ವಿದ್ಯುತ್ ಬೇಡಿಕೆ ಕಡಿಮೆಯಾಗಿದೆ ಎಂಬ ನೆಪದಲ್ಲಿ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಸುಮಾರು 1500 ಗುತ್ತಿಗೆ ಕಾರ್ಮಿಕರನ್ನು ವಜಾ ಮಾಡಲಾಗಿದೆ. ಕಳೆದ 20-25 ವರ್ಷಗಳಿಂದ ಕೆಲಸ ಮಾಡುತ್ತಿರುವ ಕಾರ್ಮಿಕರೂ ಸೇರಿದಂತೆ ಹಲವರು ಕೊರೊನಾ ಸಾಂಕ್ರಾಮಿಕದ ಕಾಲದಲ್ಲಿ ಕೆಲಸ ಕಳೆದುಕೊಂಡು ಅತಂತ್ರರಾಗಿದ್ದಾರೆ.
30 ಹೆಚ್ಚು ಹಳ್ಳಿಗಳ ಕಾರ್ಮಿಕರು, ವ್ಯಾಪಾರಿಗಳು ಈ ಕಾರ್ಖಾನೆಯನ್ನು ಅವಲಂಬಿಸಿದ್ದಾರೆ. ಪ್ರಸ್ತುತ ರಾಜ್ಯಸರ್ಕಾರವು ಇಲ್ಲಿ ವಿದ್ಯುತ್ ಖರೀದಿ ನಿಲ್ಲಿಸಿ, ಖಾಸಗಿಯವರಿಂದ ವಿದ್ಯುತ್ ಖರೀದಿಗೆ ಮುಂದಾಗಿದ್ದೆ ರಾಯಚೂರು ಶಾಖೊತ್ಪನ್ನ ವಿದ್ಯುತ್ ಕೇಂದ್ರದ ವಿದ್ಯುತ್ ಬೇಡಿಕೆ ಕಡಿಮೆಯಾಗಲು ಮತ್ತು ಕಾರ್ಮಿಕರು ಕೆಲಸ ಕಳೆದುಕೊಳ್ಳಲು ಕಾರಣ ಎಂಬ ಆರೋಪ ಕೇಳಿಬಂದಿದೆ.
3500 ಸರ್ಕಾರಿ ನೌಕರರು, 10000 ಕ್ಕೂ ಹೆಚ್ಚು ಗುತ್ತಿಗೆ ನೌಕರರು, 500ಕ್ಕೂ ಹೆಚ್ಚು ಅಪ್ರೆಂಟಿಸ್ ತರಬೇತಿದಾರರು ಕೆಲಸ ನಿರ್ವಹಿಸುತ್ತಿರುವ ಇಲ್ಲಿ ವಿದ್ಯುತ್ ಬೇಡಿಕೆಯಿಲ್ಲ ಎಂಬ ಕಾರಣದಿಂದ ಕೆಲ ಸಮಯ ಕೆಲಸ ಸ್ಥಗಿತಗೊಳಿಸಲು ಸೂಚಿಸಲಾಗಿದೆ.
ನಾಡಿಗೆ ಶೇ.40 ರಷ್ಟು ವಿದ್ಯುತ್ ನೀಡುವ ಈ ಸಂಸ್ಥೆಯ ಕಾರ್ಮಿಕರು ಈಗ ಅನಾಥರಾಗಿದ್ದಾರೆ. ಸಾವಿರಾರು ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಕಳೆದುಕೊಂಡು ಈಗ ಉದ್ಯೋಗವೂ ಇಲ್ಲದೇ ಅತಂತ್ರರಾಗಿರುವ ಈ ಕಾರ್ಮಿಕರ ಪರಿಸ್ಥಿತಿಗೆ ಯಾರು ಹೊಣೆ? ಈ ವಿದ್ಯುತ್ ಸ್ಥಾವರದಿಂದ ಹೊರಸೂಸುವ ಹಾರುಬೂದಿಯಿಂದ ಹಲವಾರು ರೋಗಗಳಿಂದ ಬಳಲುವುದು, ಅಸ್ತಮಾದಂತಹ ತೀವ್ರತರ ರೋಗಗಳಿಗೆ ಇಲ್ಲಿನ ಜನರು ಬಲಿಯಾಗುತ್ತಲೇ ಇದ್ದಾರೆ. ಫಲವತ್ತಾದ ಕೃಷಿ ಭೂಮಿಯನ್ನು, ತಮ್ಮ ಆರೋಗ್ಯವನ್ನು ತ್ಯಾಗ ಮಾಡಿದ ಇಲ್ಲಿನ ಜನರಿಗೆ ಸರ್ಕಾರ ನೀಡಿರುವ ಕೊಡುಗೆಯೆಂದರೆ ಕಾರ್ಮಿಕರನ್ನು ಮನೆಗೆ ಕಳಿಸಿರುವುದು ಎಂದು ಸ್ಥಳೀಯರಾದ ಪ್ರವೀಣ್ ರೆಡ್ಡಿ ಗುಂಜಳ್ಳಿಯವರು ದೂರಿದ್ದಾರೆ.
ಈ ಕುರಿತು ರಾಯಚೂರು ಗ್ರಾಮಾಂತರ ಶಾಸಕರಾದ ಬಸನಗೌಡ ದದ್ದಲ್‌ರವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ ಮತ್ತು ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರವನ್ನು ಸ್ಥಗಿತಗೊಳಿಸಬಾರದು ಎಂದು ಮನವಿ ಮಾಡಿದ್ದಾರೆ.

ಈ ಭಾಗದ ಸಾವಿರಾರು ಜನರು ಕಾರ್ಖಾನೆಗಾಗಿ ತಮ್ಮ ಭೂಮಿ ಕೊಟ್ಟಿದ್ದಾರೆ. ಕಾರ್ಖಾನೆಯ ದೂಳು ಕುಡಿದಿದ್ದಾರೆ. ಈಗ ಇದ್ದಕ್ಕಿದ್ದಂತೆ ಖಾಸಗಿಯವರಿಂದ ವಿದ್ಯುತ್ ಖರೀದಿಸುವ ಮೂಲಕ ಸರ್ಕಾರಿ ಕಾರ್ಖಾನೆಗಳನ್ನು ಮುಚ್ಚಲು ಸರ್ಕಾರ ಹೊರಟಿರುವುದು ಸರಿಯಿಲ್ಲ. ಈ ಕ್ರಮದಿಂದ ಹಿಂದೆ ಸರಿಯದಿದ್ದರೆ ಹೋರಾಟ ಅನಿವಾರ್ಯ ಎಂಬ ಎಚ್ಚರಿಕೆ ನೀಡಿದ್ದಾರೆ.
ಇನ್ನೊಂದು ಕಡೆ ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರವನ್ನು ಸಂಪೂರ್ಣವಾಗಿ ಖಾಸಗಿಯವರಿಗೆ ಒಪ್ಪಿಸಿರುವುದು ಅತ್ಯಂತ ಮೂರ್ಖತನದ ಕೆಲಸವಾಗಿದೆ. ರೈತರ ಕೃಷಿ ಭೂಮಿಯನ್ನು ಪಡೆದುಕೊಂಡು ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ನಿರ್ಮಿಸಿರುವ ವಿದ್ಯುತ್ ಕೇಂದ್ರವನ್ನು ಇಡಿಯಾಗಿ ಪವರ್ ಮ್ಯಾಕ್ ಎನ್ನುವ ಖಾಸಗಿ ಸಂಸ್ಥೆಗೆ ಬಳುವಳಿಯಾಗಿ ನೀಡಿರುವ ಸರ್ಕಾರ ನಾಡಿನ ಜನತೆಗೆ, ಈ ಭಾಗದ ಉದ್ಯೋಗಾಂಕ್ಷಿಗಳಿಗೆ ಮೋಸವೆಸಗಿದೆ ಎಂದು ಪ್ರವೀಣ್ ರೆಡ್ಡಿ ಆರೋಪಿಸಿದ್ದಾರೆ.
ಇದನ್ನೂ ಓದಿ: ವರ್ಷಗಳ ಕಾಲ ವೇತನ ರಹಿತ ರಜೆ: ಸಂಕಷ್ಟದಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳು


