Homeಕರ್ನಾಟಕಕೊರೊನಾದಿಂದಾಗಿ ಮೃತಪಟ್ಟವರಿಗೆ 5 ಲಕ್ಷ ಪರಿಹಾರ ನೀಡಿ: ಸಿದ್ದರಾಮಯ್ಯ ಆಗ್ರಹ

ಕೊರೊನಾದಿಂದಾಗಿ ಮೃತಪಟ್ಟವರಿಗೆ 5 ಲಕ್ಷ ಪರಿಹಾರ ನೀಡಿ: ಸಿದ್ದರಾಮಯ್ಯ ಆಗ್ರಹ

- Advertisement -
- Advertisement -

ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಹೇಳಿದ್ದ ಆದೇಶವನ್ನು ರಾಜ್ಯ ಸರ್ಕಾರ ಮಂಗಳವಾರ ವಾಪಾಸು ಪಡೆದಿದೆ. ಸರ್ಕಾರದ ಈ ನಿರ್ಧಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಸೋಂಕಿನಿಂದ ಮೃತಪಟ್ಟ ಪ್ರತಿ ಕುಟುಂಬದವರಿಗೂ 5 ಲಕ್ಷ ರೂ. ಪರಿಹಾರವನ್ನು ಕಡ್ಡಾಯವಾಗಿ ನೀಡಬೇಕು ಎಂದು ಬುಧವಾರ ಆಗ್ರಹಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ರಾಜ್ಯ ಸರ್ಕಾರವು ಷರತ್ತು ರಹಿತವಾಗಿ ಪ್ರಕೃತಿ ವಿಕೋಪ ನಿಯಮಗಳಡಿ ನೀಡುವ ಪರಿಹಾರದಂತೆಯೇ, ಕೋವಿಡ್‌ನಿಂದ ಮೃತಪಟ್ಟವರ ಪ್ರತಿ ಕುಟುಂಬದವರಿಗೂ ರೂ.5 ಲಕ್ಷ ಪರಿಹಾರವನ್ನು ಕಡ್ಡಾಯವಾಗಿ ನೀಡಬೇಕು” ಎಂದು ಹೇಳಿದ್ದಾರೆ.

“ವಿಕೋಪಗಳಿಂದ ಮರಣ ಹೊಂದಿದ ಪ್ರತಿಯೊಬ್ಬರಿಗೂ ಪರಿಹಾರ ನೀಡಬೇಕು ಎಂಬ ಪ್ರಕೃತಿ ವಿಕೋಪ ನಿಯಮಗಳನ್ನು ತಿರುಚಿರುವ ಸರ್ಕಾರ, ತಂದೆ ತಾಯಿಯರಿಬ್ಬರನ್ನೂ ಕಳೆದುಕೊಂಡು ಅನಾಥವಾಗಿರುವ ಮಕ್ಕಳ ಭವಿಷ್ಯವನ್ನೇ ನಾಶ ಮಾಡಲು ಹೊರಟಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ಸಾವು: ₹1 ಲಕ್ಷ ಪರಿಹಾರ ಆದೇಶ ಹಿಂಪಡೆದ ರಾಜ್ಯದ ಬಿಜೆಪಿ ಸರ್ಕಾರ

“ಮೊದಲು ಕೊರೊನಾ ಸಾವಿನ ಸಂಖ್ಯೆಯನ್ನು ಸುಳ್ಳು ಲೆಕ್ಕ ನೀಡಿ ಕಡಿಮೆ ತೋರಿಸಿದಿರಿ, ಈಗ ಪರಿಹಾರದ ಮೊತ್ತವನ್ನು ಕೂಡಾ ಕಡಿತಗೊಳಿಸಿ ಸತ್ತವರ ಜೊತೆ ಬದುಕಿರುವ ಅವರ ಕುಟುಂಬವನ್ನೂ ಸಾಯಿಸಲು ಹೊರಟಿದ್ದೀರಿ. ನೊಂದವರ ಶಾಪ ಸರ್ಕಾರಕ್ಕೆ ತಟ್ಟದೆ ಇರಲಾರದು. ಕೆಪಿಸಿಸಿ ನಡೆಸಿರುವ ಸಮೀಕ್ಷೆಯ ಪ್ರಕಾರ ಕೊರೊನಾ ಸಾವಿನ ಸಂಖ್ಯೆ 3.17 ಲಕ್ಷ. ಅರವಿಂದ್ ಸುಬ್ರಹ್ಮಣ್ಯ ಮತ್ತು ಜೇಕಬ್ ಝಾ ಅವರ ಸಮೀಕ್ಷೆ ಪ್ರಕಾರ ಇದು ಮೂರುವರೆಯಿಂದ ನಾಲ್ಕು ಲಕ್ಷ. ರಾಜ್ಯ ಸರ್ಕಾರ 37,603 ಸೋಂಕಿತರು ಮಾತ್ರ ಸತ್ತಿದ್ದಾರೆ ಎಂದು ಸುಳ್ಳು ಲೆಕ್ಕ ನೀಡಿದೆ” ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

“ಕುಟುಂಬದ ದುಡಿಯುವ ಸದಸ್ಯನನ್ನು ಕಳೆದುಕೊಂಡವರು ಸಣ್ಣ ಮಟ್ಟದ ಬದುಕು ಕಟ್ಟಿಕೊಳ್ಳಬೇಕಾದರೆ ನಾಗರಿಕವೆನ್ನಿಸಿಕೊಂಡ ಸರ್ಕಾರಗಳು ನೊಂದ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು. ಈ ಹಿನ್ನೆಲೆಯಲ್ಲಿ ನಾವು ರಾಷ್ಟ್ರೀಯ ವಿಪತ್ತು ನಿಧಿಯ ನಿಯಮಗಳ ಪ್ರಕಾರ ಪ್ರತಿ ಕುಟುಂಬಕ್ಕೆ 5 ಲಕ್ಷ ರೂಪಾಯಿಗಳನ್ನಾದರೂ ಕೊಡಲೇಬೇಕು ಎಂದು ಒತ್ತಾಯಿಸಿದ್ದೆವು. ಒಕ್ಕೂಟ ಸರ್ಕಾರವು ದಿನಾಂಕ 14-03-2020 ರಂದು ಕೋವಿಡ್‌ನಿಂದ ಮರಣ ಹೊಂದಿದ ಪ್ರತಿ ವ್ಯಕ್ತಿಗೆ 4 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡಬೇಕು ಎಂದು ಆದೇಶ ಹೊರಡಿಸಿ ಅದೇ ಆದೇಶವನ್ನು ದಿನ ಮಾರ್ಪಡಿಸಿಕೊಂಡಿದೆ” ಎಂದು ಅವರು ನೆನಪಿಸಿಕೊಂಡಿದ್ದಾರೆ.

“ಸರ್ಕಾರಗಳು ಪ್ರಕೃತಿ ವಿಕೋಪದ ನಿಯಮಗಳಡಿ ಕೋವಿಡ್-19 ಸಾಂಕ್ರಾಮಿಕವನ್ನು ನಿರ್ವಹಿಸುತ್ತಿವೆ. ಪ್ರಕೃತಿ ವಿಕೋಪಗಳಾದ ಮಳೆ, ಗಾಳಿ, ಸಿಡಿಲು, ಗುಡುಗು, ಭೂ ಕುಸಿತ, ಭೂಕಂಪ ಮುಂತಾದವುಗಳಿಂದ ಮರಣ ಹೊಂದಿದವರಿಗೆ ತಲಾ 5 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡಲಾಗುತ್ತದೆ. ಆದರೆ ದಿನಾಂಕ; 28-09-2021 ರಂದು ಹೊರಡಿಸಿರುವ ಆದೇಶದಲ್ಲಿ ಬಿಪಿಎಲ್ ಕಾರ್ಡು ಹೊಂದಿರುವ ಕುಟುಂಬಗಳ ದುಡಿಯುವ ವ್ಯಕ್ತಿ ಕೋವಿಡ್-19 ರಿಂದ ಮೃತ ಪಟ್ಟರೆ, ರಾಜ್ಯದ ಸಂಧ್ಯಾ ಸುರಕ್ಷಾ ಯೋಜನೆಯಡಿ ರೂ. 1 ಲಕ್ಷ ಮತ್ತು ಒಕ್ಕೂಟ ಸರ್ಕಾರದಿಂದ ರೂ. 50,000 ನೀಡುವುದಾಗಿ ಆದೇಶ ಹೊರಡಿಸಲಾಗಿದೆ” ಎಂದು ಅವರು ಅವರು ಹೇಳಿದ್ದಾರೆ.

ಇದನ್ನೂ ಓದಿ: ರೈತ ಮಹಿಳೆಗೆ ಪರಿಹಾರ ವಿಳಂಬ: ನ್ಯಾಯಾಂಗ ನಿಂದನೆ ಆರೋಪದಲ್ಲಿ ಆಂಧ್ರದ IAS ಅಧಿಕಾರಿಗಳಿಗೆ ಜೈಲು

“ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳೆರಡೂ ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡುವುದರಿಂದ ತಪ್ಪಿಸಿಕೊಳ್ಳುವ ದುರುದ್ದೇಶದಿಂದಲೇ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಸಾಮಾನ್ಯ ನಿಯಮಗಳನ್ನು ತಮಗೆ ಬೇಕಾದಂತೆ ತಿರುಚಿಕೊಂಡು ನೊಂದ ಜನರಿಗೆ ದ್ರೋಹವೆಸಗಿವೆ. ಕೋವಿಡ್ ಸೋಂಕು ಹೆಚ್ಚಿದ್ದಾಗ ಸರ್ಕಾರ ಸಮರ್ಪಕವಾದ ಚಿಕಿತ್ಸಾ ವ್ಯವಸ್ಥೆ ಮಾಡದೆ ಜನರು ಬೀದಿ ಬೀದಿಗಳಲ್ಲಿ ಮರಣ ಹೊಂದುವಂತೆ ಮಾಡಿ, ಈಗ ಪರಿಹಾರ ನೀಡುವುದರಿಂದಲೂ ನುಣುಚಿಕೊಳ್ಳುತ್ತಿವೆ. ಸರ್ಕಾರದ ಈ ನಡೆ ಅಮಾನವೀಯವಾಗಿದೆ” ಎಂದು ಸಿದ್ದರಾಮಯ್ಯ ಅವರು ಕಿಡಿ ಕಾರಿದ್ದಾರೆ.

“ಪ್ರಕೃತಿ ವಿಕೋಪ ನಿಯಮಗಳಲ್ಲಿ ಬಿಪಿಎಲ್ ಕುಟುಂಬಗಳ ದುಡಿಯುವ ವ್ಯಕ್ತಿಗಳು ಮೃತಪಟ್ಟರೆ ಮಾತ್ರ ಪರಿಹಾರ ನೀಡಬೇಕು ಎಂಬ ಷರತ್ತು ಎಲ್ಲೂ ಇರುವುದಿಲ್ಲ, ಹಾಗಾಗಿ ಕೋವಿಡ್- 19 ಸಾಂಕ್ರಾಮಿಕದಿಂದ ಯಾರೇ ವ್ಯಕ್ತಿ ಮೃತಪಟ್ಟರೂ ಸಹ ಅವರ ಕುಟುಂಬಗಳಿಗೆ ತಲಾ ರೂ.5 ಲಕ್ಷ ನೀಡಬೇಕು” ಎಂದು ಅವರು ಆಗ್ರಹಿಸಿದ್ದಾರೆ.

“ರಾಜ್ಯ ಸರ್ಕಾರ ಪ್ರತಿಯೊಬ್ಬರಿಗೂ ಪರಿಹಾರ ನೀಡಬೇಕೆಂಬ ನಿಯಮವನ್ನು ತಿರುಚಿ ಯಾವುದೆ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಜನರು ಮರಣ ಹೊಂದಿದ್ದರೂ, ಆ ಕುಟುಂಬಕ್ಕೆ, ಅದರಲ್ಲೂ ಬಿ.ಪಿ.ಎಲ್ ಕಾರ್ಡು ಇದ್ದವರಿಗೆ ಮಾತ್ರ ಕೇವಲ ರೂ. 1.5 ಲಕ್ಷ (ಕೇಂದ್ರ, ರಾಜ್ಯಗಳೆರಡೂ ಸೇರಿ) ನೀಡಲಾಗುವುದೆಂದು ಹೇಳುತ್ತಿದೆ.
ರಾಜ್ಯ ಸರ್ಕಾರಗಳಿಗೆ ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ನೀಡಲಾಗುವ ಪರಿಹಾರದ ನಿಯಮಗಳಂತೆ ಕೇಂದ್ರ ಸರ್ಕಾರವು ಹಣವನ್ನು ಬಿಡುಗಡೆ ಮಾಡಬೇಕೆಂದು ರಾಜ್ಯದಿಂದ ಆಯ್ಕೆಯಾದ ಸಂಸದರು ಮತ್ತು ರಾಜ್ಯ ಸರ್ಕಾರವು ಒಕ್ಕೂಟ ಸರ್ಕಾರದಿಂದ ಆಗ್ರಹಿಸಬೇಕು” ಎಂದು ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಹರಿಯಾಣ: ಹಲ್ಲೆಯಿಂದ ಸಾವನ್ನಪ್ಪಿದ ರೈತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಲು ಒತ್ತಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...