ಲಿಸಿದೆವು. ಹೂಜಿಗಳಲ್ಲಿ ರೈಲು ತುಂಬಿಗೆಗಳಲ್ಲಿ ಇದ್ದ ನೀರೆಲ್ಲ ಖಾಲಿಯಾಗಿ ದಗೆಗೆ ಮೂರ್ಛೆ ಹೋಗುವುದೊಂದು ಬಾಕಿ! ಅಂತೂ ಹೋಗಿ ಇಳಿದೆವು ಬೆಳಗಾವಿ ಸ್ಟೇಷನ್ನಿನಲ್ಲಿ: ಭೂಪಾಳಂ ಚಂದ್ರಶೇಖರಯ್ಯ, ಎಸ್.ವಿ.ಕನಕಶೆಟ್ಟಿ, ರಾಮಚಂದ್ರಶೆಟ್ಟಿ, ನಾನು, ಇನ್ನೂ ಕೆಲವರ-ಹೆಸರು ನೆನಪಿಗೆ ಬಾರದು.\

ಅಧಿವೇಶನದ ಜಾಗಕ್ಕೆ ಸ್ವಲ್ಪ ದೂರವಾಗಿದ್ದ ಬೆಳಗಾವಿಯ ಊರಿನಲ್ಲಿ ಮಿತ್ರರೊಬ್ಬರ ಬಂಧುಗಳ ಮನೆಯಲ್ಲಿಯೆ ನಾವೆಲ್ಲ ಇಳಿದುಕೊಳ್ಳುವಂತೆ ಏರ್ಪಾಡಾಗಿತ್ತು. ಅಲ್ಲಿ ಸ್ನಾನಗೀನ ಮುಗಿಸುತ್ತಿದ್ದೆವು; ಊಟಗೀಟಕ್ಕೆಲ್ಲ ಅಧಿವೇಶನದ ಮಹಾಬೃಹತ್ ಭೋಜನ ಶಾಲೆಗೆ ಹೋಗುತ್ತಿದ್ದೆವು. ಅಧಿವೇಶನದ ಭಾಷಣದ ವೇದಿಕೆಯ ಸುವಿಸ್ತೃತವಾದ ಪ್ರಧಾನ ಮಂಟಪದಷ್ಟೆ ಭವ್ಯವಾಗಿತ್ತು ಆ ಭೋಜನ ಶಾಲೆ. ನನಗಂತೂ ಈ ಊಟ ತಿಂಡಿಯ ಔತಣವನ್ನು ಕಂಡು ಬೆರಗು ಬಡಿದಿತ್ತು. ಕೇಳಿದಷ್ಟು ಸಿಹಿ, ಕೇಳಿದಷ್ಟು ಹಾಲು, ತುಪ್ಪ, ಚಪಾತಿ, ಶ್ರೀಖಂಡ ಮತ್ತು ಏನೇನೊ ನಾನಾ ಪ್ರಾಂತಗಳ ತರತರದ ಭಕ್ಷ್ಯಭೋಜ್ಯಗಳು: ನನ್ನ ಗ್ರಾಮೀಣತೆ ತತ್ತರಿಸಿತ್ತು! ನಾನಾ ಪ್ರಾಂತಗಳ ನಾನಾ ರೀತಿಯ ಜನರ ಪರಿಚಯ ಅಧಿವೇಶನದ ಮುಖ್ಯಸ್ಥಾನದಲ್ಲಿ ಆಗುವುದಕ್ಕಿಂತಲೂ ಅತಿಶಯವಾಗಿ ಈ ಭೋಜನಶಾಲೆಯಲ್ಲಿ ನಮಗೆ ಅತಿನಿಕಟವಾಗಿ ಲಭಿಸಿತು. ನಮ್ಮ ಎದುರು ಪಂಕ್ತಿಯಲ್ಲಿಯೆ ಕುಳಿತು ಉಣ್ಣುತ್ತಿದ್ದ ಉತ್ತರದ ಕಡೆಯ ಜನರ ಭೀಮಾಕಾರ, ಭೀಮೋದರ, ಭೀಮಾಭಿರುಚಿ, ಭೋಜನದಲ್ಲಿ ಅವರಿಗಿದ್ದ ಭೀಮೋತ್ಸಾಹ ಇವುಗಳನ್ನೆಲ್ಲ ಬೆಕ್ಕಸ ಬೆರಗಾಗಿ ನೋಡುತ್ತಿದ್ದೆವು ನಾವು! ನಾವು ಆ ಬಲಿಷ್ಠವಾಗಿರುತ್ತಿದ್ದ ಚಪಾತಿಗಳಲ್ಲಿ ಒಂದನ್ನೆ ತಿಂದು, ಹೊಟ್ಟೆ ತುಂಬಿಹೋಗಿ, ಮುಂದೆ ಅದಕ್ಕಿಂತಲೂ ರುಚಿ ರುಚಿಯಾಗಿರುತ್ತಿದ್ದ ಉಣಿಸುಗಳನ್ನು ತಿನ್ನಲಾರದೆ ಎದುರಿಗಿದ್ದವರನ್ನು ಕರುಬಿನಿಂದ ನೋಡುತ್ತಿದ್ದರೆ, ಅವರು ಒಂದಲ್ಲ ಎರಡಲ್ಲ ಏಳೆಂಟು ಚಪಾತಿಗಳನ್ನೂ ಲೀಲಾಜಾಲವಾಗಿ ತಿಂದು, ಹಾಲು ತುಪ್ಪ ಶ್ರೀಖಂಡಗಳನ್ನು ಯಥೇಚ್ಛವಾಗಿ ಸೇವಿಸಿ, ಮತ್ತೂ ತರತರದ ಅನ್ನ ಪಾಯಸಾದಿಗಳನ್ನು ಬಡಿಸಿಕೊಂಡು ತಿನ್ನುತ್ತಿದ್ದರು! ಮತ್ತೆ, ಅವರೇನು ಊಟಕ್ಕೆ ಹೆಚ್ಚು ದುಡ್ಡ ಕೊಡುತ್ತಿರಲಿಲ್ಲ. ನಾವು ಕೊಟ್ಟಷ್ಟೆ, ಒಂದೆ ರೂಪಾಯಿ! ಬಡಕಲಾಗಿದ್ದು ತಿನ್ನಲಾರದ ಸಣಕಲು ಹೊಟ್ಟೆಯ ನಮಗೆ ಆಗುತ್ತಿದ್ದ ನಷ್ಟವನ್ನು ನೆನೆದಾಗ ನಮಗೆ ಲಭಿಸುತ್ತಿದ್ದ ಲಾಭ ಬರಿಯ ಹೊಟ್ಟೆಯ ಕಿಚ್ಚು! ಪರಿಣಾಮ: ಅವರಿಗೆ ತಿಳಿಯದಿದ್ದ ಕನ್ನಡದಲ್ಲಿ ನಾವು ಅವರ ಲೋಭ ಬುದ್ಧಿಯನ್ನೂ ಹೊಟ್ಟೆಬಾಕತನವನ್ನೂ ಗಜವರಾಹ ಗಾತ್ರವನ್ನೂ ಖಂಡಿಸುತ್ತಾ ಟೀಕಿಸುತ್ತಾ ಲೇವಡಿ ಮಾಡಿ ನಗುತ್ತಾ ಪ್ರತೀಕಾರವೆಸಗಿದೆವೆಂದು ಭಾವಿಸಿ ತೃಪ್ತರಾಗುವುದೆಷ್ಟೊ ಅಷ್ಟೆ!

ಆ ಅಧಿವೇಶನದಲ್ಲಿ ರಾಷ್ಟ್ರದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಸುಪ್ರಸಿದ್ಧರಾಗಿದ್ದ ಅನೇಕ ವ್ಯಕ್ತಿಗಳು ನೆರೆದಿದ್ದರು. ಆದರೆ ನಮಗಿದ್ದುದು ಮುಖ್ಯವಾಗಿ ಒಂದೇ ಲಕ್ಷ್ಯ: ಗಾಂಧೀಜಿಯ ದರ್ಶನ! ಆದರೆ ಅದೇನು ಸುಲಭ ಸಾಧ್ಯವಾಗಿತ್ತೇ? ಆ ಜನಜಂಗುಳಿಯ ನೂಕುನುಗ್ಗಲಲ್ಲಿ? ಅಧಿವೇಶನದ ವೇದಿಕೆಯ ಮೇಲೆ ಅವರನ್ನೇನೋ ನೋಡಬಹುದಾಗಿತ್ತು. ಆದರೆ ಅದು ನಾವು ಕೊಂಡಿದ್ದ ಟಿಕೆಟ್ಟಿನ ಸ್ಥಳಕ್ಕೆ ಬಹುಬಹುದೂರವಾಗಿತ್ತು. ಅಲ್ಲಿಂದ ಗಾಂಧೀಜಿ ಸಣ್ಣದೊಂದು ಪುತ್ತಲಿಯ ಗೊಂಬೆಯಷ್ಟೆ ಆಕಾರದಲ್ಲಿ ಕಾಣಿಸುತ್ತಿದ್ದರು. ಅದಕ್ಕಾಗಿ ನಾವು ಅವರು ಅಧಿವೇಶನಕ್ಕೆ ಬರುವ ಹೊತ್ತನ್ನೂ ಅವರು ಪ್ರವೇಶಿಸುವ ಮಹಾದ್ವಾರವನ್ನೂ ಪತ್ತೆಹಚ್ಚಿ ಬಿಸಿಲಿನಲ್ಲಿ ಕಾದೆವು.

ಕಾದೆವು ಎಂದರೆ ಎರಡು ಅರ್ಥದಲ್ಲಿಯೂ: ಬಹಳ ಹೊತ್ತು ಕಾದೆವು ಎಂಬುದು ಗೌಣಾರ್ಥ. ಆದರೆ ಬಿಸಿಲಿನಲ್ಲಿ ಕಾದೆವು ಎಂದರೆ, ಕಾದು ಕೆಂಪಾದೆವು! ಅಕ್ಷರಶಃ ಮುಖಕ್ಕೆ ರಕ್ತವೇರಿ ಕೆಂಪಾದದ್ದು ಮಾತ್ರವೆ ಅಲ್ಲ. ಬಟ್ಟೆ ಬರೆ ಎಲ್ಲವೂ ಕೆಂಪು ಬಣ್ಣಕ್ಕೆ ತಿರುಗಿದುವು. ಮೈಸೂರಿನಿಂದ ಹೊರಡುವಾಗ ಬೆಳ್ಳಗೆ ಮಡಿಮಾಡಿದ್ದ ಖಾದಿ ಉಡುಪು ಧರಿಸಿ, ದಿನವೂ ಸ್ನಾನ ಮಾಡಿದ ಮೇಲೆ ಬಟ್ಟೆ ಬದಲಾಯಿಸುವುದಕ್ಕಾಗಿ ಒಂದೆರಡು ಜೊತೆ ಪಂಚೆ ಷರ್ಟುಗಳನ್ನು ಬೆಳ್ಳಗೆ ಬೆಣ್ಣೆಮಡಿ ಮಾಡಿಸಿಕೊಂಡು ಒಯ್ದಿದ್ದೆವು. ಬೆಳಗಾವಿ ತಲುಪುವಷ್ಟರಲ್ಲಿ ನಮ್ಮ ಉಡುಪು ಮುಸುರೆ ತಿಕ್ಕಿದಂತಾಗಿತ್ತು. ರೈಲಿನ ಪ್ರಯಾಣದಲ್ಲಿ ಎಂಜನ್ನಿನ ಹೊಗೆಯ ಹುಡಿ ಕೂತು ನೂಕುನುಗ್ಗಲಿನ ಬೆವರು ಹತ್ತಿ ಹಾಗಾಗುವುದರಲ್ಲಿ ಅಚ್ಚರಿಯಿಲ್ಲ ಎಂದುಕೊಂಡೆವು. ಮರುದಿನ ಬೆಳಿಗ್ಗೆ ಮಿಂದು, ಉಟ್ಟ ಬಟ್ಟೆಗಳನ್ನೆಲ್ಲ ಚೆನ್ನಾಗಿ ಒಗೆದು ಹರಡಿ, ಮೈಸೂರಿನಿಂದ ತಂದಿದ್ದ ಬಿಳಿಮಡಿಯ ಬಟ್ಟೆ ಧರಿಸಿ, ಸ್ವದೇಶೀ ವಸ್ತ್ರದ ಶ್ವೇತಾಂಬರದಿಂದ ಶೋಭಿಸುತ್ತಾ ಅಧಿವೇಶನಕ್ಕೆ ಹೋದೆವು.

ಅಧಿವೇಶನದ ವಲಯವನ್ನು ಸಮೀಪಿಸುತ್ತಿರುವಾಗಲೆ ಒಂದು ಧೂಳೀಧೂಸರವಾದ ಆಕಾಶಮಂಡಲ ಕಾಣಿಸುವುದರ ಜೊತೆಗೆ ಜನಸ್ತೋಮದ ಚಲನವಲನದಿಂದ ಹೊಮ್ಮಿದ ತುಮುಲ ಶಬ್ದಮಂಡಲವೂ ಕರ್ಣಗೋಚರವಾಯಿತು. ತುಸು ಹೊತ್ತು ನನ್ನ ಮಿತ್ರರೊಬ್ಬರು ಇದ್ದಕ್ಕಿದ್ದಂತೆ ಸಂನ್ಯಾಸಿಯಾದಂತೆ ಕಾವಿಧಾರಿಯಾಗಿದ್ದಾರೆ! ಅಚ್ಚರಿಯಿಂದ ನೋಡುತ್ತೇನೆ: ಮತ್ತೂ ಒಬ್ಬರು ಹಾಗೆಯೆ ಬಣ್ಣ ಬದಲಾಯಿಸಿದ್ದಾರೆ! ನೋಡಿಕೊಳ್ಳುತ್ತೇನೆ: ನನ್ನ ಉಡುಪೂ ಕೆಮ್ಮಣ್ಣು ಬಣ್ಣಕ್ಕೆ ತಿರುಗಿದೆ! ಕಡೆಗೆ ಗೊತ್ತಾಯಿತು, ಅಲ್ಲಿನ ಮಣ್ಣಿನ ಬಣ್ಣವೇ ಕೆಂಪು ಎಂದು; ಅಲ್ಲಿ ಬಿಳಿಬಟ್ಟೆ ಹಾಕಿಕೊಂಡು ಶುಚಿಯಾಗಿ ಕಾಣುವುದೇ ಅಸಾಧ್ಯ ಎಂದು. ಒಂದೆರಡು ದಿನವೇನೋ ಬೆಳ್ಳಗೆ ಮಡಿಯಾಗಿರಲು ಪ್ರಯತ್ನಪಟ್ಟೆವು. ಏನೇನೋ ಪ್ರಯೋಜನವಾಗಲಿಲ್ಲ. ಶುಚಿತ್ವವನ್ನೇ ಕೈಬಿಟ್ಟೆವು, ಮೈಸೂರಿಗೆ ಮತ್ತೆ ಬರುವವರೆಗೆ!

ಮೈಗೆಂಪಾಗಿ ಬಟ್ಟೆಗೆಂಪಾಗಿ ಒಂದು ಮಹಾದ್ವಾರದೆಡೆ ನೂಕು ನುಗ್ಗಲಿನಲ್ಲಿ ನಿಂತು ನೋಡುತ್ತಿದ್ದೆವು, ನೆರೆದ ಜಾತ್ರೆಯ ಜನಜಂಗುಳಿಯ ನಡುವೆ ಆನೆಯೊಂದು ನಡೆದು ಬರುತ್ತಿದ್ದರೆ ಹೇಗೆ ಮೇಲೆದ್ದು ಕಾಣಿಸುವುದೊ ಹಾಗೆ ಜನಸಮುದ್ರದಲ್ಲಿ ತೇಲಿ ಬರುವ ಹಡಗುಗಳಂತೆ ಇಬ್ಬರು ಬೃಹದ್ ವ್ಯಕ್ತಿಗಳು ಬರುತ್ತಿದ್ದುದು ಕಾಣಿಸಿತು. ಗುಸುಗುಸು ಹಬ್ಬಿತು, ಗಾಂಧೀಜಿ ಬರುತ್ತಿದ್ದಾರೆ ಎಂದು. ಕತ್ತು ನಿಕ್ಕುಳಿಸಿ ನೋಡಿದೆ. ಗಾಂಧೀಜಿ ಎಲ್ಲಿ?

ಪಕ್ಕದಲ್ಲಿದ್ದವರು ಹೇಳಿದರು: ‘ಮೇಲೆದ್ದು ಕಾಣಿಸುತ್ತಾ ಬರುತ್ತಿದ್ದಾರಲ್ಲಾ ಅವರಿಬ್ಬರು ಆಲಿ ಸಹೋದರರು ಕಣ್ರೀ! ಅವರ ಮಧ್ಯೆ ನಡೆದು ಬರುತ್ತಿದ್ದಾರೆ ಗಾಂಧೀಜಿ.’

ಮಹಾತಾಮಸ ಮತ್ತು ಮಹಾರಾಜಸಗಳ ಮಧ್ಯೆ ನಡೆದುಬರುವ ಮಹಾಸಾತ್ವಿಕದಂತೆ ಕಾಣಿಸಿಕೊಂಡರು ಗಾಂಧೀಜಿ. ಮೌಲಾನಾ ಮಹಮ್ಮದಾಲಿ ಮತ್ತು ಮೌಲಾನಾ ಷೌಕತಾಲಿ ಇಬ್ಬರೂ ಪ್ರಾಚೀನ ಪೌರಾಣಿಕ ಅಸುರರಂತೆ ದೈತ್ಯ ಗಾತ್ರರಾಗಿದ್ದರು. ಅಸುರೀ ಸ್ವಭಾವಕ್ಕೆ ತಕ್ಕಂತೆ ಅವರ ಉಡುಪೂ ವಿರಾಜಿಸುತ್ತಿತ್ತು. ಚಂದ್ರ-ನಕ್ಷತ್ರ ಸಂಕೇತದಿಂದ ಶೋಭಿಸುತ್ತಿತ್ತು. ಅವರ ತಲೆಯುಡೆ. ಹೇರೊಡಲನ್ನು ಸುತ್ತಿತ್ತು ನೇಲುತ್ತಾ ಜೋಲುತ್ತಾ ನೆಲ ಗುಡಿಸುವಂತಿದ್ದ ಅವರ ನಿಲುವಂಗಿ. ಅವರ ಹೊಟ್ಟೆಯ ಸುತ್ತಳತೆಯಲ್ಲಿಯೆ ನಾಲ್ಕಾರು ಗಾಂಧಿಗಳು ಆಶ್ರಯ ಪಡೆಯಬಹುದಾಗಿತ್ತೇನೋ!

ತದ್ವಿರುದ್ಧವಾಗಿತ್ತು ಅಣುರೂಪಿ ಗಾಂಧೀಜಿಯ ಆಕೃತಿ, ಅವರಿಬ್ಬರ ನಡುವೆ. ನಮ್ಮ ಗೌರವಸಮಸ್ತವೂ ಸಾಷ್ಟಾಂಗವೆರಗಿತ್ತು ಅವರ ಪದತಲದಲ್ಲಿ: ‘ವಂದೇ ಮಾತರಂ! ಭಾರತ ಮಾತಾಕೀ ಜೈ! ಮಹಾತ್ಮಾ ಗಾಂಧೀ ಕೀ ಜೈ!’ ಮೊದಲಾದ ಘೋಷಗಳು ಕಿವಿ ಬಿರಿಯುವಂತೆ ಗಗನದೇಶವನ್ನೆಲ್ಲ ತುಂಬಿದುವು. ಆ ಉತ್ಸಾಹ ಸಾಗರಕ್ಕೆ ನನ್ನ ಕೀಚು ಕೊರಳೂ ತನ್ನ ದನಿಹನಿಯ ನೈವೇದ್ಯವನ್ನು ನೀಡಿ ಧನ್ಯವಾಗಿತ್ತು!

ಮೂರು ನಾಲ್ಕು ದಿನಗಳ ಅಧಿವೇಶನದಲ್ಲಿ ನಾವು ಪ್ರೇಕ್ಷಕ ಭಾಗಿಗಳಾಗಿದ್ದೆವು. ನನ್ನ ನೆನಪಿನಲ್ಲಿ ಆ ಸ್ವಾರಸ್ಯದ ವಿವರಗಳಾವುವೂ ಇಲ್ಲ. ಆದರೆ ಸ್ವಾತಂತ್ರ್ಯದೀಕ್ಷೆಯನ್ನು ತೊಟ್ಟು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮ್ಮಿಕ್ಕುವ ಭಾರತೀಯ ಸಮಷ್ಟಿ ಚೈತನ್ಯದ ಅಗ್ನಿಸ್ಪರ್ಶ ನನ್ನ ಕವಿಚೇತನಕ್ಕೂ ತಗುಲಿತ್ತು. ತತ್ಕಾಲದಲ್ಲಿ ರಚಿಸಿದ ಕೆಲವು ಇಂಗ್ಲಿಷ್ ಕವನಗಳೂ, ತರುವಾಯ ರಚಿತವಾಗಿ ಸುಪ್ರಸಿದ್ಧವಾಗಿರುವ ಕನ್ನಡ ಕವನಗಳೂ ಆ ದೀಕ್ಷೆಗೆ ಸಾಕ್ಷಿ ನಿಂತಿವೆ.

(ಅಕರ: ಕುವೆಂಪು – ನೆನಪಿನ ದೋಣಿಯಲ್ಲಿ)

ಮಲಯಾಳಂ ಸಾಹಿತ್ಯ ದಿಗ್ಗಜ ಎಂ.ಟಿ. ವಾಸುದೇವನ್ ನಾಯರ್ (91) ನಿಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...