ಬುಡಕಟ್ಟು ಯುವತಿಯೊಬ್ಬರು ಅಂತರ್ಜಾತಿ ಮದುವೆಯಾಗಿದ್ದಕ್ಕೆ ಆಕೆಯ ಕುಟುಂಬದ 40 ಮಂದಿ ತಲೆ ಬೋಳಿಸಿಕೊಂಡು ಶುದ್ದೀಕರಣ ನಡೆಸಿದ ಘಟನೆ ಒಡಿಶಾದ ರಾಯಗಡ ಜಿಲ್ಲೆಯಲ್ಲಿ ನಡೆದಿದೆ ಎಂದು newindianexpress.com ವರದಿ ಮಾಡಿದೆ.
ಶುದ್ದೀಕರಣದ ವೇಳೆ ಗ್ರಾಮ ದೇವತೆಯ ಮುಂದೆ ಮೇಕೆ, ಕೋಳಿ ಮತ್ತು ಹಂದಿಗಳನ್ನು ಬಲಿ ನೀಡಲಾಗಿದೆ ಎಂದು ವರದಿ ಹೇಳಿದೆ. ರಾಯಗಡ ಜಿಲ್ಲೆಯ ಕಾಶಿಪುರ ಬ್ಲಾಕ್‌ನ ಗೋರಖ್‌ಪುರ ಪಂಚಾಯಿತಿ ವ್ಯಾಪ್ತಿಯ ಬೈಗಾನಗುಡ ಗ್ರಾಮದಲ್ಲಿ ಗುರುವಾರ (ಜೂ.19) ಈ ಘಟನೆ ನಡೆದಿದೆ.
ವರದಿಗಳ ಪ್ರಕಾರ, ಸುಮಾರು 20 ವರ್ಷ ವಯಸ್ಸಿನ ಬುಡಕಟ್ಟು ಸಮುದಾಯದ ಯುವತಿ ಮತ್ತು ಎಸ್‌ಸಿ ಸಮುದಾಯ ಯುವಕ ಪರಸ್ಪರ ಪ್ರೀತಿಸುತ್ತಿದ್ದರು. ಯುವಕ ಬುಡಕಟ್ಟು ಸಮುದಾಯದವನಲ್ಲ ಎಂಬ ಕಾರಣಕ್ಕೆ ಇವರ ಮದುವೆಗೆ ಯುವತಿ ಕಡೆಯವರು ವಿರೋಧ ವ್ಯಕ್ತಪಡಿಸಿದ್ದರು. ಇದನ್ನು ಲೆಕ್ಕಿಸದೆ ಯುವಜೋಡಿ ಮದುವೆಯಾಗಿದೆ.
ಯುವತಿಯ ಸಮುದಾಯದಲ್ಲಿ ಅನ್ಯ ಜಾತಿಯವರನ್ನು ಮದುವೆಯಾಗಲು ಅವಕಾಶ ಇಲ್ಲ. ಹಾಗೇನಾದರು ಮದುವೆಯಾದರೆ, ಅವರ ಇಡೀ ಕುಟುಂಬ ಮತ್ತು ಸಂಬಂಧಿಕರು ಗ್ರಾಮ ದೇವತೆಯ ಕೋಪಕ್ಕೆ ತುತ್ತಾಗುತ್ತಾರೆ. ದೇವತೆಯ ಕೋಪ ತಣಿಸಲು ಇಡೀ ಕುಟುಂಬ ಮತ್ತು ಸಂಬಂಧಿಕರು ಸಮುದಾಯದಲ್ಲಿ ಅಂಗೀಕರಿಸಲ್ಪಡುವ ಶುದ್ಧೀಕರಣ ಆಚರಣೆಗೆ ಒಳಗಾಗಬೇಕಾಗುತ್ತದೆ.
ಅದರಂತೆ, ಯುವತಿಯ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ತಲೆ ಬೋಳಿಸಿಕೊಂಡು, ಮೇಕೆ, ಹಂದಿ ಮತ್ತು ಕೋಳಿಗಳನ್ನು ಬಲಿ ನೀಡಿ ಗ್ರಾಮಸ್ಥರಿಗೆ ಭವ್ಯ ಔತಣವನ್ನು ಏರ್ಪಡಿಸಿದ್ದಾರೆ ಎಂದು newindianexpress.com ವರದಿ ಹೇಳಿದೆ.
ಗ್ರಾಮದ ಯಾರೋ ಒಬ್ಬರು ಶುದ್ದೀಕರಣ ಆಚರಣೆಯನ್ನು ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ವಿಡಿಯೋ ತುಣುಕು ವೈರಲ್ ಆಗುತ್ತಿದ್ದಂತೆ, ಜಿಲ್ಲಾಡಳಿತವು ಘಟನೆಯ ತನಿಖೆ ನಡೆಸುವಂತೆ ಕಾಶಿಪುರದ ಬ್ಲಾಕ್ ಅಭಿವೃದ್ಧಿ ಅಧಿಕಾರಿ (ಬಿಡಿಒ) ಅವರಿಗೆ ನಿರ್ದೇಶನ ನೀಡಿದೆ.
ಬ್ಲಾಕ್ ಮಟ್ಟದ ವಿಸ್ತರಣಾ ಅಧಿಕಾರಿ ನೇತೃತ್ವದ ತಂಡವು ಈ ವಿಷಯದ ಬಗ್ಗೆ ತನಿಖೆ ನಡೆಸಲು ಬೈಗನಗುಡ ಗ್ರಾಮಕ್ಕೆ ಭೇಟಿ ನೀಡಿದೆ ಎಂದು ಬಿಡಿಒ ಬಿಜಯ್ ಸೋ ತಿಳಿಸಿದ್ದಾರೆ. ಅಧಿಕಾರಿಗಳ ತಂಡ ಶುದ್ದೀಕರಣ ನಡೆಸಿರುವ ಜನರನ್ನು ಭೇಟಿಯಾಗಿದ್ದಾರೆ. ಅವರು ಯಾವುದೇ ಬಲವಂತವಿಲ್ಲದೆ ತಮ್ಮ ಪದ್ಧತಿಯಂತೆ ಆಚರಣೆಯನ್ನು ಆಚರಿಸಿದ್ದೇವೆ ಎಂದು ವಿವರಿಸಿದ್ದಾರೆ. ಅಂತರ್ಜಾತಿ ವಿವಾಹಕ್ಕೆ ಸರ್ಕಾರದ ಸಹಾಯವನ್ನು ಪರಿಗಣಿಸಲು ಈ ವಿಷಯವನ್ನು ಉನ್ನತ ಅಧಿಕಾರಿಗಳ ಮುಂದೆ ಇಡಲಾಗಿದೆ” ಎಂದು ಅವರು ಹೇಳಿದ್ದಾರೆ.
ದೆಹಲಿ ವಿಶ್ವವಿದ್ಯಾಲಯ: ‘ಮಾತೃಭಾಷೆ’ ವಿಭಾಗದಲ್ಲಿ ‘ಉರ್ದು’ ಕೈಬಿಟ್ಟು, ‘ಮುಸ್ಲಿಂ’ ಸೇರಿಸಿದ್ದಕ್ಕೆ ತೀವ್ರ ಆಕ್ರೋಶ


