ಜೈಲಿನಲ್ಲಿರುವ ಬರಾಮುಲ್ಲಾ ಲೋಕಸಭಾ ಕ್ಷೇತ್ರದ ಸಂಸದ ಇಂಜಿನಿಯರ್ ಶೇಖ್ ಅಬ್ದುಲ್ ರಶೀದ್ ಅವರಿಗೆ ಜುಲೈ 5 ರಂದು ಲೋಕಸಭಾ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಮಂಗಳವಾರ (ಜುಲೈ 2) ಎರಡು ಗಂಟೆಗಳ ಕಸ್ಟಡಿ ಪೆರೋಲ್ ನೀಡಿದೆ. ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲು ಅವರು ಮಧ್ಯಂತರ ಜಾಮೀನು ಅಥವಾ ಕಸ್ಟಡಿ ಪೆರೋಲ್ ಕೋರಿದ್ದರು.
ಇಂಜಿನಿಯರ್ ರಶೀದ್ ಎಂದು ಕರೆಯಲ್ಪಡುವ ಕಾಶ್ಮೀರಿ ನಾಯಕ ಶೇಖ್ ಅಬ್ದುಲ್ ರಶೀದ್ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಸೋಮವಾರ ತನ್ನ ಒಪ್ಪಿಗೆ ನೀಡಿದೆ. ಲೋಕಸಭೆ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಿಂದ ಗೆದ್ದಿರುವ ರಶೀದ್ ಅವರ ಮಧ್ಯಂತರ ಜಾಮೀನು ಅರ್ಜಿಯ ಆದೇಶವನ್ನು ಮಂಗಳವಾರಕ್ಕೆ ಕಾಯ್ದಿರಿಸಲಾಗಿತ್ತು.
2017ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಹಣ ನೀಡಿದ ಪ್ರಕರಣದಲ್ಲಿ ಬಂಧಿತರಾಗಿರುವ ರಶೀದ್ ಜೈಲಿನಲ್ಲಿ ಇದ್ದಕೊಂಡೇ ಭಾರೀ ಅಂತದಿಂದ ಗೆಲುವು ಸಾಧಿಸಿದ್ದರು; ಪ್ರಮಾಣ ವಚನ ಸ್ವೀಕರಿಸಲು ಮತ್ತು ಸಂಸತ್ತಿನ ಕಾರ್ಯಗಳನ್ನು ನಿರ್ವಹಿಸಲು ಮಧ್ಯಂತರ ಜಾಮೀನು ಅಥವಾ ಕಸ್ಟಡಿ ಪೆರೋಲ್ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜೂನ್ 22 ರಂದು ವಿಶೇಷ ನ್ಯಾಯಾಲಯವು ಪ್ರಕರಣವನ್ನು ಮುಂದೂಡಿತು. ಪ್ರತಿಕ್ರಿಯೆ ನೀಡುವಂತೆ ಎನ್‌ಐಎಗೆ ಕೇಳಿತ್ತು. ಈ ಪೆರೋಲ್ ಮಾಧ್ಯಮಗಳೊಂದಿಗೆ ಸಂವಹನ ನಡೆಸದಿರುವುದು ಸೇರಿದಂತೆ ಕೆಲವು ಷರತ್ತುಗಳಿಗೆ ಒಳಪಟ್ಟಿರುತ್ತದೆ ಎಂದು ಎನ್ಐಎ ವಕೀಲರು ಹೇಳಿದರು.
ಇಂಜಿನಿಯರ್ ರಶೀದ್ ಯಾರು?
ರಶೀದ್ ಅವರು ಬಾರಾಮುಲ್ಲಾದಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಮತ್ತು ಜೆ-ಕೆ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಅವರನ್ನು ಸೋಲಿಸಿದರು. ಜಮ್ಮು ಮತ್ತು ಕಾಶ್ಮೀರ ಭಯೋತ್ಪಾದನೆ ನಿಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಶೀದ್‌ನನ್ನು ಬಂಧಿಸಲಾಗಿತ್ತು. ಅವರನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧಿಸಲಾಗಿದೆ ಮತ್ತು ಪ್ರಸ್ತುತ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.
ಭಯೋತ್ಪಾದಕ ಗುಂಪುಗಳು ಮತ್ತು ಕಾಶ್ಮೀರಿ ಪ್ರತ್ಯೇಕತಾವಾದಿಗಳಿಗೆ ಹಣಕಾಸು ಒದಗಿಸುವ ಹೊಣೆಗಾರಿಕೆಯಲ್ಲಿ ಎನ್‌ಐಎಯಿಂದ ಬಂಧಿಸಲ್ಪಟ್ಟ ಕಾಶ್ಮೀರಿ ಉದ್ಯಮಿ ಜಹೂರ್ ವಾತಾಲಿ ಅವರ ತನಿಖೆಯ ಸಮಯದಲ್ಲಿ ರಶೀದ್ ಅವರ ಈ ಪ್ರಕರಣವು ಮುನ್ನೆಲೆಗೆ ಬಂದಿತು. ಎನ್‌ಐಎ ತನ್ನ ಚಾರ್ಜ್‌ಶೀಟ್‌ನಲ್ಲಿ ಯಾಸಿನ್ ಮಲಿಕ್, ಲಷ್ಕರ್-ಎ-ತೊಯ್ಬಾ ಸಂಸ್ಥಾಪಕ ಹಫೀಜ್ ಸಯೀದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಸೇರಿದಂತೆ ಹೆಸರುಗಳನ್ನು ಸೇರಿಸಿದೆ.
ರಶೀದ್ ವಿರುದ್ಧ ‘ಭಯೋತ್ಪಾದನೆ ನಿಧಿ’ ಪ್ರಕರಣ
ಇಂಜಿನಿಯರ್ ರಶೀದ್ ಎಂದು ಜನಪ್ರಿಯರಾಗಿರುವ ಶೇಖ್ ಅಬ್ದುಲ್ ರಶೀದ್ 2016 ರಲ್ಲಿ ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ಬಂಧಿತರಾಗಿದ್ದರು. ಅವರನ್ನು ಯುಎಪಿಎ ಕಾನೂನಿನಡಿ ಬಂಧಿಸಲಾಗಿತ್ತು. ಅಂದಿನಿಂದ ಅವರು ತಿಹಾರ್ ಜೈಲಿನಲ್ಲಿ ಬಂಧಿಯಾಗಿದ್ದಾರೆ.
ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಶೀದ್ ಅವರು ಅಬ್ದುಲ್ಲಾ ಅವರನ್ನು 2,04,142 ಮತಗಳ ಅಂತರದಿಂದ ಸೋಲಿಸಿದರು. ರಶೀದ್ 4,72,481 ಮತಗಳನ್ನು ಪಡೆದರೆ, ಅಬ್ದುಲ್ಲಾ 2,68,339 ಮತಗಳನ್ನು ಪಡೆದರು. ಸಜ್ಜದ್ ಗನಿ ಲೋನ್ 1,73,239 ಒಟ್ಟು ಮತಗಳನ್ನು ಪಡೆದು ಎರಡನೇ ರನ್ನರ್ ಅಪ್ ಆಗಿ ಕೊನೆಗೊಂಡರು.
ಇದನ್ನೂ ಓದಿ; ಅಯೋಧ್ಯೆ ಲೋಕಸಭೆ ಗೆಲುವು; ‘ಶಾಯರಿ’ ಮೂಲಕ ಆದಿತ್ಯನಾಥ್ ಕಾಲೆಳೆದ ಅಖಿಲೇಶ್ ಯಾದವ್


