Homeಮುಖಪುಟಬೆಳ್ಳಿ ಚುಕ್ಕಿ: ಲ್ಯಾಬ್‌ನಲ್ಲಿ ವಿನ್ಯಾಸಗೊಳಿಸಿದ ಕೃತಕ ಸೂರ್ಯ; ಶುದ್ಧ ಶಕ್ತಿಯತ್ತ ದಾಪುಗಾಲು?

ಬೆಳ್ಳಿ ಚುಕ್ಕಿ: ಲ್ಯಾಬ್‌ನಲ್ಲಿ ವಿನ್ಯಾಸಗೊಳಿಸಿದ ಕೃತಕ ಸೂರ್ಯ; ಶುದ್ಧ ಶಕ್ತಿಯತ್ತ ದಾಪುಗಾಲು?

- Advertisement -
- Advertisement -

ಜೂನ್ ಮೊದಲ ವಾರದಲ್ಲಿ ಒಂದು ಸುದ್ದಿ ಬಂತು. ಪ್ರಯೋಗಾಲಯಕ್ಕೆ ಸಂಬಂಧಿಸಿದ್ದಾದರೂ ಇದೇನು ಕೊರೊನಾ ವೈರಸ್ ಸಂಬಂಧಿತ ಸುದ್ದಿಯಲ್ಲ. ಚೈನಾದ ಹಾಫೈ ಇನ್ಸಿಟಿಟ್ಯೂಟ್ ಆಫ್ ಫಿಸಿಕಲ್ ಸೈನ್ಸ್‌ನಲ್ಲಿ ಕೃತಕ ಸೂರ್ಯನನ್ನು ವಿನ್ಯಾಸಗೊಳಿಸಿದ್ದು, ಇದು 120 ಮಿಲಿಯನ್ ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಉರಿಯುತ್ತಿದೆ ಎಂಬ ವಿಶಿಷ್ಟ ಸುದ್ದಿ. ಹೌದು ನೀವು ಓದಿದ್ದು ನಿಜ. ‘ಕೃತಕ ಸೂರ್ಯ’ನೇ! ವಿಚಿತ್ರ ಅನ್ನಿಸೊದಿಲ್ವಾ? ಹಾಗಾದರೆ ಚೈನಾ ತಾನೇ ವಿನ್ಯಾಸಗೊಳಿಸಿದ ಕೃತಕ ಸೂರ್ಯನಿಂದ ಬೆಳಕು ಪಡೆಯತ್ತಾ? ಇಂತಹ ಹಲವು ಪ್ರಶ್ನೆಗಳು ನಮ್ಮನ್ನು ಕಾಡಬಹುದು. ಹಾಗಾದರೆ ಈ ಕೃತಕ ಸೂರ್ಯ ನಿಜವಾಗಲೂ ಆಕಾಶದಲ್ಲಿ ಕಾಣುವ ಸೂರ್ಯನ ತರಹವೇ ಇರತ್ತಾ? ಅದು ಬೆಳಕು ನೀಡುತ್ತಾ?

ಶಕ್ತಿ (Energy) ಜೀವ ಉಗಮಕ್ಕೆ ಮೂಲ ಕಾರಣ. ಸೌರ ಮಂಡಲದ ಗ್ರಹಗಳಲ್ಲಿ ಭೂಮಿಯು ಜೀವ ಸಂಕುಲವನ್ನು ಪೋಷಿಸುತ್ತಿದೆ. ಇದಕ್ಕೆ ಕಾರಣ ಭೂಮಿಗೆ ಹತ್ತಿರವಿರುವ ನಕ್ಷತ್ರ ಸೂರ್ಯ. ಸೂರ್ಯನ ಶಕ್ತಿ ಇಲ್ಲದಿದ್ದರೆ ಭೂಮಿಯಲ್ಲಿ ಜೀವ ಸಂಕುಲ ಉಗಮವಾಗುತ್ತಿರಲಿಲ್ಲ ಎನ್ನುವುದು ಅಷ್ಟೇ ಸತ್ಯ. ಆದರೆ, ಪ್ರಶ್ನೆ ಇರುವುದು ಸೂರ್ಯನಿಗೆ ಶಕ್ತಿ ಎಲ್ಲಿಂದ ಬರುತ್ತದೆ ಎಂದು? ಇದಕ್ಕೆ ಉತ್ತರ ಸೂರ್ಯನ ಒಳಗಡೆ ನಡೆಯುತ್ತಿರುವ ಉಷ್ಣ ಭೈಜಿಕ ಸಮ್ಮಿಲನ ಕ್ರಿಯೆ – Thermo Nuclear Fusion Reaction.

ಸೂರ್ಯ ಒಂದು ನಕ್ಷತ್ರ. ಸೂರ್ಯನಲ್ಲಿ ಶೇ75 ರಷ್ಟು ಹೈಡ್ರೋಜನ್ ಅನಿಲ ಇದೆ. ಸೂರ್ಯನ ತಿರುಳಲ್ಲಿ ಎರಡು ಹೈಡ್ರೋಜನ್ ನ್ಯೂಕ್ಲಿಯಸ್‌ಗಳು ಘರ್ಷಣೆಯಾಗಿ, ಸಮ್ಮಿಲನಗೊಂಡು ಹೀಲಿಯಂ ನ್ಯೂಕ್ಲಿಯಸ್ ಆಗಿ ಪರಿವರ್ತನೆಗೊಳ್ಳುತ್ತದೆ. ಹೀಗೆ, ಎರಡು ಹೈಡ್ರೋಜನ್ ಪರಮಾಣು ಸಮ್ಮಿಲನಗೊಂಡು ಹೀಲಿಯಂ ಪರಮಾಣುವಾಗಿ ಪರಿವರ್ತನೆಗೊಂಡಾಗ ಅಪಾರ ಪ್ರಮಾಣದ ಶಕ್ತಿ ಬಿಡುಗಡೆಯಾಗುತ್ತದೆ. ಈ ಶಕ್ತಿ ಎಲ್ಲಿಂದ ಬರುತ್ತದೆ? ಹೊಸದಾಗಿ ರೂಪುಗೊಂಡ ಹೀಲಿಯಂ ಪರಮಾಣುವಿನ ದ್ರವ್ಯರಾಶಿಯು, ಸಮ್ಮಿಲಗೊಂಡ ಎರಡು ಹೈಡ್ರೋಜನ್ ಪರಮಾಣುವಿನ ದ್ರವ್ಯರಾಶಿಗಿಂತಲೂ ಕಡಿಮೆ ಇರುತ್ತದೆ.

ಈ ವ್ಯತ್ಯಾಸದ ದ್ರವ್ಯರಾಶಿಯು ಐನ್‌ಸ್ಟೈನ್ ಪ್ರಸ್ತಾಪಿಸಿರುವ E=mc2 (ಶಕ್ತಿ ಮತ್ತು ದ್ರವ್ಯರಾಶಿಯ ಸಮಾನತೆಯ ಸಮೀಕರಣ) ನಿಯಮಾನುಸಾರ ಶಕ್ತಿಯಾಗಿ ಬಿಡುಗಡೆಯಾಗುತ್ತದೆ. ಈ ಕ್ರಿಯೆಯನ್ನು ಉಷ್ಣ ಭೈಜಿಕ ಸಮ್ಮಿಲನ ಕ್ರಿಯೆ ಎಂದು ಕರೆಯುತ್ತಾರೆ. ಸೂರ್ಯ ಒಂದು ಸೆಕೆಂಡಿಗೆ ಸುಮಾರು 600 ಲಕ್ಷ ಟನ್‌ಗಳ ಹೈಡ್ರೋಜನ್ ಪರಮಾಣುಗಳನ್ನು ಹೀಲಿಯಂ ಪರಮಾಣುವಾಗಿ ಪರಿವರ್ತಿಸುತ್ತದೆ. ಈ ಕ್ರಿಯೆಯೇ ಸೂರ್ಯನ ತಿರುಳಲ್ಲಿ ಅಗಾಧ ಪ್ರಮಾಣದ ಶಕ್ತಿ ಉತ್ಪತ್ತಿಗೆ ಕಾರಣವಾಗಿದೆ. ಈ ಶಕ್ತಿಯೇ ಸೂರ್ಯನನ್ನು ಬೆಂಕಿ ಉಂಡೆಯಂತೆ ಹೊಳೆಯುವ ಹಾಗೆ ಮಾಡಿರುವುದು. ಈ ಕಾರಣದಿಂದ ಸೂರ್ಯನ ತಿರುಳಲ್ಲಿ ನಮ್ಮ ಕಲ್ಪನೆಗೂ ನಿಲುಕದ 15 ಲಕ್ಷ ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವುದು. ಉಷ್ಣ ಭೈಜಿಕ ಸಮ್ಮಿಲನ ಕ್ರಿಯೆ ಎಲ್ಲಾ ನಕ್ಷತ್ರಗಳ ತಿರುಳಲ್ಲೂ ನಡೆಯುವ ಸಾಮನ್ಯ ಕ್ರಿಯೆ.

ಸೂರ್ಯನ ಬಗ್ಗೆ ಏನೋ ತಿಳಿದೆವು. ಹಾಗಾದರೆ ಚೈನಾದಲ್ಲಿ ವಿನ್ಯಾಸ ಮಾಡಿದ ಕೃತಕ ಸೂರ್ಯನ ಕತೆ ಏನು? ಈ ಸೂರ್ಯನನ್ನು ಲ್ಯಾಬ್‌ನಲ್ಲಿ ವಿನ್ಯಾಸಗೊಳಿಸಲಾಗಿದ್ದು, ಇದರ ತಾಪಮಾನ 120 ಲಕ್ಷ ಡಿಗ್ರಿ ಸೆಲ್ಸಿಯಸ್. ಅಂದರೆ, ಸೂರ್ಯನ ತಿರುಳಲ್ಲಿರುವ ತಾಪಮಾನಕ್ಕಿಂತಲೂ 8 ಪಟ್ಟು ಹೆಚ್ಚು!

ಕೃತಕ ಸೂರ್ಯನ ಸೃಷ್ಟಿ

International Thermonuclear Experimental Reactor- ITER ಅಂದರೆ, ಅಂತರಾಷ್ಟ್ರೀಯ ಉಷ್ಣ ಭೈಜಿಕ ಪ್ರಯೋಗ ಅಣು ಕೇಂದ್ರ. ಇದು ಪ್ರಪಂಚದ ಹಲವು ದೇಶಗಳು (ಪ್ರಮುಖವಾಗಿ 8 ದೇಶಗಳು ಯೂರೋಪ್, ಅಮೆರಿಕ, ಭಾರತ, ಜಪಾನ್, ರಷ್ಯ, ಸೌತ್ ಕೊರಿಯಾ ಮತ್ತು ಚೈನಾ) ಸೇರಿ ನಡೆಸುತ್ತಿರುವ ಮಹಾ ಯೋಜನೆಯಾಗಿದೆ. ಈ ಯೋಜನೆಯ ಉದ್ದೇಶ, ಸೂರ್ಯನ ತಿರುಳಲ್ಲಿ ನಡೆಯುತ್ತಿರುವ ಉಷ್ಣ ಭೈಜಿಕ ಸಮ್ಮಿಲನ ಕ್ರಿಯೆಯನ್ನು ಭೂಮಿಯಲ್ಲಿ ನಿಯಂತ್ರಿತವಾಗಿ ಸೃಷ್ಟಿಸಿ, ಅದರಿಂದ ಬರುವ ಅಪಾರ ಪ್ರಮಾಣದ ‘ಶುದ್ಧ’ ಶಕ್ತಿಯನ್ನು ಪ್ರಪಂಚದಾದ್ಯಂತ ಮಾನವನ ಬಳಕೆಗೆ ಉಪಯೋಗಿಸುವುದು. ಈ ಮಹಾ ಯೋಜನೆಗೆ ಸಂಬಂಧಿಸಿದಂತೆ, ಹಲವು ದೇಶಗಳಲ್ಲಿ ನಿಯಂತ್ರಿತವಾಗಿ ಉಷ್ಣ ಭೈಜಿಕ ಸಮ್ಮಿಲನ ಕ್ರಿಯೆ ನಡೆಸಲು ಅನುಕೂಲವಾಗುವಂತೆ ಅಣು ಕೇಂದ್ರವನ್ನು ತೆರೆಯಲಾಗಿದೆ. ಅದರಲ್ಲಿ ಒಂದು ಚೈನಾ ದೇಶದ ಚೈನೀಸ್ ಅಕಾಡೆಮಿ ಆಫ್ ಸೈನ್ಸ್‌ಸ್‌ನ ಹಾಫೈ ಇನ್ಸಿಟಿಟ್ಯೂಟ್ ಆಫ್ ಫಿಸಿಕಲ್ ಸೈನ್ಸ್‌ನಲ್ಲಿ ಎಕ್ಸ್‌ಪರಿಮೆಂಟಲ್ ಅಡ್ವಾನ್ಸ್ ಸೂಪರ್‌ಕಂಡಕ್ಟಿಂಗ್ ಟೊಕಾಮಾಕ್ (Experimental Advance Superconducting Tokamak- EAST) ಎಂಬ ವಿನೂತನವಾದ ರಿಯಾಕ್ಟರ್‌ಅನ್ನು ಸ್ಥಾಪಿಸಲಾಗಿದೆ. ಈ ರಿಯಾಕ್ಟರ್ ಒಳಗೆ ಉಷ್ಣ ಭೈಜಿಕ ಸಮ್ಮಿಲನ ಕ್ರಿಯೆಯನ್ನು ಸೃಷ್ಟಿಸಬಹುದಾಗಿದೆ. ಈ ರಿಯಾಕ್ಟರ್‌ಅನ್ನೇ ‘ಕೃತಕ ಸೂರ್ಯ’ ಎಂದು ಕರೆದಿರುವುದು.

ಈ ಜೂನ್ ತಿಂಗಳ ಪ್ರಾರಂಭದಲ್ಲಿ, ಈ ರಿಯಾಕ್ಟರ್ ಒಳಗೆ 101 ಸೆಕೆಂಡುಗಳ ಕಾಲ ಉಷ್ಣ ಭೈಜಿಕ ಸಮ್ಮಿಲನ ಕ್ರಿಯೆಯನ್ನು ನಿಯಂತ್ರಿತವಾಗಿ ಸೃಷ್ಟಿಸಲಾಗಿತ್ತು. ಇದಕ್ಕೆ ಭೂಮಿಯಲ್ಲಿ ಹೇರಳವಾಗಿ ಸಿಗುವ ಹೈಡ್ರೋಜನ್‌ನ ಐಸೋಟೋಪ್ ಆದ ಡ್ಯೂಟೋರಿಯಮ್‌ಅನ್ನು ಬಳಸಲಾಗಿತ್ತು. ಈ ಕ್ರಿಯೆಯ ಸಮಯದಲ್ಲಿ ರಿಯಾಕ್ಟರ್ ಒಳಗಿನ ತಾಪಮಾನ 120 ಲಕ್ಷ ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪಿತ್ತು. ಈ ಸಂಶೋಧನೆಯು ಇನ್ನೂ ಪ್ರಯೋಗದ ಹಂತದಲ್ಲಿಯೇ ಇದೆ. ಹಿಂದೆ ಹಲವು ಬಾರಿ ಇಂತಹ ಪ್ರಯೋಗಗಳೂ ನಡೆದಿದ್ದರೂ, ರಿಯಾಕ್ಟರ್ ಒಳಗೆ 101 ಸೆಕೆಂಡುಗಳ ಕಾಲ ಉಷ್ಣ ಬೈಜಿಕ ಸಮ್ಮಿಲನ ಕ್ರಿಯೆಯು ಸಕ್ರಿಯವಾಗಿರುವುದು ಇದೇ ಮೊದಲು!

ಈ ಸಂಶೋಧನೆಗೆ ಬಹಳ ದೊಡ್ಡ ಮಟ್ಟದ ಧನಸಹಾಯವೂ ಬೇಕು ಮತ್ತು ಕಾಲವು ಬೇಕು, ಹಾಗೂ ಇಂದು ಒಂದು ದೇಶದಿಂದ ಮಾತ್ರ ಆಗುವ ಕೆಲಸವಂತೂ ಅಲ್ಲ. ಹೀಗಾಗಿ, ಹಲವು ದೇಶಗಳು ITER ಯೋಜನೆಗೆ ಕೈಜೊಡಿಸಿ, ಇಂತಹ ಹಲವು ‘ಕೃತಕ ಸೂರ್ಯ’ಗಳನ್ನು ವಿವಿಧ ದೇಶಗಳಲ್ಲಿ ಸ್ಥಾಪಿಸಲು ಕಾರ್ಯಸೂಚಿಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಇಲ್ಲಿಯವರೆಗೂ ಉಷ್ಣ ಭೈಜಿಕ ಸಮ್ಮಿಲನ ಕ್ರಿಯೆಯನ್ನು ಅತ್ಯಂತ ಕಡಿಮೆ ಸಮಯದವರೆಗೆ (ಅಂದರೆ, ಸೆಕೆಂಡುಗಳ ಕಾಲದವರೆಗೆ) ಮಾತ್ರ ಇಂತಹ ರಿಯಾಕ್ಟರ್‌ನಲ್ಲಿ ಸೃಷ್ಟಿಸಲು ಸಾಧ್ಯವಾಗಿದ್ದು, ಹೆಚ್ಚಿನ ಸಮಯದವರೆಗೆ ಈ ಕ್ರಿಯೆಯನ್ನು ಸಕ್ರಿಯವಾಗಿರುವಂತೆ ಮಾಡುವುದಕ್ಕೆ ಇನ್ನೂ ಸಂಶೋಧನೆಗಳೂ ನಡೆಯುತ್ತಿವೆ. ಭಾರತ ಕೂಡ ಈ ಮಹಾ ಯೋಜನೆಗೆ ಕೈಜೊಡಿಸಿದ್ದು, ಇಂತಹ ರಿಯಾಕ್ಟರ್‌ಗಳ ಸ್ಥಾಪನೆಗೆ ಹಲವು ಉಪಕರಣಗಳನ್ನು ತಯಾರಿಸಿ ನೀಡುತ್ತಿದೆ.

ಉಷ್ಣ ಭೈಜಿಕ ಸಮ್ಮಿಲನ ಕ್ರಿಯೆಯಿಂದ ಬರುವ ಶಕ್ತಿ ಶುದ್ಧ ಶಕ್ತಿ ಹೇಗೆ?

21ನೇ ಶತಮಾನದ ಆಧುನಿಕ ಪ್ರಪಂಚಲ್ಲಿ ಮಾನವ ವಿವಿಧ ಮೂಲಗಳಿಂದ ಉತ್ಪಾದಿಸುವ ಶಕ್ತಿಯನ್ನು (ವಿದ್ಯುತ್ ಶಕ್ತಿ, ಇಂಧನ ಶಕ್ತಿ ಮತ್ತು ಇತರೆ ಶಕ್ತಿಯ ರೂಪಗಳು) ತೀವ್ರ ಗತಿಯಲ್ಲಿ ವಿನಿಯೋಗಿಸುತ್ತಿದ್ದೇವೆ. ವಿದ್ಯುತ್ ಶಕ್ತಿ ಇಂದು ಅತಿ ಹೆಚ್ಚು ಬಳಕೆಯಲಿದೆ. ಇಂಧನ ಶಕ್ತಿಯಿಂದ ಚಾಲು ಇರುತ್ತಿದ್ದ ಹಲವು ಕೆಲಸಗಳು ಇಂದು ವಿದ್ಯುತ್ ಶಕ್ತಿಯಿಂದ ಚಾಲು ಆಗುತ್ತಿವೆ. ಹೀಗಿರುವಾಗ ವಿದ್ಯುತ್ ಶಕ್ತಿಯ ಬೇಡಿಕೆ ಮತ್ತು ಪೂರೈಕೆ ಮುಂದಿನ ದಿನಗಳಲ್ಲಿ ಹೆಚ್ಚಲಿದೆ. ಹಾಗಾಗಿ ವಿದ್ಯುತ್ ಶಕ್ತಿಯನ್ನು ಅತಿ ವೇಗವಾಗಿ ಉತ್ಪಾದಿಸುವುದು ನಮ್ಮ ಮುಂದಿರುವ ದೊಡ್ಡ ಸವಾಲು. ಇಂದಿಗೆ ಈ ಸವಾಲು ಅಷ್ಟು ದೊಡ್ಡದಲ್ಲದಿದ್ದರೂ, ಈಗ ಸರಿಯಾದ ಕ್ರಮವಹಿಸದಿದ್ದರೆ, ಮುಂದಿನ ದಶಕದಲ್ಲಿ ಇದು ಬಹು ದೊಡ್ಡ ಸಮಸ್ಯೆಯನ್ನು ಒಡ್ಡಬಲ್ಲದು.

ಈಗ ವಿದ್ಯುತ್ ಶಕ್ತಿ ಉತ್ಪಾದನೆಗೆ ಜಲ ವಿದ್ಯುತ್, ಉಷ್ಣ ವಿದ್ಯುತ್ ಮತ್ತು ಅಣು ವಿದ್ಯುತ್ ಸ್ಥಾವರಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ (ಸೌರ ವಿದ್ಯುತ್, ಪವನ ವಿದ್ಯುತ್ ಮತ್ತು ಇತರೆ ಸ್ಥಾವರಗಳು ಅಷ್ಟು ದೊಡ್ಡ ಮಟ್ಟದಲ್ಲಿ ನಮ್ಮ ಅಗತ್ಯತೆಯನ್ನು ಇನ್ನೂ ಪೂರೈಸುತ್ತಿಲ್ಲ). ಆದರೆ, ಈ ಕೇಂದ್ರಗಳ ಸ್ಥಾಪನೆಯಿಂಚ ಹಿಡಿದು, ಅವಗಳ ಕಾರ್ಯಾಚಾರಣೆಯವರೆಗೂ ವಿವಿಧ ರೀತಿಯಲ್ಲಿ ನಿಸರ್ಗಕ್ಕೆ ಬಹಳ ದೊಡ್ಡ ಮಟ್ಟದಲ್ಲಿ ಹಾನಿಯಾಗುತ್ತಿರುತ್ತದೆ.

ಈ ಕೇಂದ್ರಗಳಿಂದ ನಮ್ಮ ಅಗತ್ಯತೆ ತಕ್ಕಂತೆ ವಿದ್ಯುತ್ ಶಕ್ತಿ ಪಡೆಯಬಹುದಾದರೂ, ಅಷ್ಟೇ ಪ್ರಮಾಣದ ಹಾನಿಯನ್ನು ಈ ಕೇಂದ್ರಗಳು ನಿಸರ್ಗಕ್ಕೆ ಮಾಡುತ್ತಿರುತ್ತವೆ. ಜಲ ವಿದ್ಯುತ್ ಯೋಜನೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಡುಗಳ ನಾಶ, ನದಿಗಳ ನೈಸರ್ಗಿಕ ಹರಿವನ್ನು ತಡೆಯುವುದು, ಬದಲಿಸುವುದು; ಉಷ್ಣ ವಿದ್ಯುತ್ ಸ್ಥಾವರದಲ್ಲಿನ ಕಲ್ಲಿದ್ದಲು ಬಳಕೆಗಾಗಿ ಕಲ್ಲದ್ದಲು ಗಣಿಗಳನ್ನು ಹೆಚ್ಚಿಸುವುದು, ಮತ್ತು ಸ್ಥಾವರದ ಪ್ರದೇಶದಲ್ಲಿ ಅತಿ ಹೆಚ್ಚು ವಾಯು ಮಾಲಿನ್ಯ ಉಂಟಾಗುವುದು; ಅಣು ವಿದ್ಯುತ್ ಸ್ಥಾವರಗಳಲ್ಲಿ ವಿಕಿರಣಶೀಲ ವಸ್ತುಗಳನ್ನು ಉಪಯೋಗಿಸುವುದರಿಂದ, ಸ್ಥಾವರಗಳು ಅನಿಯಂತ್ರಿತವಾದರೆ ಅತಿ ಹೆಚ್ಚು ದುಷ್ಪರಿಣಾಮ ಮಾನವನ ಮೇಲೆ ಮತ್ತು ನಿಸರ್ಗದ ಮೇಲೆ ಉಂಟಾಗುತ್ತದಲ್ಲದೆ, ಈ ಸ್ಥಾವರಗಳ ವಿಷ ತ್ಯಾಜ್ಯಗಳನ್ನು ವಿಲೇವಾರಿ ಮಾಡುವುದು ಅತ್ಯಂತ ಕಷ್ಟದ ಕೆಲಸವಾಗಿದೆ.

ಸದ್ಯದ ಪರಿಸ್ಥಿತಿ ಹೀಗಿರುವಾಗ, ವಿದ್ಯುತ್ ಶಕ್ತಿಯ ಅಗತ್ಯತೆಗೆ ತಕ್ಕಂತೆ ಇಂತಹ ವಿದ್ಯುತ್ ಉತ್ಪಾದನಾ ಕೇಂದ್ರಗಳ ಸ್ಥಾಪನೆ ಹೆಚ್ಚಾದರೆ, ನಿಸರ್ಗಕ್ಕೆ ಮತ್ತೆ ಸರಿಪಡಿಸಲಾಗದ ಬಹು ದೊಡ್ಡ ಪ್ರಮಾಣದ ಹಾನಿ ಉಂಟಾಗುವುದಂತೂ ಸತ್ಯ. ಈ ಕಾರಣದಿಂದ ಈ ಶಕ್ತಿಯು ನಮಗೆ ಉಪಯೋಗವಾದರು, ಇದರ ಅಡ್ಡ ಪರಿಣಾಮಗಳೂ ಅತಿ ಹೆಚ್ಚಾಗಿರುತ್ತದೆ. ಆದುದರಿಂದಲೇ, ವಿದ್ಯುತ್ ಶಕ್ತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಮತ್ತು ಅತಿ ವೇಗವಾಗಿ ಉತ್ಪತ್ತಿಮಾಡಲು ಇರುವ ಮತ್ತೊಂದು ವಿಧಾನವನ್ನು ಹುಡುಕಲು ಹೊರಟಾಗ ಸಿಕ್ಕ ಉತ್ತರ ನಮ್ಮ ಸೂರ್ಯ!

ಹೌದು ಸೂರ್ಯನ ತಿರುಳಲ್ಲಿ ನಡೆಯುತ್ತಿರುವ ಉಷ್ಣ ಭೈಜಿಕ ಸಮ್ಮಿಲನ ಕ್ರಿಯೆ ಅತ್ಯಂತ ಅಗಾಧವಾದ ಶಕ್ತಿಯನ್ನು ನೀಡುತ್ತದೆ. ಭೂಮಿಯಲ್ಲಿ ನಿಯಂತ್ರಿತವಾಗಿ ಇಂತಹ ಕ್ರಿಯೆಯನ್ನು ಸೃಷ್ಟಿಸಲು ಒಂದು ರಿಯಾಕ್ಟರ್‌ಅನ್ನು ವಿನ್ಯಾಸ ಮಾಡಿದರೆ, ಅದರ ಸಹಾಯದಿಂದ, ಹೇಗೆ ಅಣು ವಿದ್ಯುತ್ ಸ್ಥಾವರದಲ್ಲಿ ವಿದ್ಯುತ್ ಉತ್ಪಾದಿಸಲಾಗುತ್ತದೆಯೋ, ಹಾಗೆಯೇ ಈ ರಿಯಾಕ್ಟರ್‌ನಲ್ಲಿ ದೊರಕುವ ಅಪಾರ ಪ್ರಮಾಣದ ಶಕ್ತಿಯಿಂದ ವಿದ್ಯುತ್ ಉತ್ಪಾದಿಸಬಹುದು. ಈ ಉಷ್ಣ ಭೈಜಿಕ ಸಮ್ಮಿಲನ ಕ್ರಿಯೆಯಲ್ಲಿ ಯಾವ ವಿಕಿರಣಶೀಲ ವಸ್ತುಗಳೂ ಬಿಡುಗಡೆಯಾಗುವುದಿಲ್ಲ ಮತ್ತು ಇದರಿಂದ ಅತ್ಯಂತ ಕಡಿಮೆ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇದು, ನಿಸರ್ಗಕ್ಕೆ ದೊಡ್ಡಮಟ್ಟದ ಹಾನಿ ಉಂಟುಮಾಡಲಾರದು ಎನ್ನವುದು ಸದ್ಯದ ತಿಳುವಳಿಕೆ. ಆದುದರಿಂದ, ಇದನ್ನು ಶುದ್ಧ ಶಕ್ತಿ (Clean Energy) ಎಂದೂ ಕರೆಯುವುದುಂಟು. ಹಾಗಾಗಿ, ಹಲವು ದೇಶಗಳು ಒಟ್ಟುಗೂಡಿ ಮುಂದಿನ ಒಂದು ದಶಕದಲ್ಲಿ ಪೂರ್ಣ ಪ್ರಮಾಣದಲ್ಲಿ ಕೆಲಸ ನಿರ್ವಹಿಸುವ ‘ಕೃತಕ ಸೂರ್ಯ’ ರಿಯಾಕ್ಟರ್‌ಅನ್ನು ತಯಾರಿಸಲು ಹೊರಟಿರುವುದು.


ಇದನ್ನೂ ಓದಿ: ಬೆಳ್ಳಿ ಚುಕ್ಕಿ: ನೀವು ಕಂಡಿರೇ ನೀವೂ ಕಂಡಿರೇ ಬಣ್ಣದುಂಗುರವಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...