ದೆಹಲಿಯಲ್ಲಿ ವಾಯುಮಾಲಿನ್ಯದ ವಿರುದ್ದ ಪ್ರತಿಭಟಿಸುವಾಗ ಪೊಲೀಸ್ ಸಿಬ್ಬಂದಿ ಮೇಲೆ ಪೆಪ್ಪರ್ ಸ್ಪ್ರೇ ಬಳಸಿದ ಆರೋಪದ ಮೇಲೆ 15 ಮಂದಿಯನ್ನು ಭಾನುವಾರ (ನ.23) ಬಂಧಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಇಂಡಿಯಾ ಗೇಟ್ ಬಳಿ ಪ್ರತಿಭಟನೆ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧನ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿ ಪೊಲೀಸರ ಮೇಲೆ ಪೆಪ್ಪರ್ ಸ್ಪ್ರೇ ಬಳಸಿದ್ದಾರೆ. ಇದು ಅಸಮಾನ್ಯ ಮತ್ತು ಅಪರೂಪದ ಘಟನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿ ತಿಳಿಸಿದೆ.
ಕೆಲವು ಪ್ರತಿಭಟನಾಕಾರರು ಇಂಡಿಯಾ ಗೇಟ್ ಬಳಿ ಸಿ ಹೆಕ್ಸಾಗನ್ ಪ್ರದೇಶಕ್ಕೆ ನುಗ್ಗಿ ಬ್ಯಾರಿಕೇಡ್‌ಗಳನ್ನು ದಾಟಲು ಪ್ರಯತ್ನಿಸಿದರು. ನಾವು ಆಂಬ್ಯುಲೆನ್ಸ್‌ಗಳು ಮತ್ತು ವೈದ್ಯಕೀಯ ಸಿಬ್ಬಂದಿಗಳು ಸಿಲುಕಿಕೊಂಡಿದ್ದಾರೆ ಅವರಿಗೆ ತುರ್ತಾಗಿ ಹೋಗಬೇಕಿದೆ ಎಂದು ತಿಳಿಸಿದರೂ , ಅವರು ಆಕ್ರೋಶಗೊಂಡರು. ಪರಿಸ್ಥಿತಿ ವಿಕೋಪಕ್ಕೆ ತಿರುಗಬಹುದು ಎಂದು ಅರಿತ ಪೊಲೀಸ್ ಸಿಬ್ಬಂದಿ ಪ್ರತಿಭಟನಾಕಾರರಿಗೆ ಹಿಂದೆ ಸರಿಯುವಂತೆ ಸಲಹೆ ನೀಡಿದರು. ಆದರೆ, ಪ್ರತಿಭಟನಾಕಾರರು ನಿರಾಕರಿಸಿದ್ದಾರೆ. ಕೆಲವು ಪ್ರತಿಭಟನಾಕಾರರು ಪೆಪ್ಪರ್ ಸ್ಪ್ರೇ ಬಳಸಿ ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ಮಾಡಿದರು. ಮೂರರಿಂದ ನಾಲ್ಕು ಸಿಬ್ಬಂದಿಗೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.


