Homeಮುಖಪುಟಲೋಕಸಭೆ ಚುನಾವಣೆ: ಇಂದು ಮೊದಲ ಹಂತದ ಮತದಾನ

ಲೋಕಸಭೆ ಚುನಾವಣೆ: ಇಂದು ಮೊದಲ ಹಂತದ ಮತದಾನ

102 ಕ್ಷೇತ್ರಗಳ 16.63 ಕೋಟಿ ಮತದಾರರಿಂದ ಹಕ್ಕು ಚಲಾವಣೆ

- Advertisement -
- Advertisement -

ಬಹು ನಿರೀಕ್ಷಿತ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು (ಏ.19) ನಡೆಯಲಿದೆ. ದೇಶದ 17 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳ 16.63 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ದೇಶದ 107 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ. ಇದಕ್ಕಾಗಿ 1.87 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 35.67 ಲಕ್ಷ ಮಂದಿ ಇಂದು ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ.

ಮತದಾನವು ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಅವಧಿ ಮುಕ್ತಾಯಗೊಳ್ಳುವ ಮುನ್ನ ಬಂದು ಸರತಿ ಸಾಲಿನಲ್ಲಿ ನಿಲ್ಲುವ ಮತದಾರರಿಗೆ ಮತ ಚಲಾಯಿಸಲು 60 ನಿಮಿಷಗಳ ಹೆಚ್ಚುವರಿ ಕಾಲಾವಕಾಶ ಇರಲಿದೆ. ಜೂನ್ 4ರಂದು ಫಲಿತಾಂಶ ಹೊರ ಬೀಳಲಿದೆ.

ಚುನಾವಣಾ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಯನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಕರೆದೊಯ್ಯಲು 41 ಹೆಲಿಕಾಫ್ಟರ್‌ಗಳು, 84 ವಿಶೇಷ ರೈಲುಗಳು ಹಾಗೂ ಸುಮಾರು ಒಂದು ಲಕ್ಷ ಇತರ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಇಂದು ಮತದಾನ ನಡೆಯುವ ಕ್ಷೇತ್ರಗಳ ಪೈಕಿ 8 ಕಡೆಗಳಲ್ಲಿ ಕೇಂದ್ರ ಸಚಿವರು, ಎರಡು ಕಡೆ ಮಾಜಿ ಮುಖ್ಯಮಂತ್ರಿಗಳು ಹಾಗೂ ಒಂದು ಕ್ಷೇತ್ರದಲ್ಲಿ ಮಾಜಿ ರಾಜ್ಯಪಾಲೆ ಅಭ್ಯರ್ಥಿಗಳಾಗಿದ್ದಾರೆ.

ತಮಿಳುನಾಡಿನ ಎಲ್ಲಾ 39, ಉತ್ತರಾಖಂಡದ ಎಲ್ಲಾ 5, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯದ ಎಲ್ಲಾ 2 ಸ್ಥಾನಗಳಿಗೆ ಇಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ರಾಜಸ್ಥಾನದ 25 ಸ್ಥಾನಗಳಲ್ಲಿ 12, ಉತ್ತರ ಪ್ರದೇಶದ 80 ಸ್ಥಾನಗಳಲ್ಲಿ 8, ಮಧ್ಯಪ್ರದೇಶದ 29 ಸ್ಥಾನಗಳಲ್ಲಿ 6, ಮಹಾರಾಷ್ಟ್ರದ 48 ಸ್ಥಾನಗಳಲ್ಲಿ 5, ಅಸ್ಸಾಂನ 14 ಸ್ಥಾನಗಳಲ್ಲಿ 5, ಬಿಹಾರದ 40 ಸ್ಥಾನಗಳಲ್ಲಿ 4, ಪಶ್ಚಿಮ ಬಂಗಾಳದ 42 ಸ್ಥಾನಗಳಲ್ಲಿ 3, ಛತ್ತೀಸ್‌ಗಢದ 11 ಸ್ಥಾನಗಳಲ್ಲಿ 1 ಮತ್ತು ಪುದುಚ್ಚೇರಿ, ಅರುಣಾಚಲ ಪ್ರದೇಶ, ಜಮ್ಮು ಕಾಶ್ಮೀರ, ಲಡಾಖ್, ಲಕ್ಷದೀಪ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರದ ತಲಾ 1 ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ.

ಈ ಬಾರಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಎನ್‌ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ ನಡುವೆ ನೇರ ಹಣಾಹಣಿಯಿದೆ. ಬಿಜೆಪಿ ಮತ್ತೊಮ್ಮೆ ಮೋದಿ ಹೆಸರೇಳಿಕೊಂಡು ಮತ ಕೇಳಿದೆ. ಕಾಂಗ್ರೆಸ್ ಗ್ಯಾರಂಟಿಗಳನ್ನು ಜಾರಿಗೊಳಿಸುವ ಭರವಸೆ ನೀಡಿದ್ದು, ಬಿಜೆಪಿ ವಿರುದ್ದ ನಿರುದ್ಯೋಗ, ಹಣದುಬ್ಬರ, ಚುನಾವಣಾ ಬಾಂಡ್ ಇತ್ಯಾದಿ ಆರೋಪಗಳನ್ನು ಮಾಡಿದೆ.

ಬಿಜೆಪಿ ಅಥವಾ ಎನ್‌ಡಿಎ ಹಿಂದಿ ಭಾಷಿಕರು ಹೆಚ್ಚಾಗಿರುವ ಉತ್ತರ ಭಾರತವನ್ನು ನೆಚ್ಚಿಕೊಂಡರೆ, ಕಾಂಗ್ರೆಸ್ ಅಥವಾ ಇಂಡಿಯಾ ಭಾಷಾ ವೈವಿದ್ಯತೆಯ ದಕ್ಷಿಣ ಭಾರತದ ಮೇಲೆ ಭರವಸೆ ಇಟ್ಟಿದೆ. ದಕ್ಷಿಣದಲ್ಲಿ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರಗಳಿವೆ. ಕೇರಳ ಮತ್ತು ತಮಿಳುನಾಡಿನಲ್ಲಿ ಕಾಂಗ್ರೆಸ್‌ಗೆ ದೊಡ್ಡ ಮಟ್ಟದ ಜನ ಬೆಂಬಲವಿದೆ. ಇವೆಲ್ಲವೂ ಗೆಲುವಿಗೆ ಸಹಕಾರಿಯಾಗಲಿದೆ ಎಂಬುವುದು ಕಾಂಗ್ರೆಸ್ ವಿಶ್ವಾಸ.

ಈ ಬಾರಿಯ ಲೋಕಸಭೆ ಚುನಾವಣೆಯ ಮತದಾನ ಏಪ್ರಿಲ್ 19 ರಿಂದ ಜೂನ್ 1, 2024ರವರೆಗೆ ಏಳು ಹಂತಗಳಲ್ಲಿ ನಡೆಯಲಿದೆ. ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಜೂನ್ 4ರಂದು ದೇಶದಾದ್ಯಂತ ಎಲ್ಲಾ ಕ್ಷೇತ್ರಗಳ ಫಲಿತಾಂಶ ಹೊರ ಬೀಳಲಿದೆ.

ಇದನ್ನೂ ಓದಿ : ಇವಿಎಂ-ವಿವಿಪ್ಯಾಟ್ ಎಲ್ಲಾ ಮತಗಳ ಪರಿಶೀಲನೆ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...