ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ 24 ಮುಸ್ಲಿಂ ಅಭ್ಯರ್ಥಿಗಳು ಗೆಲುವನ್ನು ಸಾಧಿಸಿದ್ದು, ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ಮುಸ್ಲಿಂ ಸಂಸದರು ಲೋಕಸಭೆಗೆ ಪ್ರವೇಶಿಸಿರುವ ಸಂಖ್ಯೆಯಲ್ಲಿ ಕುಸಿತ ಕಂಡು ಬಂದಿದೆ. ಕಳೆದ ಬಾರಿ 26 ಮಂದಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಸಂಸದರು ಲೋಕಸಭೆ ಪ್ರವೇಶಿಸಿದ್ದರು.
18ನೇ ಲೋಕಸಭೆಯಲ್ಲಿ ಮುಸ್ಲಿಂ ಸಮುದಾಯದ ಉಪಸ್ಥಿತಿಯು 2014ಕ್ಕೆ ಹೋಲಿಕೆ ಮಾಡಿದರೆ ಅಲ್ಪ ಚೇತರಿಕೆಯಾಗಿದ್ದು, 2014ರಲ್ಲಿ 23 ಮುಸ್ಲಿಂ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದು ಸಂಸತ್ತನ್ನು ಪ್ರವೇಶಿಸಿದ್ದರು. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ 78 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದರು. ಕಳೆದ ಚುನಾವಣೆಗೆ ಹೋಲಿಕೆ ಮಾಡಿದರೆ ಇದು ಗಣನೀಯವಾಗಿ ಇಳಿಕೆಯಾಗಿದ್ದು, ವಿವಿಧ ಪಕ್ಷಗಳಿಂದ ಕಳೆದ ಬಾರಿ 115 ಮುಸ್ಲಿಂ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು.
ಪಶ್ಚಿಮ ಬಂಗಾಳದ ಬಹರಂಪುರದಿಂದ ತೃಣಮೂಲ ಕಾಂಗ್ರೆಸ್‌ನ ಸಂಸದರಾಗಿ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಮತ್ತು ಅಸ್ಸಾಂನ ಧುಬ್ರಿಯಿಂದ ಕಾಂಗ್ರೆಸ್‌ನ ರಕಿಬುಲ್ ಹುಸೇನ್ ಗೆಲುವನ್ನು ಸಾಧಿಸಿದ್ದಾರೆ. ಈ ಬಾರಿ ಗೆದ್ದಿರುವ ಮುಸ್ಲಿಂ ಅಭ್ಯರ್ಥಿಗಳ ಪೈಕಿ ಧುಬ್ರಿಯಲ್ಲಿ ರಕಿಬುಲ್ ಹುಸೇನ್ ಅವರ ಗೆಲುವಿನ ಅಂತರ ಬಹಳ ಮಹತ್ವದ್ದಾಗಿದೆ. ಕಾಂಗ್ರೆಸ್ ಅಭ್ಯರ್ಥಿ 14.71 ಲಕ್ಷ ಮತಗಳನ್ನು ಗಳಿಸಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಮೊಹಮ್ಮದ್ ಬದ್ರುದ್ದೀನ್ ಅಜ್ಮಲ್ ಅವರನ್ನು ಸುಮಾರು 10 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ.
ಪಶ್ಚಿಮ ಬಂಗಾಳದ ಬಹರಂಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರಾಗಿದ್ದ ಮತ್ತು ಆರು ಬಾರಿ ಸಂಸದರಾಗಿದ್ದ ಅಧೀರ್ ರಂಜನ್ ಚೌಧರಿ ಅವರನ್ನು ಮೊದಲ ಬಾರಿಗೆ ಸ್ಪರ್ಧಿಸಿದ ಯೂಸುಫ್ ಪಠಾಣ್ ಅವರು 85,022 ಮತಗಳಿಂದ ಸೋಲಿಸಿದ್ದಾರೆ.
ಉತ್ತರಪ್ರದೇಶದ ಸಹರಾನ್‌ಪುರದ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್ 64,542 ಮತಗಳ ಅಂತರದಿಂದ ಜಯಗಳಿಸಿದರೆ, ಕೈರಾನಾದಿಂದ ಸಮಾಜವಾದಿ ಪಕ್ಷದ 29 ವರ್ಷದ ಅಭ್ಯರ್ಥಿ ಇಕ್ರಾ ಚೌಧರಿ 69,116 ಮತಗಳಿಂದ ಬಿಜೆಪಿಯ ಪ್ರದೀಪ್ ಕುಮಾರ್ ವಿರುದ್ಧ ಗೆಲುವನ್ನು ಸಾಧಿಸಿದ್ದಾರೆ. ಘಾಜಿಪುರದ ಹಾಲಿ ಸಂಸದ ಅಫ್ಜಲ್ ಅನ್ಸಾರಿ 5.3 ಲಕ್ಷ ಮತಗಳನ್ನು ಪಡೆಯುವ ಮೂಲಕ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಸಮಾಜವಾದಿ ಪಕ್ಷದ ಮೊಹಿಬ್ಬುಲ್ಲಾ 4,81,503 ಮತಗಳನ್ನು ಪಡೆಯುವ ಮೂಲಕ ರಾಂಪುರ ಕ್ಷೇತ್ರವನ್ನು ಗೆದ್ದುಕೊಂಡರೆ, ಜಿಯಾ ಉರ್ ರೆಹಮಾನ್ ಸಂಭಾಲ್‌ನಲ್ಲಿ 1.2 ಲಕ್ಷ ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ.
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬಿಜೆಪಿಯ ಮಾಧವಿ ಲತಾ ಕೊಂಪೆಲ್ಲಾ ವಿರುದ್ಧ 3,38,087 ಮತಗಳ ಅಂತರದಿಂದ ಹೈದರಾಬಾದ್ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ, ನ್ಯಾಷನಲ್ ಕಾನ್ಫರೆನ್ಸ್‌ನ ಶ್ರೀನಗರದ ಅಭ್ಯರ್ಥಿ ಅಗಾ ಸೈಯದ್ ರುಹುಲ್ಲಾ ಮೆಹದಿ 3,56,866 ಮತಗಳನ್ನು ಗಳಿಸಿದ್ದು, ಪ್ರತಿಸ್ಪರ್ಧಿ ಪಿಡಿಪಿಯ ವಹೀದ್-ಉರ್-ರೆಹಮಾನ್ ಪರ್ರಾ ವಿರುದ್ಧ 1.88 ಲಕ್ಷ ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್‌ನ ಮಿಯಾನ್ ಅಲ್ತಾಫ್ ಅಹ್ಮದ್ ಅವರು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ವಿರುದ್ಧ ಅನಂತನಾಗ್-ರಜೌರಿಯಲ್ಲಿ 2,81,794 ಮತಗಳಿಂದ ಗೆಲುವನ್ನು ಸಾಧಿಸಿದ್ದಾರೆ. ಲಡಾಖ್‌ನಲ್ಲಿ ಸ್ವತಂತ್ರ ಅಭ್ಯರ್ಥಿ ಮೊಹಮ್ಮದ್ ಹನೀಫಾ 27,862 ಮತಗಳ ಅಂತರದಿಂದ ಗೆಲುವು ಸಾಧಿಸಿದರೆ, ಮತ್ತೋರ್ವ ಸ್ವತಂತ್ರ ಅಭ್ಯರ್ಥಿ ಅಬ್ದುಲ್ ರಶೀದ್ ಶೇಖ್ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಬಿಹಾರದ ಕತಿಹಾರ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ತಾರಿಕ್ ಅನ್ವರ್ ಜೆಡಿಯು ಅಭ್ಯರ್ಥಿ ದುಲಾಲ್ ಚಂದ್ರ ಗೋಸ್ವಾಮಿ ವಿರುದ್ಧ 49,863 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಪಕ್ಷವಾರು ನೋಡಿದಾಗ ಕಾಂಗ್ರೆಸ್ ಈಗ ಅತಿ ಹೆಚ್ಚು ಅಂದರೆ 7 ಮುಸ್ಲಿಂ ಸಂಸದರನ್ನು ಹೊಂದಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಐವರು ಮತ್ತು ಸಮಾಜವಾದಿ ಪಕ್ಷ ನಾಲ್ವರು ಸಂಸದರನ್ನು ಹೊಂದಿದೆ. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮಲಪ್ಪುರಂನಿಂದ ಟಿ ಮೊಹಮ್ಮದ್ ಬಶೀರ್, ಕೇರಳದ ಪೊನ್ನಾನಿಯಿಂದ ಎಂ ಪಿ ಅಬ್ದುರಸ್ಮದ್ ಸಮ್ದಾನಿ ಮತ್ತು ತಮಿಳುನಾಡಿನ ರಾಮನಾಥಪುರದಿಂದ ಕೆ ನವಾಸ್ಕಾನಿ ಸೇರಿ ಮೂವರು ಸಂಸದರನ್ನು ಹೊಂದಿದೆ.
ಇದನ್ನು ಓದಿ: ‘ಮೈತ್ರಿಯಿಂದ ಯಾವುದೇ ಪ್ರಯೋಜನವಾಗಿಲ್ಲ’: ಪ.ಬಂಗಾಳದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಕೊನೆಗೊಳಿಸಿದ ಕೆಲವು ಎಡ ಪಕ್ಷಗಳು


