ರಾಜ್ಯದ ಬೆಳಗಾವಿ ಜಿಲ್ಲೆಗೆ ಬಂಧಿತ ಕಾರ್ಮಿಕರಾಗಿ ಕರೆತರಲಾದ ಆದಿವಾಸಿ ಸಮುದಾಯಗಳ 20 ವಲಸೆ ಕಾರ್ಮಿಕರಲ್ಲಿ ಒಂಬತ್ತು ಮಕ್ಕಳು ಕೂಡಾ ಇದ್ದಾರೆ ಎಂದು, ವಿವಿಧ ನಾಗರಿಕ ಹಕ್ಕು ಸಂಸ್ಥೆಗಳ ನಾಲ್ಕು ಸದಸ್ಯರ ಸಮಿತಿಯು ಸತ್ಯಶೋಧನಾ ವರದಿಯು ಹೇಳಿದೆ.
ವರದಿಯ ಪ್ರಕಾರ, ಮಧ್ಯಪ್ರದೇಶದ ಆದಿವಾಸಿ ಸಮುದಾಯಗಳಿಗೆ ಸೇರಿದ 20 ಕಾರ್ಮಿಕರನ್ನು ಬೆಳಗಾವಿಯ ಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡಲು ರಾಜ್ಯಕ್ಕೆ ಕರೆತರಲಾಗಿತ್ತು.
ಗುತ್ತಿಗೆದಾರರು ಕಾರ್ಮಿಕರನ್ನು ಕರೆತರುವಾಗ ಪ್ರತಿ ವ್ಯಕ್ತಿಗೆ 20,000 ರೂ.ಗಳನ್ನು ಮುಂಗಡವಾಗಿ ನೀಡಿದ್ದರು. ಈ ಹಣವನ್ನು ಕಾರ್ಮಿಕರು ದುಡಿದು ಮರುಪಾವತಿಸಬೇಕಾಗಿತ್ತು. ಗುತ್ತಿಗೆದಾರರು ಕಾರ್ಮಿಕರಿಗೆ ಹೆಚ್ಚಿನ ವೇತನ ಮತ್ತು ಮೂರು ತಿಂಗಳೊಳಗೆ ಊರಿಗೆ ಹಿಂದಿರುಗಬಹುದು ಎಂದು ಭರವಸೆ ನೀಡಿದ್ದರು.
ಇದನ್ನೂ ಓದಿ: ಸಂಘ ಕಟ್ಟಿ ಹಕ್ಕು ಕೇಳಿದ್ದಕ್ಕೆ ಕೆಲಸದಿಂದ ವಜಾ: ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ ಕಾರ್ಮಿಕರು
ಆದರೆ ಕೂಲಿ ಕಾರ್ಮಿಕರಿಗೆ ಅವರು ದುಡಿಯುತ್ತಿರುವ ಜಮೀನಿನ ರೈತರು ನಿತ್ಯ 25ರಿಂದ 30 ರೂ.ವರೆಗೆ ಕೂಲಿ ಮಾತ್ರ ನೀಡುತ್ತಿದ್ದು, ಕಾರ್ಮಿಕರನ್ನು ಕರೆದುಕೊಂಡು ಬಂದ ಗುತ್ತಿಗೆದಾರ ಯಾವುದೆ ಹಣ ನೀಡಿಲ್ಲ. ಇದರ ಮೇಲೆಯೂ, ಕಾರ್ಮಿಕರು ಎರಡೂವರೆ ತಿಂಗಳಿನಿಂದ ಸಂಬಳವಿಲ್ಲದೆ ದುಡಿದಿದ್ದಾರೆ. ನಂತರ ಗುತ್ತಿಗೆದಾರರಲ್ಲಿ ಕೂಲಿ ವಿಚಾರಿಸಿದಾಗ 2 ಲಕ್ಷ ರೂ. ಸಾಲದ ಬಗ್ಗೆ ಹೇಳಿದ್ದು, ಈ ಸಾಲ ಮನ್ನಾ ಮಾಡಿದ ನಂತರವೇ ತೆರಳಬಹುದು ಎಂದು ತಿಳಿಸಿದ್ದರು ಎಂದು ವರದಿ ಹೇಳಿದೆ.
“ಬೆಳಗಾವಿಗೆ ಕರೆತರುವ ಮೊದಲು, ಕಾರ್ಮಿಕರಿಗೆ ಪಾವತಿಸಬೇಕಾದ ವೇತನದ ದರ, ಮರುಪಾವತಿಯ ವಿವರಗಳು ಅಥವಾ ಅವರಿಗೆ ನೀಡಿದ ಮುಂಗಡ ಹಣದ ಬಡ್ಡಿಯ ಮಾಹಿತಿಯ ಬಗ್ಗೆ ತಿಳಿಸಲಾಗಿಲ್ಲ ಎಂದು ಕಾರ್ಮಿಕರು ಹೇಳಿದ್ದಾರೆ” ಎಂದು ವರದಿ ಹೇಳಿದೆ.
ವರದಿಯ ಪ್ರಕಾರ, ಒಂಬತ್ತು ಮಕ್ಕಳು ಸೇರಿದಂತೆ ಕಾರ್ಮಿಕರನ್ನು ದಿನಕ್ಕೆ 15 ಗಂಟೆಗಳ ಕಾಲ ದುಡಿಯುವಂತೆ ಮಾಡಲಾಗುತ್ತಿತ್ತು ಮತ್ತು ಹೊಲದ ಬಳಿಯ ಟಾರ್ಪಾಲಿನ್ ಗುಡಿಸಲುಗಳಲ್ಲಿ ವಾಸಿಸುವಂತೆ ಮಾಡಲಾಗಿತ್ತು. ಘಟನಾ ಸ್ಥಳವನ್ನು ಪರಿಶೀಲಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ಥಳದಲ್ಲಿ ಬಾಲ ಕಾರ್ಮಿಕರು ಇಲ್ಲ ಮತ್ತು ಕಾರ್ಮಿಕರನ್ನು ಬಂಧನದಲ್ಲಿ ಇಡಲಾಗಿಲ್ಲ ಎಂದು ವರದಿ ಮಾಡಿದ್ದಾರೆ ಎಂದು ಮಾನವ ಹಕ್ಕುಗಳ ಸತ್ಯಶೋದನಾ ಸಮಿತಿಯ ವರದಿ ಆರೋಪಿಸಿದೆ.
ಸತ್ಯಶೋಧನಾ ವರದಿಯನ್ನು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ – ಕರ್ನಾಟಕ, ಅಖಿಲ ಭಾರತ ನ್ಯಾಯವಾದಿಗಳ ಸಂಘ ಮತ್ತು ಅಖಿಲ ಭಾರತ ವಿದ್ಯಾರ್ಥಿಗಳ ಸಂಘಕ್ಕೆ ಸೇರಿದ ನಾಲ್ವರು ಸದಸ್ಯರು ಸಿದ್ಧಪಡಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ಕಾರ್ಖಾನೆಯಲ್ಲಿ ಅಮೋನಿಯಂ ಸೋರಿಕೆ; 26 ಕಾರ್ಮಿಕರು ಆಸ್ಪತ್ರೆಗೆ ದಾಖಲು


