ಪ್ರಯಾಣಿಸುತ್ತಿದ್ದ ವಾಹನದಲ್ಲಿ ಕಿಸಾನ್ ಮೋರ್ಚಾದ ಬಾವುಟ ಇದೆ ಎಂದು ಆರೋಪಿಸಿ ಎರಡು ವರ್ಷದ ಮಗು ಸಹಿತ 25 ಮಹಿಳೆಯರನ್ನು ದೆಹಲಿ ಪೊಲೀಸರು ಬಂಧಿಸಿರುವ ಘಟನೆ ಮಾರ್ಚ್ 3 ರಂದು ನಡೆದಿದೆ.
ದೆಹಲಿ ಪೊಲೀಸರು ಚಾಣಕ್ಯಪುರಿ ಬಳಿ 25 ಮಹಿಳೆಯರು ಮತ್ತು ಎರಡು ವರ್ಷದ ಮಗುವನ್ನು ಸಿಂಗು ಗಡಿಯಿಂದ ಗುರುದ್ವಾರ ರಾಕಬ್‌ಗಂಜ್‌ಗೆ ಪ್ರಯಾಣಿಸುತ್ತಿದ್ದಾಗ ಬುಧವಾರ ಮುಂಜಾನೆ ಬಂಧಿಸಿದ್ದಾರೆ. ನಂತರ ಅವರನ್ನು ತಿಲಕ್ ಮಾರ್ಗ ಪೊಲೀಸ್ ಠಾಣೆಯಿಂದ ಬಿಡುಗಡೆ ಮಾಡಲಾಗಿದೆ. ಅವರು ಪ್ರಯಾಣಿಸುತ್ತಿದ್ದ ಟೆಂಪೊ ಟ್ರಾವೆಲರ್‌ನಲ್ಲಿ ಸಿಖ್ ಧ್ವಜ ಮತ್ತು ‘ಕಿಸಾನ್ ಮೋರ್ಚಾ’ ಧ್ವಜಗಳನ್ನು ಪ್ರದರ್ಶಿಸಿದ್ದರಿಂದ ಅವುಗಳನ್ನು ನಿಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ರೈತ ಹೋರಾಟ: ಕಡು ಬೇಸಿಗೆ ಎದುರಿಸಲು ಸಿದ್ದರಾಗುತ್ತಿದ್ದಾರೆ ಅನ್ನದಾತರು!
ವಾಹನದಿಂದ ಧ್ವಜಗಳನ್ನು ತೆಗೆದುಹಾಕಲು ಮಹಿಳೆಯರು ನಿರಾಕರಿಸಿದ್ದಕ್ಕಾಗಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಗುಂಪಿನ ನಾಯಕಿ ಮಂಜೀತ್ ಕೌರ್ ದೋಬ್ಕಾ ಸೇರಿದಂತೆ ಪುಟ್ಟ ಮಗು ಯಸ್ಮಿ ಕೌರ್ ಅವರನ್ನು ಕೂಡಾ ಪೊಲೀಸರು ಬಂಧಿಸಿದ್ದಾರೆ ಎಂದು ದಿ ಟ್ರಿಬ್ಯೂನ್ ವರದಿ ಮಾಡಿದೆ.
“ಅವರ ವಾಹನದಲ್ಲಿ ನಿಶಾನ್ ಸಾಹಿಬ್ ಮತ್ತು ಕಿಸಾನ್ ಮೋರ್ಚಾ ಧ್ವಜಗಳು ಇದ್ದುದರಿಂದ ಅವರನ್ನು ನಿಲ್ಲಿಸಲಾಯಿತು. ಧ್ವಜವನ್ನು ತೆಗೆಯುವಂತೆ ವಾಗ್ವಾದ ನಡೆದಿದ್ದು, ಮಹಿಳೆಯರುವ ಧ್ವಜವನ್ನು ತೆಗೆದುಹಾಕಲು ನಿರಾಕರಿಸಿದ್ದಕ್ಕಾಗಿ ಎಲ್ಲಾ ಮಹಿಳೆಯರನ್ನು ಬಂಧಿಸಲಾಯಿತು” ಕಿಸಾನ್ ಮೋರ್ಚಾದ ಕಾನೂನು ಸಲಹಾ ಸದಸ್ಯ ವಾಸು ಕುಕ್ರೇಜಾ ಹೇಳಿದ್ದಾರೆ.
“ಕಾನೂನಿನ ಪ್ರಕಾರ, ಸಂಜೆ 7 ಅಥವಾ ಸೂರ್ಯಾಸ್ತದ ನಂತರ ಯಾವುದೇ ಮಹಿಳೆಯನ್ನು ಬಂಧನ ಮತ್ತು ವಶಕ್ಕೆ ಪಡೆಯುವಂತಿಲ್ಲ. ಇಲ್ಲಿ ಎರಡು ವರ್ಷದ ಮಗುವನ್ನು ಕೂಡ ಬಂಧಿಸಿದ್ದಾರೆ. ಪ್ರಕರಣದ ಕುರಿತು ನಾವು ಮಾನವ ಹಕ್ಕುಗಳ ಆಯೋಗ ಮತ್ತು ಜಂಟಿ ಆಯುಕ್ತರಿಗೆ ಪತ್ರ ಬರೆಯುತ್ತೇವೆ. ದೆಹಲಿ ಪೊಲೀಸರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಮೊಕದ್ದಮೆ ಹೂಡಲಿದ್ದೇವೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ರೈತರನ್ನು ಸುತ್ತುವರಿಯಲು ನೋಡಿದರು, ಈಗ ರೈತರೇ ಸರ್ಕಾರವನ್ನು ಸುತ್ತುವರೆದಿದ್ದಾರೆ: ಡಾ. ಅಮಿತ್ ಬಾಧುರಿ


