ಕೋಲ್ಕತಾ: ಪಶ್ಚಿಮ ಬಂಗಾಳ ಸರಕಾರವು ಜಾರಿಗೆ ತಂದಿರುವ “ತರುನೆರ್ ಸ್ವಪ್ನೊ” ( ಯುವಕರ ಕನಸು) ಎಂಬ 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಖರೀದಿಗಾಗಿ ರೂ.10,000 ಒದಗಿಸುವ ಯೋಜನೆಯಾಗಿದೆ. ಇದರಲ್ಲಿ ಸುಮಾರು 16 ಲಕ್ಷ ವಿದ್ಯಾರ್ಥಿಗಳು ಫಲಾನುಭವಿಗಳಾಗಿದ್ದು, ಇದರಲ್ಲಿ 1,911ರಷ್ಟು ವಿದ್ಯಾರ್ಥಿಗಳಿಗೆ ಸುಮಾರು 19 ಕೋಟಿ ಸೈಬರ್ ಕ್ರೈಂ ವಂಚನೆ ನಡೆದ ಘಟನೆ ವರದಿಯಾಗಿದೆ.
ಈ ಸಂಬಂಧ 93 ದೂರುಗಳು ದಾಖಲಾಗಿದ್ದು, 11 ಜನರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಮಹಾರಾಷ್ಟ್ರ, ರಾಜಸ್ಥಾನ ಮತ್ತು ಜಾರ್ಖಾಂಡ್ ಗಳನ್ನೊಳಗೊಂಡಂತೆ ಅಂತರ್ ರಾಜ್ಯ ಗ್ಯಾಂಗ್ ಗಳು ಭಾಗಿಯಾಗಿರುವುದು ಬಹಿರಂಗಗೊಂಡಿದೆ ಎಂದು ದಕ್ಷಿಣ ಬೆಂಗಾಳ ಹೆಚ್ಚವರಿ ಪೊಲೀಸ್ ಮಹಾನಿರ್ದೇಶಕ ಸುಪ್ರಿತಿಂ ಸಾರ್ಕರ್ ಹೇಳಿದ್ದಾರೆ.
ಬಂಧಿತರಲ್ಲಿ ಕೆಲವರು ಸರಕಾರಿ ಸೌಲಭ್ಯಗಳಲ್ಲಿ ಹಣ ವರ್ಗಾವಣೆ ಮಾಡುವ ಡಿಬಿಟಿ ಯೋಜನೆಗಳು ಮತ್ತು ನ್ಯಾಷನಲ್ ಸ್ಕಾಲರ್ ಶಿಪ್ ಪೋರ್ಟಲ್ ಗಳನ್ನು ಒಳಗೊಂಡಂತೆ ಈ ಹಿಂದಿನ ಹಗರಣಗಳಲ್ಲಿ ದುರುಪಯೋಗಪಡಿಸಿಕೊಂಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಸುಪ್ರಿತಿಂ ಸಾರ್ಕರ್ ತಿಳಿಸಿದ್ದಾರೆ.
ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಹಣ ವರ್ಗಾವಣೆ ವಂಚನೆಯ ಸೂತ್ರದಾರರು ಮತ್ತು ಹ್ಯಾಕರ್ ಗಳನ್ನು ಬಂಧಿಸಲು ರಾಜ್ಯಾದ್ಯಂತ ಕೋಲ್ಕತಾ ಪೊಲೀಸ್ ಮತ್ತು ಸಿಐಡಿ ಇಲಾಖೆಗಳು ದಾಳಿಯನ್ನು ನಡೆಸುತ್ತಿವೆ. ಈ ಪ್ರಕರಣದಲ್ಲಿ ಬ್ಯಾಂಕ್ ಅಕೌಂಟ್ ಹೊಂದಿರುವ ಹತ್ತಿರದ ಚೋಪ್ರಾ, ಇಸ್ಲಾಂಪುರ ನಿವಾಸಿಗಳಿಗೆ ಹಣ ವರ್ಗಾವಣೆಯಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಈ ಯೋಜನೆಯಡಿಯಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ಸರಕಾರಿ ಅನುದಾನಿತ ಶಾಲೆಗಳು ಮತ್ತು ಮದ್ರಾಸಗಳ ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳೂ ಕೂಡ ಒಂದು ಬಾರಿಗೆ ಮಾತ್ರ ಅನ್ವಯವಾಗುವ ರೂ. 10,000 ವನ್ನು ಲ್ಯಾಪ್ ಟ್ಯಾಪ್ ಖರೀದಿಗಾಗಿ ಪಡೆಯಬಹುದಾಗಿದೆ. ಸಂಬಂಧಿಸಿದ ಶಾಲೆಗಳು ಸರಕಾರಿ ಪೋರ್ಟಲ್ ನಲ್ಲಿ ಅರ್ಹ ವಿದ್ಯಾರ್ಥಿಗಳ ಬ್ಯಾಂಕ್ ಅಕೌಂಟಿನ ಮಾಹಿತಿಯನ್ನು ರವಾನಿಸುತ್ತವೆ. ನಂತರ ಹಣವು ಫಲಾನುಭವಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆಯಾಗುತ್ತದೆ.
ವಿದ್ಯಾರ್ಥಿಗಳ ಅಂಕಿ-ಅಂಶಗಳನ್ನು ಶಾಲೆಯ ಆಡಳಿತ ವರ್ಗವು ಪೋರ್ಟಲ್ ನಲ್ಲಿ ತಾನು ಉಪಯೋಗಿಸುತ್ತಿರುವ ಐಡಿಯೊಂದಿಗೆ ಲಾಗ್ ಮಾಡುವ ಆಗತ್ಯವಿದೆ. ಪ್ರಾಥಮಿಕ ತನಿಖೆ ಪ್ರಕಾರ ಹ್ಯಾಕರ್ ಗಳು ಈ ವಿದ್ಯಾರ್ಥಿಗಳ ಬ್ಯಾಂಕ್ ಅಕೌಂಟಿಗೆ ತಮ್ಮ ಬ್ಯಾಂಕ್ ಅಕೌಂಟ್ ನಂಬರ್ ಅನ್ನು ಬದಲಾಯಿಸಲು ಯಶಸ್ವಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ….ಝಾನ್ಸಿ ಆಸ್ಪತ್ರೆಯಲ್ಲಿ ಅಗ್ನಿ ಅವಘಡ : 10 ನವಜಾತ ಶಿಶುಗಳು ಸಜೀವ ದಹನ,16 ಗಂಭೀರ


