ಅಮೆರಿಕಾ ನೌಕಾಪಡೆ ತನ್ನ ಎರಡು ಪರಮಾಣು ಚಾಲಿತ ವಿಮಾನವಾಹಕ ನೌಕೆಗಳನ್ನು ದಕ್ಷಿಣ ಚೀನಾ ಸಮುದ್ರದಕ್ಕೆ ಮಿತ್ರರಾಷ್ಟ್ರಗಳ ಸಮರಾಭ್ಯಾಸಕ್ಕಾಗಿ ಕಳುಹಿಸಿಕೊಟ್ಟಿದೆ.
ಯುಎಸ್‌ಎಸ್ ನಿಮಿಟ್ಜ್ ಹಾಗೂ ಯುಎಸ್‌ಎಸ್ ರೀಗನ್ ಎಂಬ ಯುದ್ದ ನೌಕೆಗಳು ಪಿಲಿಪೈನ್ಸ್ ಸಮುದ್ರವನ್ನು ಹಾಗೂ ದಕ್ಷಿಣ ಚೀನಾ ಸಮುದ್ರದೊಂದಿಗೆ ಸಂಪರ್ಕಿಸುವ ತೈವಾನ್ ಮತ್ತು ಲುಝೋನ್ ದ್ವೀಪದ ನಡುವಿನ ಜಲಸಂಧಿಯಾದ ಲುಝೋನ್ ಜಲಸಂಧಿಯನ್ನು ದಾಟುತ್ತಿವೆ ಎಂದು ವರದಿಯಾಗಿದೆ.
ಈ ಹಿಂದೆ ಚೀನಾ ಸೈನ್ಯವೂ ಅಲ್ಲಿ ಸಮರಾಭ್ಯಾಸವನ್ನು ಮಾಡಿತ್ತು. ಇದು ನರೆಯ ದೇಶಗಳ ಅಸಮಧಾನಕ್ಕೆ ಗುರಿಯಾಗಿತ್ತು. ಇಂಡೋ ಫೆಸಿಫಿಕನ್ನು ಮುಕ್ತವಾಗಿಡುವ ತನ್ನ ಉದ್ದೇಶಕ್ಕಾಗಿ ಸಮರ ನೌಕೆಗಳನ್ನು ಕಳುಹಿಸಲಾಗಿದೆ ಎಂದು ಅಮೆರಿಕಾ ನೌಕಾಪಡೆ ಹೇಳಿದೆ.
“ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಗೆ ನಾವು ಬದ್ಧರಾಗಿದ್ದೇವೆ ಎಂದು ನಮ್ಮ ಪಾಲುದಾರರು ಮತ್ತು ಮಿತ್ರರಿಗೆ ನಿಸ್ಸಂದಿಗ್ಧವಾದ ಸಂಕೇತವನ್ನು ತೋರಿಸುವುದು ಇದರ ಉದ್ದೇಶ” ಎಂದು ಯುಎಸ್ಎಸ್ ರೊನಾಲ್ಡ್ ರೇಗನ್ ನೇತೃತ್ವದ ಸ್ಟ್ರೈಕ್ ಗ್ರೂಪ್ ಕಮಾಂಡರ್ ರಿಯರ್ ಅಡ್ಮಿರಲ್ ಜಾರ್ಜ್ ಎಂ ವಿಕಾಫ್ ಹೇಳಿದ್ದಾರೆ.
ದಕ್ಷಿಣ ಚೀನಾ ಸಮುದ್ರದ 90% ನಷ್ಟು ಭಾಗವನ್ನು ಚೀನಾ ತನ್ನೆಂದು ಹೇಳಿಕೊಂಡಿದೆ, ಇದರ ಮೂಲಕ ಪ್ರತಿವರ್ಷ ಸುಮಾರು 3 ಟ್ರಿಲಿಯನ್ ವ್ಯಾಪಾರವು ಹಾದುಹೋಗುತ್ತದೆ. ಕಳೆದ ಒಂದು ದಶಕದಿಂದ ಚೀನಾ ಇಲ್ಲಿನ ಹಲವಾರು ಪ್ರದೇಶದಲ್ಲಿ ಮಾನವ ನಿರ್ಮಿತ ದ್ವೀಪಗಳನ್ನು ನಿರ್ಮಿಸಿ ಮಿಲಿಟರಿ ವಾಯುನೆಲೆಗಳು ಸೇರಿದಂತೆ ಸೇನಾ ನೆಲೆಗಳನ್ನು ಸ್ಥಾಪಿಸಲು ಮುಂದಾಗಿದೆ.
ಬ್ರೂನಿ, ಮಲೇಷ್ಯಾ, ಫಿಲಿಪೈನ್ಸ್, ತೈವಾನ್ ಮತ್ತು ವಿಯೆಟ್ನಾಂ ಕೂಡ ದಕ್ಷಿಣ ಚೀನಾ ಸಮುದ್ರದ ಕೆಲವು ಭಾಗಗಳಿಗೆ ತಮ್ಮದೆಂದು ವಾದಿಸುತ್ತಿದೆ.
ಓದಿ: ಚೀನಾವನ್ನು ಎದುರಿಸಲು ಯುರೋಪಿನಲ್ಲಿರುವ ತನ್ನ ಸೈನ್ಯವನ್ನು ಕಡಿಮೆ ಮಾಡುತ್ತಿದ್ದೇವೆಂದ ಅಮೆರಿಕಾ


