ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಅಕ್ಕಿಆಲೂರ ಸರಕಾರಿ ಆಸ್ಪತ್ರೆಯಲ್ಲಿ ಟೆಕ್ನಿಷಿಯನ್ ಆದ ಕುಬೇರ ಸಾವಂತ ಎಂಬುವವನು ತನಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ್ದು, ಕೆಲಸ ಖಾಯಂ ಮಾಡುವುದಾಗಿ 50,000 ರೂ ಪಡೆದು ವಂಚಿಸಿದ್ದಾನೆ ಎಂದು ಅದೇ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ದಲಿತ ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ಈ ಕುರಿತು ‘ಲೈಂಗಿಕ ಕಿರುಕುಳ ಕುರಿತು ದೂರು’ ಹೆಸರಿನಲ್ಲಿ ತಾಲೂಕು ವೈದ್ಯಾಧಿಕಾರಿಗಳು, ಹಾವೇರಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಮಹಿಳಾ ಆಯೋಗ ಸೇರಿದಂತೆ ಹತ್ತಾರು ಜನರಿಗೆ ದೂರು ನೀಡಿದ್ದರು ತನಗೆ ಯಾವುದೇ ನ್ಯಾಯ ಸಿಕ್ಕಿಲ್ಲ ಎಂದು ಸಂತ್ರಸ್ತ ಮಹಿಳೆ ದೂರಿದ್ದಾರೆ.
ನಾನು ದಲಿತ ಜಾತಿಗೆ ಸೇರಿದ್ದು, ಹಾನಗಲ್ಲ ತಾಲೂಕಿನ ಅಕ್ಕಿಆಲೂರ ಸರಕಾರಿ ಆಸ್ಪತ್ರೆಯಲ್ಲಿ ಕಳೆದ 7-8 ವರ್ಷಗಳಿಂದ ಹೊರಗುತ್ತಿಗೆ ನೌಕರಳಾಗಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದೇನೆ. ಆರಂಭದಲ್ಲಿ ದಿನಕ್ಕೆ ಕೇವಲ 100 ರೂ ನೀಡುತ್ತಿದ್ದರು. ನನ್ನ ಕೆಲಸ ಖಾಯಂ ಮಾಡುವುದಾಗಿ ದವಾಖಾನೆಯ ಮ್ಯಾನೆಜರ ಆದ ಕುಬೇರ ಸಾವಂತ 60,000 ರೂ ಪಡೆದಿದ್ದಾರೆ. ಆದರೆ ಕಳೆದ ಎರಡು ವರ್ಷಗಳಿಂದ ಕುಬೇರ ಸಾವಂತ ಇವನು ನನಗೆ ಹೊರಗುತ್ತಿಗೆ ನೌಕರಿ ಕಾಯಂ ಮಾಡಿಕೊಟ್ಟಾಗಿನಿಂದ ನನಗೆ ತುಂಬಾ ಲೈಂಗಿಕ ಕಿರುಕುಳ ಕೊಡುತ್ತಿದ್ದಾನೆ. ಕೆಟ್ಟದಾಗಿ ಮಾತಾನಾಡುವುದು, ಮೈಮುಟ್ಟುವುದು, ವಿವಸ್ತ್ರಗೊಳಿಸುವುದು, ಬಲವಂತವಾಗಿ ಹಿಂಸಿಸುವುದು, ಮನೆಗೆ ಬಾ ಎಂದು ಒತ್ತಾಯಿಸುವುದು ಮಾಡುತ್ತಿದ್ದಾನೆ. ಜನವರಿ 26 ರಂದು ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ. ನಾನು ಅದನ್ನು ವಿರೋಧಿಸಿ ಕೂಗಾಡಿದ್ದರಿಂದ ಓಡಿ ಹೋಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಈ ಕುಬೇರ ಸಾವಂತನ ಈ ಎಲ್ಲ ಲೈಂಗಿಕ ಛೇಷ್ಟೆಗಳ ಕಾರಣಗಳಿಂದಾಗಿ ನನಗೆ ಮಾನಸಿಕವಾಗಿ,
ದೈಹಿಕವಾಗಿ, ಹಾಗೂ ಆರ್ಥಿಕವಾಗಿ ಭರಿಸಲಾಗದಷ್ಟು ಹಾನಿಯಾಗಿದೆ. ನನಗಾದ ಅನ್ಯಾಯ ಬೇರೆ ಯಾರಿಗೂ ಆಗಬಾರದೆಂದು ಫೆಬ್ರವರಿ 6ನೇ ತಾರೀಖಿನಂದೇ ದೂರು ನೀಡಿದ್ದೇನೆ. ಈ ಕೂಡಲೇ ಕುಬೇರ ಸಾವಂತನನ್ನು ಕೆಲಸದಿಂದ ಅಮಾನತ್ತಿನಲ್ಲಿಟ್ಟು, ಬಂಧಿಸಿ, ವಿಚಾರಣೆ ನಡೆಸಿ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.
ದೂರು ನೀಡಿ ಹದಿನೈದು ದಿನ ಕಳೆದರೂ ಪೊಲೀಸರಾಗಲಿ, ಜಿಲ್ಲಾಡಳಿತವಾಗಲಿ, ಆರೋಗ್ಯ ಇಲಾಖೆಯಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಆರೋಪಿಯನ್ನು ಬಂಧಿಸುವ, ವಿಚಾರಣೆ ನಡೆಸುವ ಕೆಲಸ ಮಾಡಿಲ್ಲ. ಈ ಕುರಿತು ದಲಿತ ಸಂಘಟನೆಗಳು ಒತ್ತಾಯ ಮಾಡಿದ ನಂತರ ಮಾತ್ರ ಫೆಬ್ರವರಿ 22 ರ ರಾತ್ರಿ ಪರಿಶಿಷ್ಟ ಜಾತಿ, ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆದರೆ ಲೈಂಗಿಕ ಕಿರುಕುಳದ ಪ್ರಕರಣ ದಾಖಲಿಸಿಲ್ಲ. ಆರೋಪಿಗೆ ರಾಜಕೀಯ ನಾಯಕರ ಬೆಂಬಲವಿರುವುದರಿಂದ ದಲಿತ ಮಹಿಳೆಗೆ ಅನ್ಯಾಯವಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತರಾದ ಪ್ರಶಾಂತ್ ಮುಚ್ಚಂಡಿಯವರು ಆರೋಪಿಸಿದ್ದಾರೆ.
ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಅವರು “ಆ ಮಹಿಳೆಗೆ ಕೆಲಸ ಖಾಯಂ ಆಗಿಲ್ಲ. ಆಕೆಗೆ ಎಲ್ಲ ರೀತಿಯಿಂದಲೂ ಅನ್ಯಾಯವಾಗಿದೆ. ಹಾಗಾಗಿ ಆರೋಪಿಯ ಮೇಲೆ ಈ ಕೂಡಲೇ ಪೊಲೀಸರು ಲೈಂಗಿಕ ದೌರ್ಜನ್ಯ, ಅತ್ಯಾಚಾರಕ್ಕೆ ಯತ್ನದ ಪ್ರಕರಣ ದಾಖಲಿಸಬೇಕು. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಬೇಕು. ತಕ್ಷಣ ಕೆಲಸದಿಂದ ಅಮಾನತ್ತು ಮಾಡಬೇಕು. ಇಲ್ಲದಿದ್ದರೆ ದಲಿತ ಸಂಘಟನೆಗಳೊಂದಿಗೆ ಪ್ರತಿಭಟನೆ ನಡೆಸುತ್ತೇವೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪುರುಷಾಧಿಪತ್ಯ ಮುರಿಯುವ ಹೋರಾಟ: ಭನ್ವಾರಿ ದೇವಿಯಿಂದ, ನಿರ್ಭಯಳಿಂದ ಪ್ರಿಯಾ ರಮಣಿವರೆಗೆ..
fake case