ದೇಶದಲ್ಲಿ ಸುಮಾರು 14 ಕೋಟಿ ಜನರು ಆಹಾರ ಭದ್ರತಾ ಕಾನೂನಿನಡಿಯ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದಿರುವ ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ತ್ವರಿತವಾಗಿ ಜನಗಣತಿ ನಡೆಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸೋಮವಾರ (ಫೆ.10) ಮೊದಲ ಬಾರಿಗೆ ಶೂನ್ಯ ವೇಳೆಯಲ್ಲಿ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಅಡಿಯಲ್ಲಿ ಫಲಾನುಭವಿಗಳನ್ನು 2011ರ ಜನಗಣತಿಯ ಪ್ರಕಾರ ಗುರುತಿಸಲಾಗುತ್ತಿದೆಯೇ ಹೊರತು, ಇತ್ತೀಚಿನ ಜನಸಂಖ್ಯೆಯ ಪ್ರಕಾರವಲ್ಲ ಎಂದು ಹೇಳಿದ್ದಾರೆ.
ಯುಪಿಎ ಸರ್ಕಾರ ಸೆಪ್ಟೆಂಬರ್ 2013ರಲ್ಲಿ ಪರಿಚಯಿಸಿದ, ದೇಶದ 140 ಕೋಟಿ ಜನಸಂಖ್ಯೆಗೆ ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆ ಒದಗಿಸುವ ಗುರಿ ಹೊಂದಿರುವ ಅತ್ಯಂತ ಮಹತ್ವದ ಯೋಜನೆ ಎನ್‌ಎಫ್‌ಎಸ್‌ಎ ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.
ಕೋವಿಡ್ -19 ಬಿಕ್ಕಟ್ಟಿನ ಸಂದರ್ಭದಲ್ಲಿ ಲಕ್ಷಾಂತರ ದುರ್ಬಲ ಕುಟುಂಬಗಳನ್ನು ಹಸಿವಿನಿಂದ ರಕ್ಷಿಸುವಲ್ಲಿ ಈ ಕಾಯ್ದೆ ನಿರ್ಣಾಯಕ ಪಾತ್ರ ವಹಿಸಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
2011ರ ಜನಗಣತಿಯ ಆಧಾರದ ಮೇಲೆ ಫಲಾನುಭವಿಗಳ ಕೋಟಾವನ್ನು ಇನ್ನೂ ನಿರ್ಧರಿಸಲಾಗುತ್ತಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಜನಗಣತಿಯ ಮಾಹಿತಿ ದಶಕಕ್ಕೂ ಹೆಚ್ಚು ಹಳೆಯದು ಎಂದಿದ್ದಾರೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-2013 ಸಾರ್ವಜನಿಕ ವಿತರಣಾ ವ್ಯವಸ್ಥೆ (ಟಿಪಿಡಿಎಸ್) ಅಡಿಯಲ್ಲಿ ಹೆಚ್ಚಿನ ಸಬ್ಸಿಡಿ ಆಹಾರ ಧಾನ್ಯಗಳನ್ನು ಪಡೆಯಲು ಗ್ರಾಮೀಣ ಪ್ರದೇಶದ ಶೇಕಡ 75 ರಷ್ಟು ಮತ್ತು ನಗರ ಪ್ರದೇಶದ ಜನಸಂಖ್ಯೆಯ ಶೇಕಡ 50ರಷ್ಟು ಜನರಿಗೆ ಅವಕಾಶ ಒದಗಿಸುತ್ತದೆ. 2011ರ ಜನಗಣತಿಯ ಪ್ರಕಾರ ಫಲಾನುಭವಿಗಳ ಸಂಖ್ಯೆ ಸುಮಾರು 81.35 ಕೋಟಿ ಇದೆ.
ಪ್ರಸ್ತುತ, ಆಹಾರ ಭದ್ರತಾ ಕಾನೂನಿನಡಿಯಲ್ಲಿ ಸರ್ಕಾರವು ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆಜಿ ಉಚಿತ ಆಹಾರ ಧಾನ್ಯಗಳನ್ನು ಒದಗಿಸುತ್ತಿದೆ.
“ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ, ದಶಕದ ಜನಗಣತಿಯು ನಾಲ್ಕು ವರ್ಷಗಳಿಗೂ ಹೆಚ್ಚು ವಿಳಂಬವಾಗಿದೆ. 2021ಕ್ಕೆ ಜನಗಣತಿ ನಡೆಯಬೇಕಿತ್ತು. ಆದರೆ, ಆಗ ಕೋವಿಡ್ ಕಾರಣ ನೀಡಿ ಸರ್ಕಾರ ಮುಂದೂಡಿಕೆ ಮಾಡಿದೆ. ಜನಗಣತಿಯ ಅವಧಿ ಕಳೆದು 5 ವರ್ಷಗಳಾಯಿತು. ಸರ್ಕಾರ ಯಾವಾಗ ಗಣತಿ ನಡೆಸಲಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಬಜೆಟ್ ಹಂಚಿಕೆಗಳನ್ನು ನೋಡಿದರೆ ಹೊಸ ಜನಗಣತಿ ಈ ವರ್ಷ ನಡೆಸುವ ಸಾಧ್ಯತೆಯಿಲ್ಲ ಎಂದು ತೋರುತ್ತದೆ. ಇದರಿಂದ ಸುಮಾರು 14 ಕೋಟಿ ಅರ್ಹ ಭಾರತೀಯರು ಎನ್‌ಎಫ್‌ಎಸ್‌ಎ ಅಡಿಯಲ್ಲಿ ತಮ್ಮ ಹಕ್ಕಿನ ಪ್ರಯೋಜನಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
“ಜನಗಣತಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಸರ್ಕಾರ ಆದ್ಯತೆ ನೀಡುವುದು ಮತ್ತು ಎಲ್ಲಾ ಅರ್ಹ ವ್ಯಕ್ತಿಗಳು ಎನ್‌ಎಫ್‌ಎಸ್‌ಎ ಅಡಿಯಲ್ಲಿ ಅವರಿಗೆ ಖಾತರಿಪಡಿಸಿದ ಪ್ರಯೋಜನಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ. ಆಹಾರ ಭದ್ರತೆ ಒಂದು ಸವಲತ್ತು ಅಲ್ಲ. ಅದು ಮೂಲಭೂತ ಹಕ್ಕು ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಅಡಿಯಲ್ಲಿ ಉಚಿತ ಆಹಾರ ಧಾನ್ಯಗಳ ವಿತರಣೆಯ ಅವಧಿಯನ್ನು ಜನವರಿ 1, 2024 ರಿಂದ ಐದು ವರ್ಷಗಳವರೆಗೆ ವಿಸ್ತರಿಸಲಾಗಿದೆ.


