‘ಜೈ ಶ್ರೀರಾಮ್’ ಘೋಷಣೆ ಕೂಗುವಂತೆ ಒತ್ತಾಯಿಸಿ ಮೂವರು ಮುಸ್ಲಿಂ ಮಕ್ಕಳಿಗೆ ಚಪ್ಪಲಿಯಲ್ಲಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಮಧ್ಯ ಪ್ರದೇಶದ ರತ್ಲಂ ಜಿಲ್ಲೆಯಲ್ಲಿ ಪೊಲೀಸರು ಶುಕ್ರವಾರ (ಡಿ.6) ಬಂಧಿಸಿದ್ದಾರೆ.
ರತ್ಲಂ ಜಿಲ್ಲೆಯ ಮನಕ್ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯ ಅಮೃತ ಸಾಗರ್ ತಲಾಬ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಮಕ್ಕಳ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವರದಿಗಳು ಹೇಳಿವೆ.
“ದೌರ್ಜನ್ಯದ ವಿಡಿಯೋ ಸೋರಿಕೆ ಮಾಡಿರುವ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ವಿಡಿಯೋದಲ್ಲಿ ಮಕ್ಕಳಿಗೆ ಥಳಿಸಿರುವ ಆರೋಪಿಯನ್ನು ಬಂಧಿಸಿ ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮಾಂಡ್ ಹೋಮ್‌ಗೆ ಕಳುಹಿಸಲಾಗಿದೆ. ನಮ್ಮ ತಂಡ ಇತರ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದು, ಶೀಘ್ರದಲ್ಲಿ ಅವರನ್ನು ಬಂಧಿಸುತ್ತೇವೆ. ಘಟನೆ ಸಂಬಂಧ ಆರೋಪಿಗಳ ವಿರುದ್ದ ಬಿಎನ್‌ಎಸ್ ಸೆಕ್ಷನ್‌ಗಳಾದ 296, 115(2), 126(2), 351(2), 196, ಮತ್ತು 3(5)ರ ಅಡಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿ ಅಪ್ರಾಪ್ತ ಎಂದು ಮನಕ್ ಪೊಲೀಸ್ ಠಾಣೆಯ ಎಸ್‌ಹೆಚ್‌ಒ ಸುರೇಂದ್ರ ಸಿಂಗ್ ಗಾರ್ಡಿಯಾ ತಿಳಿಸಿದ್ದಾರೆ.
ಹಲ್ಲೆಗೊಳಗಾದ ಮೂವರು ಮಕ್ಕಳು 7, 11 ಮತ್ತು 13 ವರ್ಷ ವಯಸ್ಸಿನವರು. ಅವರು ಕ್ರಮವಾಗಿ 2, 5 ಮತ್ತು 6 ನೇ ತರಗತಿಗಳ ವಿದ್ಯಾರ್ಥಿಗಳು. ಹಲ್ಲೆ ನಡೆಸಿ ಬಂಧಿತನಾಗಿರುವ ಆರೋಪಿಗೆ 17 ವರ್ಷ ವಯಸ್ಸು ಎಂದು ಎಸ್‌ಹೆಚ್‌ಒ ಹೇಳಿದ್ದಾರೆ.
“ನಾನು, ನನ್ನ ಇಬ್ಬರು ಸ್ನೇಹಿತರ ಜೊತೆ ಸುಮಾರು ಒಂದೂವರೆ ತಿಂಗಳ ಹಿಂದೆ ಅಮೃತ್ ಸಾಗರ್ ತಲಾಬ್ ಬಳಿ ವಾಯು ವಿಹಾರಕ್ಕೆ ಹೋಗಿದ್ದೆ. ನಾವು ಅಲ್ಲಿ ಕುಳಿತಿದ್ದಾಗ ನಮ್ಮ ಬಳಿ ಇಬ್ಬರು ಬಂದು ಹೆಸರು ಕೇಳಿದರು. ನಂತರ ಅವರು ನಮ್ಮನ್ನು ನಿಂದಿಸಲು ಪ್ರಾರಂಭಿಸಿದರು ಮತ್ತು ಹಲ್ಲೆ ನಡೆಸಿದರು. ‘ಜೈ ಶ್ರೀ ರಾಮ್’ ಕೂಗುವಂತೆ ಒತ್ತಾಯಿಸಿದರು. ಅವರಲ್ಲಿ ಒಬ್ಬ ನಮ್ಮ ಮೇಲೆ ಹಲ್ಲೆ ನಡೆಸುತ್ತಿರುವಾಗ, ಇನ್ನೋರ್ವ ವಿಡಿಯೋ ಮಾಡಿದ್ದಾರೆ. ನಂತರ ಘಟನೆಯನ್ನು ಯಾರಿಗಾದರೂ ಬಹಿರಂಗಪಡಿಸಿದರೆ ನಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ” ಎಂದು ಹಲ್ಲೆಗೊಳಗಾದ 13 ವರ್ಷದ ಬಾಲಕ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾನೆ.
ವರದಿಗಳ ಪ್ರಕಾರ, ಒಂದು ಸುಮಾರು ಒಂದೂವರೆ ತಿಂಗಳ ಹಿಂದೆ ಘಟನೆ ನಡೆದಿದೆ. ಗುರುವಾರ (ಡಿ.5) ವಿಡಿಯೋ ವೈರಲ್ ಆದ ಬಳಿಕ ವಿಷಯ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ದೂರು ದಾಖಲಿಸಲು ಇಮ್ರಾನ್ ಖೋಖರ್ ಎಂಬ ಸಾಮಾಜಿಕ ಕಾರ್ಯಕರ್ತ ಮಕ್ಕಳ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಇಮ್ರಾನ್, “ಒಂದೂವರೆ ತಿಂಗಳ ಹಿಂದೆ ಘಟನೆ ನಡೆದಿದೆ. ಆರೋಪಿಗಳಲ್ಲಿ ಒಬ್ಬ ಕುಡಿದ ಮತ್ತಿನಲ್ಲಿ ಮನೋರಂಜನೆಗಾಗಿ ತನ್ನ ಮೊಬೈಲ್‌ನಲ್ಲಿದ್ದ ವಿಡಿಯೋ ಸೋರಿಕೆ ಮಾಡಿದ್ದಾನೆ. ಇದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಹಲ್ಲೆಯಿಂದ ಮಕ್ಕಳು ಭಯಬೀತರಾಗಿದ್ದಾರೆ. ಆದ್ದರಿಂದ ಅವರು ಯಾರಲ್ಲೂ ಅ ವಿಷಯ ಹೇಳಿರಲಿಲ್ಲ” ಎಂದು ತಿಳಿಸಿದ್ದಾರೆ.
“ಹಲ್ಲೆಗೊಳಗಾದ ಮೂವರ ಪೈಕಿ 7 ವರ್ಷದ ಬಾಲಕ 10 ತಿಂಗಳ ಹಿಂದೆಯಷ್ಟೇ ಅಪಘಾತದಲ್ಲಿ ತನ್ನ ತಂದೆ-ತಾಯಿಯನ್ನು ಕಳೆದುಕೊಂಡಿದ್ದಾನೆ. ಆತ ತನ್ನ ಅಜ್ಜಿ ಮತ್ತು ಚಿಕ್ಕಮ್ಮನ ಆಶ್ರಯದಲ್ಲಿದ್ದಾನೆ. ಹಲ್ಲೆಯ ವಿಡಿಯೋ ಸೋರಿಕೆಯಾದ ಬಳಿಕ ಬಾಲಕ ಮನೆಯ ಕೊಠಡಿಯಲ್ಲಿ ಬಾಗಿಲು ಹಾಕಿ ಕುಳಿತಿದ್ದ. ನಾವು ಪೊಲೀಸರ ಸಹಾಯದಿಂದ ಬಾಗಿಲು ಒಡೆದು ಆತನನ್ನು ರಕ್ಷಿಸಿದ್ದೇವೆ” ಎಂದು ಇಮ್ರಾನ್ ಹೇಳಿದ್ದಾರೆ.
ಹಲ್ಲೆಗೊಳಗಾದ ಇನ್ನಿಬ್ಬರು ಮಕ್ಕಳ ಪೋಷಕರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, “ನಮ್ಮ ಮಕ್ಕಳು ಕಳೆದ ಒಂದು ತಿಂಗಳಿನಿಂದ ವಿಭಿನ್ನವಾಗಿ ವರ್ತಿಸುತ್ತಿದ್ದರು. ಶಾಲೆಗೆ ಹೋಗುತ್ತಿರಲಿಲ್ಲ. ಹೊರಗಡೆ ಆಟವಾಡಲೂ ಹೋಗುತ್ತಿರಲಿಲ್ಲ. ಯಾರೊಂದಿಗೂ ಸೇರುತ್ತಿರಲಿಲ್ಲ. ಮಾತನಾಡಲು ಭಯಪಡುತ್ತಿದ್ದರು. ಆದರೆ, ನಮಗೆ ಅವರ ಮೇಲೆ ಹಲ್ಲೆ ನಡೆದಿರುವುದು ಗೊತ್ತಿರಲಿಲ್ಲ. ವಿಡಿಯೋ ನೋಡಿದ ಮೇಲೆ ನಮಗೆ ಆಘಾತವಾಯಿತು, ಸಹಿಸಲು ಆಗಲಿಲ್ಲ” ಎಂದಿದ್ದಾರೆ.
ಇದನ್ನೂ ಓದಿ : ಉತ್ತರ ಪ್ರದೇಶ | ಮುಸ್ಲಿಂ ವೈದ್ಯೆಗೆ ಮನೆ ಮಾರಿದ್ದಕ್ಕೆ ಹೌಸಿಂಗ್ ಸೊಸೈಟಿ ನಿವಾಸಿಗಳಿಂದ ಪ್ರತಿಭಟನೆ


