ನಿಷೇಧಿತ ಸಂಘಟನೆಯಾದ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾದ(ಸಿಮಿ) ಸಭೆಗಳನ್ನು ನಡೆಸಿದ ಮತ್ತು ಕರಪತ್ರಗಳನ್ನು ವಿತರಿಸಿದ ಆರೋಪದ ಮೇಲೆ ಎಂಟು ಜನರ ವಿರುದ್ಧ ಪ್ರಕರಣ ದಾಖಲಾಗಿ 18 ವರ್ಷಗಳ ನಂತರ, ನಾಗ್ಪುರದ ನ್ಯಾಯಾಲಯವು ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದೆ ಎಂದು ವರದಿಯಾಗಿದೆ.
ಸಭೆಗಳಲ್ಲಿ ಭಾಗವಹಿಸುವುದು, ಸಂವಹನ, ಪ್ರಚಾರ ಅಥವಾ ಯಾವುದೇ ಆರ್ಥಿಕ ನೆರವು ನೀಡಿದ ಬಗ್ಗೆ ಅವರ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂಬುವುದಾಗಿ ನ್ಯಾಯಾಲಯ ಹೇಳಿದೆ ಎಂದು indianexpress.com ವರದಿ ವಿವರಿಸಿದೆ.
2006ರಲ್ಲಿ ಭಯೋತ್ಪಾದನಾ ವಿರೋಧಿ ಕಾನೂನು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ ಸೇರಿದಂತೆ ಇತರ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದಾಗ 30ರ ಹರೆಯದ ಆಸುಪಾಸಿನವರಾಗಿದ್ದ ಈ 8 ಮಂದಿ ಪುರುಷರನ್ನು, ಆಗಸ್ಟ್ 13ರಂದು ನಾಗ್ಪುರದ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಖುಲಾಸೆಗೊಳಿಸಿದೆ.
ಈ ವ್ಯಕ್ತಿಗಳು ಸಿಮಿ ಜೊತೆ ಭಾಗಿಯಾಗಿರುವ ಬಗ್ಗೆ ಗೌಪ್ಯ ಮಾಹಿತಿ ಸಿಕ್ಕಿದೆ ಎಂದು ಪ್ರಕರಣ ದಾಖಲಿಸಿ ಬಂಧಿಸುವಾಗ ಪೊಲೀಸರು ಹೇಳಿಕೊಂಡಿದ್ದರು.
ಆದರೆ, ವಿಚಾರಣೆಯ ಸಮಯದಲ್ಲಿ, ಗೌಪ್ಯ ಮಾಹಿತಿಯನ್ನು ಸ್ವೀಕರಿಸಲಾಗಿದೆ ಮತ್ತು ಹೆಚ್ಚಿನ ತನಿಖೆಗಾಗಿ ದಾಖಲಿಸಲಾಗಿದೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ದಾಖಲೆಗಳನ್ನು ನೀಡಲು ಪೊಲೀಸರಿಗೆ ಸಾಧ್ಯವಾಗಿಲ್ಲ.
ಪೊಲೀಸರು ಆರೋಪಿಗಳ ನಿವಾಸದಲ್ಲಿ ಅಪರಾಧ ಸಾಬೀತಾದ ವಸ್ತುಗಳು ಪತ್ತೆಯಾಗಿವೆ ಎಂದು ಹೇಳಿಕೊಂಡಿದ್ದರು. ಆದರೆ, ನ್ಯಾಯಾಲಯದ ಮುಂದೆ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ ಎಂದು indianexpress.com ವರದಿ ಹೇಳಿದೆ.
ಪೊಲೀಸರನ್ನು ಹೊರತುಪಡಿಸಿ, ಆರೋಪಿಗಳ ಚಟುವಟಿಕೆಗಳ ಬಗ್ಗೆ ತಿಳಿದಿತ್ತು ಎಂದು ಪೊಲೀಸರು ಹೇಳಿಕೊಂಡಿದ್ದ ಸ್ವತಂತ್ರ ಸಾಕ್ಷಿಗಳು ಸೇರಿದಂತೆ ಇತರ ಸಾಕ್ಷಿಗಳು ಪೊಲೀಸರ ಪ್ರಕರಣವನ್ನು ಬೆಂಬಲಿಸಿಲ್ಲ.
ತಮ್ಮ ವಿರುದ್ಧ ಯಾವುದೇ ಪುರಾವೆಗಳಿಲ್ಲ, ಪೊಲೀಸರ ಆರೋಪಗಳನ್ನು ಸಾಬೀತುಪಡಿಸಲು ಯಾವುದೇ ಸ್ವತಂತ್ರ ಸಾಕ್ಷಿಗಳಿಲ್ಲ ಎಂದು ಪುರುಷರು ಕೂಡ ವಾದಿಸಿದ್ದರು.
ಶಕೀಲ್ ವಾರ್ಸಿ, ಶಾಕಿರ್ ಅಹ್ಮದ್ ನಾಸಿರ್ ಅಹ್ಮದ್, ಮೊಹಮ್ಮದ್ ರೆಹಾನ್ ಅತುಲ್ಲಾಖಾನ್, ಜಿಯಾವುರ್ ರೆಹಮಾನ್ ಮಹೆಬೂಬ್ ಖಾನ್, ವಾಕರ್ ಬೇಗ್ ಯೂಸುಫ್ ಬೇಗ್, ಇಮ್ತಿಯಾಜ್ ಅಹ್ಮದ್ ನಿಸಾರ್ ಅಹ್ಮದ್, ಮೊಹಮ್ಮದ್ ಅಬ್ರಾರ್ ಆರಿಫ್ ಮೊಹಮ್ಮದ್ ಕಾಶಿಮ್ ಮತ್ತು ಶೇಖ್ ಅಹ್ಮದ್ ಶೇಖ್ ಅವರನ್ನು ಯುಎಪಿಎ ಸೆಕ್ಷನ್ 10 ಮತ್ತು 13 ರ ಆರೋಪಗಳಿಂದ ಮುಕ್ತಗೊಳಿಸಲಾಗಿದೆ.
ವಿಚಾರಣೆ ಬಾಕಿ ಇರುವಾಗ ಈ ವ್ಯಕ್ತಿಗಳು ಜಾಮೀನಿನ ಮೇಲೆ ಹೊರಬಂದಿದ್ದರು ಎಂದು indianexpress.com ತಿಳಿಸಿದೆ.
ಇವಿಎಂ ಮತಗಳ ಮರು ಎಣಿಕೆ: ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್


