ಮತದಾರರ ಪಟ್ಟಿಯ ಶುದ್ಧತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ತೆಲಂಗಾಣದ ಹೈದರಾಬಾದ್ ಜಿಲ್ಲೆಯ 5.41 ಲಕ್ಷ ಮಂದಿಯ ಹೆಸರನ್ನು ಚುನಾವಣಾ ಆಯೋಗ ಮತದಾರರ ಪಟ್ಟಿಯಿಂದ ಕೈ ಬಿಟ್ಟಿದೆ ಎಂದು ದಿ ಹಿಂದೂ ವರದಿ ಮಾಡಿದೆ.
2023ರ ಜನವರಿಯಿಂದೀಚೆಗೆ ಜಿಲ್ಲೆಯ 15 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 47,141 ಮೃತ ಮತದಾರರು, 4,39,801 ಮಂದಿ ಸ್ಥಳಾಂತರಗೊಂಡ ಮತದಾರರು ಮತ್ತು 54,259 ಮಂದಿ ಎರಡು ಕಡೆಗಳಲ್ಲಿ ನೋಂದಾಯಿಸಿದ ಮತದಾರರನ್ನು ಪಟ್ಟಿಯಿಂದ ಕಿತ್ತು ಹಾಕಲಾಗಿದೆ ಎಂದು ವರದಿಗಳು ಹೇಳಿವೆ.
ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಿಂದ ಇದುವರೆಗೆ 1.67 ಲಕ್ಷಕ್ಕೂ ಹೆಚ್ಚು ಮತದಾರರನ್ನು ಪಟ್ಟಿಯಿಂದ ಅಳಿಸಲಾಗಿದೆ ಎಂದು ತಿಳಿದು ಬಂದಿದೆ.
ನಾಂಪಲ್ಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅತೀ ಹೆಚ್ಚು, ಅಂದರೆ, 21,407 ಮತದಾರರ ಹೆಸರುಗಳನ್ನು ಕೈ ಬಿಡಲಾಗಿದೆ. ಈ ಪೈಕಿ 15,963 ಸ್ಥಳಾಂತರಗೊಂಡ ಮತದಾರರು, 2,843 ಮೃತಪಟ್ಟ ಮತದಾರರು ಮತ್ತು 2,601 ಎರಡು ಬಾರಿ ನೋಂದಾಯಿತ ಮತದಾರರು ಇದ್ದಾರೆ ಎಂದು ಗುರುತಿಸಲಾಗಿದೆ.
ಭಾರತದ ಚುನಾವಣಾ ಆಯೋಗದ ಸೂಚನೆಯಂತೆ 5,41,201 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈ ಬಿಡಲಾಗಿದೆ. ಭಾರತೀಯ ಚುನಾವಣಾ ಆಯೋಗವು ಸೂಚಿಸಿದ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನದ ಪ್ರಕಾರ ಫಾರ್ಮ್-7 ಮತ್ತು ಫಾರ್ಮ್-8 ಅನ್ನು ಸರಿಯಾಗಿ ಸಂಗ್ರಹಿಸುವ ಮೂಲಕ ಎಲ್ಲಾ ಹೆಸರುಗಳನ್ನು ತೆಗೆದು ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾಗಿ ವರದಿಯಾಗಿದೆ.
ಇದಲ್ಲದೆ, ಮತದಾರರ ಪಟ್ಟಿಗಳ ಶುದ್ಧೀಕರಣದ ಸಮಯದಲ್ಲಿ, ಅನೇಕ ಮತದಾರರ ಪಟ್ಟಿಯಲ್ಲಿ ಪ್ರಮಾಣಿತವಲ್ಲದ ಮನೆ ಸಂಖ್ಯೆ ಕಾಣಿಸಿದ್ದು, ಅಂತಹ ಮತದಾರರನ್ನು ಗುರುತಿಸಲು ಮತ್ತು ತಿದ್ದುಪಡಿ ಮಾಡಲು ಚಾಲನೆ ನೀಡಲಾಗಿದೆ. ಅದರಂತೆ ಪ್ರಮಾಣಿತವಲ್ಲದ ಮನೆ ಸಂಖ್ಯೆ ಹೊಂದಿರುವ ಒಟ್ಟು 1,81,405 ಮತದಾರರನ್ನು ಗುರುತಿಸಲಾಗಿದ್ದು, ಅವರ ಮನೆ ಸಂಖ್ಯೆಗಳನ್ನು ತಿದ್ದುಪಡಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕುಟುಂಬಕ್ಕೆ ಸೇರಿದ ಮತದಾರರನ್ನು ಒಂದೇ ಮತಗಟ್ಟೆಗೆ ಕರೆತರಲು ಕ್ರಮಕೈಗೊಳ್ಳಲಾಗಿದೆ. ಹೈದರಾಬಾದ್‌ನಲ್ಲಿ ಈ ನಿಟ್ಟಿನಲ್ಲಿ ಒಟ್ಟು 3,78,713 ತಿದ್ದುಪಡಿಗಳನ್ನು ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ತೆಲಂಗಾಣದ 17 ಲೋಕಸಭಾ ಕ್ಷೇತ್ರಗಳು ಮತ್ತು ಹೈದರಾಬಾದ್‌ನಲ್ಲಿ ನಾಲ್ಕನೇ ಹಂತದಲ್ಲಿ ಮೇ 13ರಂದು ಮತದಾನ ನಡೆಯಲಿದೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ವಿರುದ್ದ ಈ ಬಾರಿ ವಿರಿಂಚಿ ಆಸ್ಪತ್ರೆಗಳ ಮುಖ್ಯಸ್ಥೆ ಮಾಧವಿ ಲತಾ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಹಾಗಾಗಿ, ಕ್ಷೇತ್ರ ಕುತೂಹಲದ ಕೇಂದ್ರವಾಗಿ ಮಾರ್ಪಟ್ಟಿದೆ.
ಇದನ್ನೂ ಓದಿ : ಲೋಕಸಭೆ ಚುನಾವಣೆ: ಇಂದು ಮೊದಲ ಹಂತದ ಮತದಾನ


