ಬುಧವಾರ ದೆಹಲಿಯ ಜಹಾಂಗೀರ್‌ಪುರಿಯಲ್ಲಿ ನಡೆದ ನೆಲಸಮಗೊಳಿಸುವ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. “ನಮ್ಮ ಆದೇಶದ ನಂತರ ನಡೆದ ನೆಲಸಮಗೊಳಿಸುವ ಕಾರ್ಯಾಚರಣೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು” ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ
ಕಳೆದ ಶನಿವಾರದಂದು ಕೋಮುಗಲಭೆ ಭುಗಿಲೆದ್ದ ದೆಹಲಿಯ ಜಹಾಂಗೀರ್‌ಪುರಿಗೆ ಬುಲ್ಡೋಜರ್‌ಗಳನ್ನು ಕಳುಹಿಸಲ್ಪಟ್ಟ ಒಂದು ದಿನದ ನಂತರ, ಸುಪ್ರೀಂಕೋರ್ಟ್ ತನ್ನ ಆದೇಶದ ನಂತರ ನಡೆದ ಧ್ವಂಸಗಳ ಬಗ್ಗೆ ‘ಗಂಭೀರ’ವಾಗಿ ಪರಿಗಣಿಸುವುದಾಗಿ ಹೇಳಿದೆ. ಮುಂದಿನ ಆದೇಶದವರೆಗೆ ಜಹಾಂಗೀರ್‌ಪುರಿಯಲ್ಲಿ ಯಾವುದೇ ನೆಲಸಮಗೊಳಿಸುವ ಕಾರ್ಯಾಚರಣೆ ಮಾಡಬಾರದು ಎಂದು ನ್ಯಾಯಾಲಯವು ದೆಹಲಿ ಮುನ್ಸಿಪಲ್‌ಗೆ ನೋಟಿಸ್ ಜಾರಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಸುಪ್ರೀಂಕೋರ್ಟ್ ತೀರ್ಪನ್ನು ಮೇಯರ್‌ಗೆ ತಿಳಿಸಿದ ನಂತರವೂ ನಡೆದ ಎಲ್ಲಾ ಉರುಳಿಸುವಿಕೆ ಕಾರ್ಯಾಚರಣೆಗಳನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ” ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಎರಡು ವಾರಗಳ ನಂತರ ಪ್ರಕರಣವನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದೆ.
ಇದನ್ನೂ ಓದಿ: ದೆಹಲಿ: ಸುಪ್ರೀಂ ಕೋರ್ಟ್ ತಡೆಯಾಜ್ಞೆ ನಡುವೆಯೂ ತೆರವು ಕಾರ್ಯಾಚರಣೆ!
ವಿಚಾರಣೆಯ ಸಂದರ್ಭದಲ್ಲಿ, “ಸಮಾಜದ ನಿರ್ದಿಷ್ಟ ವರ್ಗವನ್ನು ಗುರಿಯಾಗಿಸಲಾಗುತ್ತಿದೆ” ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಲಾಗಿದೆ.
ಜಹಾಂಗೀರ್‌ಪುರಿ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್ ದವೆ, “ದೆಹಲಿ ಬಿಜೆಪಿ ಮುಖ್ಯಸ್ಥರು ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ನ ಮೇಯರ್‌ಗೆ ದೂರು ನೀಡಿದ ನಂತರ ಹಿಂಸಾಚಾರ ಪೀಡಿತ ಪ್ರದೇಶದಿಂದ ಅತಿಕ್ರಮಣಗಳನ್ನು ತೆಗೆದುಹಾಕಲು ರಾತ್ರೋರಾತ್ರಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಮತ್ತು ಯಾವುದೆ ಸೂಚನೆಯಿಲ್ಲದೆ ಕಾರ್ಯಾಚರಣೆ ಪ್ರಾರಂಭಿಸಲಾಯಿತು” ಎಂದು ಹೇಳಿದ್ದಾರೆ.
ದೆಹಲಿ ಮುನ್ಸಿಪಲ್ ಬಿಜೆಪಿ ನಾಯಕರ ಆಶಯವನ್ನು “ತಮ್ಮ ಆಜ್ಞೆಯಂತೆ” ಆಗಲಿ ಎಂಬಂತೆ ವರ್ತಿಸಿದೆ ಎಂದು ವಕೀಲರು ಆರೋಪಿಸಿದ್ದಾರೆ.
ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ದೆಹಲಿಯಂತಹ ರಾಜ್ಯಗಳಲ್ಲಿ ಮುಸ್ಲಿಂ ಗಲಭೆ ಆರೋಪಿಗಳ ಕಟ್ಟಡಗಳನ್ನು ನೆಲಸಮಗೊಳಿಸಲಾಗುತ್ತಿದೆ ಎಂದು ಜಮಿಯತ್ ಉಲಾಮಾ-ಇ-ಹಿಂದ್ ಸಲ್ಲಿಸಿದ ಮನವಿಯನ್ನು ಗಮನಿಸಿದ ಸುಪ್ರೀಂಕೋರ್ಟ್ ಬುಧವಾರ ಅತಿಕ್ರಮಣ ವಿರೋಧಿ ಅಭಿಯಾನವನ್ನು ಸ್ಥಗಿತಗೊಳಿಸಿದೆ.
ಸುಪ್ರೀಂಕೋರ್ಟ್ ಆದೇಶ ಇದ್ದರೂ ಬುಲ್ಡೋಜರ್‌ಗಳು ಮಸೀದಿ ಹೊರಗಿನ ಅಂಗಡಿಗಳು, ಕಟ್ಟಡಗಳನ್ನು ಸುಪ್ರೀಂಕೋರ್ಟ್ ಎರಡನೇ ಬಾರಿಗೆ ಹಸ್ತಕ್ಷೇಪ ಮಾಡುವವರೆಗೂ ಧ್ವಂಸಗೊಳಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಅಂತಿಮವಾಗಿ ಕಾರ್ಯಚರಣೆಯನ್ನು ನಿಲ್ಲಿಸುವಂತೆ ಆದೇಶ ನೀಡಿದ್ದಾರೆ.
ಬುಲ್ಡೋಝರ್‌ಗಳು ಧ್ವಂಸಗೊಳಿಸುತ್ತಿರುವ ಪ್ರದೇಶಕ್ಕೆ ತೆರಳಿದ್ದ ಸಿಪಿಐಎಂ ನಾಯಕಿ ಬೃಂದಾ ಕಾರಟ್ ಹಾಗೂ ಅವರ ತಂಡ ಬುಲ್ಡೋಝರ್ ಮುಂದೆ ನಿಂತು ಪ್ರತಿಭಟಿಸಿದ್ದಾರೆ. ಅವರು ಸುಪ್ರೀಂಕೋರ್ಟ್‌ನ ತಡೆ ಆದೇಶವಿರುವ ಪ್ರತಿಯನ್ನು ಅಲ್ಲಿನ ಅಧಿಕಾರಿಗಳಿಗೆ ತೋರಿಸಿದ್ದರು. ಇದರ ನಂತರ ಅಧಿಕಾರಿಗಳು ಕಾರ್ಯಾಚರಣೆಯನ್ನು ನಿಲ್ಲಿಸಿದ್ದಾರೆ.


