ಗಣರಾಜ್ಯೋತ್ಸವ ದಿನದಂದು ಕೆಂಪುಕೋಟೆಯಲ್ಲಿ ನಡೆದ ಅಹಿತಕರ ಘಟನೆಯ ಪ್ರಮುಖ ರೂವಾರಿ ದೀಪ್ ಸಿಧುವನ್ನು ದೆಹಲಿ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಈ ಪ್ರಕರಣದಲ್ಲಿ ಬಂಧನವಾಗಿದ್ದ ದೀಪ್ ಸಿಧುವನ್ನು 7 ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿತ್ತು. ಇದರ ಅವಧಿ ಮುಗಿದ ನಂತರ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ಜೀತ್ ಕೌರ್ ಅವರ ಮುಂದೆ ಹಾಜರುಪಡಿಸಲಾಯಿತು. ಕೆಂಪು ಕೋಟೆಯಲ್ಲಿ ನಡೆದ ಹಿಂಸಾತ್ಮಕ ಘಟನೆಗಳ ಪ್ರಮುಖ ಪ್ರಚೋದಕರಲ್ಲಿ ಈತನೂ ಒಬ್ಬ ಎಂದು ಪೊಲೀಸರು ಆರೋಪಿಸಿದ್ದರಿಂದ ನ್ಯಾಯಾಲಯವು ಈ ಮೊದಲು ದೀಪ್ ಸಿಧು ಅನ್ನು ಪೊಲೀಸ್ ಕಸ್ಟಡಿಗೆ ಕಳುಹಿಸಿತ್ತು.
ಇದನ್ನೂ ಓದಿ: ರಂಜನ್ ಗೊಗೊಯ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ: ಸಾಕೇತ್ ಗೋಖಲೆ ಆಗ್ರಹ
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಲಕ್ಷಾಂತರ ರೈತರು ಕಳೆದ 3 ತಿಂಗಳಿನಿಂದ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದರ ಭಾಗವಾಗಿ ಜನವರಿ 26 ರಂದು ಬೃಹತ್ ಟ್ರ್ಯಾಕ್ಟರ್ ಪರೇಡ್ ನಡೆಸಲು ರೈತ ಒಕ್ಕೂಟ ಕರೆ ನೀಡಿತ್ತು. ಈ ಮೆರವಣಿಗೆಯಲ್ಲಿ ದೀಪ್ ಸಿಧುವಿನ ಪ್ರಚೋದಿತ ಗುಂಪೊಂದು ಉದ್ದೇಶಿತ ಮಾರ್ಗ ಬಿಟ್ಟು ಕೆಂಪುಕೋಟೆಗೆ ನುಗ್ಗಿ ಸಿಖ್ ಬಾವುಟವನ್ನು ಹಾರಿಸಿತ್ತು. ಇಲ್ಲಿ ರೈತರು ಮತ್ತು ಪೊಲೀಸರ ನಡುವೆ ಹಿಂಸಾತ್ಮಕ ಘಟನೆಗಳು ನಡೆದು ಇಬ್ಬರೂ ಗಾಯಗೊಂಡಿದ್ದರು.
ಇದಾದ ನಂತರ ದೀಪ್ ಸಿಧು ತಲೆಮರೆಸಿಕೊಂಡಿದ್ದ. ಈತನ ಕುರಿತು ಮಾಹಿತಿ ನೀಡಿದವರಿಗೆ ದೆಹಲಿ ಪೊಲೀಸರು 1 ಲಕ್ಷ ಬಹುಮಾನ ಘೋಷಿಸಿದ್ದರು. ಕಳೆದ ವಾರ ಈತನನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಊಟದ ವೇಳೆ ರಾಹುಲ್ ಗಾಂಧಿ ಮಾಸ್ಕ್ ಧರಿಸಿರಲಿಲ್ಲ


