ಹದಿನೈದು ದಿನಗಳ ಹಿಂದೆ ಪುರಿ ಜಿಲ್ಲೆಯಲ್ಲಿ ಮೂವರು ಅಪರಿಚಿತ ದುಷ್ಕರ್ಮಿಗಳು ಅಪಹರಿಸಿ, ಬೆಂಕಿ ಹಚ್ಚಿದ್ದರು ಎನ್ನಲಾಗಿದ್ದ 15 ವರ್ಷದ ಬಾಲಕಿ ದೆಹಲಿಯ ಏಮ್ಸ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಶನಿವಾರ (ಆ.2) ತಿಳಿಸಿದ್ದಾರೆ.
ಜುಲೈ 19ರಂದು ಬೆಳಿಗ್ಗೆ ಪುರಿ ಜಿಲ್ಲೆಯ ಭಾರ್ಗವಿ ನದಿಯ ದಡದಲ್ಲಿ ಮೂವರು ಅಪರಿಚಿತ ವ್ಯಕ್ತಿಗಳು ಬಾಲಕಿಯನ್ನು ಅಪಹರಿಸಿ ಬೆಂಕಿ ಹಚ್ಚಿದ್ದರು ಎಂದು ವರದಿಯಾಗಿತ್ತು.
ಬಾಲಕಿ ತನ್ನ ಸ್ನೇಹಿತೆಯನ್ನು ಭೇಟಿಯಾಗಿ ಮನೆಗೆ ಮರಳುತ್ತಿದ್ದಾಗ, ಮಾರ್ಗ ಮಧ್ಯೆ ಆಕೆಯನ್ನು ತಡೆದಿದ್ದ ಮೂವರು ವ್ಯಕ್ತಿಗಳು ಅಪಹರಿಸಿ ಭಾರ್ಗವಿ ನದಿಯ ದಡಕ್ಕೆ ಕರೆದೊಯ್ದಿದ್ದರು. ಅಲ್ಲಿ ಸೀಮೆ ಎಣ್ಣೆಯಂತಹ ವಸ್ತುವನ್ನು ಆಕೆಯ ದೇಹದ ಮೇಲೆ ಸುರಿದು ಬೆಂಕಿ ಹಚ್ಚಿದ್ದರು ಎಂದು ಬಾಲಕಿಯ ತಾಯಿ ಬಲಂಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಶೇಕಡ 70ರಷ್ಟು ಸುಟ್ಟ ಗಾಯಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಬಾಲಕಿಯನ್ನು ಆರಂಭದಲ್ಲಿ ಸ್ಥಳೀಯ ಪಿಪಿಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ನಂತರ ಆ ದಿನವೇ ಆಕೆಯನ್ನು ಭುವನೇಶ್ವರದ ಏಮ್ಸ್ ಸ್ಥಳಾಂತರಿಸಲಾಗಿತ್ತು. ಅಲ್ಲಿಂದ ಮರುದಿನ ದೆಹಲಿಯ ಏಮ್ಸ್‌ಗೆ ಏರ್‌ಲಿಫ್ಟ್ ಮಾಡಲಾಗಿತ್ತು. ಅಲ್ಲಿ ಆಕೆಗೆ ಕನಿಷ್ಠ ಎರಡು ಶಸ್ತ್ರಚಿಕಿತ್ಸೆಗಳು ಮತ್ತು ಚರ್ಮ ಕಸಿ ಮಾಡಲಾಗಿತ್ತು.
ಶುಕ್ರವಾರ ದೆಹಲಿಯ ಏಮ್ಸ್‌ನಲ್ಲಿ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಒಡಿಶಾ ಪೊಲೀಸರು ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು.
“ಬಲಂಗಾ ಪ್ರದೇಶದ ಬಾಲಕಿಯ ಸಾವಿನ ಸುದ್ದಿ ಕೇಳಿ ನನಗೆ ತೀವ್ರ ಆಘಾತವಾಗಿದೆ. ಸರ್ಕಾರ ಮತ್ತು ದೆಹಲಿಯ ಏಮ್ಸ್‌ನ ತಜ್ಞ ವೈದ್ಯಕೀಯ ತಂಡದ ನಿರಂತರ ಪ್ರಯತ್ನಗಳ ಹೊರತಾಗಿಯೂ, ಆಕೆಯ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ. ಬಾಲಕಿಯ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಆಕೆಯ ಕುಟುಂಬಕ್ಕೆ ದುಖಃ ಭರಿಸುವ ಶಕ್ತಿಯನ್ನು ನೀಡಲಿ ಎಂದು ದೇವರ ಮುಂದೆ ಪ್ರಾರ್ಥಿಸುತ್ತೇನೆ” ಎಂದು ಸಿಎಂ ಮಾಝಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ବଳଙ୍ଗା ଘଟଣାରେ ପୀଡ଼ିତା ଝିଅଟିର ମୃତ୍ୟୁ ଖବର ଶୁଣି ମୁଁ ଗଭୀର ଭାବେ ମର୍ମାହତ। ସରକାରଙ୍କ ସମସ୍ତ ପ୍ରୟାସ ଏବଂ ଏମ୍ସ ଦିଲ୍ଲୀରେ ବିଶେଷଜ୍ଞ ଡାକ୍ତରୀ ଦଳଙ୍କ ଅହୋରାତ୍ର ଚେଷ୍ଟା ସତ୍ତ୍ୱେ ତାଙ୍କ ଜୀବନ ରକ୍ଷା କରାଯାଇ ପାରିଲା ନାହିଁ।
ମୁଁ ଝିଅଟିର ଅମର ଆତ୍ମାର ସଦଗତି କାମନା କରୁଛି ଏବଂ ଏହି ଅପୂରଣୀୟ କ୍ଷତିକୁ ସହିବା ପାଇଁ ତାଙ୍କ…
— Mohan Charan Majhi (@MohanMOdisha) August 2, 2025
ಒಡಿಶಾದ ಉಪಮುಖ್ಯಮಂತ್ರಿಗಳಾದ ಕೆ.ವಿ. ಸಿಂಗ್ ದೇವ್ ಮತ್ತು ಪ್ರವತಿ ಪರಿದಾ ಕೂಡ ಬಾಲಕಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಬಿಜೆಡಿ ಅಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕ ನವೀನ್ ಪಟ್ನಾಯಕ್ ಅವರು ಬಾಲಕಿಯ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಆಕೆಯ ಕುಟುಂಬಕ್ಕೆ ಸಂತಾಪ ತಿಳಿಸಿದ್ದಾರೆ.
ರಾಜ್ಯಸಭಾ ಸದಸ್ಯ ಸಸ್ಮಿತ್ ಪಾತ್ರ ನೇತೃತ್ವದ ಬಿಜೆಡಿ ಸಂಸದರ ನಿಯೋಗವು ದೆಹಲಿಯ ಏಮ್ಸ್‌ಗೆ ಭೇಟಿ ನೀಡಿದೆ ಎಂದು ವರದಿಯಾಗಿದೆ.
ಒಡಿಶಾ ಪೊಲೀಸರು ಕೂಡ ಬಾಲಕಿಯ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಆಕೆ ಸುಟ್ಟು ಕರಕಲಾದ ಘಟನೆಯ ತನಿಖೆ ಕೊನೆಯ ಹಂತಕ್ಕೆ ತಲುಪಿದೆ ಎಂದು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಬೇರೆ ಯಾರೂ ಭಾಗಿಯಾಗಿಲ್ಲ ಎಂದು ಪೊಲೀಸರು ಹೇಳಿಕೊಂಡಿದ್ದು, ಈ ವಿಷಯದ ಬಗ್ಗೆ ಯಾವುದೇ ಪ್ರಚೋದನಕಾರಿ ಹೇಳಿಕೆ ನೀಡದಂತೆ ಮನವಿ ಮಾಡಿದ್ದಾರೆ.
ବଳଙ୍ଗା ଘଟଣାରେ ପୀଡିତା ଝିଅଙ୍କ ମୃତ୍ୟୁ ଖବର ଶୁଣି ଆମେ ଅତ୍ୟନ୍ତ ଦୁଃଖିତ । ଏହି ଘଟଣାରେ ପୋଲିସ ପକ୍ଷରୁ ତଦନ୍ତ ନିଷ୍ଠାର ସହ କରାଯାଇଛି। ତଦନ୍ତ ଶେଷ ପର୍ଯ୍ୟାୟରେ ପହଞ୍ଚି ସାରିଛି। ବର୍ତ୍ତମାନ ପର୍ଯ୍ୟନ୍ତ ହୋଇଥିବା ତଦନ୍ତ ଅନୁଯାୟୀ ଏହି ଘଟଣାରେ ଅନ୍ୟ କୌଣସି ବ୍ୟକ୍ତିଙ୍କ ସମ୍ପୃକ୍ତି ନ ଥିବା ସ୍ପଷ୍ଟ ହୋଇଛି। ଏଣୁ ସମସ୍ତଙ୍କୁ ଅନୁରୋଧ…
— Odisha Police (@odisha_police) August 2, 2025
ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿ (ಒಪಿಸಿಸಿ) ಅಧ್ಯಕ್ಷ ಭಕ್ತ ಚರಣ್ ದಾಸ್ ಕೂಡ ಬಾಲಕಿಯ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಬಾಲಕಿಗೆ ಬೆಂಕಿ ಹಚ್ಚಿ ಕೊಂದ ಮೂವರು ದುಷ್ಕರ್ಮಿಗಳನ್ನು ವಾರದೊಳಗೆ ಬಂಧಿಸಬೇಕು. ಇಲ್ಲದಿದ್ದರೆ ನಾವು ಡಿಜಿಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ” ಎಂದು ದಾಸ್ ಹೇಳಿದ್ದಾರೆ.
ಬಾಲಕಿಗೆ ಬೆಂಕಿ ಹಚ್ಚಿ 15 ದಿನಗಳು ಕಳೆದಿದ್ದರೂ, ಪ್ರಕರಣದಲ್ಲಿ ಭಾಗಿಯಾಗಿರುವ ಯಾವುದೇ ಅಪರಾಧಿಗಳನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ.
ಆಗಸ್ಟ್ 2 ಅನ್ನು ‘ಕೆಟ್ಟ ಶನಿವಾರ’ ಎಂದು ದಾಸ್ ಬಣ್ಣಿಸಿದ್ದು, ಏಕೆಂದರೆ ಶನಿವಾರ (ಜುಲೈ 19) ಬಾಲಕಿಗೆ ಬೆಂಕಿ ಹಚ್ಚಲಾಗಿತ್ತು ಎಂದಿದ್ದಾರೆ.
ಈ ನಡುವೆ, ಪುರಿ ಪೊಲೀಸರು ಬಾಲಂಗದಲ್ಲಿರುವ ಮೃತ ಬಾಲಕಿಯ ಮನೆಯ ಬಳಿ ಕೆಲ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ ಎಂದು ವರದಿಯಾಗಿದೆ.
ಪ್ರಾಧ್ಯಾಪಕನ ಲೈಂಗಿಕ ಕಿರುಕುಳ ತಡೆಯಲಾರದೆ ಬಾಲಸೋರ್‌ನಲ್ಲಿ 20 ವರ್ಷದ ಕಾಲೇಜು ವಿದ್ಯಾರ್ಥಿನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಬಾಲಕಿಗೆ ಬೆಂಕಿ ಹಚ್ಚಿ ಕೊಂದಿರುವ ಈ ಘಟನೆ ನಡೆದಿದೆ. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಅಸ್ಸಾಂನಲ್ಲಿ ಬಂಗಾಳಿ ಮಾತನಾಡುವ ಮುಸ್ಲಿಮರ ವಿರುದ್ಧ ದ್ವೇಷ ಮತ್ತು ಹಿಂಸಾಚಾರ ಹೆಚ್ಚಳ: ವರದಿ


