ಕಳೆದ ಎರಡು ದಿನಗಳಲ್ಲಿ ಭಾರತದಲ್ಲಿ ಕರೊನಾ ವೈರಸ್ ಸೋಂಕು ತೀವ್ರವಾಗಿ ಏರಿಕೆಯಾಗಿದ್ದು, ಸದ್ಯ 29 ಪ್ರಕರಣಗಳು ದಾಖಲಾಗಿವೆ, ದೇಶಾದ್ಯಂತ 28,529 ಜನರ ಮೇಲೆ ಕಣ್ಗಾವಲು ಇಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ವರ್ಧನ್ ಗುರುವಾರ ಸಂಸತ್ತಿನಲ್ಲಿ ತಿಳಿಸಿದ್ದಾರೆ.
ಭಾರತಕ್ಕೆ ಪ್ರವೇಶಿಸುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲಿ ಪರೀಕ್ಷಿಸಲಾಗುವುದು ಎಂದು ಸರ್ಕಾರ ಪ್ರಕಟಿಸಿದೆ. ಬಂದರುಗಳ ಮೂಲಕ ದೇಶಕ್ಕೆ ಪ್ರವೇಶಿಸುವ ಪ್ರಯಾಣಿಕರನ್ನು ಸಹ ಪರೀಕ್ಷಿಸಲಾಗುವುದು ಎನ್ನಲಾಗಿದೆ.
ಕಳೆದ ತಿಂಗಳು ದೆಹಲಿಗೆ ಬಂದಿಳಿದ 15 ಇಟಾಲಿಯನ್ ಪ್ರವಾಸಿಗರು ಮತ್ತು ಅವರೊಂದಿಗೆ ಪ್ರಯಾಣಿಸುತ್ತಿದ್ದ ಒಬ್ಬ ಭಾರತೀಯ ಸೇರಿದಂತೆ ಅವರೆಲ್ಲರಲ್ಲಿ ಕರೋನ ವೈರಸ್ ಇರುವುದು ಪತ್ತೆಯಾಗಿದೆ. ಕಳೆದ ತಿಂಗಳು ವೈರಸ್‌ಗೆ ತುತ್ತಾದ ಕೇರಳದ ಇತರ ಮೂವರು ಗುಣಮುಖರಾಗಿದ್ದಾರೆ.
ಕರೋನ ವೈರಸ್ ತಗುಲಿದ 2 ರಿಂದ 14 ದಿನಗಳ ನಡುವೆ ಯಾವುದೇ ಸಮಯದಲ್ಲಿ ಅದರ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆ ಇದರ ಲಕ್ಷಣಗಳಾಗಿವೆ. ವಿಶ್ವಾದ್ಯಂತ ಸುಮಾರು 90,000 ಜನರಿಗೆ ಈ ಸೋಂಕು ತಗುಲಿದ್ದು, ಅವರಲ್ಲಿ ಸುಮಾರು 3,000 ಜನರು ಸಾವನ್ನಪ್ಪಿದ್ದಾರೆ.


