ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದಂದಿನಿಂದ ಮಧ್ಯಮ ಕ್ರಮಾಂಕದ ಬ್ಯಾಟರ್ 32 ವರ್ಷದ ಸೂರ್ಯಕುಮಾರ್ ಯಾದವ್ ಒಂದಲ್ಲಾ ಒಂದು ದಾಖಲೆ ಬರೆಯುತ್ತಲೇ ಇದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ನಂಬರ್ 1 ಸ್ಥಾನ ಪಡೆದಿರುವ ಅವರು ಭಾನುವಾರ ನಡೆದ ಜಿಂಬಾಬ್ವೆ ಎದುರಿನ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ದಾಖಲಿಸುವ ಮೂಲಕ ಅವರು ಮತ್ತೆರಡು ವಿಶಿಷ್ಟ ದಾಖಲೆ ನಿರ್ಮಿಸಿದ್ದಾರೆ.
ಜಿಂಬಾಬ್ವೆ ಎದುರಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ 25 ಎಸೆತಗಳಲ್ಲಿ ಅಜೇಯ 61 ರನ್ (6 ಬೌಂಡರಿ, 4 ಸಿಕ್ಸರ್) ದಾಖಲಿಸಿದ್ದರು. ಈ ವಿಶ್ವಕಪ್‌ನಲ್ಲಿ ಐದು ಪಂದ್ಯಗಳ ಪೈಕಿ ಸೂರ್ಯಕುಮಾರ್ ಯಾದವ್ ದಾಖಲಿಸುತ್ತಿರುವ ಮೂರನೇ ಅರ್ಧಶತಕ ಇದು. ಸೂರ್ಯಕುಮಾರ್ ಈ ಟೂರ್ನಿಯಲ್ಲಿ 225 ರನ್ ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದವರ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 246 ರನ್‌ಗಳೊಂದಿಗೆ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅತಿ ಹೆಚ್ಚು ಬೌಂಡರಿ ಗಳಿಸಿದವರ ಸಾಲಿನಲ್ಲಿ 33 ಬೌಂಡರಿ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. 10ಕ್ಕಿಂತ ಹೆಚ್ಚು ಎಸೆತ ಎದುರಿಸಿ ಅತಿ ಹೆಚ್ಚು ಸ್ಟ್ರೈಕ್‌ರೇಟ್ ಹೊಂದಿರುವವರಲ್ಲಿ ಯಾದವ್ ಮೊದಲ (193.96) ಸ್ಥಾನದಲ್ಲಿದ್ದಾರೆ.
ಇವುಗಳಲ್ಲದೆ ಈ ಪಂದ್ಯದಲ್ಲಿ ಸೂರ್ಯಕುಮಾರ್ ಎರಡು ವಿಶಿಷ್ಠ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಹೌದು ಜಿಂಬಾಬ್ವೆ ವಿರುದ್ಧ ಅರ್ಧಶತಕ ದಾಖಲಿಸುವ ಮೂಲಕ ಕ್ಯಾಲೆಂಡರ್ ವರ್ಷದಲ್ಲಿ ಸಾವಿರ ಟಿ20 ರನ್ ಬಾರಿಸಿದ ವಿಶ್ವದ ಎರಡನೇ ಬ್ಯಾಟರ್ ಮತ್ತು ಭಾರತದ ಮೊದಲ ಬ್ಯಾಟರ್ ಎಂಬ ಶ್ರೇಯಕ್ಕೆ ಅವರು ಪಾತ್ರರಾಗಿದ್ದಾರೆ. 2022ರಲ್ಲಿ ಸೂರ್ಯಕುಮಾರ್ ಯಾದವ್ ಒಟ್ಟಾರೆ 44.60ರ ಸರಾಸರಿಯಲ್ಲಿ 1026 ರನ್ ಗಳಿಸಿದ್ದಾರೆ.
𝙉𝙤 𝙗𝙚𝙩𝙩𝙚𝙧 𝙛𝙚𝙚𝙡𝙞𝙣𝙜 🇮🇳💙 pic.twitter.com/WoEBakCdrJ
— Surya Kumar Yadav (@surya_14kumar) November 6, 2022
ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಕಳೆದ ವರ್ಷ 1326 ರನ್ ದಾಖಲಿಸಿದ್ದರು. ಈ ಮೂಲಕ ವಿಶ್ವ ಟಿ20 ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಸಾವಿರ ರನ್ ದಾಖಲಿಸಿದ ಮೊದಲ ಬ್ಯಾಟರ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು. ಇದೀಗ ಆ ಪಟ್ಟಿಗೆ ಭಾರತದ ಸೂರ್ಯಕುಮಾರ್ ಯಾದವ್ ಸಹ ಸೇರ್ಪಡೆಯಾಗಿದ್ದಾರೆ.
ಈ ಪೈಕಿ ವಿಶೇಷವೆಂದರೆ, ರಿಜ್ವಾನ್ ಸಾವಿರ ರನ್ ಪೂರೈಸಲು 983 ಚೆಂಡುಗಳನ್ನು ಎದುರಿಸಿದ್ದರೆ, ಸೂರ್ಯಕುಮಾರ್ ಯಾದವ್ ಕೇವಲ 550 ಚೆಂಡುಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಅಂದರೆ 186.54ರ ಸ್ಟ್ರೈಕ್‌ರೇಟ್‌ನಲ್ಲಿ ಸೂರ್ಯಕುಮಾರ್ ಯಾದವ್ ಸಾವಿರ ರನ್ ಗಳಿಸಿದ್ದಾರೆ. ಇದೂ ಸಹ ಒಂದು ದಾಖಲೆಯಾಗಿದ್ದು, ವಿಶ್ವ ಚುಟುಕು ಕ್ರಿಕೆಟ್‌ನಲ್ಲಿ ಇಷ್ಟೊಂದು ಉತ್ತಮ ಸ್ಟ್ರೈಕ್‌ರೇಟ್ ಹೊಂದಿರುವ ಮೊದಲ ಬ್ಯಾಟರ್ ಎಂಬ ಶ್ರೇಯವೂ ಅವರ ಪಾಲಾಗಿದೆ.
ಇನ್ನು ಜಗತ್ತಿನ ಹಲವು ಕ್ರಿಕೆಟರ್‌ಗಳು ಸೂರ್ಯಕುಮಾರ್ ಯಾದವ್ ಅವರನ್ನು ಪ್ರಶಂಸಿಸಿವೆ. ಕೆಲವರು 360 ಡಿಗ್ರಿ ಬ್ಯಾಟರ್ ಎಂದು ಕರೆದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸೂರ್ಯಕುಮಾರ್ ಯಾದವ್, “ಎಬಿಡಿ ವಿಲಿಯರ್ಸ್ ಒಬ್ಬರೆ ಜಗತ್ತಿನ ಏಕೈಕ 360 ಡಿಗ್ರಿ ಆಟಗಾರ. ನಾನು ಅವರಂತೆ ಆಡಲು ಯತ್ನಿಸುತ್ತೇನೆ” ಎಂದಿದ್ದಾರೆ. ಇದಕ್ಕೆ “ಗೆಳೆಯ ನೀನು ಬೇಗ ಆ ಸ್ಥಾನ ಪಡೆಯುತ್ತೀಯ. ಇನ್ನೂ ಎತ್ತರಕ್ಕೆ ಬೆಳೆಯುವೆ. ಇಂದು ಚೆನ್ನಾಗಿ ಆಡಿದೆ” ಎಂದು ಎಬಿಡಿ ವಿಲಿಯರ್ಸ್ ಅಭಿನಂದಿಸಿದ್ದಾರೆ.
You’re very quickly getting there dude, and even more! Well played today
— AB de Villiers (@ABdeVilliers17) November 6, 2022
ಭಾರತ ತಂಡ ಮುಂದಿನ ಗುರುವಾರ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯವಾಡಲಿದ್ದು, ಸೂರ್ಯಕುಮಾರ್ ಯಾದವ್ ಫಾರ್ಮ್ ಭಾರತದ ಪಾಲಿಗೆ ವರದಾನವಾಗಿದೆ. ಕಳೆದ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಶತಕ ದಾಖಲಿಸುವ ಮೂಲಕ ಮಿಂಚಿದ್ದರು. ಹೀಗಾಗಿ ಸೆಮಿಫೈನಲ್ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಇದನ್ನೂ ಓದಿ; ಟಿ20 ವಿಶ್ವಕಪ್: ಬಲಿಷ್ಟ ತಂಡಗಳನ್ನು ಮಣಿಸಿದ ಪುಟ್ಟ ಆದರೆ ದಿಟ್ಟ ತಂಡಗಳಿವು


