ದೇಶದಲ್ಲಿ ಉಂಟಾಗಿರುವ ಆಕ್ಸಿಜನ್ ಸಮಸ್ಯೆಯನ್ನು ಬಗೆಹರಿಸುವ ದೃಷ್ಟಿಯಿಂದ ದೇಶಾದ್ಯಂತ ವೈದ್ಯಕೀಯ ಆಮ್ಲಜನಕದ ಲಭ್ಯತೆ ಮತ್ತು ವಿತರಣೆಯನ್ನು ವೈಜ್ಞಾನಿಕ, ತರ್ಕಬದ್ಧ ಮತ್ತು ನ್ಯಾಯಯುತ ಆಧಾರದ ಮೇಲೆ ನಿರ್ಣಯಿಸಲು ಸುಪ್ರೀಂ ಕೋರ್ಟ್ 12 ಸದಸ್ಯರ ಟಾಸ್ಕ್ ಫೋರ್ಸ್ ಅನ್ನು ರಚಿಸಿದೆ.
ದೇಶದ ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಟಾಸ್ಕ್ ಫೋರ್ಸಿನ ನಿರ್ದೇಶನಗಳು ಅನ್ವಯವಾಗಲಿವೆ. ಅಲ್ಲದೇ COVID-19 ಗೆ ಚಿಕಿತ್ಸೆ ನೀಡಲು ಅಗತ್ಯವಾದ ಔಷಧಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಈ ಟಾಸ್ಕ್ ಫೋರ್ಸ್ ನಿರ್ದೇಶಲಿದೆ. ಅದಕ್ಕೆ ಬೇಕಾದ ಸಂಪನ್ಮೂಲಗಳನ್ನು ಬಳಸಲು ಕೇಂದ್ರವು ಎಲ್ಲಾ ಸಹಕಾರಗಳನ್ನು ನೀಡಬೇಕು ಎಂದು ಕೋರ್ಟ್ ಸೂಚಿಸಿದೆ.
“ವೈಜ್ಞಾನಿಕ ಮತ್ತು ವಿಶೇಷ ಡೊಮೇನ್ ಜ್ಞಾನದ ಆಧಾರದ ಮೇಲೆ ಸಾಂಕ್ರಾಮಿಕ ರೋಗಕ್ಕೆ ಸಾರ್ವಜನಿಕ ಆರೋಗ್ಯ ಪ್ರತಿಕ್ರಿಯೆಯನ್ನು ಸುಲಭಗೊಳಿಸಲು ರಾಷ್ಟ್ರೀಯ ಮಟ್ಟದಲ್ಲಿ ಈ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ದೇಶದ ಪ್ರಮುಖ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಈ ತಂಡದೊಂದಿಗೆ ಸಹಕರಿಸುತ್ತಾರೆ. ಇದು ಈ ಮಾನವೀಯ ಬಿಕ್ಕಟ್ಟನ್ನು ಎದುರಿಸಲು ವೈಜ್ಞಾನಿಕ ಕಾರ್ಯತಂತ್ರಗಳನ್ನು ರೂಪಿಸಲು ಅನುಕೂಲವಾಗಲಿದೆ” ಎಂದು ನ್ಯಾಯಾಲಯವು ತನ್ನ ಅಂತಿಮ ಆದೇಶದಲ್ಲಿ ತಿಳಿಸಿದೆ.
ಸುಪ್ರೀಂ ನೇಮಿಸಿದ ಟಾಸ್ಕ್ ಪೋರ್ಸ್‌ನಲ್ಲಿ ಪಶ್ಚಿಮ ಬಂಗಾಲ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಬಾಬತೋಷ್ ಬಿಸ್ವಾಸ್, ಗಂಗಾರಾಮ್ ಆಸ್ಪತ್ರೆ ನವದೆಹಲಿಯ ಮುಖ್ಯಾಧಿಕಾರಿ ದೇವೇಂದ್ರ ಸಿಂಗ್ ರಾಣಾ, ಬೆಂಗಳೂರಿನ ನಾರಾಯಣ ಹೃದಯಾಲಯದ ಮುಖ್ಯಸ್ಥ ದೇವಿಪ್ರಸಾದ್ ಶೆಟ್ಟಿ, ತಮಿಳುನಾಡಿನ ವೆಳ್ಳೂರಿನ ಕ್ರಿಸ್ತಿಯನ್ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಡಾ. ಗಗನ್ ದೀಪ್ ಕಾಂಗ್, ಅದೇ ಕಾಲೇಜಿನ ನಿರ್ದೇಶಕ ಡಾ. ಜೆ ವಿ ಪೀಟರ್, ಮುಂಬಯಿಯ ಹಿಂದೂಜಾ ಮತ್ತು ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಜ಼ರೀರ್ ಎಫ್ ಉದ್ವಾಡಿಯಾ, ಮತ್ತು ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮುಂತಾದವರು ಇದ್ದಾರೆ.
“ಈ ಸಮಸ್ಯೆಯನ್ನು ನಾವು ದೇಶವ್ಯಾಪಿಯಾಗಿ ನೋಡಬೇಕಾಗಿದೆ… ಆಮ್ಲಜನಕದ ಸ್ಟಾಕ್ ಬಿಡುಗಡೆ ಮಾಡಿದ ನಂತರ ಸರ್ಕಾರದ ಹೊಣೆಗಾರಿಕೆ ಏನು? ಆಮ್ಲಜನಕದ ಲೆಕ್ಕಪರಿಶೋಧನೆ ಅಗತ್ಯ” ಎಂದು ನ್ಯಾಯಾಲಯ ಕೇಳಿದೆ.
ಆಮ್ಲಜನಕ, ಔಷಧಿಗಳು ಮತ್ತು ಆಸ್ಪತ್ರೆಯ ಹಾಸಿಗೆಗಳಲ್ಲಿನ ತೀವ್ರ ಕೊರತೆಯನ್ನು ಇನ್ನಷ್ಟು ಹದಗೆಡಿಸುವಂತಹ ಮೂರನೇ ಕೋವಿಡ್ ಅಲೆಗೆ ಕೇಂದ್ರವು ಸಿದ್ಧತೆ ನಡೆಸುತ್ತಿದೆಯೇ ಎಂದು ತಿಳಿಯಲು ಬಯಸಿದ್ದೇವೆ ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ಎಂ.ಆರ್ ಶಾರವರಿದ್ದ ಪೀಠ ಈ ತೀರ್ಪು ನೀಡಿದ್ದು ಒಂದು ವಾರದಲ್ಲಿ ಟಾಸ್ಕ್ ಫೋರ್ಸ್ ಕೆಲಸ ಮಾಡಲಿದೆ ಎನ್ನಲಾಗಿದೆ.
ಮೋದಿ ಸರಕಾರವು ಕೋವಿಡ್-19 ನಿರ್ವಹಣೆಯಲ್ಲಿ ದಯನೀಯವಾಗಿ ವಿಫಲಗೊಂಡ ಕಾರಣ ಸುಪ್ರೀಂಕೋರ್ಟ್ ಇವತ್ತು ಸ್ವತಃ ಮಧ್ಯ ಪ್ರವೇಶಿಸಿ ನೂತನವಾದ ಟಾಸ್ಕ್ ಫೋರ್ಸ್ ರಚಿಸಬೇಕಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಇದನ್ನೂ ಓದಿ; ಕೊರೊನಾ ಎದುರಿಸಲು ನೆಹರು-ಇಂದಿರಾ-ಮನಮೋಹನ್ ಸಿಂಗ್ ಕಟ್ಟಿದ ವ್ಯವಸ್ಥೆಯೆ ದೇಶಕ್ಕೆ ಸಹಾಯ ಮಾಡಿದೆ: ಶಿವಸೇನೆ


