ಕೊರೊನಾ ಲಾಕ್‌ಡೌನ್ ಆರ್ಥಿಕ ವಿನಾಶದ ನೇರ ಪರಿಣಾಮವಾಗಿ ವಿಶ್ವದಾದ್ಯಂತ ಕನಿಷ್ಠ 4.9 ಕೋಟಿ ಜನರು ತೀವ್ರ ಬಡತನದಲ್ಲಿ ಮುಳುಗುವ ನಿರೀಕ್ಷೆಯಿದೆ. ಕೇವಲ ಭಾರತವೊಂದರಲ್ಲಿಯೇ 12.2 ಕೋಟಿ ಉದ್ಯೋಗ ನಷ್ಟವಾಗಿದೆ ಎಂದು ಸಿಎಂಐಇ, ವಿಶ್ವಬ್ಯಾಂಕ್ ಸೇರಿದಂತೆ ಹಲವು ಚಿಂತಕರು ಅಭಿಪ್ರಾಯಪಟ್ಟಿದ್ದಾರೆ.
ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಅಂದಾಜಿನ ಪ್ರಕಾರ ಏಪ್ರಿಲ್ ತಿಂಗಳಿನಲ್ಲಿ 12.2 ಕೋಟಿ ಭಾರತೀಯರನ್ನು ಕೆಲಸದಿಂದ ಹೊರಹಾಕಲಾಯಿತು. ಅಲ್ಲದೆ ಲಾಕ್‌ಡೌನ್‌ನಿಂದ ದೈನಂದಿನ ಕೂಲಿ ಕಾರ್ಮಿಕರು ಮತ್ತು ಸಣ್ಣ ಉದ್ಯಮಗಳಲ್ಲಿ ಕೆಲಸ ಮಾಡುವವರು ಹೆಚ್ಚು ಹಾನಿಗೊಳಗಾಗಿದ್ದಾರೆ. ಇವರಲ್ಲಿ ವ್ಯಾಪಾರಿಗಳು, ರಸ್ತೆಬದಿಯ ಮಾರಾಟಗಾರರು, ನಿರ್ಮಾಣ ಉದ್ಯಮದಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ರಿಕ್ಷಾಗಳನ್ನು ತಳ್ಳುವ ಮೂಲಕ ಜೀವನ ಸಾಗಿಸುವ ಅನೇಕರು ಸೇರಿದ್ದಾರೆ.
ಸರ್ಕಾರವು ರೈತರಿಗೆ ಅಗ್ಗದ ಸಾಲ, ಬಡವರಿಗೆ ನೇರವಾಗಿ ಹಣ ವರ್ಗಾವಣೆ ಮತ್ತು ಆಹಾರ ಭದ್ರತಾ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಭರವಸೆ ನೀಡಿದೆ. ಜನರ ಕೈಲಿ ಹಣ ಚಲಾವಣೆಯಾಗದೇ ಪರಿಸ್ಥಿತಿಯನ್ನು ಸುಧಾರಿಸಲು ಸಾಧ್ಯವಿಲ್ಲ. ಅದು ಮಾತ್ರವೇ ಬೇಡಿಕೆ, ಉದ್ಯೋಗ ಮತ್ತು ಉತ್ಪಾದನೆಯನ್ನು ಹೆಚ್ಚಿಸಬಹುದೆಂದು ಚಿಂತಕರು ಅಭಿಪ್ರಾಯಪಟ್ಟಿದ್ದಾರೆ.
ಏಷ್ಯಾದ ಕೊರೊನಾ ಹಾಟ್‌ಸ್ಪಾಟ್ ಆಗಿ ಬದಲಾಗಿರುವ ಭಾರತವೂ ಒಂದೂವರೆ ಲಕ್ಷ ಪ್ರಕರಣಗಳನ್ನು ದಾಖಲಿಸಿದೆ. ಇಲ್ಲಿನ ಆರ್ಥಿಕ ಪುನಶ್ಚೇತನಕ್ಕಾಗಿ ಪ್ರಧಾನಿ ಮೋದಿಯವರು ಜಿಡಿಯಪಿ 10% ಪ್ಯಾಕೇಜ್ ಘೋಷಿಸಿದರೂ ಸಹ ಅದರಲ್ಲಿ ಕೇವಲ ಒಂದು ಭಾಗ ಮಾತ್ರ ನೇರ ಆರ್ಥಿಕ ಪ್ರಚೋದನೆಯಾಗಿದ್ದು ಇದರಿಂದ ದೊಡ್ಡ ಮಟ್ಟದ ನಿರೀಕ್ಷೆ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಮೇ 31ರ ಬಳಿಕವೂ ಮತ್ತೆರೆಡು ವಾರ ಲಾಕ್‌ಡೌನ್ ಮುಂದುವರೆಯುವ ಸಾಧ್ಯತೆ?


