ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ರಾಷ್ಟ್ರೀಯ ಹೆದ್ದಾರಿಗಳಲ್ಲಿ 13,000 ಬ್ಲಾಕ್ ಸ್ಪಾಟ್‌ಗಳನ್ನು ಸರ್ಕಾರ ಗುರುತಿಸಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಶುಕ್ರವಾರ ಹೇಳಿದ್ದಾರೆ.
ಈ ಅಪಾಯಕಾರಿ ಸ್ಥಳಗಳನ್ನು 2029 ರ ವೇಳೆಗೆ ಸರಿಪಡಿಸಲಾಗುವುದು, ದೇಶಾದ್ಯಂತ ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿಯನ್ನು ಹಂಚಿಕೊಂಡರು.
ಈ ಹಿಂದೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾತನಾಡಿ, ಪ್ರತಿ ವರ್ಷ 1.78 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಅವರಲ್ಲಿ 60 ಪ್ರತಿಶತದಷ್ಟು ಜನರು 18-34 ವರ್ಷ ವಯಸ್ಸಿನವರಾಗಿದ್ದಾರೆ ಎಂದು ಮಾಹಿತಿ ನೀಡಿದ್ದರು.
ಈ 13,000 ಬ್ಲಾಕ್ ಸ್ಪಾಟ್‌ಗಳನ್ನು ಆದ್ಯತೆಯ ಮೇಲೆ ಸರಿಪಡಿಸಲು ಸರ್ಕಾರ ಕೆಲಸ ಮಾಡುತ್ತಿದೆ. ಕಳೆದ ದಶಕದಲ್ಲಿ ಕೇಂದ್ರ ಸರ್ಕಾರವು ರಸ್ತೆ, ರೈಲು ಮತ್ತು ವಾಯು ಸಂಪರ್ಕವನ್ನು ಗಮನಾರ್ಹವಾಗಿ ವಿಸ್ತರಿಸಿದೆ. ಪ್ರಯಾಣವನ್ನು ಸುಗಮ ಮತ್ತು ನಾಗರಿಕರಿಗೆ ಹೆಚ್ಚು ಅನುಕೂಲಕರವಾಗಿಸಿದೆ ಎಂದು ಚೌಧರಿ ಹೇಳಿದರು.
ಈ ವರ್ಧಿತ ಮೂಲಸೌಕರ್ಯವು ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸಿದೆ. ಸ್ಥಳೀಯ ಮಟ್ಟದಲ್ಲಿ ಮೂಲ ಸೌಕರ್ಯಗಳನ್ನು ಸುಧಾರಿಸಿದೆ. ಸಾರ್ವಜನಿಕರಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ ಎಂದರು.
ಮೂಲಸೌಕರ್ಯ ಪ್ರಗತಿಯನ್ನು ಒತ್ತಿಹೇಳುತ್ತಾ, ರಾಷ್ಟ್ರೀಯ ಹೆದ್ದಾರಿ ಜಾಲವು 2014 ರಲ್ಲಿ 91,287 ಕಿಮೀಗಳಿಂದ 1.6 ಪಟ್ಟು ಬೆಳೆದು, ನವೆಂಬರ್ 2024 ರ ವೇಳೆಗೆ 1,46,195 ಕಿಮೀಗೆ ಏರಿದೆ ಎಂದು ಅವರು ಬಹಿರಂಗಪಡಿಸಿದರು.
ಭಾರತ್ಮಾಲಾ ಯೋಜನೆ ಒಂದನೇ ಹಂತ 34,800 ಕಿಮೀ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದು, ಅದರಲ್ಲಿ 26,425 ಕಿಮೀಗೆ ಅನುದಾನ ನೀಡಲಾಗಿದೆ; 18,714 ಕಿಮೀ ಪೂರ್ಣಗೊಂಡಿದೆ. ಹೈ-ಸ್ಪೀಡ್ ಕಾರಿಡಾರ್‌ಗಳ (ಎಚ್‌ಎಸ್‌ಸಿ) ಉದ್ದವು 2014 ರಲ್ಲಿ 93 ಕಿಮೀಗಳಿಂದ 2024 ರಲ್ಲಿ 2,474 ಕಿಮೀಗೆ ಹೆಚ್ಚಾಯಿತು ಎಂದು ಮಾಹಿತಿ ನೀಡಿದರು.
2014 ರಲ್ಲಿ 18,300 ಕಿಮೀ ಉದ್ದದ ನಾಲ್ಕು-ಲೇನ್ ಅಥವಾ ಅಗಲವಾದ ರಾಷ್ಟ್ರೀಯ ಹೆದ್ದಾರಿಗಳು 2024 ರಲ್ಲಿ ಸುಮಾರು 45,900 ಕಿಮೀಗೆ ಏರಿತು, ಇದು ಎನ್‌ಡಿಎ ಸರ್ಕಾರದ ಅಡಿಯಲ್ಲಿ 2.5 ಪಟ್ಟು ಹೆಚ್ಚಳವಾಗಿದೆ. ರಾಷ್ಟ್ರೀಯ ಹೆದ್ದಾರಿ ಜಾಲವು 1.6 ಪಟ್ಟು ಹೆಚ್ಚಾಗಿದೆ. 2014 ರಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಉದ್ದ 91,287 ಕಿ.ಮೀ ಆಗಿದ್ದು, ನವೆಂಬರ್ 2024 ರ ವೇಳೆಗೆ 1,46,195 ಕಿ.ಮೀ.ಗೆ ವಿಸ್ತರಿಸಿದೆ. ಭಾರತಮಾಲಾ ಯೋಜನೆಯಡಿ, ಮೊದಲ ಹಂತವು 34,800 ಕಿ.ಮೀ ನಿರ್ಮಿಸುವ ಗುರಿ ಹೊಂದಿದೆ. ಇದರಲ್ಲಿ 26,425 ಕಿ.ಮೀ.ನ ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಯನ್ನು ನೀಡಲಾಗಿದೆ, 18,714 ಕಿಮೀ ಕಾಮಗಾರಿ ಪೂರ್ಣಗೊಂಡಿದೆ ಎಂದರು.
ಸಾರಿಗೆ ದಕ್ಷತೆಯನ್ನು ಹೆಚ್ಚಿಸಲು, ತಡೆರಹಿತ ಸರಕು ಸಾಗಣೆಯನ್ನು ಉತ್ತೇಜಿಸಲು, ಸರ್ಕಾರವು ಅಭಿವೃದ್ಧಿಗಾಗಿ 35 ಆಯಕಟ್ಟಿನ ಸ್ಥಳಗಳನ್ನು ಗುರುತಿಸಿದೆ. ಆರು ಬಹು-ಮಾದರಿ ಲಾಜಿಸ್ಟಿಕ್ ಪಾರ್ಕ್ (ಎಂಎಂಎಲ್‌ಪಿ) ಯೋಜನೆಗಳನ್ನು ಅನುಮೋದಿಸಲಾಗಿದೆ, ಮೂರು ಹೆಚ್ಚುವರಿ ಪಾರ್ಕ್‌ಗಳಿಗೆ ಟೆಂಡರ್‌ಗಳು ನಡೆಯುತ್ತಿವೆ ಎಂದು ಹೇಳಿದರು.
ಇದನ್ನೂ ಓದಿ; ನಟ ಅಲ್ಲು ಅರ್ಜುನ್ ಬಂಧನ: ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಆರ್‌ಎಸ್ ನಾಯಕ ಕೆಟಿಆರ್


