ಪ್ರಪಂಚದಾದ್ಯಂತ 16,000 ಪ್ರಕರಣಗಳು ಕಂಡುಬಂದರೂ ಭಾರತದಲ್ಲಿ ಇದುವರೆಗೂ ನಾಲ್ಕು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. ಇದು ಕೋವಿಡ್ ರೀತಿ ವೇಗವಾಗಿ ಹರಡುವುದಿಲ್ಲವಾದ್ದರಿಂದ ಆತಂಕಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲ ಎಂದು ನೀತಿ ಆಯೋಗದ ತಜ್ಞರಾದ ಡಾ.ವಿ.ಕೆ ಪೌಲ್ ತಿಳಿಸಿದ್ದಾರೆ.
ಸರ್ವೇಕ್ಷಣೆಯನ್ನು ಹೆಚ್ಚು ಮಾಡಲಾಗಿದೆ. ಆದರೂ ನಿಮಗೆ ಅಥವಾ ನಿಮ್ಮ ಸ್ನೇಹಿತರಿಗೆ ಮಂಕಿಪಾಕ್ಸ್ ಖಾಯಿಲೆಯ ಲಕ್ಷಣಗಳು ಕಂಡುಬಂದರೆ ಅದನ್ನು ಮುಚ್ಚಿಡುವ ಬದಲು ವರದಿ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆಗ ಚಿಕಿತ್ಸೆ ನೀಡುವುದು ಸುಲಭವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಕ್ಯಾನ್ಸರ್‌ನಂತಹ ಇತರ ಕಾಯಿಲೆಗಳಿರುವ ರೋಗಿಗಳು ಇನ್ನೂ ಹೆಚ್ಚು ಜಾಗರೂಕರಾಗಿರಬೇಕು. ಆದರೆ ಯಾವುದೇ ಕಾರಣಕ್ಕೂ ಗಾಬರಿಯಾಗಬೇಡಿ. ಇದು ಕೋವಿಡ್‌ನಂತೆ ವೇಗವಾಗಿ ಹರಡುವ ರೋಗವಲ್ಲ. ಜೊತೆಗೆ ಸ್ವಯಂ ಚಿಕಿತ್ಸೆ ತೆಗೆದುಕೊಳ್ಳುವುದು ಅಪಾಯಕಾರಿಯಾಗಿದ್ದು ತಪ್ಪದೇ ಆಸ್ಪತ್ರೆಗೆ ವರದಿ ಮಾಡಬೇಕು ಎಂದಿದ್ದಾರೆ.
ಭಾರತದಲ್ಲಿ ದೆಹಲಿ, ಕೇರಳ, ಉತ್ತರ ಪ್ರದೇಶ ಮತ್ತು ತೆಲಂಗಾಣದಲ್ಲಿ ತಲಾ ಒಂದೊಂದಿ ಶಂಕಿತ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. 74 ದೇಶಗಳಲ್ಲಿ 16,000 ಪ್ರಕರಣಗಳು ವರದಿಯಾಗುತ್ತಿದ್ದಂತೆ ವಿಶ್ವ ಆರೋಗ್ಯ ಸಂಸ್ಥೆಯು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಹೇರಿದೆ.
ಮಂಕಿಪಾಕ್ಸ್ ಸೋಂಕು:
ಮಂಕಿಪಾಕ್ಸ್ ಅಪರೂಪದ ಕಾಯಿಲೆಯಾಗಿದ್ದು, ಇದು ಮಂಕಿಪಾಕ್ಸ್ ವೈರಸ್ ಸೋಂಕಿನಿಂದ ಉಂಟಾಗುತ್ತದೆ. ಮಂಕಿಪಾಕ್ಸ್ ವೈರಸ್ ಪಾಕ್ಸ್ವಿರಿಡೆ (Poxviridae) ಕುಟುಂಬದಲ್ಲಿ ಆರ್ಥೋಪಾಕ್ಸ್ (Orthopoxvirus) ವೈರಸ್ ಕುಲಕ್ಕೆ ಸೇರಿದೆ. ಆರ್ಥೋಪಾಕ್ಸ್‌ವೈರಸ್ ಕುಲವು ವೆರಿಯೊಲಾ ವೈರಸ್ (ಸಿಡುಬಿಗೆ ಕಾರಣವಾಗುತ್ತದೆ) ಎಂದು ಸಿಡಿಸಿ (Centers for Disease Control and Prevention) ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಮಂಕಿಪಾಕ್ಸ್ ಸಾಮಾನ್ಯವಾಗಿ ಜ್ವರ, ತಲೆನೋವು ಮತ್ತು ಚರ್ಮದ ದದ್ದುಗಳನ್ನು ಒಳಗೊಂಡಿರುವ ರೋಗಲಕ್ಷಣಗಳೊಂದಿಗೆ ಉಂಟಾಗುವ ವೈರಲ್ ಸೋಂಕು. ಈ ಸೋಂಕು 1958 ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಮಧ್ಯ ಮತ್ತು ಪಶ್ಚಿಮ ಆಫ್ರಿಕನ್ ದೇಶಗಳಲ್ಲಿನ ಜನರಲ್ಲಿ ಖಾಯಿಲೆ ವರದಿಯಾಗಿದೆ.
ಇದನ್ನೂ ಓದಿ: ತಮಿಳುನಾಡು: ತಂದೆಯಿಂದಲೆ ನವವಿವಾಹಿತ ಮಗಳು, ಅಳಿಯನ ಕೊಲೆ


