-ಸಾಗರಿಕಾ ಘೋಷ್
ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ಬೃಹತ್ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ, ಡಿಎಂಕೆ ಗೆಲುವಿನಲ್ಲೂ ತಂತ್ರ ರೂಪಿಸಿದ್ದ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಎನ್‌ಸಿಪಿ ಪಿತಾಮಹ ಶರದ್ ಪವಾರ್ ಅವರನ್ನು ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದ ನಂತರ ಇಂಥದ್ದೊಂದು ನಿರೀಕ್ಷೆ ರಾಜಕೀಯ ವಲಯದಲ್ಲಿ ಹುಟ್ಟಿಕೊಂಡಿದೆ.
ಮುಂದಿನ ಸಾರ್ವತ್ರಿಕ ಚುನಾವಣೆಗೆ ಮೂರು ವರ್ಷಗಳು ಉಳಿದಿರುವಾಗ, ಪ್ರಾದೇಶಿಕ ನಾಯಕರು ದೆಹಲಿಯ ಪ್ರಾಬಲ್ಯದ ವಿರುದ್ಧ ಬಲವಾಗಿ ತಿರುಗೇಟು ನೀಡಲು ಆರಂಭಿಸಿದ್ದಾರೆ.
ಪ್ರತಿಪಕ್ಷದ ಮುಖ್ಯಮಂತ್ರಿಯೊಬ್ಬರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲು ಶುರು ಮಾಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು 12 ಸಹವರ್ತಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಸಣ್ಣ ಉದ್ಯಮಗಳ ಸಾಲ ಮನ್ನಾದ ವಿಷಯ ಎತ್ತಿದ್ದಾರೆ. ಕೇಂದ್ರದ ಬೆದರಿಸುವಿಕೆಯನ್ನು ಸಾಮೂಹಿಕವಾಗಿ ವಿರೋಧಿಸಲು ಮಮತಾ ಬ್ಯಾನರ್ಜಿ, “ರಾಜ್ಯಗಳ ಒಕ್ಕೂಟ” ಅಥವಾ ರಾಜ್ಯ ಸರ್ಕಾರಗಳ ಒಕ್ಕೂಟಕ್ಕೆ ಕರೆ ನೀಡಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ರಾಜ್ಯ ಸರ್ಕಾರಗಳ ವಿರುದ್ಧ ಹಗೆ ಸಾಧಿಸದ ಕೇಂದ್ರ ಸರ್ಕಾರವನ್ನು ನೋಡಲು ಬಯಸುವೆ ಎಂದು ಟ್ವೀಟ್ ಮಾಡಿದ್ದಾರೆ.
ಇತ್ತೀಚಿನ ಜಿಎಸ್‍ಟಿ ಕೌನ್ಸಿಲ್ ಸಭೆಯಲ್ಲಿ, ಪ್ರತಿಪಕ್ಷ-ಆಡಳಿತದ ರಾಜ್ಯಗಳ ಹಲವಾರು ಹಣಕಾಸು ಮಂತ್ರಿಗಳು ಆದಾಯ ಹಂಚಿಕೆ ಕುರಿತು ಕೇಂದ್ರವನ್ನು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ಹಣಕಾಸು ಸಚಿವರಂತೂ, ಪ್ರಮುಖ ಜಿಎಸ್‍ಟಿ ಸಮಿತಿಗಳಿಂದ ಉದ್ದೇಶಪೂರ್ವಕವಾಗಿ ತಮ್ಮನ್ನು ಹೊರಗಿಡಲಾಗುತ್ತಿದೆ ಎಂದು ಆರೋಪಿಸಿದರು.
ಮುಂದಿನ ಸಮರದ ಆರಂಭವೇ?
ಈ ಎಲ್ಲ ಬೆಳವಣಿಗೆಗಳು ಮುಂದಿನ ಸಾರ್ವತ್ರಿಕ ಚುನಾವಣೆ ಎಂಬ ಸಮರಕ್ಕೆ ಕನ್ನಡಿ ಹಿಡಿಯುತ್ತಿವೆ. ನರೇಂದ್ರ ಮೋದಿಯಲ್ಲಿ ಭಾರತವು ‘ಅತ್ಯಂತ ಪ್ರಬಲ’ ಪ್ರಧಾನ ಮಂತ್ರಿಯನ್ನು ಹೊಂದಿದೆ, ಆದರೆ ವಿರೋಧ ಪಕ್ಷದ ಆಡಳಿತದ ರಾಜ್ಯಗಳಲ್ಲಿ ಅಷ್ಟೇ ಪ್ರಬಲ, ಸರ್ವೋಚ್ಛ ಮುಖ್ಯಮಂತ್ರಿಗಳೂ ಇದ್ದಾರೆ. ಅವರು ದೃಢವಾದ ಪ್ರಾದೇಶಿಕ ಅಸ್ಮಿತೆಗಳು ಮತ್ತು ಸ್ಥಳೀಯವಾಗಿ ಬೇರೂರಿರುವ ರಾಜಕೀಯವನ್ನು ಪ್ರತಿನಿಧಿಸುತ್ತಾರೆ. ನವದೆಹಲಿಯ ಅತಿಯಾದ ಕೇಂದ್ರೀಕರಣಕ್ಕೆ ಬ್ರೇಕ್‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಯಡಿಯೂರಪ್ಪ ಕೂಡ ಪ್ರತಿಗಾಮಿಯೇ?
ಮುಖ್ಯಮಂತ್ರಿಯ ಅಧಿಕಾರ ಅಥವಾ ರಾಜ್ಯಗಳ ಅಧಿಕಾರವನ್ನು ಕಡೆಗಣಿಸುವ ಕೇಂದ್ರದ ನೀತಿಯನ್ನು ಕೆಲವು ಬಿಜೆಪಿ ಮುಖ್ಯಮಂತ್ರಿಗಳು ಕೂಡ ಪರೋಕ್ಷವಾಗಿ ವಿರೋಧ ಮಾಡುತ್ತಿದ್ದಾರೆ. ಉದಾಹರಣೆಗೆ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ. ಅಧಿಕಾರದಿಂದ ಅವರನ್ನು ಉಚ್ಛಾಟಿಸುವ ಯಾವುದೇ ಪ್ರಯತ್ನಕ್ಕೂ ಅವರು ಸವಾಲು ಹಾಕುತ್ತಿದ್ದಾರೆ. ಯಡಿಯೂರಪ್ಪನವರಂತೆ ಹಲವಾರು ಬಿಜೆಪಿ ಸಿಎಂಗಳು ತಮ್ಮ ಕಲ್ಯಾಣ ಯೋಜನೆಗಳು ಮೋದಿ ಹೆಸರಿನಲ್ಲಿ ಬ್ರಾಂಡ್ ಆಗಬಾರದು ಎಂದು ಪ್ರಯತ್ನ ಮಾಡುತ್ತಿದ್ದಾರೆ. ತಮ್ಮ ಕೆಲಸಗಳ ಕ್ರೆಡಿಟ್ ಅನ್ನು ಮೋದಿಗೇಕೆ ನೀಡಬೇಕು ಎಂಬ ಭಾವ ಈ ಬಿಜೆಪಿ ಸಿಎಂಗಳಲ್ಲಿ ಇದೆ.
ಅಂದರೆ ಪ್ರಾದೇಶಿಕ ನಾಯಕರು ಮತ್ತು ಮುಖ್ಯಮಂತ್ರಿಗಳು ಮೋದಿ ಕೇಂದ್ರಿತ ಪ್ರದರ್ಶನದಲ್ಲಿ ಸಹನಟರಾಗಲು ಅಥವಾ ಸಣ್ಣವರಾಗಲು ನಿರಾಕರಿಸುತ್ತಿದ್ದಾರೆ. ಕೊರೊನಾ ನಿರ್ವಹಣೆಯ ವಿಷಯಕ್ಕೆ ಬರೋಣ. ಛತ್ತೀಸಗಡದ ಸಿಎಂ ಭೂಪೇಶ್ ಬಾಗೆಲ್ ಮತ್ತು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಇಬ್ಬರೂ ತಮ್ಮ ಫೋಟೋಗಳನ್ನು ಲಸಿಕೆ ಪ್ರಮಾಣಪತ್ರಗಳಲ್ಲಿ ಹಾಕಿಕೊಳ್ಳುತ್ತಿದ್ದಾರೆ. ‘ನಮ್ಮ ದುಡ್ಡು, ಅವರ ಫೋಟೊ ಏಕೆ?’ ಎಂಬ ಪ್ರತಿರೋಧವನ್ನು ಇಲ್ಲಿ ಕಾಣಬಹುದು. (ಈಗೇನೋ ಕೇಂದ್ರವೇ ಲಸಿಕೆ ಪೂರೈಸಲು ಒಪ್ಪಿಕೊಂಡಿದೆ). ಎಎಪಿ ತನ್ನ ಪಡಿತರ ವಿತರಣಾ ಯೋಜನೆಯೊಂದಿಗೆ ಗುರುತಿಸಿಕೊಳ್ಳಲು ಬಯಸಿದೆ. ತೊಂದರೆಯಲ್ಲಿ ಇರುವವರ ಮನೆಗೇ ರೇಷನ್ ತಲುಪಿಸುವ ವ್ಯವಸ್ಥೆ ಮಾಡಲು ಹೊರಟ ಆಪ್ ಸರ್ಕಾರಕ್ಕೆ ಕೇಂದ್ರ ಅಡ್ಡಿ ಮಾಡಿದೆ. ಈಗ ದೆಹಲಿ ಸರ್ಕಾರ ಬೂತ್ ಮಟ್ಟದಲ್ಲಿ ರೇಷನ್ ತಲುಪಿಸುವ ಕೆಲಸಕ್ಕೆ ಮುಂದಾಗಿದೆ.
ಮೋದಿ ಸರ್ಕಾರದ ಕೋವಿಡ್ ಲಸಿಕೆ ನೀತಿಯು ಕೇಂದ್ರ-ರಾಜ್ಯ ಸಂಬಂಧಗಳನ್ನು ಮುರಿಯುವ ಹಂತಕ್ಕೆ ತಳ್ಳುತ್ತಿದೆ ಎಂಬುದಕ್ಕೆ ದೆಹಲಿ ವಿದ್ಯಮಾನ ಒಂದು ಅತ್ಯುತ್ತಮ ಉದಾಹರಣೆಯಾಗಿದೆ. ಲಸಿಕೆ ನೀತಿಯ ವೈಫಲ್ಯಗಳಿಗೆ ಪ್ರತಿಪಕ್ಷ-ಆಡಳಿತದ ರಾಜ್ಯಗಳು ಕಾರಣವೆಂದು ಕೇಂದ್ರ ವಾದಿಸಿದೆ. ಅದನ್ನು ಮೋದಿಯವರೇ ಹೇಳಿ ಬಿಟ್ಟಿದ್ದಾರೆ. ಮೊದಲು ರಾಜ್ಯಗಳು ಉತ್ಪಾದಕರಿಂದ ನೇರವಾಗಿ ಲಸಿಕೆಗಳನ್ನು ಖರೀದಿಸಲು ಒತ್ತಡ ಹೇರಲಾಗಿತು. ಉತ್ಪಾದಕರು ರಾಜ್ಯಗಳಿಗೆ ಅಗತ್ಯವಿರುವಷ್ಟು ಲಸಿಕೆ ಪೂರೈಕೆ ಮಾಡಲು ಅಸಮರ್ಥರಾಗಿದ್ದಾರೆ. ವಿದೇಶಿ ಲಸಿಕಾ ಉತ್ಪಾದಕರು ರಾಜ್ಯಗಳೊಂದಿಗೆ ವ್ಯವಹಾರ ಮಾಡಲಾಗದು, ಕೇಂದ್ರ ಸರರ್ಕಾರದ ಜೊತೆ ವ್ಯವಹಾರ ಎಂದರು. ಈ ನಡುವೆ 7 ಹೈಕೋರ್ಟ್‍ಗಳು ಮತ್ತು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಮೇಲಷ್ಟೇ ಕೇಂದ್ರ ಉಚಿತ ಲಸಿಕೆಯ ಬಗ್ಗೆ ಮಾತನಾಡಿತು. ಇದರ ಸಾರಾಂಶವಿಷ್ಟೇ: ಪ್ರಾದೇಶಿಕ ನಾಯಕರು ಕೇಂದ್ರವನ್ನು ಬಗ್ಗಿಸುವಲ್ಲಿ ಸಫಲರಾದರು.
ಮೂರು ಬಾರಿ ಮುಖ್ಯಮಂತ್ರಿಯಾಗಿರುವ ನರೇಂದ್ರ ಮೋದಿ, ರಾಜ್ಯ ರಾಜಧಾನಿಯಿಂದ ನೇರವಾಗಿ ಪ್ರಧಾನ ಮಂತ್ರಿ ಕಚೇರಿಗೆ ತೆರಳಿ ಅಧಿಕಾರ ಪಡೆದಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ದೇವೇಗೌಡರಿಗೆ ಮೊದಲ ಸಲ ಇಂತಹ ಅವಕಾಶ ಸಿಕ್ಕಿತ್ತು. ದೆಹಲಿಯ (ಕೇಂದ್ರದ) ಉಸಿರುಗಟ್ಟಿಸುವ ನೀತಿಗಳನ್ನು ಮೋದಿ ಬದಲಿಸಬಹುದಿತ್ತು. ಆದರೆ ಅವರ ಅತಿಯಾದ ಕೇಂದ್ರೀಕರಣದ ನೀತಿ ರಾಜ್ಯಗಳ ಅಸ್ಮಿತೆ ಮತ್ತು ಆರ್ಥಿಕತೆಯನ್ನೇ ಧ್ವಂಸ ಮಾಡುತ್ತಿದೆ.
ಇಂದು, ಆರೋಪಗಳು ಮತ್ತು ಪ್ರತಿ-ಆರೋಪಗಳು ದಟ್ಟವಾಗಿವೆ. ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯವನ್ನು ಮುಜುಗರಕ್ಕೆ ಈಡುಮಾಡಲು ಕೇಂದ್ರವು ಲಸಿಕೆ ವ್ಯರ್ಥದ ಅಂಕಿಅಂಶಗಳನ್ನು ತಪ್ಪಾಗಿ ಬಿಂಬಿಸುತ್ತಿದೆ ಎಂದು ಛತ್ತೀಸಗಡ್ ಸರ್ಕಾರ ಆರೋಪ ಮಾಡಿದೆ. ರಾಜಸ್ಥಾನ ಸರ್ಕಾರವೂ ಇಂಥದ್ದೇ ಆಕ್ಷೇಪ ಮುಂದಿಟ್ಟಿದೆ. ಸಣ್ಣ ಲಕ್ಷದ್ವೀಪದಲ್ಲಿ ಕೂಡ ಕೇಂದ್ರದಿಂದ ನೇಮಕಗೊಂಡ ಲೆಫ್ಟಿನೆಂಟ್ ಗವರ್ನರ್ ಮಾಡಿದ ಅನಿಯಂತ್ರಿತ ನಿಯಮಗಳ ವಿರುದ್ಧ ಪ್ರತಿಭಟನೆ ನಡೆಯುತ್ತಿವೆ.
ಇದು ಜನಪ್ರಿಯತೆಯ ರಾಜಕೀಯ (ಪಾಪುಲಿಸ್ಟ್ ಪಾಲಿಟಿಕ್ಸ್) ನೆಚ್ಚಿ ನಡೆಯುತ್ತಿರುವ ಆಟವಾಗಿದೆ. ಪ್ರತಿಪಕ್ಷಗಳಿಗೆ ಯಾವುದೇ ನ್ಯಾಯಸಮ್ಮತತೆಯನ್ನು ನಿರಾಕರಿಸುವುದು. ಬಿಜೆಪಿ ವಿರೋಧಿಗಳನ್ನು ಮತ್ತು ವಿಮರ್ಶಕರನ್ನು ಸಂಪೂರ್ಣವಾಗಿ ಬೇಟೆಯಾಡುವುದು ಈ ಆಟದ ಪ್ರಮುಖ ಲಕ್ಷಣವಾಗಿದೆ. “ನಗರ ನಕ್ಸಲ್‍ಗಳು” ಅಥವಾ “ದೇಶದ್ರೋಹಿಗಳು” ಎಂದು ಹಣೆಪಟ್ಟಿ ಅಂಟಿಸುವ ಯತ್ನ ಮಾಡಲಾಗುತ್ತಿದೆ. ಪ್ರಗತಿಪರ ದೃಷ್ಟಿಕೋನದ ವಿದ್ಯಾರ್ಥಿಗಳು, ಸಿಎಎ-ಎನ್‌ಆರ್‌ಸಿ ವಿರೋಧಿ ಪ್ರತಿಭಟನಾಕಾರರು ಮತ್ತು ಎಡಪಂಥೀಯ ಶಿಕ್ಷಣ ತಜ್ಞರು, ಪ್ರತಿಪಕ್ಷದ ಮುಖ್ಯಮಂತ್ರಿಗಳನ್ನು ಹೊಸ ‘ಶತ್ರುಗಳು’ ಎಂದು ಘೋಷಣೆ ಮಾಡುವವರೆಗೆ ಈ ದುಷ್ಟ ರಾಜಕೀಯ ತಲುಪಿದೆ.
ಇದನ್ನು ಇಂದಿರಾ ಗಾಂಧಿಯವರ ಒಂದು ಹಂತದ ಆಡಳಿತಕ್ಕೆ ಹೋಲಿಕೆ ಮಾಡಬಹುದು. ಅವರು ಮುಖ್ಯಮಂತ್ರಿಗಳಾಗಿದ್ದ ಎನ್.ಟಿ. ರಾಮರಾವ್ ಮತ್ತು ಫಾರೂಕ್ ಅಬ್ದುಲ್ಲಾ ಅವರನ್ನು ವಜಾಗೊಳಿಸಿದರು. ಪಂಜಾಬ್‍ನಲ್ಲಿ ಕೇಂದ್ರೀಕರಣ ರಾಜಕೀಯವನ್ನು ಮಾಡಿದ್ದಕ್ಕಾಗಿ ಭಾರಿ ಬೆಲೆ ತೆತ್ತರು. ಮೋದಿ ನೇತೃತ್ವದ ಬಿಜೆಪಿ ಇಂದಿರಾ ಗಾಂಧಿ ಶೈಲಿಯಲ್ಲಿ ಮುಖ್ಯಮಂತ್ರಿಗಳನ್ನು ತೆಗೆದುಹಾಕಿಲ್ಲ, ಆದರೆ ಕೇಂದ್ರದ ಸಂಸ್ಥೆಗಳು ರಾಜ್ಯ ನಾಯಕರ ವಿರುದ್ಧ ಬೆದರಿಕೆ ಹಾಕುವ ರೀತಿಯಲ್ಲಿ ವರ್ತಿಸುತ್ತಿವೆ. ಜಮ್ಮು ಮತ್ತು ಕಾಶ್ಮೀರವನ್ನು ರಾತ್ರೋರಾತ್ರಿ ಅತಂತ್ರ ಪ್ರದೇಶವನ್ನಾಗಿ ಮಾಡುವುದು ಮೋದಿ ಸರ್ಕಾರದ ಕೇಂದ್ರೀಕರಣ ಚಾಲನೆಯ ಅತ್ಯುತ್ತಮ ಉದಾಹರಣೆಯಾಗಿದೆ.
ಯೋಜನಾ ಆಯೋಗವು ಈ ಹಿಂದೆ ಕುಂದುಕೊರತೆಗಳನ್ನು ಆಲಿಸಲು ಮತ್ತು ಆರ್ಥಿಕ ಸಂಪನ್ಮೂಲಗಳನ್ನು ನಿಯೋಜಿಸಲು ಒಂದು ವೇದಿಕೆಯಾಗಿ ಕೆಲಸ ಮಾಡುತ್ತಿತ್ತು. ಇದು ರಾಜ್ಯಗಳ ಹಿತ ಕಾಪಾಡಲು ನೆರವಾಗುತ್ತಿತ್ತು. ಆದರೆ ಯೋಜನಾ ಆಯೋಗವನ್ನು ರದ್ದು ಮಾಡಿ ನೀತಿ ಆಯೋಗ ಎಂಬ ಕೇಂದ್ರ ಸರ್ಕಾರದ ಅಡಿಯಾಳುನಂತಿರುವ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಸದ್ಯ ಪಕ್ಷಾತೀತವಾದ ಮತ್ತು ಸ್ವಾಯತ್ತತೆ ಹೊಂದಿರುವ ಹೊಸ ಸಾಂಸ್ಥಿಕ ಕಾರ್ಯವಿಧಾನವನ್ನು ಕಂಡುಹಿಡಿಯುವ ಅವಶ್ಯಕತೆಯಿದೆ. ಬಹುಶಃ ಅದು ಮುಖ್ಯಮಂತ್ರಿಗಳ ಕಾರ್ಯಪಡೆಯೊಂದನ್ನು ರಚಿಸುವ ಕೆಲಸವಾಗಬಹುದು.
ರಾಜ್ಯ ಸರ್ಕಾರಗಳು ತಮ್ಮ ಬೇಡಿಕೆಗಳನ್ನು ತರ್ಕಬದ್ಧವಾಗಿ ಪ್ರತಿಪಾದಿಸಬೇಕಾದರೆ, 21ನೇ ಶತಮಾನದ ಆಧುನಿಕ ಆಡಳಿತವು ಫೆಡರಲಿಸಂ (ಒಕ್ಕೂಟ ತತ್ವ) ಅನ್ನು ಕಾರ್ಯಗತಗೊಳಿಸುವುದರಲ್ಲಿದೆ ಎಂಬುದನ್ನು ಬಿಜೆಪಿ ನೇತೃತ್ವದ ಕೇಂದ್ರವು ಅರಿತುಕೊಳ್ಳಬೇಕು. ಪ್ರತಿಪಕ್ಷದ ಮುಖ್ಯಮಂತ್ರಿಗಳಿಗೆ ಕಡಿಮೆ ಸ್ಥಳಾವಕಾಶ ದೊರಕುತ್ತಿದೆ. ಈಗ ಅವರು ಸಾಮಾನ್ಯ ಉದ್ದೇಶದ ವಿಶಾಲ ಒಕ್ಕೂಟವನ್ನು ಒಟ್ಟಿಗೆ ಜೋಡಿಸಲು ಹೊರಟಿದ್ದಾರೆ. 2024ರ ಹೊತ್ತಿಗೆ ಒಂದು ‘ಫೆಡರಲ್ ಫ್ರಂಟ್’ ಅನ್ನು ರೂಪಿಸುವ ಪ್ರಯತ್ನಗಳನ್ನು ವೇಗಗೊಳಿಸಲಿದ್ದಾರೆ.
(ಸಾಗರಿಕಾ ಘೋಷ್ ಹಿರಿಯ ಪತ್ರಕರ್ತೆ ಮತ್ತು ಲೇಖಕಿ. ಬರಹ ಕೃಪೆ: ಎನ್‍ಡಿಟಿವಿ.ಕಾಂ)
ಕನ್ನಡಕ್ಕೆ: ಪಿ.ಕೆ. ಮಲ್ಲನಗೌಡರ್
ಇದನ್ನೂ ಓದಿ; ಬಿಜೆಪಿಗೆ ಭ್ರಷ್ಟಾಚಾರಿಗಳ ಮೇಲೆ ನಂಬಿಕೆಯೆ ಹೊರತು ರಾಮನ ಮೇಲಲ್ಲ: AAP ಸಂಸದ


