ರಾಷ್ಟ್ರ ರಾಜಧಾನಿಯಲ್ಲಿ 4.0 ತೀವ್ರತೆಯ ಭೂಕಂಪದ ನಂತರ ಇಂದು ಬೆಳಿಗ್ಗೆ 5:36 ಕ್ಕೆ ದೆಹಲಿ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ಬಲವಾದ ಕಂಪನದ ಅನುಭವವಾಯಿತು.
ದೇಶದಲ್ಲಿ ಭೂಕಂಪ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡುವ ಭಾರತ ಸರ್ಕಾರದ ನೋಡಲ್ ಏಜೆನ್ಸಿಯಾದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು, ದೆಹಲಿಯನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಉತ್ತರ ಭಾರತದಾದ್ಯಂತ ಕಂಪನದ ಅನುಭವವಾಗಿದೆ ಎಂದು ತನ್ನ ಇತ್ತೀಚಿನ ಹೆಳಿಕೆಯಲ್ಲಿ ತಿಳಿಸಿದೆ. ಭೂಕಂಪದ ಆಳ ಕೇವಲ 5 ಕಿ.ಮೀ. ಆಗಿತ್ತು.
ಧೌಲಾ ಕುವಾನ್‌ನಲ್ಲಿರುವ ದುರ್ಗಾಬಾಯಿ ದೇಶಮುಖ ವಿಶೇಷ ಶಿಕ್ಷಣ ಕಾಲೇಜಿನ ಬಳಿ ಕೇಂದ್ರಬಿಂದು ಇತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹತ್ತಿರದಲ್ಲಿ ಸರೋವರವನ್ನು ಹೊಂದಿರುವ ಆ ಪ್ರದೇಶವು ಪ್ರತಿ ಎರಡರಿಂದ ಮೂರು ವರ್ಷಗಳಿಗೊಮ್ಮೆ ಸಣ್ಣ, ಕಡಿಮೆ-ತೀವ್ರತೆಯ ಭೂಕಂಪಗಳನ್ನು ಅನುಭವಿಸುತ್ತಿದೆ. 2015 ರಲ್ಲಿ ಇದು 3.3 ತೀವ್ರತೆಯ ಭೂಕಂಪವನ್ನು ದಾಖಲಿಸಿದೆ ಎಂದು ಅವರು ಹೇಳಿದರು. ದೆಹಲಿಯಲ್ಲಿ ಭೂಕಂಪ ಸಂಭವಿಸಿದಾಗ ದೊಡ್ಡ ಶಬ್ದ ಕೇಳಿದೆ ಎಂದು ಅಧಿಕಾರಿ ಹೇಳಿದರು.
ದೆಹಲಿ ಮತ್ತು ಹತ್ತಿರದ ಪ್ರದೇಶಗಳ ನಿವಾಸಿಗಳು ‘ಶಾಂತವಾಗಿರಬೇಕು, ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
“ದೆಹಲಿ ಮತ್ತು ಹತ್ತಿರದ ಪ್ರದೇಶಗಳಲ್ಲಿ ಕಂಪನಗಳು ಕಂಡುಬಂದಿವೆ. ಎಲ್ಲರೂ ಶಾಂತವಾಗಿರಲು ಮತ್ತು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸಲು, ಸಂಭವನೀಯ ನಂತರದ ಆಘಾತಗಳಿಗೆ ಜಾಗರೂಕರಾಗಿರಲು ಒತ್ತಾಯಿಸುತ್ತಿದ್ದೇವೆ. ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ” ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.
ದೆಹಲಿಯ ಹಂಗಾಮಿ ಮುಖ್ಯಮಂತ್ರಿ ಅತಿಶಿ, “ದೆಹಲಿಯಲ್ಲಿ ಬಲವಾದ ಭೂಕಂಪ ಸಂಭವಿಸಿದೆ, ಎಲ್ಲರೂ ಸುರಕ್ಷಿತವಾಗಿರಲಿ” ಎಂದು ಪ್ರಾರ್ಥಿಸಿದರು.
ಕಂಪನದಿಂದ ಇಲ್ಲಿಯವರೆಗೆ, ಯಾವುದೇ ಗಾಯಗಳು ಅಥವಾ ಸಾವುನೋವುಗಳ ವರದಿಗಳು ಬಂದಿಲ್ಲ. ನವದೆಹಲಿ ರೈಲ್ವೆ ನಿಲ್ದಾಣದ ಮಾರಾಟಗಾರರೊಬ್ಬರು ಮಾತನಾಡಿ, “ಎಲ್ಲವೂ ನಡುಗುತ್ತಿತ್ತು, ಗ್ರಾಹಕರು ಕಿರುಚಲು ಪ್ರಾರಂಭಿಸಿದರು” ಎಂದು ಅವರು ತಿಳಿಸಿದರು.
ನಿಲ್ದಾಣದಲ್ಲಿ ತಮ್ಮ ರೈಲಿಗಾಗಿ ಕಾಯುತ್ತಿದ್ದ ಪ್ರಯಾಣಿಕನೊಬ್ಬ, “ಇಲ್ಲಿ ರೈಲು ಭೂಗತದಲ್ಲಿ ಓಡುತ್ತಿರುವಂತೆ” ಭಾಸವಾಗುತ್ತಿದೆ ಎಂದು ಹೇಳಿದರು.
ಗಾಜಿಯಾಬಾದ್ ನಿವಾಸಿಯೊಬ್ಬರು, “ಕಂಪನಗಳು ಇಷ್ಟು ಪ್ರಬಲವಾಗಿವೆ, ನಾನು ಇದಕ್ಕೂ ಮೊದಲು ಈ ರೀತಿ ಅನುಭವಿಸಿರಲಿಲ್ಲ” ಎಂದು ಹೇಳಿದರು. “ಇಡೀ ಕಟ್ಟಡ ನಡುಗುತ್ತಿತ್ತು” ಎಂದು ಅವರು ಹೇಳಿದರು.
ದೆಹಲಿಯಲ್ಲಿ ಭೂಕಂಪನದ ಅಪಾಯ ಹೆಚ್ಚಿರುವುದಕ್ಕೆ ಕಾರಣ
ದೆಹಲಿಯು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಭೂಕಂಪನ ವಲಯ ನಕ್ಷೆಯ ಹೆಚ್ಚಿನ ಭೂಕಂಪನ ವಲಯ (ವಲಯ IV) ದಲ್ಲಿ ಇರುವುದರಿಂದ ಅದು ಭೂಕಂಪಗಳಿಗೆ ಗುರಿಯಾಗುತ್ತದೆ.
ಜನವರಿ 23 ರಂದು, ಚೀನಾದ ಕ್ಸಿನ್‌ಜಿಯಾಂಗ್‌ನಲ್ಲಿ 80 ಕಿಲೋಮೀಟರ್ ಆಳದಲ್ಲಿ 7.2 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ದೆಹಲಿ-ಎನ್‌ಸಿಆರ್‌ನಾದ್ಯಂತ ಬಲವಾದ ಕಂಪನಗಳು ಕಂಡುಬಂದವು.
ಅದಕ್ಕೂ ಎರಡು ವಾರಗಳ ಮೊದಲು, ಜನವರಿ 11 ರಂದು ಅಫ್ಘಾನಿಸ್ತಾನದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ದೆಹಲಿ ಮತ್ತು ಹತ್ತಿರದ ಪ್ರದೇಶಗಳಲ್ಲಿ ಕೊನೆಯ ಬಾರಿಗೆ ಸೌಮ್ಯ ಕಂಪನಗಳು ಕಂಡುಬಂದವು.
ಇದನ್ನೂ ಓದಿ; ಮಹಾರಾಷ್ಟ್ರ| ಗೋರಕ್ಷಕರ ಹೆಸರಿನಲ್ಲಿ ನನ್ನ ಮೇಲೆ ದಾಳಿಯಾಗಿದೆ ಎಂದು ಆರೋಪಿಸಿದ ವ್ಯಾಪಾರಿ


