ಯುಎಇಯಲ್ಲಿ ಮರಣದಂಡನೆ ಪ್ರಕಟಗೊಂಡಿರುವ ಭಾರತೀಯ ಪ್ರಜೆಗಳ ಸಂಖ್ಯೆ 25 ಆಗಿದ್ದು, ಇನ್ನಷ್ಟೇ ಶಿಕ್ಷೆ ಜಾರಿಯಾಗಬೇಕಿದೆ ಎಂದು ಕೇಂದ್ರ ಸರ್ಕಾರ ಗುರುವಾರ (ಮಾ.20) ಸಂಸತ್ತಿಗೆ ತಿಳಿಸಿದೆ.
ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ರಾಜ್ಯಸಭೆಯಲ್ಲಿ ಲಿಖಿತ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.
“ಸಚಿವಾಲಯದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ವಿದೇಶಿ ಕಾರಾಗೃಹಗಳಲ್ಲಿ ಪ್ರಸ್ತುತ ವಿಚಾರಣಾಧೀನ ಕೈದಿಗಳು ಸೇರಿದಂತೆ ಭಾರತೀಯ ಕೈದಿಗಳ ಸಂಖ್ಯೆ 10,152” ಎಂದು ಸಿಂಗ್ ಹೇಳಿದ್ದಾರೆ.
ವಿದೇಶಗಳಲ್ಲಿ ಮರಣದಂಡನೆಗೆ ಗುರಿಯಾಗಿರುವ ಭಾರತೀಯರ ವಿವರಗಳು ಮತ್ತು ಅವರಿಗೆ ಸಹಾಯ ಮಾಡಲು ಭಾರತ ಸರ್ಕಾರ ಮಾಡಿದ ಪ್ರಯತ್ನಗಳ ಬಗ್ಗೆಯೂ ಪ್ರಶ್ನೆಯಲ್ಲಿ ಕೇಳಲಾಗಿತ್ತು.
“ವಿದೇಶಿ ಜೈಲುಗಳಲ್ಲಿರುವವರು ಸೇರಿದಂತೆ ವಿದೇಶಗಳಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ, ಭದ್ರತೆ ಮತ್ತು ಯೋಗಕ್ಷೇಮಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ” ಎಂದು ಸಿಂಗ್ ತಿಳಿಸಿದ್ದಾರೆ.
ಭಾರತೀಯರಿಗೆ ಮರಣದಂಡನೆ ಶಿಕ್ಷೆ ಘೋಷಣೆಯಾಗಿರುವ, ಇನ್ನೂ ಜಾರಿಯಾಗದ ಎಂಟು ದೇಶಗಳ ಡೇಟಾವನ್ನು ಸಚಿವರು ಹಂಚಿಕೊಂಡಿದ್ದಾರೆ. ಅಂಕಿ ಅಂಶಗಳ ಪ್ರಕಾರ, ಯುಎಇಯಲ್ಲಿ 25, ಸೌದಿ ಅರೇಬಿಯಾದಲ್ಲಿ 11, ಮಲೇಷ್ಯಾದಲ್ಲಿ 6, ಕುವೈತ್‌ನಲ್ಲಿ 3 ಮತ್ತು ಇಂಡೋನೇಷ್ಯಾ, ಕತಾರ್, ಅಮೆರಿಕ ಮತ್ತು ಯೆಮೆನ್‌ನಲ್ಲಿ ತಲಾ ಒಬ್ಬರಿಗೆ ಮರಣದಂಡನೆ ವಿಧಿಸಲಾಗಿದೆ.
“ವಿದೇಶಿ ನ್ಯಾಯಾಲಯಗಳಿಂದ ಮರಣದಂಡನೆ ಸೇರಿದಂತೆ ಶಿಕ್ಷೆಗೊಳಗಾದ ಭಾರತೀಯ ಪ್ರಜೆಗಳಿಗೆ ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು/ಠಾಣೆಗಳು ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುತ್ತಿವೆ. ಭಾರತೀಯ ರಾಯಭಾರ ಕಚೇರಿಗಳು/ಠಾಣೆಗಳು ಜೈಲುಗಳಿಗೆ ಭೇಟಿ ನೀಡುವ ಮೂಲಕ ಮತ್ತು ನ್ಯಾಯಾಲಯಗಳು, ಜೈಲುಗಳು, ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಮತ್ತು ಇತರ ಸಂಬಂಧಿತ ಸಂಸ್ಥೆಗಳೊಂದಿಗೆ ಅವರ ಪ್ರಕರಣಗಳನ್ನು ಫಾಲೋ ಅಪ್ ಮಾಡುವ ಮೂಲಕ ಕಾನ್ಸುಲರ್ ಪ್ರವೇಶವನ್ನು ಒದಗಿಸುತ್ತಿವೆ.
ಜೈಲಿನಲ್ಲಿರುವ ಭಾರತೀಯ ಪ್ರಜೆಗಳಿಗೆ ಮೇಲ್ಮನವಿ ಸಲ್ಲಿಸುವುದು, ಕ್ಷಮಾದಾನ ಅರ್ಜಿ ಸಲ್ಲಿಸುವುದು ಸೇರಿದಂತೆ ವಿವಿಧ ಕಾನೂನು ಪರಿಹಾರಗಳನ್ನು ಅನ್ವೇಷಿಸುವಲ್ಲಿ ಸಹಾಯ ಮಾಡಲಾಗುತ್ತಿದೆ” ಎಂದು ಸಚಿವರು ವಿವರಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ವಿದೇಶಗಳಲ್ಲಿ ಯಾವುದಾರು ಭಾರತೀಯ ಪ್ರಜೆಗಳನ್ನು ಗಲ್ಲಿಗೇರಿಸಲಾಗಿದೆಯೇ ಎಂದು ಸಚಿವ ಸಿಂಗ್ ಅವರಿಗೆ ಕೇಳಲಾಗಿತ್ತು. ಮಲೇಷ್ಯಾ, ಕುವೈತ್, ಕತಾರ್ ಮತ್ತು ಸೌದಿ ಅರೇಬಿಯಾದಲ್ಲಿ ಮರಣದಂಡನೆ ವಿಧಿಸಲಾಗಿದೆ ಸಚಿವರು ದೃಢಪಡಿಸಿದ್ದಾರೆ.
2024 ರಲ್ಲಿ ಕುವೈತ್, ಸೌದಿ ಅರೇಬಿಯಾದಲ್ಲಿ ಮೂವರು ಮತ್ತು ಜಿಂಬಾಬ್ವೆಯಲ್ಲಿ ಒಬ್ಬರು ಭಾರತೀಯರನ್ನು ಗಲ್ಲಿಗೇರಿಸಲಾಗಿದೆ. 2023 ರಲ್ಲಿ, ಕುವೈತ್ ಮತ್ತು ಸೌದಿ ಅರೇಬಿಯಾದಲ್ಲಿ ತಲಾ ಐದು ಭಾರತೀಯರನ್ನು ಮತ್ತು ಮಲೇಷ್ಯಾದಲ್ಲಿ ಒಬ್ಬರನ್ನು ಗಲ್ಲಿಗೇರಿಸಲಾಗಿದೆ.
ಯುಎಇಗೆ ಸಂಬಂಧಿಸಿದಂತೆ, ಅಧಿಕಾರಿಗಳು ಅಂತಹ ಡೇಟಾವನ್ನು ಹಂಚಿಕೊಳ್ಳುವುದಿಲ್ಲ ಎಂದು ಸಚಿವ ಸಿಂಗ್ ಹೇಳಿದ್ದು, ಆದಾಗ್ಯೂ, ಭಾರತೀಯ ರಾಯಭಾರ ಕಚೇರಿಯಲ್ಲಿ ಲಭ್ಯವಿರುವ ಅನೌಪಚಾರಿಕ ಮಾಹಿತಿಯ ಪ್ರಕಾರ, 2020 ಮತ್ತು 2024 ರ ನಡುವೆ ಯಾವುದೇ ಭಾರತೀಯರನ್ನು ಗಲ್ಲಿಗೇರಿಸಲಾಗಿಲ್ಲ.
ಅನ್ಯಾಯದ ಕ್ಷೇತ್ರ ಪುನರ್‌ವಿಂಗಡನೆ ರಾಜ್ಯಗಳನ್ನು ರಾಜಕೀಯವಾಗಿ ದುರ್ಬಲಗೊಳಿಸುತ್ತದೆ: ಎಂ.ಕೆ ಸ್ಟಾಲಿನ್


