Homeಮುಖಪುಟಆರ್‌ಎಸ್ಎಸ್ ಆಳ ಮತ್ತು ಅಗಲ: ಭಾರತೀಯ ಜಾತ್ಯತೀತ ಹೋರಾಟಕ್ಕೆ ಹೊಸ ದೇವನೂರ ಭಾಷೆ - ಯೋಗೇಂದ್ರ...

ಆರ್‌ಎಸ್ಎಸ್ ಆಳ ಮತ್ತು ಅಗಲ: ಭಾರತೀಯ ಜಾತ್ಯತೀತ ಹೋರಾಟಕ್ಕೆ ಹೊಸ ದೇವನೂರ ಭಾಷೆ – ಯೋಗೇಂದ್ರ ಯಾದವ್

ಜಾತ್ಯತೀತರ ಭಾಷೆ ಹೇಗಿರಬೇಕು? ದೇವನೂರ ಮಹಾದೇವರಂತಿರಬೇಕು ಎನ್ನುತ್ತಾರೆ ಹಿರಿಯ ಹೋರಾಟಗಾರ ಯೋಗೇಂದ್ರ ಯಾದವ್.

- Advertisement -
- Advertisement -

ನಾವು 2018ರ ಹೊತ್ತಿನಲ್ಲಿ ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರದಿಂದ ಮರಳುತ್ತಿದ್ದೆವು. ನಾವು ನಮ್ಮದೇ ಪಕ್ಷದ ನಿರ್ದಿಷ್ಟ ಅಭ್ಯರ್ಥಿಯೊಬ್ಬರ ಕುರಿತು ಅಸಮಾಧಾನ ಹೊಂದಿದ್ದೆವು. ನಾನು ಕೇಳಿದ ವಿವರಣೆಯಿಂದ ತೃಪ್ತಿಯಾಗದೇ ಇದ್ದುದರಿಂದ ನಾನು ಅವರತ್ತ ತಿರುಗಿ ಕೇಳಿದೆ: “ದೇವನೂರು ಸಾರ್, (“ಸಾರ್” ಎಂದು ಹೇಳಿದಾಗ “ಸರ್” ಎಂಬುದೊಂದು ಕನ್ನಡ ಪದವಾಗುತ್ತದೆ) ಏನು ವಿಷಯ? ನೀವು ಮುಚ್ಚುಮರೆ ಮಾಡಬೇಕಿಲ್ಲ. ನೀವೀಗ ಸತ್ಯ ಹೇಳಬಹುದು.” ಅವರು- ನಾವು ಕುಳಿತಿದ್ದ ಕಾರಿನ ಮುಂದಿನ ಸೀಟಿನಿಂದ ಹಿಂದೆ ನನ್ನತ್ತ ತಿರುಗಿ ಹೇಳಿದರು, “ನಾನು ಯಾವತ್ತೂ ಸತ್ಯವನ್ನೇ ಹೇಳುವುದು.” ನಂತರ ಅವರು ಏನು ಹೇಳಿದರು ಎಂದು ನನಗೆ ನೆನಪಿಗೆ ಬರುವುದಿಲ್ಲ. ಆದರೆ, ಇದೊಂದು ನನ್ನೊಂದಿಗೆ ಉಳಿದುಕೊಂಡಿದೆ: ಅದು ಒಂದು ಕಟಕಿಯ ಮಾರುತ್ತರವಾಗಲೀ, ಜಂಬವಾಗಲೀ ಆಗಿರಲಿಲ್ಲ. ಅದು ಒಂದು ಸರಳ ಹೇಳಿಕೆಯಾಗಿತ್ತು: ನಾನು ಸತ್ಯವನ್ನೇ ಹೇಳುವುದು! ಯಾರಾದರೂ ಸಾಮಾನ್ಯವಾಗಿ ಹೇಳುವಂತೆ: ನಾನು ಬೆಳಿಗ್ಗೆ ಬೇಗನೇ ಏಳುವವನು.

ಅದು ನಿಮಗಾಗಿ ದೇವನೂರ ಮಹಾದೇವ. ಕನ್ನಡ ಸಾಹಿತ್ಯದ ದೃಷಾಂತ ವ್ಯಕ್ತಿ, ಮೇರು ವ್ಯಕ್ತಿತ್ವದ ಸಾರ್ವಜನಿಕ ಬುದ್ಧಿಜೀವಿ ಮತ್ತು ಕರ್ನಾಟಕದಲ್ಲಿನ ಗೌರವಾನ್ವಿತ ರಾಜಕೀಯ ಕಾರ್ಯಕರ್ತ. ಇವರು ಯಾಕೆ ಸಾರ್ವಜನಿಕ ಜೀವನದಲ್ಲಿದ್ದಾರಪ್ಪ ಎಂದು ನೀವು ಅಚ್ಚರಿ ಪಡುವಷ್ಟು ಮಟ್ಟಿಗೆ ಸಂಕೋಚ ಸ್ವಭಾವದ, ಎಲೆಮರೆಯ ಕಾಯಿಯಂತೆ ಇರುವವರು. ಯಾವುದೇ ಸಾರ್ವಜನಿಕ ಗಮನದಿಂದ ಮರೆಯಾಗಿರುವ ಕಲೆ ಅವರಿಗಿದೆ. ಏಕಾಏಕಿಯಾಗಿ ಅವರು ವೇದಿಕೆಯಿಂದ ಮರೆಯಾಗಿರುವುದನ್ನು ಗಮನಿಸಿ ವಿಚಾರಿಸಿದರೆ, ಯಾರಾದರೊಬ್ಬರು ಸಿದ್ಧವಾಗಿ ನಿಮಗೆ ಹೇಳುತ್ತಾರೆ: ಬಹುಶಃ ಅವರು ಸಿಗರೇಟು ಸೇದಲು ಹೊರಗೆ ಹೋಗಿರಬಹುದು. ನನ್ನ ಮಾನದಂಡಕ್ಕೆ ಹೋಲಿಸಿದಾಗಲೂ- ತಪ್ಪದೇ, ಕಿರಿಕಿರಿಯಾಗುವಷ್ಟು ತಡವಾಗಿ ಬರುವ ಮಹಾದೇವ, ಯಾವಾಗಲೂ ಸ್ವಲ್ಪ ಅಸ್ವಸ್ಥರಾಗಿರುವಂತೆ, ಸ್ವಲ್ಪ ಅಸ್ತವ್ಯಸ್ತವಾಗಿರುವಂತೆ ಕಂಡುಬರುತ್ತಾರೆ. ಆದರೆ, ಇದು ಬೊಹೇಮಿಯನ್ (ಅಸಾಂಪ್ರದಾಯಿಕ, ಒರಟು) ಕವಿಗಳ ತೋರಿಕೆಯ ಉದಾಸೀನವಲ್ಲ. ಅವರ ಜೀವನವೇ ಬೇರೆಯೇ ರೀತಿಯ ಲಯ ಹೊಂದಿದೆ ಆಷ್ಟೇ. ಒಬ್ಬ ಪ್ರಸಿದ್ಧ ಮನುಷ್ಯನಲ್ಲಿ ಇರಬಹುದು ಎಂದು ನೀವು ಊಹಿಸಬಹುದಾದಕ್ಕಿಂತ ತೀರಾ ಬೇರೆಯಾದ ಆದ್ಯತೆಗಳನ್ನು ಅವರು ಹೊಂದಿದ್ದಾರೆ ಅಷ್ಟೇ.

ಓಹ್, ನಾನು ಹೇಳಲು ಮರೆತೆ- ಅವರೊಬ್ಬ ದಲಿತ. ಆದರೀಗ ಒಮ್ಮೆಲೇ ಹಾರಿಬಿದ್ದು ಅವರನ್ನು ದಲಿತ ಲೇಖಕ, ದಲಿತ ಕಾರ್ಯಕರ್ತ ಎಂದು ಕರೆಯಲು ಹೋಗಬೇಡಿ. ಅದು ಅವರ ಗುರುತಿಗೆ ಮಾಡುವ ದೊಡ್ಡ ಅಪಚಾರವಾದೀತು. ಶೇಖರ್ ಗುಪ್ತ ಮಾರುಕಟ್ಟೆಗಳ ಮೇಲೆ ಹೊಂದಿರುವ ಅಪ್ತ ಮತ್ತು ಮುಚ್ಚುಮರೆಯಿಲ್ಲದ ನಂಬಿಕೆಗಳ ಹೊರತಾಗಿಯೂ ನಾವವರನ್ನು ಬನಿಯಾ ಬುದ್ಧಿಜೀವಿ ಎಂದು ಕರೆಯುವುದಿಲ್ಲ. ಮೀಸಲಾತಿ ಮತ್ತು ಜಾತಿಗಣತಿ ಕುರಿತ ನನ್ನ ಗಟ್ಟಿಯಾದ, ಅಚಲ ನಿಲುವಿನಿಂದಾಗಿ ನನ್ನನ್ನು ಓಬಿಸಿ ಬುದ್ಧಿಜೀವಿ ಎಂದು ಕರೆಯುವುದಿಲ್ಲ (ಹಾಗೆಂದು ಆಶಿಸುತ್ತೇನೆ). ಅದೇ ರೀತಿಯಲ್ಲಿ ದೇವನೂರ ಮಹಾದೇವರನ್ನು ದಲಿತ ಬುದ್ಧಿಜೀವಿ ಎಂದು ಕರೆಯುವುದು- ಅವರ ಸಾಮಾಜಿಕ ಮೂಲ, ಅವರು ಬರೆಯುವಂತ ಸಾಮಾಜಿಕ ಪರಿಸರ, ನೆಲೆಗಳು ಮತ್ತು ಅವರು ಶಕ್ತಿಪಡೆಯುವಂತ ಸಾಂಸ್ಕೃತಿಕ ಸಂಪನ್ಮೂಲಗಳ ಹೊರತು ಅವರ ಕುರಿತು ಹೆಚ್ಚೇನನ್ನೂ ಹೇಳಲಾರದು. ಅನೇಕ ದಲಿತ ಕಾರ್ಯಕರ್ತರಿಗೆ ವ್ಯತಿರಿಕ್ತವಾಗಿ, ಅವರು “ಕೋಪಗೊಂಡ ದಲಿತ”ನ ಪಾತ್ರವಹಿಸಲು ಮತ್ತು ತನ್ನ ಕ್ಷಿತಿಜಗಳನ್ನು ಮಾನವ ಕುಲದ ಒಂದೇ ವಿಭಾಗಕ್ಕಷ್ಟೇ ಸೀಮಿತಗೊಳಿಸಲು ನಿರಾಕರಿಸುತ್ತಾರೆ. ಅವರ ಗುರಿಯು ಶಾಶ್ವತ ಸತ್ಯಕ್ಕಿಂತ ಕಡಿಮೆಯಾಗಿರುವುದರ ಕಡೆಗಿಲ್ಲ.

ಹೀಗೆ ಮಾಡುವುದರ ಮೂಲಕ ಅವರು, ನಮ್ಮ ಕಾಲಗಳಲ್ಲಿ ಎಗ್ಗಿಲ್ಲದೇ ನಡೆದುಕೊಂಡು ಬಂದಿರುವ ಪುರಾತನ ಬೌದ್ಧಿಕ ಶ್ರಮವಿಭಜನೆಯನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಾರೆ. ಜಾತಿವಿಹೀನರು, ಆಧುನಿಕ ದಲಿತರು ಮತ್ತು ಇತರ ಹಿಂದುಳಿದ ವರ್ಗಗಳು ಹೆಚ್ಚೆಂದರೆ, ತಮ್ಮ ಪರವಾಗಿ ತಾವೇ ವಾದಿಸುವುದಕ್ಕೆ, ಸತ್ಯದ ಒಂದು ತುಣುಕಿಗಷ್ಟೇ ವಾರಸುದಾರರಾಗಲು ಹಂಬಲಿಸಬಹುದು. ಬ್ರಾಹ್ಮಣರು ತಮ್ಮ ಪುರಾತನ ಹುಟ್ಟಿನಿಂದ ಬಂದಂತೆ ಸತ್ಯದ ನಿಷ್ಪಕ್ಷಪಾತಿ ನಿರ್ಣಾಯಕರು, ಶೂದ್ರರೂ ಸೇರಿದಂತೆ ಎಲ್ಲರಿಗೂ ತಮ್ಮ ಸಹಾನುಭೂತಿ ನೀಡುವವರು ಆಗಬೇಕೆಂದು ನಿರೀಕ್ಷಿಸಲಾಗಿದೆ. ಆದರೆ, ಮಹಾದೇವ ಈ ಪಾತ್ರಗಳನ್ನು ಮೀರುತ್ತಾರೆ ಮತ್ತು ತನ್ನ ಕತೆಗಳ ಮೇಲ್ಜಾತಿಯ ಪಾತ್ರಗಳಿಗೂ ವಿವರಣಾತ್ಮಕವಾದ ಉದಾರತೆಯನ್ನು ತೋರಿಸುತ್ತಾರೆ. ಅವರ ರಾಜಕೀಯವು ಇಡೀ ಮಾನವ ಕುಲವನ್ನು ಮತ್ತು ಅದನ್ನು ಮೀರಿ ಪ್ರಕೃತಿಯನ್ನೂ ಅಪ್ಪಿಕೊಳ್ಳುತ್ತದೆ.

ಮಹಾದೇವರ ಆರೆಸ್ಸೆಸ್ ಕುರಿತ ‘ಸತ್ಯಸಂಧ’ ವಿಮರ್ಶೆ

ಈ ದಿನಗಳಲ್ಲಿ ದೇವನೂರ ಮಹಾದೇವ ಸುದ್ದಿಯಲ್ಲಿದ್ದಾರೆ. ಕನ್ನಡ ಸಾಹಿತ್ಯಿಕ ವಲಯಗಳಲ್ಲಿ ಅವರಿಗೆ ಪರಿಚಯದ ಅಗತ್ಯವಿಲ್ಲ. ನಿಮ್ಮ ಅಭಿಮಾನಿಗಳ ಗುಂಪಿನಲ್ಲಿ ಎ.ಕೆ. ರಾಮಾನುಜನ್, ಯು. ಆರ್. ಅನಂತಮೂರ್ತಿ, ಡಿ. ಆರ್. ನಾಗರಾಜ್ ಮತ್ತು ಶೆಲ್ಡನ್ ಪೊಲ್ಲಾಕ್ ಅಂತವರಿದ್ದಾಗ ನಿಮಗೆ ಪರಿಚಯವೇ ಬೇಕಾಗಿಲ್ಲ. ಆದರೆ, ಈ ಬಾರಿ ಮಾತ್ರ ಅವರ ಖ್ಯಾತಿಯು ಕೊನೆಗೂ ಹಿಂದಿ ಪತ್ರಿಕೆಗಳು ಸೇರಿದಂತೆ, ದಿಲ್ಲಿ ಮೂಲದ “ರಾಷ್ಟ್ರೀಯ” ಮಾಧ್ಯಮಗಳಲ್ಲಿಯೂ ಹರಡಿದೆ. ಅವರ ಕೇವಲ 64 ಪುಟಗಳ ಕಿರುಪುಸ್ತಕವು ಅಲೆಗಳನ್ನು ಎಬ್ಬಿಸುತ್ತಿದೆ.

ಪ್ರಕಟವಾದ ಒಂದು ತಿಂಗಳಲ್ಲೇ ಅವರ “ಆರ್‌ಎಸ್‌ಎಸ್: ಆಳ ಮತ್ತು ಅಗಲ” ಎಂಬ ಪುಸ್ತಕದ ಮಾರಾಟ ಒಂದು ಲಕ್ಷ ಪ್ರತಿಗಳನ್ನೂ ಮೀರಿದೆ. ಅದರ ಇಂಗ್ಲಿಷ್, ತೆಲುಗು, ತಮಿಳು ಮತ್ತು ಮಲಯಾಳಂ ಅನುವಾದಗಳು ಬಂದಿದ್ದು, ಹಿಂದಿ ಅನುವಾದವೂ ನಡೆಯುತ್ತಿದೆ. (ನಾನು ಅದರ ಹಿಂದಿ ಆವೃತ್ತಿಯ ಪ್ರಕಾಶನದಲ್ಲಿ ಭಾಗಿಯಾಗಿದ್ದೇನೆ). ವಿಕೇಂದ್ರೀಕರಣದಲ್ಲಿ ತನ್ನ ನಂಬಿಕೆಗೆ ಅನುಗುಣವಾಗಿ ಅವರು ಅದರ ಪ್ರಕಾಶನವನ್ನು ಮುಕ್ತವಾಗಿಟ್ಟಿದ್ದಾರೆ. (ಓಪನ್ ಸೋರ್ಸ್). ಕರ್ನಾಟಕದಲ್ಲಿ ಏಕಕಾಲಕ್ಕೆ ಹಲವಾರು ಪ್ರಕಾಶಕರು ಪುಸ್ತಕವನ್ನು ಹೊರತರಲು ಅವಕಾಶ ಮಾಡಿಕೊಟ್ಟಿದ್ದಾರೆ. ವಿದ್ಯಾರ್ಥಿ ಗುಂಪುಗಳು ಮತ್ತು ಗೃಹಿಣಿಯರು ಕೂಡಾ ಹಣ ಸೇರಿಸಿ ತಮ್ಮ ತಮ್ಮ ಪ್ರತಿಗಳನ್ನು ಮುದ್ರಿಸಿಕೊಂಡಿದ್ದಾರೆ. ಲೇಖಕರು ಯಾವುದೇ ಗೌರವಧನ ಕೇಳುತ್ತಿಲ್ಲ.

ಇದನ್ನೂ ಓದಿ: ’ಆರ್‌ಎಸ್‌ಎಸ್ ಆಳ ಮತ್ತು ಅಗಲ’ ಪುಸ್ತಕ ಪ್ರಕಟಣೆ ಮತ್ತು ಹಂಚಿಕೆ ಕರ್ನಾಟಕದ ಉದ್ದಗಲಕ್ಕೆ ಆಂದೋಲನವಾಗಿದ್ದರ ಕುರಿತು..

ಈ ಪುಸ್ತಕದ ದಿಢೀರ್ ಯಶಸ್ಸಿಗೆ ಕಾರಣಗಳೇನು? ನಾನು ಕರ್ನಾಟಕದ ಸಾಂಸ್ಕೃತಿಕ ಇತಿಹಾಸದಲ್ಲಿ, ಅದರಲ್ಲೂ- ಮಹಾದೇವ ಅವರು ಬಂದಿರುವ ಸಮಾಜವಾದಿ ಪರಂಪರೆಯಲ್ಲಿ ಆಳವಾಗಿ ತೊಡಗಿಕೊಂಡಿರುವ ನನ್ನ ಗೆಳೆಯ ಪ್ರೊಫೆಸರ್ ಚಂದನ್ ಗೌಡ ಅವರನ್ನು ಕೇಳಿದೆ. ರಾಜ್ಯದಲ್ಲಿ ತೀವ್ರವಾಗಿ ಉಲ್ಬಣಗೊಂಡಿರುವ ಕೋಮು ವಾತಾವರಣದ ಹಿನ್ನೆಲೆಯಲ್ಲಿ ಸಕಾಲಿಕತೆಯು ಮುಖ್ಯವಾಗುತ್ತದೆ ಎಂದು ಅವರು ಹೇಳಿದರು. ಅದೇ ರೀತಿ ವಿಷಯವೂ ಮುಖ್ಯವಾಗುತ್ತದೆ. ಕೆಲವೇ ಲೇಖಕರನ್ನು ಬಿಟ್ಟರೆ, ಬಿಜೆಪಿಯ ಪ್ರಗತಿಪರ ಟೀಕಾಕಾರರು ಕೂಡಾ ಆರೆಸ್ಸೆಸ್ಸನ್ನು ಮುಖಾಮುಖಿಯಾಗಿ ಎದುರಿಸಲು ಬಯಸುವುದಿಲ್ಲ. ಅದರ ಕುರಿತು ಮೌನವು ಮಡುಗಟ್ಟಿದೆ. ಆದುದರಿಂದ ಆರೆಸ್ಸೆಸ್ಸಿನ ಈ ನೇರಾನೇರ ವಿಮರ್ಶೆಯು ಗಮನ ಸೆಳೆದಿದೆ.

ಅದಕ್ಕಿಂತಲೂ ಹೆಚ್ಚಾಗಿ ಗೌಡರು ನನಗೆ ನೆನಪಿಸುವಂತೆ, ಲೇಖಕರ ಕಾರಣದಿಂದಾಗಿ ಪುಸ್ತಕವು ನಡೆಯುತ್ತಿದೆ. ಕನ್ನಡ ಗೊತ್ತಿರುವ ಎಲ್ಲರಿಗೂ ದೇವನೂರ ಮಹಾದೇವರು ಸತ್ಯವಂತ ಎಂದು ಗೊತ್ತಿದೆ. ಅವರು 2010ರಲ್ಲಿ ಪ್ರತಿಷ್ಟಿತ ನೃಪತುಂಗ ಪ್ರಶಸ್ತಿಯನ್ನು ನಿರಾಕರಿಸಿದರು ಎಂದೂ, 1990ರ ದಶಕದಲ್ಲಿ ರಾಜ್ಯಸಭೆಗೆ ನಾಮಕರಣವನ್ನೂ ನಿರಾಕರಿಸಿದರು ಎಂದೂ ಎಲ್ಲರಿಗೂ ಗೊತ್ತಿದೆ. 2015ರಲ್ಲಿ ಅವರು ಪದ್ಮಶ್ರೀ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಹಿಂತಿರುಗಿಸಿದ್ದರು. ಅವರು ತುಂಬಾ ಬರೆಯುವ ಲೇಖಕರಲ್ಲ. ಅವರ ಸಾಹಿತ್ಯಿಕ ಬರಹಗಳು ಒಟ್ಟಾಗಿ 200 ಪುಟಗಳನ್ನು ದಾಟುವುದಿಲ್ಲ. ಅವರ ಲೇಖನಗಳು ಕಿರಿದಾಗಿರುತ್ತವೆ. ಅವರ ಭಾಷಣಗಳು ಇನ್ನೂ ಕಿರಿದಾಗಿರುತ್ತವೆ. ಅವು ಹೆಚ್ಚಾಗಿ ಬರವಣಿಗೆಯಲ್ಲಿದ್ದು, ಅದನ್ನವರು ಯಾವುದೇ ಪರಿಣಾಮವಿಲ್ಲದೆ ಓದಿ ಹೇಳುತ್ತಾರೆ. ಆದರೆ, ಕನ್ನಡಿಗರು ಅವರಾಡುವ ಪ್ರತೀ ಪದಕ್ಕೂ ಬೆಲೆಕೊಡುತ್ತಾರೆ. ಅವರ ಪದಗಳು ಮಾರಾಟಕ್ಕಿಲ್ಲ. ಅವರನ್ನು ಬಾಗಿಸಲು ಸಾಧ್ಯವಿಲ್ಲ. ಅವರನ್ನು ಸಿಹಿ ಮಾತನಾಡಿ ಒಲಿಸಲು ಸಾಧ್ಯವಿಲ್ಲ. ಅವರ ಟೀಕಾಕಾರರು ಕೂಡಾ ಅವರತ್ತ ಬೆರಳು ತೋರಿಸುವುದಿಲ್ಲ.

ಹೀಗಿದ್ದರೂ, ಅವರ ಸತ್ಯಗಳು, ಸಾಕ್ಷ್ಯಾಧಾರಗಳನ್ನು ಆಧರಿಸಿದ ಇತಿಹಾಸಕಾರನ ಸತ್ಯಗಳಲ್ಲ. ಅವು ದತ್ತಾಂಶಗಳಿಂದಲೂ ತುಂಬಿರುವುದಿಲ್ಲ. ಆರೆಸ್ಸೆಸ್ ಕುರಿತ ಅವರ ವಿಮರ್ಶೆಯು ಜಾತ್ಯತೀತ ತಾತ್ವಿಕ ಕಟುಭಾಷೆಯ ಪುನರಾವರ್ತನೆಯಲ್ಲ. ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದ ವಿದ್ಯಾರ್ಥಿಯೂ, ಅವರ ಹಳೆಯ ಸಹವರ್ತಿಯೂ ಆಗಿರುವ ಪ್ರೊಫೆಸರ್ ರಾಜೇಂದ್ರ ಚೆನ್ನಿ ಅವರು ನನಗೆ ಹೇಳಿದಂತೆ: ದೇವನೂರರು ತಮ್ಮ ಸತ್ಯವನ್ನು ದೃಷ್ಟಾಂತ-ದಂತಕತೆ ಮತ್ತು ಜಾನಪದ ಮೂಲಕ, ಪುರಾಣ ಮತ್ತು ರೂಪಕಗಳ ಮೂಲಕ ಹೆಣೆಯುತ್ತಾ, ದಲಿತ ಸಾಹಿತ್ಯದ ಬಹಳಷ್ಟನ್ನು ಬಂಧಿಸಿಟ್ಟಿರುವ ‘ವಾಸ್ತವವಾದ’ದ ಸೆರೆಮನೆಯನ್ನು ಒಡೆಯುತ್ತಾರೆ.

ಭಾರತೀಯ ಜಾತ್ಯತೀತತೆಗೆ ಹೊಸ ಭಾಷೆ

ಇದನ್ನೇ ನಿರ್ದಿಷ್ಟವಾಗಿ ಈ ಪುಸ್ತಕದಲ್ಲಿ ದೇವನೂರರು ಮಾಡಿರುವುದು. ಪುಸ್ತಕದ ಬಹುಭಾಗವು- ಆರ್ಯನ್ ಮೂಲದ ಮಿಥ್ಯೆ, ಜಾತಿ ಪ್ರಾಬಲ್ಯದ ಗುಪ್ತ ಕಾರ್ಯಕ್ರಮಗಳು, ಸಾಂವಿಧಾನಿಕ ಸ್ವಾತಂತ್ರ್ಯ, ಸಂಸ್ಥೆಗಳು ಮತ್ತು ಒಕ್ಕೂಟ ತತ್ವಗಳ ಮೇಲಿನ ದಾಳಿ, ಬಂಡವಾಳಶಾಹಿ ದಣಿಗಳ ಪರ ಕೆಲಸಮಾಡುವ ಆರ್ಥಿಕತೆ- ಹೀಗೆ, ದ್ವೇಷ ರಾಜಕಾರಣದ ಸತ್ಯಗಳನ್ನು ಅನಾವರಣಗೊಳಿಸುವ ಕುರಿತಾಗಿದ್ದರೂ, ಅವರು ತನ್ನ ಸಂದೇಶಗಳನ್ನು ಕತೆಗಳ ಮೂಲಕ ಹೆಣೆಯುತ್ತಾರೆ. ಕೂಗುಮಾರಿಯ ಉದಾಹರಣೆ ನೀಡುತ್ತಾ, “ಕೂಗುಮಾರಿಯು ಮನೆಯ ಮುಂದೆ ಬಂದು ಕೂಗಿದಾಗ, ಅದಕ್ಕೆ ‘ಓ’ಗೊಟ್ಟರೆ, ಅವರು ರಕ್ತಕಾರಿ ಸಾಯುತ್ತಾರೆ ಎಂಬುದು ಜನಪದರ ನಂಬಿಕೆ. ಆದಕ್ಕಾಗಿ ‘ನಾಳೆ ಬಾ’ ಎಂದು ಬಾಗಿಲ ಮೇಲೆ ಬರೆದಿರುತ್ತಾರೆ…. ಆರೆಸ್ಸೆಸ್ಸಿನ ಕೂಗುಮಾರಿಗಳ ಗುಂಪು ನಮ್ಮ ಮನೆ ಮುಂದೆ ಬಂದು ಕೂಗಿದಾಗ, ಆದಕ್ಕೆ ‘ಓ’ಗೊಡದೆ, ‘ನಾಳೆ ಬಾ’ ಎಂದು ನಾವು ಕೂಡಾ ಜನಪದರಂತೆ ಬಾಗಿಲಲ್ಲಿ ಬರೆದಿಡಬೇಕಾಗಿದೆ” ಎಂದು ದೇವನೂರರು ಹೇಳುತ್ತಾರೆ. ನಾನು ಹಿಂದಿಯಲ್ಲಿ ಇದಕ್ಕೆ ಅತ್ಯಂತ ಹತ್ತಿರವಾದುದನ್ನು ನೆನಪು ಮಾಡಬೇಕೆಂದರೆ, “ಆಜ್ ನಗದ್, ಕಲ್ ಉದಾರ್” (ಇವತ್ತು ನಗದು, ನಾಳೆ ಸಾಲ) ಎಂದು ಸಾಲ ಕೇಳುವವರನ್ನು ದೂರಮಾಡಲು ಅಂಗಡಿಗಳ ಮುಂದೆ ಬರೆಯುವುದು ನೆನಪಿಗೆ ಬರುತ್ತದೆ. ಕೂಗುಮಾರಿಗಳು ನಮ್ಮ ಸುತ್ತಲೂ ಇದ್ದು ನಮ್ಮ ನಾಗರಿಕತೆಯನ್ನು ನಾಶಮಾಡಲು ಹವಣಿಸುತ್ತಿದ್ದಾರೆ. ಅವರು ಏಳು ಸಮುದ್ರಗಳ ಆಚೆ ಒಂದು ಗಿಣಿಯಲ್ಲಿ ಪ್ರಾಣವನ್ನು ಬಚ್ಚಿಟ್ಟಿರುವ ಮಾಯಾವಿಯ ರೂಪಕವನ್ನು ನೀಡುತ್ತಾರೆ. (ಇದು ಹಿಂದಿಯಲ್ಲಿ ಬರುವ ಗಿಣಿಯಲ್ಲಿ ಅಡಗಿರುವ ರಾಜನ ಪ್ರಾಣದ ಕತೆಯಂತಿದೆ‌).

ದೇವನೂರ ಮಹಾದೇವ ಅವರು- ಆಳ ಮತ್ತು ಅಗಲದಲ್ಲಿ- ಶ್ರೀಮಂತವಾಗಿರುವ ಹೊಸಭಾಷೆಯೊಂದನ್ನು ರೂಪಿಸಿ, ಸಾಂಸ್ಕೃತಿಕವಾಗಿ ರಕ್ತಹೀನತೆಯಿಂದ ಬಳಲುತ್ತಿರುವ ಭಾರತೀಯ ಜಾತ್ಯತೀತ ರಾಜಕಾರಣಕ್ಕೆ ನೀಡುತ್ತಾರೆ. ಅವರ “ಕುಸುಮ ಬಾಲೆ” ಕಿರುಕಾದಂಬರಿಯು ಪದ್ಯ ಮತ್ತು ಗದ್ಯದ ನಡುವಿನ ವ್ಯತ್ಯಾಸವನ್ನು ಮುರಿದಿರುವಂತೆಯೇ- ಅವರ ಈ ಬರವಣಿಗೆಯು ಸೃಜನಶೀಲ ಮತ್ತು ರಾಜಕೀಯ ಬರವಣಿಗೆಗಳ ವ್ಯತ್ಯಾಸವನ್ನು ಮುರಿದುಹಾಕಿದೆ. ಅನೇಕ ರಾಜಕೀಯ ಬದ್ಧತೆಯ ಸಾಹಿತ್ಯಗಳಿಗೆ ವ್ಯತಿರಿಕ್ತವಾಗಿ, ಅವರು ಹೂವಿನಂತ ಉತ್ಪ್ರೇಕ್ಷೆಯ ಮೂಲಕ ಸತ್ಯವನ್ನು ಅಲಂಕರಿಸಲಾಗಲೀ, ರಾಜಕೀಯ ವಾಕ್ಚಾತುರ್ಯಕ್ಕಾಗಲೀ ತಮ್ಮ ಸೃಜನಶೀಲ ಪ್ರತಿಭೆಯನ್ನು ಬಳಸುವುದಿಲ್ಲ. ಅವರು ಸೃಜನಶೀಲ ರಾಜಕೀಯ ಬರವಣಿಗೆಯನ್ನು ಸತ್ಯದ ಶೋಧನೆಯ ದಾರಿಗೆ ಕೊಂಡೊಯ್ಯುತ್ತಾರೆ. ದ್ವೇಷ ರಾಜಕಾರಣವನ್ನು ಎದುರಿಸಲು ಅವರು ಉನ್ನತ ಮಟ್ಟದ ರಾಜಕೀಯ ತತ್ವದ ಅಥವಾ ಸಾಂವಿಧಾನಿಕ ಪಾಂಡಿತ್ಯದ ಭಾಷೆಯನ್ನು ಬಳಸುವುದಿಲ್ಲ. ಅವರು ಜನರ ಜೊತೆಗೆ, ಅವರದ್ದೇ ಸ್ವಂತ ಭಾಷೆಯಲ್ಲಿ, ಅವರದ್ದೇ ಸ್ವಂತ ರೂಪಕಗಳು ಮತ್ತು ಸ್ವಂತ ಸಾಂಸ್ಕೃತಿಕ ನೆನಪುಗಳ ಮೂಲಕ ಮಾತನಾಡುತ್ತಾರೆ. ಇದನ್ನೇ ಇಂದು ಜಾತ್ಯತೀತ ರಾಜಕಾರಣವು ಮಾಡಬೇಕಾದ ಆಗತ್ಯವಿರುವುದು.

ನಾನು ದೇವನೂರ ಮಹಾದೇವರ ಬಗ್ಗೆ ಮೊದಲು ಕೇಳಿದ್ದು ನನ್ನ ಗೆಳೆಯ ದಿವಂಗತ ಡಿ. ಆರ್. ನಾಗರಾಜ್ ಅವರಿಂದ- ಸುಮಾರು ಮೂರು ದಶಕಗಳಿಗೂ ಹಿಂದೆ. ಮರಾಠಿ, ಹಿಂದಿ ಮತ್ತು ಕನ್ನಡದ ದಲಿತ ಸಾಹಿತ್ಯಗಳನ್ನು ತುಲನೆ ಮಾಡುತ್ತಾ ಅವರು ಒಂದು ರೀತಿಯ ತುಂಟತನದಿಂದ ಹೇಳಿದ್ದರು: “ಅವರದ್ದು ಸಾಹಿತ್ಯಕ್ಕಿಂತ ಹೆಚ್ಚು ದಲಿತ; ನಮ್ಮದು ಮೊದಲಿಗೆ ಸಾಹಿತ್ಯ, ಆಮೇಲೆ ದಲಿತ.” ವರ್ಷಾಂತರದಲ್ಲಿ ದೇವನೂರ ಮಹದೇವರ ಗೆಳೆತನ ಮತ್ತು ರಾಜಕೀಯ ಸಹವಾಸಗಳ ಮೂಲಕ ನಾನು ಡಿ.ಆರ್. ಅವರ ಈ ಮಾತಿನಲ್ಲಿ ಅಡಗಿರುವ ಪದರಗಳನ್ನು ಅರ್ಥ ಮಾಡಿಕೊಳ್ಳುತ್ತಾಬಂದಿದ್ದೇನೆ. “ದಲಿತ” ಅಥವಾ “ಸಾಹಿತ್ಯ” ಅಥವಾ ಅವೆರಡರ ಸಂಯೋಗವೂ ದೇವನೂರರ ಪದಗಳಲ್ಲಿ ಆಡಗಿರುವ ರಾಜಕೀಯ, ನೈತಿಕ ಮತ್ತು ಖಂಡಿತವಾಗಿಯೂ ಆಧ್ಯಾತ್ಮಿಕ ಹುಡುಕಾಟವನ್ನು ಹಿಡಿದಿಡಲು ಸಾಧ್ಯವಿಲ್ಲ ಎಂದು ನಾನು ಕಂಡುಕೊಂಡಿದ್ದೇನೆ. ಭಾರತವು ದೇವನೂರ ಮಹಾದೇವರ ಈ ಸಂದೇಶವನ್ನು ಇಂದು, ಹಿಂದೆಂದಿಗಿಂತಲೂ ಹೆಚ್ಚಾಗಿ, ಚೆನ್ನಾಗಿ ತಿಳಿದುಕೊಳ್ಳಬೇಕಾಗಿದೆ: “ಛಿದ್ರತೆಯೇ ದೆವ್ವ, ಐಕ್ಯತೆಯೇ ದೈವ.”

  • ಯೋಗೇಂದ್ರ ಯಾದವ್

ಕೃಪೆ: ದಿ ಪ್ರಿಂಟ್

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣ: ಸಂತ್ರಸ್ತೆಯರಿಗೆ ಸಹಾಯವಾಣಿ ಆರಂಭಿಸಿದ ಎಸ್‌ಐಟಿ

0
ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತರಿಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಹಾಯವಾಣಿ ತೆರೆದಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಸ್‌ಐಟಿ ಮುಖ್ಯಸ್ಥ ಬಿ.ಕೆ ಸಿಂಗ್, "ಹಾಸನ ಜಿಲ್ಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯ...