Homeಅಂಕಣಗಳು2019ರ ಚುನಾವಣೆಯೀಗ ಅಸಮ ಮೈದಾನದಲ್ಲಿ ನಡೆಯುವುದಿಲ್ಲ

2019ರ ಚುನಾವಣೆಯೀಗ ಅಸಮ ಮೈದಾನದಲ್ಲಿ ನಡೆಯುವುದಿಲ್ಲ

- Advertisement -
- Advertisement -

ಯೋಗೇಂದ್ರ ಯಾದವ್ |

ಇದನ್ನು ರಾಜಕೀಯ ವಿಜ್ಞಾನಿಗಳು ಚುನಾವಣಾ ಪ್ರಜಾತಂತ್ರದ ‘ಸ್ವಯಂ ಸುಧಾರಣೆಯ ಮೆಕ್ಯಾನಿಸಂ’ ಎಂದು ಕರೆಯುತ್ತಾರೆ. ಮಾರುಕಟ್ಟೆ ಆರ್ಥಿಕತೆಯ ವಿಕೃತಿಗಳನ್ನು ಸರಿಪಡಿಸುವ ಆದಂ ಸ್ಮಿತ್‍ರ ಪ್ರಖ್ಯಾತ ನಿಗೂಢ ಹಸ್ತದ ರೀತಿಯಲ್ಲೇ, ಸ್ಪರ್ಧಾತ್ಮಕ ಚುನಾವಣೆಗಳು ರಾಜಕೀಯ ವ್ಯವಸ್ಥೆಗಳ ಅತಿರೇಕಗಳನ್ನು ಸರಿ ಮಾಡಬೇಕು. 2018ರ ವಿಧಾನಸಭಾ ಚುನಾವಣೆಗಳು ಮಾಡಿರುವುದು ಇದನ್ನೇ. ಸರ್ವೋಚ್ಚ ನಾಯಕನೊಬ್ಬನ ಕದಲಿಸಲಾಗದ ಶಕ್ತಿಗೆ ಎಲ್ಲಾ ಸಂಸ್ಥೆಗಳು, ನಿಯಮಗಳು ಮತ್ತು ಸಾಂವಿಧಾನಿಕ ಸ್ವಾತಂತ್ರ್ಯಗಳನ್ನು ಅಡವಿಡುವ ಸಂಸದೀಯ ಸರ್ವಾಧಿಕಾರದತ್ತ ದೇಶ ಸಾಗುತ್ತಿರುವಾಗ, ಸ್ವಯಂಚಾಲಿತ ಬ್ರೇಕ್‍ಗಳು ಚುರುಕುಗೊಂಡಿವೆ. ಇದ್ದಕ್ಕಿದ್ದ ಹಾಗೆ, 2019ರ ಚುನಾವಣೆಯು ಯಾರೂ ಗೆಲ್ಲಬಹುದಾದ ಸ್ಪರ್ಧೆಯಾಗಿಬಿಟ್ಟಿದೆ.
ಮೊಟ್ಟಮೊದಲನೆಯದಾಗಿ, ಈ ಫಲಿತಾಂಶವು ಜನರು ಮತಚಲಾಯಿಸುವ ಅಸಲೀ ಅಜೆಂಡಾ ಯಾವುದೆಂಬುದನ್ನು ಒತ್ತಿ ಹೇಳಿದೆ. ಕೃಷಿ ಬಿಕ್ಕಟ್ಟು ಮತ್ತು ಗ್ರಾಮೀಣ ಸಂಕಷ್ಟವು ನಿಜವೆಂಬುದನ್ನು ಇದು ಸಾಬೀತುಪಡಿಸಿದೆ. ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸುವ ಅಂತಿಮ ಸಮೀಕರಣ ಯಾವುದೆಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಛತ್ತೀಸ್‍ಗಢ, ರಾಜಸ್ತಾನ ಮತ್ತು ಮಧ್ಯಪ್ರದೇಶಗಳಲ್ಲಿ ಬಿಜೆಪಿಯ ವಿರುದ್ಧದ ಸ್ಪಷ್ಟ ಅಲೆ ಕಂಡಿದೆ. ಮಧ್ಯಪ್ರದೇಶದ ಮಾಲ್ವಾ, ಪೂರ್ವ ರಾಜಸ್ತಾನ ಮತ್ತು ಕೇಂದ್ರ ಛತ್ತೀಸ್‍ಗಡದಲ್ಲಿ ಬಿಜೆಪಿಯ ಸೋಲುಗಳು ಗುಜರಾತ್‍ನಂತೆಯೇ ರೈತರ ಸಿಟ್ಟು ಬಿಜೆಪಿಯ ವಿರುದ್ಧ ಕೆಲಸ ಮಾಡಿರುವುದನ್ನು ತೋರುತ್ತಿವೆ. ಟ್ರೆಂಡ್ ಏನಿದೆ ಎಂಬುದನ್ನು ಗ್ರಹಿಸುವ ಫಲಿತಾಂಶದ ಸಾಮಾಜಿಕ ಸಂಗತಿಗಳು, ಬಿಜೆಪಿಯ ನಷ್ಟವು ಗ್ರಾಮೀಣ ಭಾಗದಲ್ಲೇ ಸಾಪೇಕ್ಷವಾಗಿ ಹೆಚ್ಚಿದೆ ಎಂಬುದನ್ನು ಕಾಣಿಸಿವೆ. ನಿರುದ್ಯೋಗಿ ಯುವಜನರೂ ಆಡಳಿತ ಪಕ್ಷದ ವಿರುದ್ಧ ಮತ ಚಲಾಯಿಸಿರುವುದನ್ನು ತೋರಿವೆ. ಎಲ್ಲಾ ಚುನಾವಣಾಪೂರ್ವ ಸಮೀಕ್ಷೆಗಳು ಉದ್ಯೋಗದ ಇಶ್ಯೂ ಚುನಾವಣೆಯ ಪ್ರಮುಖ ಅಂಶವನ್ನಾಗಿರುವುದನ್ನು ಗುರುತಿಸಿದ್ದವು. ಯೋಗಿ ಆದಿತ್ಯನಾಥರ ಆಕ್ರಮಣಕಾರಿ ಪ್ರಚಾರದ ಹೊರತಾಗಿಯೂ ಮಂದಿರವು ಒಂದು ಇಶ್ಯೂವಾಗಿ ಮುನ್ನೆಲೆಗೆ ಬಂದಿಲ್ಲವೆಂಬುದನ್ನೂ ಫಲಿತಾಂಶವು ಖಚಿತಪಡಿಸಿದೆ. ದೇಶದ ಉಳಿದ ಭಾಗಗಳ ಬಗ್ಗೆ ಇದೇ ಮಾತನ್ನು ಈಗಲೇ ಹೇಳುವುದು ಸಾಧ್ಯವಿಲ್ಲವಾದರೂ ಹಿಂದಿ ಪ್ರದೇಶದ 2019ರ ಚುನಾವಣಾ ವಿಷಯವು ಇದಾಗಿರುತ್ತದೆ: ಹಿಂದೂ ಮುಸಲ್ಮಾನ್ ಅಲ್ಲ ಕಿಸಾನ್ (ರೈತ) ಮತ್ತು ಜವಾನ್ (ಯುವಜನತೆ).
ಫಲಿತಾಂಶವು ಇನ್ನೂ ಒಂದು ಪ್ರಜಾತಾಂತ್ರಿಕ ಸಂದೇಶವನ್ನು ಕಳಿಸಿದೆ. ಹಣ ಮತ್ತು ಮಾಧ್ಯಮಗಳು ಚುನಾವಣಾ ಗೆಲುವಿಗೆ ಅಗತ್ಯ, ಆದರೆ ಅವಷ್ಟೇ ಸಾಲದು. ಬಿಜೆಪಿಯು ಅದರ ಎದುರಾಳಿಗಿಂತ 10:1ರ ಅನುಪಾತದಲ್ಲಿ ಹಣ ವ್ಯಯಿಸಿರುವುದು ರಹಸ್ಯವೇನಲ್ಲ. ನಿಗೂಢವಾದ ಆದರೆ ಕಾನೂನುಬದ್ಧ ಮಾರ್ಗವಾದ ಚುನಾವಣಾ ಬಾಂಡ್‍ಗಳ ಮೂಲಕ ಒಟ್ಟು ಚುನಾವಣಾ ವಂತಿಗೆಯ ಶೇ.95ರಷ್ಟನ್ನು ಬಿಜೆಪಿಯೊಂದೇ ಪಡೆದುಕೊಂಡಿತ್ತು. ಮಾಧ್ಯಮಗಳ ಬಗ್ಗೆ ಎಷ್ಟು ಕಡಿಮೆ ಮಾತಾಡಿದರೆ ಅಷ್ಟು ಒಳ್ಳೆಯದು. ಆದರೆ ಇಷ್ಟನ್ನಂತೂ ಹೇಳಬೇಕು: ‘ಸ್ವತಂತ್ರ’ ಮಾಧ್ಯಮದ ಅತೀ ದೊಡ್ಡ ವಿಭಾಗವು ಆಡಳಿತ ಪಕ್ಷದ ಮುಖವಾಣಿಯಾಗಿ ಬದಲಾಗಿದೆಯೆಂಬುದು ಭಾರತದ ಪ್ರಜಾತಂತ್ರದ ಚರಿತ್ರೆಯ ಅತ್ಯಂತ ನಾಚಿಕೆಗೇಡು ಅಧ್ಯಾಯವಾಗಿ ಉಳಿಯಲಿದೆ. ಇದರ ಜೊತೆಗೆ ಎದುರಾಳಿ ಪಕ್ಷಗಳನ್ನು ದುರ್ಬಲಗೊಳಿಸುವ ಬಂಡಾಯ ಅಭ್ಯರ್ಥಿಗಳು ಮತ್ತು ಪಕ್ಷಗಳಿಗೆ ಬಿಜೆಪಿಯು ಹಣದ ಹೊಳೆಯನ್ನೇ ಹರಿಸಿದ್ದೂ ಎಲ್ಲರಿಗೆ ಗೊತ್ತಿರುವ ಸತ್ಯ. ಇವೆಲ್ಲವೂ ತೆಲಂಗಾಣದಲ್ಲಿ ಟಿಆರ್‍ಎಸ್‍ಗೆ ಸಹಾಯ ಮಾಡಿದಂತೆಯೇ ಬಿಜೆಪಿಗೂ ಸಹಾಯ ಮಾಡಿವೆ. ಆದರೆ, ಬಿಜೆಪಿಯ ಸೋಲು ನಮಗೆ ಮತ್ತೊಮ್ಮೆ ನೆನಪಿಸುವುದೇನೆಂದರೆ, ನೀವು ಅಸಲೀ ಮತದಾರರ ಅಸಲೀ ಇಶ್ಯೂಗಳೊಂದಿಗೆ ಜೀವಂತ ಸಂಬಂಧವಿಟ್ಟುಕೊಂಡಿರಬೇಕು.
ಮೂರನೆಯದಾಗಿ ಚುನಾವಣೆಗಳು ತೋರಿಸುತ್ತಿರುವುದೇನೆಂದರೆ ವ್ಯಕ್ತಿ ಆರಾಧನೆಗೂ ಒಂದು ಮಿತಿಯಿರುತ್ತದೆ. ಆದರೆ, ಮೋದಿಯುಗ ಮುಗಿದಿದೆ ಎಂದು ಹೇಳುವುದು ತಪ್ಪಾದೀತು. ಎಲ್ಲಾ ಸಮೀಕ್ಷೆಗಳು ತೋರುತ್ತಿರುವುದೇನೆಂದರೆ ಮೋದಿ ಈಗಲೂ ಅತ್ಯಂತ ಜನಪ್ರಿಯ ನಾಯಕ ಮತ್ತು ರಾಹುಲ್‍ಗಾಂಧಿಗಿಂತಲೂ ಮತ್ತು ತನ್ನದೇ ಪಕ್ಷಕ್ಕಿಂತಲೂ ಹೆಚ್ಚು ಜನಪ್ರಿಯ ವ್ಯಕ್ತಿ. ಆದರೆ, ಇಷ್ಟು ಹೇಳುವುದು ಸಾಧ್ಯ. ಮೋದಿ ತನ್ನ ಆಡಳಿತದ ಮೊದಲೆರಡು ವರ್ಷಗಳಲ್ಲಿ ಮಾಡಿದಂತೆ ಯಾವುದೇ ಚುನಾವಣೆಯನ್ನು ಹೇಗೆ ಬೇಕಾದರೂ ತಿರುಗಿಸುವುದು ಇನ್ನು ಮುಂದೆ ಸಾಧ್ಯವಿಲ್ಲ. ಅವರ ಮಾಂತ್ರಿಕ ಇನ್ನಿಂಗ್ಸ್ ಮುಗಿದಿದೆ; ಈಗವರು ಆರ್ಥಿಕತೆಯ ಕುರಿತು, ದ್ವೇಷದ ವಾತಾವರಣದ ಕುರಿತು, ಸಂಸ್ಥೆಗಳ ನಾಶದ ಕುರಿತು ಮತ್ತು ರಾಫೇಲ್‍ನ ಕುರಿತಂತೆ ಕಠಿಣ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಕಾಂಗ್ರೆಸ್‍ನ ಅತ್ಯಂತ ದೊಡ್ಡ ಗೆಲುವು ಎಲ್ಲಿಂದ ಬಂತೆಂದು ನೋಡಿ, ವ್ಯಕ್ತಿ ಆರಾಧನೆಯಿರಲಿ ಸರಿಯಾಗಿ ಒಬ್ಬ ದೊಡ್ಡ ನಾಯಕನೂ ಇಲ್ಲದಿದ್ದ ಛತ್ತೀಸ್‍ಗಢದಿಂದ ಅದು ಬಂದಿದೆ.
ಈ ಫಲಿತಾಂಶವು ಆಡಳಿತ ಕೂಟದಲ್ಲಿದ್ದ ದುರಹಂಕಾರಕ್ಕೆ ಪೆಟ್ಟು ಕೊಟ್ಟಿರುವಂತೆಯೇ, ವಿರೋಧಿ ಕೂಟದಲ್ಲಿರುವ ಅಲ್ಪತೃಪ್ತಿಗೂ ಮದ್ದು ನೀಡಿದೆ. ರಾಜಸ್ತಾನದಲ್ಲಿ ನಿರೀಕ್ಷಿಸಲಾಗಿದ್ದ ದೊಡ್ಡ ಗೆಲುವನ್ನು ಪಡೆಯಲಾಗದ್ದು ಮತ್ತು ಮಧ್ಯಪ್ರದೇಶದಲ್ಲಿ ಬಹುಮತ ಸಿಗದಿರುವುದು ಕಾಂಗ್ರೆಸ್ ಸುಮ್ಮನೇ ಕುಳಿತು ಮೋದಿಯ ಆಡಳಿತವು ತನ್ನಂತೆ ತಾನೇ ಕರಗಲಿ ಎಂದು ಬಯಸಲಾಗುವುದಿಲ್ಲವೆಂಬುದು ಸ್ಪಷ್ಟ. ವಸುಂಧರಾ ರಾಜೇ ಸರ್ಕಾರದ ವಿರುದ್ಧ ವ್ಯಕ್ತವಾಗುತ್ತಿದ್ದ ಆಕ್ರೋಶ ಮತ್ತು ಶಿವರಾಜ್ ಚೌಹಾಣ್‍ರ ಆಡಳಿತದಲ್ಲಿದ್ದ ಜನರ ವ್ಯಾಪಕ ಸಂಕಷ್ಟವನ್ನು ಕಾಂಗ್ರೆಸ್ ತನ್ನ ಗೆಲುವಾಗಿ ಪರಿವರ್ತಿಸಲಾಗಲಿಲ್ಲವೆಂಬುದು, ಆ ಪಕ್ಷದೊಳಗೆ ಇರುವ ಗಂಭೀರ ಸಮಸ್ಯೆಯನ್ನು ಎತ್ತಿ ತೋರುತ್ತದೆ. ಕಳೆದ ಐದು ವರ್ಷಗಳಿಂದ ವಿಪಕ್ಷದಲ್ಲಿರುವ ಕಾಂಗ್ರೆಸ್ಸು, ಆ ಪಾತ್ರಕ್ಕೆ ತಕ್ಕಂತೆ ಬೀದಿಯಲ್ಲಿ ಪ್ರತಿಭಟಿಸಿದ್ದು ಎಲ್ಲೂ ಕಾಣಲಿಲ್ಲ. ಛತ್ತೀಸ್‍ಗಢದಲ್ಲಿ ಇದು ಭಿನ್ನವಾಗಿತ್ತು; ಅಲ್ಲಿನ ನಾಯಕತ್ವವು ತಳಮಟ್ಟದ ಚಳವಳಿ ಮತ್ತು ಪ್ರತಿಭಟನೆಗಳನ್ನು ಕಳೆದೈದು ವರ್ಷಗಳಲ್ಲಿ ನಡೆಸುತ್ತಾ ಕ್ರಿಯಾಶೀಲವಾಗಿತ್ತು.
ಕಡೆಯದಾಗಿ, ಚುನಾವಣಾ ಫಲಿತಾಂಶವು ಚುನಾವಣಾ ಅಂಕಗಣಿತಕ್ಕಿರುವ ಮಿತಿಯನ್ನೂ ತೋರಿಸಿದೆ. ಕಾಗದದ ಮೇಲೆ ಬಲಿಷ್ಠವಾಗಿದ್ದ ಮೈತ್ರಿಯನ್ನು ಕಾಂಗ್ರೆಸ್ಸು ತೆಲಂಗಾಣದಲ್ಲಿ ಮಾಡಿಕೊಂಡಿತ್ತು. ಲೆಕ್ಕ ಹಾಕಿ ನೋಡಿದರೆ, ಕಾಂಗ್ರೆಸ್-ಟಿಡಿಪಿ-ಸಿಪಿಐ-ಟಿಜೆಎಸ್‍ನ ಸಂಯುಕ್ತ ಶಕ್ತಿಯು ಟಿಆರ್‍ಎಸ್‍ಗಿಂತ ಎಷ್ಟೋ ಹೆಚ್ಚಿನದ್ದಾಗಿತ್ತು. ಆದರೆ, ತೆಲಂಗಾಣದ ಹುಟ್ಟಿಗೇ ವಿರುದ್ಧವಾಗಿದ್ದ ಪಕ್ಷದೊಂದಿಗಿನ ಅಪಕ್ವ ಮೈತ್ರಿಯು ಜನರಿಂದ ತಿರಸ್ಕರಿಸಲ್ಪಟ್ಟಿತು. ಛತ್ತೀಸ್‍ಗಢದಲ್ಲೂ ಅಜಿತ್ ಜೋಗಿ-ಬಿಎಸ್‍ಪಿ ಕೂಟವು ಕಾಂಗ್ರೆಸ್‍ಅನ್ನು ಬೀಳಿಸಬೇಕಿತ್ತು. ಆದರೆ, ಛತ್ತೀಸ್‍ಗಡದ ಜನರು ರಾಜ್ಯ ರಾಜಕಾರಣದ ಅತ್ಯಂತ ಸಂಶಯಾಸ್ಪದ ದಲ್ಲಾಳಿಯನ್ನು ತಿರಸ್ಕರಿಸಿದರು. 2019ಕ್ಕೆ ಮಹಾಘಟಬಂಧನ ಮಾಡುವ ಪ್ರಯತ್ನದಲ್ಲಿರುವ ತೀವ್ರ ಸಮಸ್ಯೆಯ ಬಗ್ಗೆ ಇದು ಬೆಳಕು ಚೆಲ್ಲುತ್ತದೆ. ಮೈತ್ರಿಗಳು ಅಗತ್ಯ, ಆದರೆ ಅವು ವಿಶ್ವಾಸಾರ್ಹತೆಗೆ ಬದಲಿಯಾಗಿ ಕೆಲಸಕ್ಕೆ ಬರುವುದಿಲ್ಲ. ಚುನಾವಣೆಗಳೆಂದರೆ ನೀವು ಕನಸನ್ನು ಬಿತ್ತಬೇಕು, ಭರವಸೆ ಹುಟ್ಟಿಸಬೇಕು, ಕಥನವನ್ನು ಕಟ್ಟಬೇಕು. ಈಗ ಹುಟ್ಟಿಕೊಳ್ಳುತ್ತಿರುವ ಮೋದಿ-ವಿರೋಧಿ ಕೂಟದಲ್ಲಿ ಅದಿನ್ನೂ ರೂಪುಗೊಂಡಿಲ್ಲ.
2019ರ ದಾರಿಯಲ್ಲಿ ಬಿಜೆಪಿಯು ಐದು ಘೋಷಣೆಗಳೊಂದಿಗೆ ಹೊರಟಿದೆ: ಅದರ ಭಾರೀ ಯಂತ್ರಾಂಗ, ಮೋದಿ, ಮಂದಿರ, ಮಾಧ್ಯಮ ಮತ್ತು ಹಣ (Machinery, Modi, Mandir, Media, Money). ಈ ವಿಧಾನಸಭಾ ಚುನಾವಣೆಗಳು ಮೊದಲ ಮೂರನ್ನು ಸರಿ ಮಾಡಿಕೊಳ್ಳಲು ಸೂಚಿಸುತ್ತವೆ. ಬಿಜೆಪಿಯ ಸಂಘಟನಾತ್ಮಕ ಶಕ್ತಿಯು ಅಜೇಯವಲ್ಲದಿದ್ದರೂ, ಮಣಿಸುವುದು ಸುಲಭವಲ್ಲ. ಮೋದಿಯನ್ನು ತಳ್ಳಿ ಹಾಕುವುದು ಸಾಧ್ಯವಿಲ್ಲ, ಆದರೆ ಜನಪ್ರಿಯತೆ ನಿಸ್ಸಂದೇಹವಾಗಿ ಕಡಿಮೆಯಾಗಿದೆ. ಮಂದಿರವು ನಿಷ್ಠಾವಂತರಲ್ಲಿ ಉತ್ಸಾಹ ಮೂಡಿಸುತ್ತದಾದರೂ, ಮತದಾರರನ್ನು ಸೆಳೆಯಲಾಗದು. ಬದಲಿಗೆ ಉಳಿದೆರಡನ್ನೂ ಅದು ಬದಲಿಸಬಲ್ಲದು. ಮಾಧ್ಯಮ ದೊರೆಗಳು ಅವರ ಇದುವರೆಗಿನ ರೀತಿಯ ಕುರಿತು ಪುನರಾಲೋಚಿಸುತ್ತಾರೆ. ಕನಿಷ್ಠ ಇವತ್ತಿರುವ ರೀತಿಯ ಆಡಳಿತದ ಪರ ತುತ್ತೂರಿಯು ಸ್ವಲ್ಪವಾದರೂ ಕಡಿಮೆಯಾಗುತ್ತದೆಂದು ಆಶಿಸಬಹುದು. ಹಾಗೆಯೇ ದೊಡ್ಡ ಉದ್ದಿಮೆದಾರರು ತಮ್ಮೆಲ್ಲಾ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಹಾಕಲು ಬಯಸುವುದಿಲ್ಲ. ಚುನಾವಣಾ ರಂಗದಲ್ಲಿ ಉಳಿಯಲು ಬೇಕಾದ ಸಂಪನ್ಮೂಲವನ್ನು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳೂ ಪಡೆದುಕೊಳ್ಳಲು ಆರಂಭವಾಗುತ್ತದೆ. ಅಷ್ಟು ಅಸಮಾನವಲ್ಲದ ಮೈದಾನದಲ್ಲಿ 2019ರ ಲೋಕಸಭಾ ಚುನಾವಣೆಯ ಸಂಗ್ರಾಮ ನಡೆಯಲಿದೆ. ಪ್ರಜಾತಂತ್ರಕ್ಕೆ ಅಗತ್ಯವಿದ್ದ ತಿದ್ದುಪಡಿಯು ಬಹಳ ತಡವಾಗಲಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...