Homeಕರ್ನಾಟಕ’ಆರ್‌ಎಸ್‌ಎಸ್ ಆಳ ಮತ್ತು ಅಗಲ’ ಪುಸ್ತಕ ಪ್ರಕಟಣೆ ಮತ್ತು ಹಂಚಿಕೆ ಕರ್ನಾಟಕದ ಉದ್ದಗಲಕ್ಕೆ ಆಂದೋಲನವಾಗಿದ್ದರ...

’ಆರ್‌ಎಸ್‌ಎಸ್ ಆಳ ಮತ್ತು ಅಗಲ’ ಪುಸ್ತಕ ಪ್ರಕಟಣೆ ಮತ್ತು ಹಂಚಿಕೆ ಕರ್ನಾಟಕದ ಉದ್ದಗಲಕ್ಕೆ ಆಂದೋಲನವಾಗಿದ್ದರ ಕುರಿತು..

- Advertisement -
- Advertisement -

ಜಾನ್ ಹರ್ಸೆ ಚೀನಾ ಮೂಲದ ಅಮೆರಿಕ ಪತ್ರಕರ್ತ-ಲೇಖಕ. ಅಮೆರಿಕ ಹಿರೋಶಿಮಾ ಮೇಲೆ ಅಣುಬಾಂಬ್ ಎಸೆದ ಕೆಲವು ತಿಂಗಳುಗಳಲ್ಲಿ, ನ್ಯೂಯಾರ್ಕರ್ ಪತ್ರಿಕೆ ಈ ಮಾನವದುರಂತವನ್ನು ವರದಿ ಮಾಡಲು ಆತನನ್ನು ಜಪಾನ್‌ಗೆ ಕಳುಹಿಸುತ್ತದೆ. ಸಂತ್ರಸ್ತರನ್ನು ಮಾತನಾಡಿಸಿ ಸುಮಾರು 30 ಸಾವಿರ ಪದಗಳಲ್ಲಿ ಬರೆದ ಆ ವರದಿಯನ್ನು ಇಡಿಯಾಗಿ, ಬೇರೆ ಲೇಖನಗಳನ್ನು ತಡೆಹಿಡಿದು 1946ರ ಆಗಸ್ಟ್ ಕೊನೆ ವಾರದ ಸಂಚಿಕೆಯಲ್ಲಿ ನ್ಯೂಯಾರ್ಕರ್ ಪ್ರಕಟಿಸುತ್ತದೆ. ಒಂದೇ ದಿನದಲ್ಲಿ ಆ ಸಂಚಿಕೆಯ ಎಲ್ಲಾ ಪ್ರತಿಗಳೂ ಬಿಕರಿಯಾಗುತ್ತವೆ. ಅದು ಒಂದು ದೊಡ್ಡ ಸಂಚಲನವುಂಟುಮಾಡಿ ಹೆಚ್ಚಿನ ಪ್ರತಿಗಳಿಗೆ ಬೇಡಿಕೆ ಬರುತ್ತೆ. ವಿಜ್ಞಾನಿ ಐನ್‌ಸ್ಟೀನ್ ಪತ್ರಿಕೆಯ ಸಾವಿರ ಪ್ರತಿಗಳನ್ನು ಕೊಂಡು ಹಂಚಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಹಲವು ಪತ್ರಿಕೆಗಳು ಅದನ್ನು ಮರುಪ್ರಕಟಮಾಡಲು ಮುಂದಾಗುತ್ತವೆ. ಇದು ನಂತರ ಪುಸ್ತಕದ ರೂಪದಲ್ಲಿಯೂ ಪ್ರಕಟವಾಗಿ ಹತ್ತಾರು ಲಕ್ಷ ಪ್ರತಿಗಳು ಜನರನ್ನು ತಲುಪಿರುವುದಲ್ಲದೆ ಹಲವಾರು ಭಾಷೆಗೆ ಅನುವಾದಗೊಂಡು ಮಾನವ ನಿರ್ಮಿತ ಅಣುದುರಂತದ ಬಗ್ಗೆ ಎಚ್ಚರಿಸುತ್ತಲೇ ಇದೆ.

ಬಸವಣ್ಣನವರ ’ಕಲಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ’ ಸೇರಿದಂತೆ ಸರಳವಾಗಿ ಮನಮುಟ್ಟುವ ಶರಣ ಸಾಹಿತ್ಯದ ವಚನಗಳನ್ನು ಓದದ-ಕೇಳದ ಕನ್ನಡ ಮನಸ್ಸು ಇರುವುದು ಅತಿ ವಿರಳ. ಕುವೆಂಪು ಅವರ ’ನೂರು ದೇವರನೆಲ್ಲಾ ನೂಕಾಚೆ ದೂರ.. ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು’, ’ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ ಎಂಬಂತಹ ಅವರ ಪದ್ಯಗಳ ನೂರಾರು ಸಾಲುಗಳು ಎಷ್ಟೋ ಲಕ್ಷಾಂತರ ಜನರಲ್ಲಿ ವೈಚಾರಿಕತೆಯ ಬೀಜವನ್ನು ಬಿತ್ತಿವೆ. ಸಿದ್ದಲಿಂಗಯ್ಯನವರ, ’ಇಕ್ರಲಾ ವದಿರ್ಲಾ, ಈ ನನ್‌ಮಕ್ಳ ಚರ್ಮ ಎಬ್ರಲಾ’, ’ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ ಎಂಬ ಸಾಲುಗಳು ಕೂಡ ದಮನಿತರ ನೋವನ್ನು ಪ್ರತಿನಿಧಿಸಿ, ಘನತೆಯನ್ನು ಪ್ರತಿಪಾದಿಸಿ ಕನ್ನಡಿಗರನ್ನು ಎಚ್ಚರಿಸಿದ ಅತಿ ಸರಳ ಸಾಲಿನ ಪದ್ಯಗಳು.

ಒಂದು ವರದಿ, ಒಂದು ವಚನ, ಕೆಲವು ಪದ್ಯಗಳ ಸಾಲುಗಳನ್ನು ಇಲ್ಲಿ ಉದಾಹರಿಸಿದ್ದಕ್ಕೆ ಕಾರಣವಿದೆ. ಇವೆಲ್ಲವನ್ನು ಬೆಸೆಯುವ ಸಾಮಾನ್ಯ ಸಂಗತಿ ಅವು ಸರಳವಾಗಿದ್ದು ಜನರಿಗೆ ಸುಲಭವಾಗಿ ಮನದಟ್ಟಾಗುವಂತಹ ಶೈಲಿಯಲ್ಲಿ ನಿರೂಪಣೆಗೊಂಡಿರುವುದು. ದೇವನೂರ ಮಹಾದೇವ ಅವರ ಕಿರು ಹೊತ್ತಿಗೆ ’ಆರ್‌ಎಸ್‌ಎಸ್ ಆಳ ಮತ್ತು ಅಗಲ’ (ಸುಮಾರು 5000 ಪದಗಳ ಪ್ರಬಂಧ) ಕರ್ನಾಟಕದ ಪುಸ್ತಕ ಲೋಕದಲ್ಲಿ ಹಿಂದೆಂದೂ ಕಂಡರಿಯದಂತಹ ದಾಖಲೆ ಮಾರಾಟ ಕಾಣುತ್ತಿರುವುದಕ್ಕೆ ಅದರ ಸರಳ ನಿರೂಪಣಾ ಶೈಲಿ ಕೂಡ ಪ್ರಮುಖ ಕಾರಣ.

ಜನಪ್ರಿಯ ಸಂಸ್ಕೃತಿಯ ಚೌಕಟ್ಟಿನಲ್ಲಿ ಮೂಡುವ ಸಿನಿಮಾ ಆಗಲಿ, ಸಾಹಿತ್ಯ ಕೃತಿ ಅಥವಾ ಹಾಡು-ಹಸೆಯಾಗಲೀ ಅದು ಜನಸಾಮಾನ್ಯರನ್ನು ತಲುಪುವ ಸಾಧ್ಯತೆಯೇ ಅಂತಹದ್ದು. ಅಂತಹ ಕಲಾಕೃತಿಯೊಂದು ಶೋಷಿತ ಅಥವಾ ದಮನಿತ ಸಮುದಾಯದಿಂದ, ಅಂತಹ ಸಮುದಾಯದ ವ್ಯಕ್ತಿಯಿಂದ ಮೂಡಿಬಂದಾಗ ಅದು ಯಾಜಮಾನ ಸಂಸ್ಕೃತಿಯ ವಿರುದ್ಧ, ಶೋಷಣೆಯ ವ್ಯವಸ್ಥೆಯ ವಿರುದ್ಧ ಎಂದಿಗೂ ಗುದ್ದಾಡುತ್ತದೆ. ಅಲ್ಲದೆ ಅದು ಅಥೆಂಟಿಕ್ ಮತ್ತು ಆರ್ಗಾನಿಕ್ ಅನ್ನಬಹುದಾದ ಸ್ವರೂಪವನ್ನು ಪಡೆದಿರುತ್ತದೆ. ವಚನಗಳು ಮಾಡಿದ್ದು ಅಂತಹ ಚಳವಳಿಯನ್ನೇ. ಆಡುಭಾಷೆಯಲ್ಲಿ ಬರೆದ ಸರಳ ಸಾಲುಗಳು ವೈದಿಕ ಧರ್ಮದ ವಿರುದ್ಧ ತಿರುಗಿಬಿದ್ದು ಸಮ ಸಮಾಜ ನಿರ್ಮಿಸುವತ್ತ ಕೆಲಸ ಮಾಡಲು ಪ್ರೇರೇಪಿಸಿದವು. ಮಂಟೇಸ್ವಾಮಿ ಗಾಯನದಲ್ಲಿ ’ನಾವು ಮಾಡಿದ ದೇವ್ರ ಸಾಲಾಗಿ ನಿಲಿಸ್‌ಬುಟ್ಟು ಹೂನೀರಾ ಹಾಕ್ಬಿಟ್ಟು ಮಾತಾಡಿಸ್ತಿವಿ, ಮಾತಾಡ್ದ ದೇವ್ರ ಎದೆಗ್ ಗುದ್ದು ಮಾತಾಡಿಸ್ತಕ್ಕಂತ ಬ್ರಹ್ಮ ಪಂಚಾಲದವರು’ ಎಂದು ಹಾಡುವಾಗ ವೈದಿಕ ಸಂಪ್ರದಾಯದ ವಿರುದ್ಧ ಸರಳ ಮಾತುಗಳಲ್ಲಿ ಪ್ರತಿಭಟನೆ ಇದೆ.

ದೇವರನ್ನು ಕಾಣುವಲ್ಲಿ ಪುರೋಹಿತಶಾಹಿಯ ಅಗತ್ಯವನ್ನು ನಿರಾಕರಿಸುವ ಇಂತಹ ಪ್ರತಿಭಟನಾ ಪರಂಪರೆಯ ವಾರಸುದಾರರು ದೇವನೂರ ಮಹಾದೇವರು. ಅವರು ಬರೆದ ಸೃಜನಶೀಲ ಸಾಹಿತ್ಯ ಕೂಡ ಅಲ್ಲಿಯವರೆಗೂ ಶಿಷ್ಟ ಭಾಷೆಯಲ್ಲಿ ಬರೆಯಲಾಗುತ್ತಿದ್ದ ಕನ್ನಡ ಸಾಹಿತ್ಯಕ್ಕೆ ಸೆಡ್ಡುಹೊಡೆದು ನಿಂತಿತ್ತು. ’ಒಡಲಾಳ’ವಾಗಲೀ, ’ಕುಸುಮಬಾಲೆ’ಯಾಗಲೀ ತಾನು ಬಳಸಿದ ಭಾಷೆಯಿಂದಲೇ ಕನ್ನಡ ಸಾಹಿತ್ಯ ಲೋಕವನ್ನು ಬೆಚ್ಚಿಬೀಳಿಸಿತ್ತು. ಜನಸಾಮಾನ್ಯರ ಆಡುಭಾಷೆಯನ್ನೇ ತನ್ನ ನಿರೂಪಣೆಯಲ್ಲಿ ಒಳಗೊಂಡು, ಕನ್ನಡ ಸಾಹಿತ್ಯಲೋಕದ ಕಣ್ಣುತೆರೆಸಿತ್ತು. ಒಡಲಾಳ ನೀಳ್ಗತೆಯನ್ನು ತೆಗೆದುಕೊಂಡರೆ, ಅದು ಭಾಷಾ ದೃಷ್ಟಿಯಿಂದಷ್ಟೇ ಕ್ರಾಂತಿಕಾರಿಯಾಗಿದ್ದಲ್ಲದೆ, ಅದು ಕಟ್ಟಿಕೊಟ್ಟ ತಿಳಿವಳಿಕೆ ಪ್ರಭುತ್ವದ ಕ್ರೌರ್ಯದ-ದಬ್ಬಾಳಿಕೆಯ ವಿರುದ್ಧವಾಗಿತ್ತು. ನೈತಿಕತೆಯ ಬಗ್ಗೆ ಓದುಗರಿಗೆ ಬೇರೆಯದ್ದೇ ಆದ ಮತ್ತು ಸಾಪೇಕ್ಷವಾದ ದೃಷ್ಟಿಕೋನವನ್ನು ಕಟ್ಟಿಕೊಟ್ಟು, ಹೀಗೂ ಬರೆಯಬಹುದೇ ಮತ್ತು ಹೀಗೂ ಇರಬಹುದಲ್ಲವೇ ಎಂಬ ಬೆರಗು ಮೂಡಿಸಿತ್ತು. ಅದು ಅವರ ಇತರ ಕಥೆಗಳು, ಕುಸುಮಬಾಲೆ ಕಾದಂಬರಿ ಹಾಗೂ ನಾನ್-ಫಿಕ್ಷನ್ ಬರಹಗಳಲ್ಲೂ ಎದ್ದುಕಾಣುವ ಅಂಶ. ಹೀಗೆ ಓದುಗರ ಎದೆಯನ್ನು ತಾಕುವಂತೆ ಬರೆಯುವ ಮಹಾದೇವರ ’ಆರ್‌ಎಸ್‌ಎಸ್ ಆಳ ಮತ್ತು ಅಗಲ’ ಕಿರು ಹೊತ್ತಿಗೆ ಜನಸಾಮಾನ್ಯರನ್ನು ಈ ಪರಿ ಸೆಳೆದಿದ್ದೇಕೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇನಲ್ಲ.

ಈ ಪುಸ್ತಕದ ಬಗ್ಗೆ ವಿಮರ್ಶೆ ಮಾಡುತ್ತಾ, ’ಬಹಳ ಸರಳವಾಗಿದೆ, ಮತ್ತು ಗೊತ್ತಿರುವ ವಿಷಯಗಳನ್ನೇ ಹೇಳಿದೆ’ ಎಂಬ ವಾದ ಮಾಡುತ್ತಿರುವರು ಯಜಮಾನ್ಯ ಸಂಸ್ಕೃತಿಯ-ಪ್ರಭುತ್ವದ ಪಾಠಗಳನ್ನೇ ಗಿಳಿಪಾಠದಂತೆ ಒಪ್ಪಿಸುತ್ತಿರುವುದು ದುಃಖದ ಸಂಗತಿ. ಊರುಗಳಲ್ಲಿ ಹಲವು ಸಮುದಾಯಗಳು ಸೇರಿ ಕಲೆತು ಮಾಡುವ ಭಜನೆಯಲ್ಲಿ, ರಾಗ ಮತ್ತು ಶೃತಿಯ ಬಗ್ಗೆ ವಿಮರ್ಶೆ ಮಾಡಲು ಕುಳಿತವರಿಗೆ ಜನಪ್ರಿಯ ಸಂಸ್ಕೃತಿಯ ಸಾಧ್ಯತೆಗಳು ಮತ್ತು ಮಹತ್ವದ ಬಗ್ಗೆ ಅರಿವಿನ ಕೊರತೆ ಎಂದೇ ಹೇಳಬೇಕು. ಬ್ರೆಕ್ಟ್, ನೆರೂಡಾರ ಪದ್ಯವಾಗಲೀ, ಟಾಲ್‌ಸ್ಟಾಯ್, ಕುವೆಂಪುರವರ ಕಥೆ, ಕಾದಂಬರಿ, ಪ್ರಬಂಧ ಬರಹಗಳಾಗಲೀ, ಅವೆಂದೂ ಸರಳವಾಗಿದ್ದುಕೊಂಡೇ ಯಜಮಾನ್ಯ ವ್ಯವಸ್ಥೆಗಳ ವಿದುದ್ಧ, ಕರಾಳ ಪ್ರಭುತ್ವಗಳ ವಿರುದ್ಧ ಮಾತಾಡಿದ್ದವು ಎಂಬುದನ್ನು ಮರೆಯಲು ಸಾಧ್ಯವಿಲ್ಲ. ಇನ್ನು ದೇವನೂರರು ಮಂಡಿಸಿರುವ ಸರಳ ಮತ್ತು ಮನತಟ್ಟುವ ವಾದಕ್ಕೆ ಸಂಘಪರಿವಾರದವರು ಉತ್ತರಿಸಲು ಇನ್ನೂ ಸಾಧ್ಯವಾಗಿಲ್ಲ. ಅಂದರೆ ಬರೆದಿರುವುದೆಲ್ಲಾ ಸತ್ಯ ಎಂದು ಸ್ಪಟಿಕದಷ್ಟೇ ಸ್ಪಷ್ಟ. ಸತ್ಯವನ್ನು ಒಪ್ಪಿಕೊಳ್ಳಲಾರದೆ ಸಂಘ ಪರಿವಾರದವರು ನಲುಗುತ್ತಿದ್ದಾರಷ್ಟೇ.

ಸುಳ್ಳನ್ನು ಅತಿರಂಜಿತವಾಗಿ ಮನಮುಟ್ಟುವಂತೆ ಜನರಿಗೆ ಹೇಳಿ ಮರಳು ಮಾಡಿದ್ದು ಆರ್‌ಎಸ್‌ಎಸ್ ಮತ್ತು ಅದರ ಮರಿ ಸಂತಾನ. ಇದು ಗೋಳ್ವಾಲ್ಕರ್, ಹೆಡಗೇವಾರ್‌ರಿಂದ ಪ್ರಾರಂಭವಾಗಿ ಇಂದಿನ ರೋಹಿತ್ ಚಕ್ರತೀರ್ಥ, ಚಕ್ರವರ್ತಿ ಸೂಲಿಬೆಲೆಯವರೆಗೆ ಮುಂದುವರೆದಿದೆ. ಇಂದಿನ ಭಾರತದ ಫೇಕ್ ನ್ಯೂಸ್ ಎಕೋಸಿಸ್ಟಮ್‌ಗೆ ಈ ಸಂಘಪರಿವಾರದ ಕೊಡುಗೆ ಏನೆಂಬುದನ್ನು ಮಹಾದೇವರು ಈ ಕಿರುಹೊತ್ತಿಗೆಯಲ್ಲಿ ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ. ಹಲವು ಕಥೆಗಳು ಮತ್ತು ರೂಪಕಗಳ ಮೂಲಕ ಆರ್‌ಎಸ್‌ಎಸ್ ಎಂಬ ಭಯಾನಕ ಮಾಯಾವಿ ಸಂಘಟನೆ ಪ್ರಸಕ್ತದಲ್ಲಿ ಎಂತಹ ಭಾರತವನ್ನು ಕಟ್ಟಲು ಹೊರಟಿದೆ ಎಂಬುದನ್ನು ಮಂಡಿಸಿ ಎಚ್ಚರಗೊಳಿಸಲು ಪ್ರಯತ್ನಿಸಿದ್ದಾರೆ. ಸಂವಿಧಾನವನ್ನು ನಿಜ ಅರ್ಥದಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಕಿರುಹೊತ್ತಿಗೆ ನೀಡಿರುವ ಎಚ್ಚರವನ್ನು ಪರಿಗಣಿಸಿ ಅದನ್ನು ಕರಪತ್ರ ಎಂದು ಕೂಡ ಕರೆದವರಿದ್ದಾರೆ. ಜನಪರವಾದ ಕರಪತ್ರಗಳು ಹಲವು ಕಾಲಘಟ್ಟಗಳಲ್ಲಿ ಬಿತ್ತಿರುವ ವಿವೇಕಕ್ಕೆ ದೊಡ್ಡ ಇತಿಹಾಸವೇ ಇದೆ. ಸುಳ್ಳಷ್ಟೇ ಜನಪ್ರಿಯವಾಗುವುದಿಲ್ಲ, ಬದಲಿಗೆ ಸತ್ಯವನ್ನೂ ಕೂಡ ಜನಪ್ರಿಯಗೊಳಿಸಬಹುದೆಂದು ದೇವನೂರರು ಈ ಪ್ರಬಂಧದ ಮೂಲಕ ತೋರಿಸಿಕೊಟ್ಟಿದ್ದಾರೆ. ಈ ಎಚ್ಚರಿಕೆಯಲ್ಲಿ ಕೆಲಸ ಮಾಡುವಾಗ ಐಕ್ಯತೆಯಲ್ಲಿ ಕೆಲಸ ಮಾಡುವ ಮಹತ್ವವನ್ನು ಮನಗಾಣಿಸಿದ್ದಾರೆ. ಅದು ಕೇವಲ ಮಾತುಗಳಿಂದಷ್ಟೇ ಅಲ್ಲ; ಅದಕ್ಕೆ ದಾರಿಯನ್ನೂ ಕಾಣಿಸಿದ್ದಾರೆ. ಆ ದಾರಿಯಲ್ಲಿ ಒಂದು, ಹಲವು ಪ್ರಕಾಶಕರು ಒಟ್ಟಿಗೆ ಸೇರಿ, ಜನಸಾಮಾನ್ಯರು ಒಗ್ಗೂಡಿ ಈ ಪುಸ್ತಕವನ್ನು ಪ್ರಕಟಿಸಿ ಮಾರಬಹುದೆಂಬ ಕಲ್ಪನೆ; ಅದರಿಂದ ಯಾವುದೇ ಲಾಭಾಪೇಕ್ಷೆಯನ್ನು ನಿರಾಕರಿಸುವುದರ ಮೂಲಕ ಕೂಡ.

ಹಕ್ಕುಸ್ವಾಮ್ಯ ಬಿಟ್ಟುಕೊಟ್ಟು ಹಲವು ಪ್ರಕಾಶಕರು ಒಟ್ಟಿಗೆ ಪುಸ್ತಕವನ್ನು ಮುದ್ರಿಸಿ ಓದುಗರಿಗೆ
ಒದಗಿಸಬಹುದೆಂಬ ಈ ವಿಶಿಷ್ಟ ಮಾಡೆಲ್ ಹಲವು ಕಾರಣಕ್ಕೆ ಇಂದು ಮಹತ್ವವಾಗಿ ಕಾಣುತ್ತಿದೆ. ಇಂದು ಮುಖ್ಯವಾಹಿನಿ ಮಾಧ್ಯಮಗಳಿಗೆ ಎದುರಾಗಿ ಈಜುತ್ತಿರುವ ಯಾವುದೇ ಸ್ವತಂತ್ರ ಮಾಧ್ಯಮವಾಗಲೀ, ಪ್ರಕಾಶನವಾಗಲೀ ವಿತರಣೆ ಜಾಲವನ್ನು ಬೇಧಿಸಲು ಹರಸಾಹಸ ಪಡುವಂತಹ ವಾತಾವರಣ ಸೃಷ್ಟಿಯಾಗಿದೆ. ಡಿಜಿಟಲ್ ಮಾಧ್ಯಮದಲ್ಲಿ ಕೂಡ ಯಾವುದೇ ವಿಚಾರವನ್ನು ತಲುಪಿಸಲು ಇಂದು ನಾವು ಕಾರ್ಪೊರೆಟ್ ದೈತ್ಯರ ಸಾಮಾಜಿಕ ಜಾಲತಾಣಗಳು ಮತ್ತು ಮೆಸೆಂಜರ್‌ಗಳನ್ನು ನಂಬಿಕೊಂಡು, ಅವರ ಸೆನ್ಸಾರ್‌ಗಳಿಗೆ ಒಳಪಟ್ಟು ನಲುಗುತ್ತಿರುವ ಪರಿಸ್ಥಿತಿ ಎದುರಾಗಿದೆ.ಇಂತಹ ವಾತಾವರಣದಲ್ಲಿ ಒಂದು ಪುಸ್ತಕ ಇವನ್ನೆಲ್ಲಾ ಬೇಧಿಸಿ ಒಂದು ಕೊ-ಆಪರೆಟಿವ್ ಆದ ಉತ್ಪಾದನಾ ಮತ್ತು ವಿತರಣ ಜಾಲವನ್ನು ಸೃಷ್ಟಿಸಿಕೊಂಡು ಹದಿನೈದು ದಿನಗಳಲ್ಲಿ ಸುಮಾರು 70 ಸಾವಿರಕ್ಕೂ ಹೆಚ್ಚು ಪ್ರತಿಗಳನ್ನು (ಸುಮಾರು 10ಕ್ಕೂ ಹೆಚ್ಚು ಜನ ಪ್ರಕಾಶಕರೊಂದಿಗೆ) ಓದುಗರಿಗೆ ತಲುಪಿಸಲು ಸಾಧ್ಯವಾಗಿರುವುದು ಸೋಜಿಗ ಮತ್ತು ಈ ದಿನಕ್ಕೆ ಆಶಾವಾದದಂತೆ ಕಾಣುತ್ತದೆ. ಈ ಸಂಖ್ಯೆ ತಿಂಗಳ ಕೊನೆಗೆ ಕಡಿಮೆ ಎಂದರೂ ಒಂದು ಲಕ್ಷ ದಾಟುವುದು ಶತಸಿದ್ಧ!

ಒಂದೇ ಜಾತಿಯವರು ವಾಸಿಸಲು ಅಪಾರ್ಟ್‌ಮೆಂಟ್ ಕಟ್ಟುವ ವಿದ್ಯಮಾನವನ್ನು ವಿರೋಧಿಸಿದ್ದಾಗಲೀ, ಸಿಎಎ-ಎನ್‌ಆರ್‌ಸಿ ಜಾರಿ ಮಾಡಿದ ಆಡಳಿತವನ್ನು ಪ್ರಶ್ನಿಸಿದ, ದೇಶದಲ್ಲಿ ಬೆಳೆಯುತ್ತಿದ್ದ ಅಸಹಿಷ್ಣುತೆಯ ವಿರುದ್ಧ ಪ್ರಶಸ್ತಿಯನ್ನು ಹಿಂದಿರುಗಿಸಿದ, ಪಠ್ಯ ಪುಸ್ತಕ ಹಗರಣದ ವಿರುದ್ಧ ಸೆಟೆದು ನಿಂತ – ಹೀಗೆ ದೇಶಕ್ಕೆ ಒದಗಿದ ಯಾವುದೇ ಕೆಡುಕಿನ ವಿರುದ್ಧ ವಿವಿಧ ಬಗೆಯ ಪ್ರತಿರೋಧವನ್ನು ದಾಖಲಿಸುತ್ತಲೇ ಬಂದಿರುವ ದೇವನೂರರ ಬಗೆ ಯಾವುದೇ ಲೇಖಕನಾಗಲೀ, ಇಂಟಲೆಕ್ಚುಯಲ್ ಆಗಲೀ ಸಮಕಾಲೀನಕ್ಕೆ ಸ್ಪಂದಿಸಬೇಕಾದ ಅಗತ್ಯವನ್ನು ಮನಗಾಣಿಸುತ್ತದೆ. ಇಂದು ಬರೆಯುತ್ತಿರುವವರಿಗೆ ಮತ್ತು ಜನಸಾಮಾನ್ಯರಿಗೆ ಮಹಾದೇವರು ಟವರಿಂಗ್
ಫಿಗರ್ ಆಗಿ, ಈ ನಾಡಿನ ಸಾಕ್ಷಿ ಪ್ರಜ್ಞೆಯಾಗಿ ಕಾಣಿಸಿಕೊಳ್ಳುತ್ತಿರುವುದು ಈ ಕಾರಣಗಳಿಗಾಗಿಯೇ. ಇದೂ ಕೂಡ ಅಪಾರ ಜನರಿಗೆ ಪುಸ್ತಕವನ್ನು ಓದುವ ಮತ್ತು ಅದನ್ನು ಇತರಿರಿಗೆ ಓದಿಸುವ ಹಂಬಲವನ್ನು ಹೆಚ್ಚಿಸಿದೆ.

ಇಡೀ ದೇಶವೇ ದ್ವೇಷದ ಮತ್ತು ಛಿದ್ರತೆಯ ಸಿದ್ಧಾಂತವನ್ನು ಒಪ್ಪಿಕೊಂಡಿದೆ ಎಂದು ಕೆಲವು ಮಾರಿಕೊಂಡ ಮಾಧ್ಯಮಗಳು ಬಿಂಬಿಸುತ್ತಿರುವಾಗ, ಸುಮಾರು 15 ದಿನಗಳಲ್ಲಿ ದೇವನೂರರ ಹೊಸ ಪುಸ್ತಕದ ಸುಮಾರು 70 ಸಾವಿರ ಪ್ರತಿಗಳನ್ನು ಜನ ಕೊಂಡು ಓದಿದ ಪರಿಸ್ಥಿತಿ ನಿರ್ಮಾಣವಾದದ್ದೇಕೆ? ಅಂದರೆ ಜನರನ್ನು ಪೋಲರೈಸ್ ಮಾಡುವ ದ್ವೇಷ ಸಿದ್ಧಾಂತದ ವಿರುದ್ಧ ಇರುವ ಜನಸಂಖ್ಯೆ ಇಂದಿಗೂ ಮೆಜಾರಿಟಿ. ಅವರನ್ನು ತಲುಪುವ, ಅವರನ್ನು ಬೆಸೆಯುವ ಕೆಲವು ಮಾರ್ಗಗಳನ್ನು ಪ್ರಭುತ್ವ ಮತ್ತು ಪ್ರಭುತ್ವವನ್ನು ನಿಯಂತ್ರಿಸುವ ಕೆಲವು ಕಾರ್ಪೊರೆಟ್ ಸಂಸ್ಥೆಗಳು ತೆಕ್ಕೆಗೆ ತೆಗೆದುಕೊಂಡು ಬೀಗುತ್ತಿವೆ. ಅದನ್ನೂ ಬೇಧಿಸಲು ಸಾಧ್ಯ ಎಂದು ’ಆರ್‌ಎಸ್‌ಎಸ್ ಆಳ ಮತ್ತು ಅಗಲ’ ಪುಸ್ತಕ ಪ್ರಕಟಣೆ, ಹಂಚಿಕೆ ಮತ್ತು ಓದು’ ಅಭಿಯಾನ ಆಂದೋಲನವಾಗಿ ರೂಪುಗೊಂಡಿರುವುದು ತೋರಿಸುತ್ತದೆ.

ಇದು ಆರ್‌ಎಸ್‌ಎಸ್ ಮತ್ತು ಅದರ ಸಿದ್ಧಾಂತಿಗಳು ಆತ್ಮಾವಲೋಕನ ಮಾಡಿಕೊಳ್ಳಲು ಸಕಾಲ. ಇನ್ನಾದರು ಮನುಧರ್ಮದ ಚಾತುರ್ವಣ್ಯವನ್ನು ತೊರೆದು, ಸಂವಿಧಾನ ಪ್ರತಿಪಾದಿಸುವ ಸಮಾನತೆಯನ್ನು ಎದೆಗೆ ಇಳಿಸಿಕೊಳ್ಳುವ ಮತ್ತು ಪ್ರಾತಿನಿಧ್ಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಸಂಘಪರಿವಾರ ಮುಂದಾಗಬೇಕು. ಛಿದ್ರತೆಯನ್ನು ಬಿಟ್ಟು ಐಕ್ಯತೆಯನ್ನು ಧ್ಯೇಯವಾಗಿಸಿಕೊಂಡು ಮುನ್ನಡೆಯುವತ್ತ ಚಿಂತಿಸಬೇಕು. ಅದಕ್ಕೆ ಅನುವು ಮಾಡಿಕೊಡಲು ಕನ್ನಡಿಗರು ಮುಂದಾಗಿದ್ದಾರೆ.

ಗುರುಪ್ರಸಾದ್ ಡಿ ಎನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ನಾನು ಈ ಪುಸ್ತಕವನ್ನು ನಿಮ್ಮ ಗೌರಿ.ಕಾಂ website ನಲ್ಲಿ ಬುಕ್ ಮಾಡಿ ಒಂದು ವಾರ ಕಳೆದಿದೆ ಇನ್ನೂ ನನಗೆ ಸಿಕ್ಕಿಲ್ಲ ದಯಮಾಡಿ ಆದಷ್ಟು ಬೇಗ ಪುಸ್ತಕ ಕಳುಹಿಸಿಕೊಡಿ 🙏

    • ಆದಷ್ಟು ಬೇಗ ತಲುಪುತ್ತೆ ಸರ್‌. ತುಂಬಾ ಆರ್ಡರ್‌ಗಳು ಬಂದಿರುವುದರಿಂದ ಸ್ವಲ್ಪ ತಡವಾಗುತ್ತದೆ. ಮುಂದಿನ ಎರಡು ಮೂರು ದಿನಗಳ ಒಳಗೆ ಎಲ್ಲರಿಗೂ ತಲುಪುತ್ತದೆ.
      ಧನ್ಯವಾದಗಳು.
      ~ಟೀಂ ನಾನುಗೌರಿ

LEAVE A REPLY

Please enter your comment!
Please enter your name here

- Advertisment -

ನ್ಯಾಯಾಂಗದ ವಿರುದ್ಧ ಟೀಕೆ ಆರೋಪ: ಸಿಜೆಪಿ ವಕ್ತಾರ ಸೌರವ್ ದಾಸ್ ವಿರುದ್ಧ ತನಿಖೆಗೆ ಮದ್ರಾಸ್ ಹೈಕೋರ್ಟ್‌ನಲ್ಲಿ ಪಿಐಎಲ್

ಚೆನ್ನೈ: ಭಾರತದ ನ್ಯಾಯಾಂಗ, ಮುಖ್ಯ ನ್ಯಾಯಮೂರ್ತಿ ಮತ್ತು ಸುಪ್ರೀಂ ಕೋರ್ಟ್‌ನ ಇತರ ನ್ಯಾಯಮೂರ್ತಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ವಕ್ತಾರ ಸೌರವ್ ದಾಸ್...

ಕರ್ನಾಟಕ ಎಸ್‌ಐಆರ್: 192 ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ಹೆಚ್ಚು ಮತಗಳು ಡಿಲೀಟ್; 2028ಕ್ಕೆ ಯಾರಿಗೆ ಅಧಿಕಾರ?

ಜನಪರ ಸಂಘಟನೆಗಳು ಮತ್ತು ಜಾತ್ಯತೀತ ಪಕ್ಷಗಳ ವಿರೋಧ, ಆತಂಕ ಹಾಗೂ ಆರೋಪಗಳ ಹೊರತಾಗಿಯೂ ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ಮುಗಿದಿದೆ. 2026ರ ಅಕ್ಟೋಬರ್ 27ರಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರು ಅಂತಿಮ ಮತದಾರರ...

ಸೌಜನ್ಯ ಪ್ರಕರಣ: ಎಸ್‌ಐಟಿ ಮುಖ್ಯಸ್ಥ ಸ್ಥಾನದಿಂದ ಶಶಿಕುಮಾರ್‌ಗೆ ಕೊಕ್; ಚೇತನ್ ಸಿಂಗ್ ರಾಥೋಡ್‌ಗೆ ತನಿಖೆಯ ಹೊಣೆ

ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ರಚಿಸಲಾಗಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ನೇತೃತ್ವದಲ್ಲಿ ರಾಜ್ಯ ಸರ್ಕಾರ ಮಹತ್ವದ ಬದಲಾವಣೆ ಮಾಡಿದೆ. ಎಸ್‌ಐಟಿ ಮುಖ್ಯಸ್ಥರಾಗಿದ್ದ ಐಜಿಪಿ ಎನ್. ಶಶಿಕುಮಾರ್...

ಇಸ್ರೇಲ್ ಚುನಾವಣೆ: ನೆತನ್ಯಾಹು, ಐಸೆನ್‌ಕೋಟ್ ಬಣಗಳಿಗೆ ಬಹುಮತದ ಕೊರತೆ; ಸರ್ಕಾರ ರಚನೆಯಲ್ಲಿ ಅರಬ್ ಪಕ್ಷಗಳೇ ನಿರ್ಣಾಯಕ!

ಇಸ್ರೇಲ್‌ನ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಆಡಳಿತಾರೂಢ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಮಾಜಿ ಸೇನಾ ಮುಖ್ಯಸ್ಥ ಗಡಿ ಐಸೆನ್‌ಕೋಟ್ ನೇತೃತ್ವದ ವಿರೋಧ ಪಕ್ಷದ ಬಣಗಳೆರಡಕ್ಕೂ ಭಾರಿ ಸವಾಲು ತಂದೊಡ್ಡಿದೆ. 120 ಸದಸ್ಯ ಬಲದ...

ನ.1ರ ಇಂಡಿಯಾ ಒಕ್ಕೂಟದ ರ‍್ಯಾಲಿಗೆ ಬೆಂಬಲ ಘೋಷಿಸಿದ ‘ಪೀಪಲ್ ಅಗೆನ್ಸ್ಟ್ ಎಸ್‌ಐಆರ್’

ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟ ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಸಲಿರುವ ಬೃಹತ್ ರ‍್ಯಾಲಿಗೆ ಪೀಪಲ್ ಅಗೆನೆಸ್ಟ್ ಎಸ್‌ಐಆರ್‌ ಬೆಂಬಲ ಘೋಷಿಸಿದೆ. ಪ್ರಜಾಪ್ರಭುತ್ವವನ್ನು ಉಳಿಸಲು, ಎಸ್‌ಐಆರ್ ರದ್ದುಗೊಳಿಸಲು, ಮುಖ್ಯ ಚುನಾವಣಾ ಆಯುಕ್ತ...

‘ನುಸುಳುಕೋರರನ್ನು’ ಹೊರಹಾಕಲು SIR ಎಂದಿತ್ತು ಬಿಜೆಪಿ ಮತ್ತು ಚು. ಆಯೋಗ : ಆರು ರಾಜ್ಯಗಳಲ್ಲಿ ಪತ್ತೆಯಾಗಿದ್ದು ಕೇವಲ 1,600 ವಿದೇಶಿಯರು ಮಾತ್ರ

'ನುಸುಳುಕೋರರನ್ನು' ಪತ್ತೆ ಹಚ್ಚುವುದು ಅಥವಾ 'ವಿದೇಶಿ ಅಕ್ರಮ ವಲಸಿಗರನ್ನು' ಪತ್ತೆ ಹಚ್ಚುವುದು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಹೇಳಿತ್ತು....

ಸಂತ್ರಸ್ತೆ ಮತ್ತು ಆರೋಪಿ ನಡುವಿನ ‘ಒಪ್ಪಂದ’ವನ್ನಷ್ಟೇ ಆಧರಿಸಿ ಅತ್ಯಾಚಾರ ಪ್ರಕರಣ ರದ್ದುಗೊಳಿಸಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಪಕ್ಷಕಾರರ (ಸಂತ್ರಸ್ತೆ ಮತ್ತು ಆರೋಪಿ) ನಡುವಿನ ರಾಜಿ ಸಂಧಾನದ ಆಧಾರದ ಮೇಲೆ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸಿದ್ದ ಮಧ್ಯಪ್ರದೇಶ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಕೇವಲ ಒಪ್ಪಂದದ ಆಧಾರದ ಮೇಲೆ ಗಂಭೀರ ಅಪರಾಧಗಳನ್ನು...

DELHI SIR : 2026ರ ಮತದಾರರ ಪಟ್ಟಿಯಲ್ಲಿದ್ದರೂ ಕೂಡ ಡಿಲಿಟೆಡ್ ವೋಟರ್ಸ್ ಫಾರಂ-6 ಸಲ್ಲಿಸುವಂತೆ ಸೂಚಿಸಿದ್ದು ಏಕೆ? ಚು. ಆಯೋಗಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

ದೆಹಲಿಯ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಸಂಬಂಧಿಸಿದಂತೆ, 2026ರ ಮತದಾರರ ಪಟ್ಟಿಯಲ್ಲಿದ್ದರೂ ಸಹ ಗಣತಿ ನಮೂನೆಗಳನ್ನು (enumeration forms) ಭರ್ತಿ ಮಾಡದ ಕಾರಣಕ್ಕಾಗಿ ಕರಡು ಪಟ್ಟಿಯಿಂದ ಹೆಸರನ್ನು ಕಳೆದುಕೊಂಡಿರುವ ವ್ಯಕ್ತಿಗಳು,...

ಮರ್ಯಾದೆಗೇಡು ಹತ್ಯೆ ಶಂಕೆ: ದಲಿತ ಯುವಕನನ್ನು ಇಟ್ಟಿಗೆಯಿಂದ ಹೊಡೆದು ಕೊಂದ ಪತ್ನಿಯ ಸಹೋದರ ಬಂಧನ

ಉತ್ತರ ಪ್ರದೇಶದ ಮುಜಫ್ಫರ್‌ನಗರ ಜಿಲ್ಲೆಯಲ್ಲಿ 23 ವರ್ಷದ ದಲಿತ ಯುವಕನನ್ನು ಇಟ್ಟಿಗೆಗಳಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇದು ಮರ್ಯಾದೆಗೇಡು ಹತ್ಯೆ ಶಂಕೆಗೆ ಕಾರಣವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ಪತ್ನಿಯ ಹಿರಿಯ...

Karnataka SIR | ಅಂತಿಮ ಮತದಾರರ ಪಟ್ಟಿಯನ್ನು ತಿರಸ್ಕರಿಸಿದ ಹೋರಾಟಗಾರರು : ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್‌ಗೆ ಬಹಿರಂಗ ಸವಾಲು

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ ಮಂಗಳವಾರ (ಅ.27) ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯನ್ನು ಹೋರಾಟಗಾರರು ತಿರಸ್ಕರಿಸಿದ್ದು, ಹೋರಾಟ ಮುಂದುವರಿಸುವ ಘೋಷಣೆ ಮಾಡಿದ್ದಾರೆ. ಬುಧವಾರ (ಅ.28) ಬೆಂಗಳೂರಿನ ಶಾಸಕರ ಭವನದಲ್ಲಿ...