ರಾಜ್ಯದಲ್ಲಿ ಇದುವರೆಗೆ ನಾಲ್ಕು ಕೊರೊನ ಪ್ರಕರಣ ಪತ್ತೆಯಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ. ಜನರು ಭೀತಿಗೊಳಗಾಗುವುದು ಬೇಡ, ಸುಳ್ಳು ವದಂತಿಗಳಿಗೆ ಕಿವಿಕೊಡದಿರಿ ಎಂದಿದ್ದಾರೆ.
ಕರ್ನಾಟಕದಲ್ಲಿ ಇದುವರೆಗೆ ನಾಲ್ಕು ಕೊರೊನ ವೈರಸ್ ಪ್ರಕರಣ ಪತ್ತೆಯಾಗಿವೆ. ಅದರಲ್ಲಿ ಇತ್ತೀಚೆಗೆ ಅಮೆರಿಕಾದಿಂದ ಬಂದಿದ್ದ ಟೆಕ್ಕಿ, ಅವರ ಹೆಂಡತಿ ಹಾಗೂ ಅವರ ಮಗುವಿನಲ್ಲಿ ಸೋಂಕಿನ ಲಕ್ಷಣಗಳು ಪತ್ತೆಯಾಗಿತ್ತು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಚೇತರಿಸಿಕೊಂಡಿದ್ದಾರೆ. ಮತ್ತೊಬ್ಬ ವ್ಯಕ್ತಿಯಲ್ಲೂ ಸೋಂಕು ಪತ್ತೆಯಾಗಿರುವುದು ಖಚಿತವಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
“ಇದುವರೆಗೆ 1048 ಜನರನ್ನು ವೀಕ್ಷಣೆಗಾಗಿ ಗುರುತಿಸಲಾಗಿದೆ. ಅದರಲ್ಲಿ ರೋಗ ಲಕ್ಷಣವಿರುವ 446 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 389 ಮಾದರಿಗಳು ನೆಗೆಟಿವ್ ಎಂದು ವರದಿಯಾಗಿದ್ದು, 4 ಮಾದರಿಗಳು ಪಾಸಿಟಿವ್ ಆಗಿದೆ. ಉಳಿದ ವರದಿಗಳಿಗಾಗಿ ಕಾಯುತ್ತಿದ್ದೇವೆ” ಎಂದು ಯಡಿಯೂರಪ್ಪ ಹೇಳಿದ್ದಾರೆ.
“ರಾಜ್ಯದಲ್ಲಿ ಮಾಸ್ಕುಗಳಿಗೆ ಕೊರತೆಯಾಗಿಲ್ಲ, ಜನರು ಭಯ ಬೀತರಾಗುವುದು ಬೇಡ. ಸೋಂಕಿತರು ಮತ್ತು ಅವರ ಸಂಪರ್ಕದಲ್ಲಿ ಇರುವವರು ಮಾತ್ರ ಮಾಸ್ಕ್ ಬಳಸಿದರೆ ಸಾಕು” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಈ ಸಮಯದಲ್ಲಿ ಉಸಿರಾಟದ ತೊಂದರೆ, ಕೆಮ್ಮು, ನೆಗಡಿ, ಗಂಟಲ ಉರಿಯೂತದ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯಕೀಯ ನೆರವು ಪಡೆದುಕೊಳ್ಳುವಂತೆ ಹೇಳಿದ್ದಾರೆ.


