ಒಡಿಶಾದ ಗಡಿಯ ಸಮೀಪವಿರುವ ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯ ಟೈಗರ್ ರಿಸರ್ವ್ ಪ್ರದೇಶದೊಳಗೆ ಸೋಮವಾರ ತಡ ರಾತ್ರಿ ಪ್ರಾರಂಭವಾದ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ 16 ಶಂಕಿತ ಮಾವೋವಾದಿಗಳು ಸಾವನ್ನಪ್ಪಿದ್ದಾರೆ.
ಈ ಎನ್‌ಕೌಂಟರ್‌ನಲ್ಲಿ, ₹1 ಕೋಟಿ ಬಹುಮಾನ ಹೊಂದಿದ್ದ ಕೇಂದ್ರ ಸಮಿತಿಯ ಸದಸ್ಯ ಜಯರಾಮ್ ಅಲಿಯಾಸ್ ಚಲಪತಿ ಸಾವನ್ನಪ್ಪಿದ್ದಾರೆ.
ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ), ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಛತ್ತೀಸ್‌ಗಢದ ಕೋಬ್ರಾ ಮತ್ತು ಒಡಿಶಾದ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಭದ್ರತಾ ಸಿಬ್ಬಂದಿಯ ಜಂಟಿ ತಂಡವು ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು.
ಸೋನಾಬೆಡಾ-ಧರಾಮಬಂಧ ಸಮಿತಿಯ ಇಬ್ಬರು ಮಹಿಳಾ ನಕ್ಸಲೀಯರನ್ನು ಗರಿಯಾಬಂದ್ ಜಿಲ್ಲಾ ಪೊಲೀಸರು, ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ (ಕೋಬ್ರಾ) ಮತ್ತು ನಕ್ಸಲ್ ವಿರೋಧಿ ಕಾರ್ಯಾಚರಣೆಗಳಿಗೆ ತರಬೇತಿ ಪಡೆದ ಒಡಿಶಾದ ವಿಶೇಷ ಕಾರ್ಯಾಚರಣೆ ಪಡೆ (ಎಸ್‌ಒಜಿ) ಗುಂಡಿಕ್ಕಿ ಕೊಂದ ಒಂದು ದಿನದ ನಂತರ ಈ ಸಾವುಗಳು ಸಂಭವಿಸಿವೆ. ಎನ್‌ಕೌಂಟರ್‌ನಲ್ಲಿ ಒಬ್ಬ ಕೋಬ್ರಾ ಜವಾನನಿಗೆ ಸಣ್ಣಪುಟ್ಟ ಗಾಯಗಳು ಸಂಭವಿಸಿವೆ.
ಜನವರಿ 19ರಂದು ಸೋನಾಬೆಡಾ-ಧರಾಮಬಂಧ ಸಮಿತಿಯಿಂದ ಮಾವೋವಾದಿಗಳ ಚಲನವಲನದ ಬಗ್ಗೆ ಭದ್ರತಾ ಪಡೆಗಳಿಗೆ ಮಾಹಿತಿ ದೊರೆತ ನಂತರ ಜಂಟಿ ಕಾರ್ಯಾಚರಣೆ ಪ್ರಾರಂಭವಾಯಿತು. ಸೋಮವಾರ ಬೆಳಿಗ್ಗೆ 8 ಗಂಟೆಗೆ ಉದಾಂತಿ ಸೀತಾನದಿ ಟೈಗರ್ ರಿಸರ್ವ್ ಪ್ರದೇಶದಲ್ಲಿ ಗರಿಯಾಬಂದ್ ಪ್ರಧಾನ ಕಚೇರಿಯಿಂದ ಸುಮಾರು 60ರಿಂದ 70 ಕಿ.ಮೀ ದೂರದಲ್ಲಿ ಮತ್ತು ಒಡಿಶಾ ಗಡಿಯಿಂದ ಸುಮಾರು 20 ಕಿ.ಮೀ ದೂರದಲ್ಲಿ ಈ ಎನ್ಕೌಂಟರ್ ನಡೆದಿದೆ.
“14ಕ್ಕೂ ಹೆಚ್ಚು ಮಾವೋವಾದಿಗಳನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ; ಭದ್ರತಾ ಪಡೆಗಳು ತಮ್ಮ ಶೋಧ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿ ಹಿಂದಿರುಗಿದ ನಂತರ ಹೆಚ್ಚಿನ ಮಾಹಿತಿಯನ್ನು ನೀಡಬಹುದು” ಎಂದು ಛತ್ತೀಸ್‌ಗಢದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮಾವೋವಾದಿಗಳ ಸಾವುನೋವುಗಳ ಸಂಖ್ಯೆ ಹೆಚ್ಚಿರಬಹುದು; ಭದ್ರತಾ ಪಡೆಗಳು ಬೃಹತ್ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ ಎಂದು ಒಡಿಶಾ ಪೊಲೀಸರು ತಿಳಿಸಿದ್ದಾರೆ. “ಈ ಪ್ರದೇಶದಲ್ಲಿ ಪೊಲೀಸರು ಬೃಹತ್ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ; ಮಾವೋವಾದಿಗಳ ವಿರುದ್ಧ ಜಂಟಿ ಕಾರ್ಯಾಚರಣೆ ಮುಂದುವರಿಯುತ್ತದೆ” ಎಂದು ಒಡಿಶಾದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚಿನ ಸಾವುನೋವುಗಳು ಈ ವರ್ಷ ಛತ್ತೀಸ್‌ಗಢದಲ್ಲಿ ನಡೆದ ಎನ್‌ಕೌಂಟರ್‌ಗಳಲ್ಲಿ ಸಾವನ್ನಪ್ಪಿದ ಮಾವೋವಾದಿಗಳ ಸಂಖ್ಯೆಯನ್ನು 36ಕ್ಕೆ ಹೆಚ್ಚಿಸಿದೆ. ರಾಜ್ಯದಲ್ಲಿ ಒಂಬತ್ತು ಭದ್ರತಾ ಪಡೆಗಳ ಸಿಬ್ಬಂದಿ ಮತ್ತು ಒಬ್ಬ ನಾಗರಿಕ ಚಾಲಕನನ್ನು ಸಹ ಮಾವೋವಾದಿಗಳು ಕೊಂದಿದ್ದಾರೆ. ಜನವರಿ 3ರಂದು ನಡೆದ ಎನ್‌ಕೌಂಟರ್‌ನಲ್ಲಿ ಮಾವೋವಾದಿಯೊಬ್ಬರು ಸಾವನ್ನಪ್ಪಿದ ನಂತರ ಈ ವರ್ಷ ಗರಿಯಾಬಂದ್ ಜಿಲ್ಲೆಯಲ್ಲಿ ನಡೆದ ಎರಡನೇ ಎನ್‌ಕೌಂಟರ್ ಇದಾಗಿದೆ.
ಒಡಿಶಾ, ಛತ್ತೀಸ್‌ಗಢ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ನಡುವಿನ ಜಂಟಿ ಅಂತರರಾಜ್ಯ ಕಾರ್ಯಾಚರಣೆಗಳಲ್ಲಿ 2025ರಲ್ಲಿ ಇದುವರೆಗೆ 15 “ಮಾವೋವಾದಿಗಳು” ಸಾವನ್ನಪ್ಪಿದ್ದಾರೆ ಎಂದು ಒಡಿಶಾ ಪೊಲೀಸರು ತಿಳಿಸಿದ್ದಾರೆ.
ನಕ್ಸಲ್ ಚಟುವಟಿಕೆಗಳನ್ನು ಕೆಲವು ಪ್ರದೇಶಗಳಿಗೆ ಸೀಮಿತಗೊಳಿಸಲಾಗಿದೆ, ಒಡಿಶಾದಲ್ಲಿ ಹಿಂಸಾಚಾರದ ಘಟನೆಗಳನ್ನು ಕಡಿಮೆ ಮಾಡಲಾಗಿದೆ, ಛತ್ತೀಸ್‌ಗಢದಿಂದ ಒಡಿಶಾಗೆ ಮಾವೋವಾದಿಗಳ ಸಂಚಾರದಿಂದ ಕಂಧಮಲ್-ಬೌಧ್-ಕಲಹಂಡಿ-ನುವಾಪಾದ ಅಕ್ಷದಲ್ಲಿ ಮಾವೋವಾದಿ ಚಟುವಟಿಕೆಗಳು ಕಳವಳಕಾರಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾವೋವಾದಿಗಳ ಬೆದರಿಕೆಯನ್ನು ಕೊನೆಗೊಳಿಸಲು ಜಂಟಿ ಕಾರ್ಯಾಚರಣೆಗಳು ಮತ್ತು ಗುಪ್ತಚರ ಮಾಹಿತಿಯ ಹಂಚಿಕೆಗೆ ಒತ್ತು ನೀಡಲಾಗುತ್ತಿದೆ ಎಂದು ಒಡಿಶಾ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ; ದಲಿತ ಬಾಲಕಿಯ ಅತ್ಯಾಚಾರ ಪ್ರಕರಣ: 59ರಲ್ಲಿ 57 ಆರೋಪಿಗಳ ಬಂಧನ


