ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಕಟ್ಪಾಡಿಯಲ್ಲಿ ವೈದ್ಯೆಯೊಬ್ಬರನ್ನು ಆಟೋದಲ್ಲಿ ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಮಹಿಳಾ ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ಈ ಪ್ರಕರಣವು ರಾಜ್ಯದಲ್ಲಿ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರತಿಪಕ್ಷಗಳು ಸರ್ಕಾರದ ವಿರುದ್ದ ಮುಗಿಬಿದ್ದು ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿತ್ತು.
ಆಟೋ ಚಾಲಕ ಪಾರ್ಥಿಬನ್, ದಿನಗೂಲಿ ನೌಕರ ಮಣಿ ಅಲಿಯಾಸ್ ಮಣಿಕಂಠನ್ ಮತ್ತು ಆತನ ಸ್ನೇಹಿತರಾದ ಭರತ್ ಮತ್ತು ಸಂತೋಷ್ ಶಿಕ್ಷೆಗೆ ಗುರಿಯಾದ ಅಪರಾಧಿಗಳು. ಪ್ರಕರಣದ ಐದನೇ ಶಂಕಿತ ಆರೋಪಿ ಬಾಲಾಪರಾಧಿ ನ್ಯಾಯ ಮಂಡಳಿಯ ಮುಂದೆ ವಿಚಾರಣೆಯನ್ನು ಎದುರಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ (ಜ.30) ಅಪರಾಧಿಗಳನ್ನು ಪೊಲೀಸರು ವೆಲ್ಲೂರು ಸೆಷನ್ಸ್ ನ್ಯಾಯಾಧೀಶೆ (ಮಹಿಳಾ ತ್ವರಿತ ನ್ಯಾಯಾಲಯ) ಎಸ್. ಮಾಗೇಶ್ವರಿ ಬಾನು ರೇಖಾ ಅವರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಜೈಲು ಶಿಕ್ಷೆ ಮತ್ತು ತಲಾ 25 ಸಾವಿರ ರೂ. ದಂಡ ವಿಧಿಸಿದ್ದಾರೆ.
ಮಾರ್ಚ್ 16, 2022ರಂದು ಮಧ್ಯರಾತ್ರಿ 12.30ಕ್ಕೆ ಸಂತ್ರಸ್ತೆ ವೈದ್ಯೆ ಆಕೆಯ ಪುರುಷ ಸಹೋದ್ಯೋಗಿಯೊಂದಿಗೆ ಕಟ್ಪಾಡಿಯಲ್ಲಿ ಆಟೋಗಾಗಿ ಕಾಯುತ್ತಿದ್ದರು. ಈ ವೇಳೆ ಆಟೋದಲ್ಲಿ ಬಂದ ಐವರ ತಂಡ, ಶೇರ್ ಆಟೋ ಎಂದು ಹೇಳಿ ಇಬ್ಬರನ್ನೂ ಆಟೋಗೆ ಹತ್ತಿಸಿಕೊಂಡಿದೆ. ನಂತರ ಇಬ್ಬರನ್ನೂ ಪಾಲಾರ್ ನದಿ ತೀರಕ್ಕೆ ಕರೆದೊಯ್ದಿದ್ದಾರೆ. ಪುರುಷ ಸಹೋದ್ಯೋಗಿಗೆ ಚಾಕು ತೋರಿಸಿ ಬೆದರಿಸಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪರಾಧಿಗಳು ಸಂತ್ರಸ್ತೆ ಮತ್ತು ಆಕೆಯ ಸಹೋದ್ಯೋಗಿಯ ಮೊಬೈಲ್ ಫೋನ್‌ಗಳು, ಎರಡು ಸವರಣ್ ಚಿನ್ನಾಭರಣ ಮತ್ತು ಎಟಿಎಂ ಕಾರ್ಡ್‌ಗಳನ್ನು ದೋಚಿದ್ದರು. ಅವುಗಳಿಂದ 40,000 ರೂ. ಡ್ರಾ ಮಾಡಿದ್ದರು.
ಕುಡಿದ ಮತ್ತಿನಲ್ಲಿ ನಡೆದ ಜಗಳವೊಂದಕ್ಕೆ ಸಂಬಂಧಿಸಿದಂತೆ ಗ್ಯಾಂಗ್‌ನ ಮೂವರು ಸದಸ್ಯರನ್ನು ಬಂಧಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ವಿಚಾರಣೆಯ ಸಮಯದಲ್ಲಿ, ಅವರು ಇತರ ಇಬ್ಬರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದರಿಂದಾಗಿ ಉಳಿದವರನ್ನು ಬಂಧಿಸಲು ಸಾಧ್ಯವಾಯಿತು.
ನಂತರ ಸಂತ್ರಸ್ತೆ ವೈದ್ಯೆಯಿಂದ ಆನ್‌ಲೈನ್ ದೂರು ಪಡೆಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಗುಜರಾತ್ | ಆದಿವಾಸಿ ಮಹಿಳೆಗೆ ನಗ್ನಗೊಳಿಸಿ ಹಲ್ಲೆ, ಬೈಕ್‌ಗೆ ಕಟ್ಟಿ ಮೆರವಣಿಗೆ


