ಡಿಸೆಂಬರ್ 2022 ರ ಹೊತ್ತಿಗೆ ದೇಶದಾದ್ಯಂತ ಇರುವ ವಿಚಾರಣಾಧೀನ ಕೈದಿಗಳಲ್ಲಿ 42% ಜನರು ಉತ್ತರ ಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರಗಳಲ್ಲಿದ್ದಾರೆ ಎಂದು ಇಂಡಿಯಾ ಜಸ್ಟೀಸ್ ರಿಪೋರ್ಟ್-2025 ವರದಿ ಹಳೇಇದೆ.
ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ವಿಚಾರಣಾಧೀನ ಕೈದಿಗಳಿದ್ದಾರೆ ಎಂದು ವರದಿ ಹೇಳಿದೆ. ಯುಪಿಯಲ್ಲಿ 94,000 ಕ್ಕೂ ಹೆಚ್ಚು ವಿಚಾರಣಾಧೀನ ಕೈದಿಗಳು ಇದ್ದು, ಇದು ದೇಶದಾದ್ಯಂತ ಇರುವ ವಿಚಾರಾಧೀನ ಕೈದಿಗಳಲ್ಲಿ ಸುಮಾರು 22% ರಷ್ಟು ಆಗುತ್ತದೆ ಎಂದು ವರದಿ ಹೇಳಿದೆ.
ಸೆಂಟರ್ ಫಾರ್ ಸೋಶಿಯಲ್ ಜಸ್ಟೀಸ್, ಕಾಮನ್ ಕಾಸ್, ಕಾಮನ್ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್, ದಕ್ಷ, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್-ಪ್ರಯಾಸ್, ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ಮತ್ತು ಹೌ ಇಂಡಿಯಾ ಲೈವ್ಸ್ ಸೇರಿದಂತೆ ಸರ್ಕಾರೇತರ ಸಂಸ್ಥೆಗಳು ಮತ್ತು ನಾಗರಿಕ ಹಕ್ಕುಗಳ ಗುಂಪುಗಳು ಈ ವರದಿಯನ್ನು ಸಿದ್ಧಪಡಿಸಿದೆ.
ದೊಡ್ಡ ರಾಜ್ಯಗಳಾದ ಬಿಹಾರದಲ್ಲಿ ತನಿಖೆ ಅಥವಾ ವಿಚಾರಣೆ ಪೂರ್ಣಗೊಳ್ಳಲು ಕಾಯುತ್ತಿರುವ ಕೈದಿಗಳು 89% ರಷ್ಟಿದ್ದರೆ, ನಂತರ ಒಡಿಶಾದಲ್ಲಿ 85% ರಷ್ಟಿದ್ದಾರೆ ಎಂದು ವರದಿ ಹೇಳಿದೆ. ಜೈಲುಗಳಲ್ಲಿ ಹೆಚ್ಚಿನ ಜನದಟ್ಟಣೆಗೆ ವಿಚಾರಣೆಗಾಗಿ ಕಾಯುತ್ತಿರುವ ಕೈದಿಗಳೇ ಕಾರಣ ಎಂದು ಅಧ್ಯಯನವು ಹೇಳಿದೆ.
ಸರಾಸರಿಯಾಗಿ, ವಿಚಾರಣಾಧೀನ ಕೈದಿಗಳು ಮೊದಲಿಗಿಂತ ಹೆಚ್ಚು ಸಮಯವನ್ನು ಕಂಬಿಗಳ ಹಿಂದೆ ಕಳೆಯುತ್ತಿದ್ದಾರೆ ಎಂದು ವರದಿ ಹೇಳಿದ್ದು, 2022 ರ ಅಂತ್ಯದ ವೇಳೆಗೆ, ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಬಂಧನದಲ್ಲಿದ್ದ ವಿಚಾರಣಾಧೀನ ಕೈದಿಗಳ ಸಂಖ್ಯೆ 11,448 ಆಗಿದ್ದು, ಇದು 2019 ರಲ್ಲಿ 5,011 ಮತ್ತು 2012 ರಲ್ಲಿ 2,028 ರಷ್ಟಿತ್ತು ಎಂದು ಹೇಳಿದೆ.
2022 ರ ಅಂತ್ಯದ ವೇಳೆಗೆ, ಉತ್ತರ ಪ್ರದೇಶವೊಂದರಲ್ಲೇ ಐದು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದ ಸುಮಾರು 40% ವಿಚಾರಣಾಧೀನ ಕೈದಿಗಳು ಇದ್ದರು.
ಭಾರತದಲ್ಲಿ, ತನಿಖೆ ಅಥವಾ ವಿಚಾರಣೆ ನಡೆಯುತ್ತಿರುವಾಗ ಜೈಲು ಶಿಕ್ಷೆಗೆ ಬದಲಾಗಿ ಜಾಮೀನು ಹೆಚ್ಚಾಗಿ ಬಳಸಲ್ಪಡುತ್ತದೆ ಎಂದು ಅಧ್ಯಯನವು ಹೇಳಿದೆ. ಆದಾಗ್ಯೂ, ನ್ಯಾಯಾಧೀಶರು ಕಡಿಮೆ-ಅಪಾಯದ ಅಪರಾಧಿಗಳಿಗೆ ಸಂಬಂಧಿಸಿದಂತೆ ಕಸ್ಟಡಿಯೇತರ ಕ್ರಮಗಳನ್ನು ಜೈಲು ಶಿಕ್ಷೆಗೆ ಪರ್ಯಾಯವಾಗಿ ಬಳಸುವ ಅಧಿಕಾರವನ್ನು ಹೊಂದಿದ್ದಾರೆ ಎಂದು ಅದು ಹೇಳಿದೆ.
2012 ಮತ್ತು 2022 ರ ನಡುವೆ, ಒಟ್ಟಾರೆ ಜೈಲು ವಾಸದ ದರಗಳು 112% ರಿಂದ 132% ಕ್ಕೆ ಏರಿದೆ. ಅದೇ ಅವಧಿಯಲ್ಲಿ ದೇಶಾದ್ಯಂತ ಜೈಲು ಜನಸಂಖ್ಯೆಯು 3.8 ಲಕ್ಷದಿಂದ 5.7 ಲಕ್ಷಕ್ಕೆ ಅಂದರೆ 49% ರಷ್ಟು ಹೆಚ್ಚಾಗಿದೆ ಎಂದು ಅಧ್ಯಯನವು ತಿಳಿಸಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಸಗಣಿ ಬಳಿದ ಪ್ರಕರಣ: ಪ್ರಾಂಶುಪಾಲೆಯ ಕಚೇರಿ ಗೋಡೆಗೆ ಸಗಣಿ ಬಳಿದು ಪ್ರತಿಭಟಿಸಿದ ವಿದ್ಯಾರ್ಥಿ ಒಕ್ಕೂಟ; ವೀಡಿಯೋ ವೈರಲ್
ಸಗಣಿ ಬಳಿದ ಪ್ರಕರಣ: ಪ್ರಾಂಶುಪಾಲೆಯ ಕಚೇರಿ ಗೋಡೆಗೆ ಸಗಣಿ ಬಳಿದು ಪ್ರತಿಭಟಿಸಿದ ವಿದ್ಯಾರ್ಥಿ ಒಕ್ಕೂಟ; ವೀಡಿಯೋ ವೈರಲ್

